ಕಲಬುರಗಿ: ‘ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಮಂಜೂರಾದ ಹುದ್ದೆಗಳ ಪೈಕಿ ಹೆಚ್ಚಿನ ಪ್ರಾಧ್ಯಾಪಕರು ನಿವೃತ್ತರಾಗಿದ್ದು, ಶೇ 30ರಷ್ಟು ಬೋಧಕ ಸಿಬ್ಬಂದಿ ಹಾಗೂ ಶೇ 40ರಷ್ಟು ಬೋಧಕೇತರ ಸಿಬ್ಬಂದಿಯಿಂದ ವಿ.ವಿ. ನಡೆಯುವಂತಾಗಿದೆ. ಆದ್ದರಿಂದ ಇದೇ 17ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಗರದಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ವಿ.ವಿ.ಯಲ್ಲಿನ ಖಾಲಿ ಹುದ್ದೆಗಳ ನೇಮಕಾತಿ ಪ್ರಸ್ತಾವಕ್ಕೆ ಒಪ್ಪಿಗೆ ಕೊಡಬೇಕು’ ಎಂದು ಗುಲಬರ್ಗಾ ವಿ.ವಿ. ಕುಲಪತಿ ಪ್ರೊ. ದಯಾನಂದ ಅಗಸರ ಸರ್ಕಾರಕ್ಕೆ ಮನವಿ ಮಾಡಿದರು.
ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ವಿ.ವಿ.ಯ 45ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘1972ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರವಾಗಿದ್ದ ಕಲಬುರಗಿಯಲ್ಲಿ ಹಲವು ರಾಜಕಾರಣಿಗಳು, ಶಿಕ್ಷಣ ಪ್ರೇಮಿಗಳ ಒತ್ತಾಸೆಯ ಮೇರೆಗೆ 1980ರ ಸೆ 10ರಂದು 800 ಎಕರೆ ಪ್ರದೇಶದಲ್ಲಿ ಸ್ಥಾಪನೆಯಾಯಿತು. ಮೊದಲ ಕುಲಪತಿ ಪ್ರೊ.ಎಂ. ನಾಗರಾಜ ಅವರು ವಿ.ವಿ.ಯ ಉತ್ತಮ ನೀಲನಕ್ಷೆ ಸಿದ್ಧಪಡಿಸಿದರು. ಇತ್ತೀಚಿನ ವರ್ಷಗಳಲ್ಲಿ ನೇಮಕಾತಿ ವಿಳಂಬವಾಗಿದ್ದರಿಂದ ಕೆಲವೇ ಕೆಲವು ಪ್ರಾಧ್ಯಾಪಕರು ಬೋಧನೆ ಮಾಡಬೇಕಿದ್ದು, ಬೋಧಕೇತರ ಹುದ್ದೆಗಳೂ ಖಾಲಿ ಇವೆ. ಈ ಅಂಶವನ್ನು ಪರಿಗಣಿಸಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಮನವೊಲಿಸಿ ವಿ.ವಿ. ನೇಮಕಾತಿಗೆ ಸಂಪುಟ ಸಭೆಯಲ್ಲಿ ಅನುಮೋದನೆ ಕೊಡಿಸಬೇಕು’ ಎಂದು ಆಗ್ರಹಿಸಿದರು.
‘ನಿವೃತ್ತರಾದ ಪಿಂಚಣಿ ಮೊತ್ತವೇ ವಾರ್ಷಿಕವಾಗಿ ₹ 30 ಕೋಟಿ ಆಗುತ್ತಿದ್ದು, ಇದರಲ್ಲಿ ವಿಶ್ವವಿದ್ಯಾಲಯದ ನಿಧಿಯಿಂದಲೇ ₹ 15 ಕೋಟಿ ಭರಿಸುತ್ತಿದ್ದೇವೆ. ರಾಯಚೂರು, ಬೀದರ್ ವಿಶ್ವವಿದ್ಯಾಲಯಗಳ ಸ್ಥಾಪನೆ ಬಳಿಕ ಗುಲಬರ್ಗಾ ವಿ.ವಿ.ಗೆ ಕಾಲೇಜುಗಳ ಸಂಯೋಜನೆ ಕಡಿಮೆಯಾಗಿದ್ದು, ವರಮಾನದ ಪ್ರಮಾಣವೂ ಕಡಿತಗೊಂಡಿದೆ. ಹೀಗಾಗಿ, ಸರ್ಕಾರವೇ ಪಿಂಚಣಿ ಮೊತ್ತವನ್ನು ಭರಿಸುವ ತೀರ್ಮಾನ ಕೈಗೊಳ್ಳಬೇಕು’ ಎಂದು ಹೇಳಿದರು.
ಇದಕ್ಕೂ ಮುನ್ನ ಕುಲಸಚಿವ ಪ್ರೊ. ರಾಜನಾಳ್ಕರ್ ಲಕ್ಷ್ಮಣ ಪ್ರಾಸ್ತಾವಿಕವಾಗಿ ಮಾತನಾಡಿ, ‘ಕಲ್ಯಾಣ ಕರ್ನಾಟಕ ಭಾಗದ ನಾಲ್ಕು ದಶಕಗಳ ಕಾಲ ಶೈಕ್ಷಣಿಕ ಸೇವೆಯಲ್ಲಿ ಮಹತ್ವದ ದಾಖಲೆ ಸಾಧಿಸಿದೆ. ವಿ.ವಿ.ಯ ಇಲ್ಲಿಯವರೆಗಿನ ಸಾಧನೆಯ ಆತ್ಮವಲೋಕನ ಮತ್ತು ಭವಿಷ್ಯದಲ್ಲಿ ಸಾಧಿಸಬೇಕಾದ ಶೈಕ್ಷಣಿಕ ಗುರಿಯ ಬಗೆ ಪುನರ್ ಮನನ ಮಾಡಿಕೊಳ್ಳುವ ಅವಿಸ್ಮರಣೀಯ ದಿನವಾಗಿದೆ’ ಎಂದರು.
ಸಮಾಜ ವಿಜ್ಞಾನ ನಿಕಾಯದ ಡೀನ್ ಹಾಗೂ ಸಿಂಡಿಕೇಟ್ ಸದಸ್ಯ ಪ್ರೊ.ಜಿ. ಶ್ರೀರಾಮುಲು, ವಿಜ್ಞಾನ ನಿಕಾಯದ ಡೀನ್ ಪ್ರೊ. ಸುಲೋಚನಾ, ಶಿಕ್ಷಣ ನಿಕಾಯದ ಡೀನ್ ಪ್ರೊ. ಹೂವಿನಬಾವಿ ಬಾಬಣ್ಣ, ಕಲಾ ನಿಕಾಯದ ಡೀನ್ ಪ್ರೊ. ಅಬ್ದುಲ್ ರಬ್ ಉಸ್ತಾದ್, ವಾಣಿಜ್ಯ ಮತ್ತು ನಿರ್ವಹಣಾ ನಿಕಾಯದ ಡೀನ್ ಪ್ರೊ.ಎ.ಪಿ. ಹೊಸಮನಿ ಹಾಗೂ ಕಾನೂನು ನಿಕಾಯದ ಡೀನ್ ಪ್ರೊ. ದೇವಿದಾಸ ಮಾಲೆ ಮಾತನಾಡಿದರು.
ಮೌಲ್ಯಮಾಪನ ಕುಲಸಚಿವೆ ಪ್ರೊ. ಮೇಧಾವಿನಿ ಕಟ್ಟಿ, ಅಕಾಡೆಮಿಕ್ ಕೌನ್ಸಿಲ್ ಸದಸ್ಯ ಪ್ರೊ.ಕೆ. ಸಿದ್ದಪ್ಪ ವೇದಿಕೆಯಲ್ಲಿದ್ದರು.
ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ. ಪೋತೆ ವಾರ್ಷಿಕ ವರದಿ ವಾಚಿಸಿದರು. ಆಡಳಿತ ವಿಶೇಷಾಧಿಕಾರಿ ಪ್ರೊ. ಚಂದ್ರಕಾಂತ್ ಕೆಳಮನಿ ಸನ್ಮಾನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಗ್ರಂಥಪಾಲಕಿ ಮಮತಾ ಮೇಸ್ತ್ರಿ ಹಾಗೂ ಎಂ.ಬಿ. ಕಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಮೌಲ್ಯಮಾಪನ ಕುಲಸಚಿವೆ ಪ್ರೊ.ಮೇಧಾವಿನಿ ಕಟ್ಟಿ ವಂದಿಸಿದರು. ಸಂಗೀತ ವಿಭಾಗದ ಅತಿಥಿ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕೊನೆಯಲ್ಲಿ ಸಾಮೂಹಿಕವಾಗಿ ರಾಷ್ಟ್ರಗೀತೆ ಹಾಡಲಾಯಿತು.
ಒಂದು ಬಾರಿ ಗುಲಬರ್ಗಾ ವಿ.ವಿ.ಗೆ ₹ 50 ಕೋಟಿ ಅಥವಾ ₹ 100 ಕೋಟಿ ವಿಶೇಷ ಅನುದಾನ ನೀಡಿದರೆ ವಿ.ವಿ.ಯಲ್ಲಿ ಅಧ್ಯಯನ ಸಂಶೋಧನೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬಹುದುಪ್ರೊ. ದಯಾನಂದ ಅಗಸರ ಕುಲಪತಿ ಗುವಿವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.