ಬಳಕೆಯಾಗದ ಸ್ಟೀಂ ಬಾತ್, ಜಕ್ಕೂಜಿ ಸೌಲಭ್ಯ

7
ನಿರ್ಮಿತಿ ಕೇಂದ್ರದಿಂದ ಕಾಮಗಾರಿ, ₹41.98 ಲಕ್ಷದ ಯೋಜನೆ

ಬಳಕೆಯಾಗದ ಸ್ಟೀಂ ಬಾತ್, ಜಕ್ಕೂಜಿ ಸೌಲಭ್ಯ

Published:
Updated:
Deccan Herald

ಕಲಬುರ್ಗಿ: ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದ ಈಜುಕೊಳದಲ್ಲಿ ಅಳವಡಿಸಿರುವ ಸ್ಟೀಂ ಬಾತ್, ಸೌನಾ ಬಾತ್‌, ಜಕ್ಕೂಜಿ ಸೌಲಭ್ಯಗಳು ಬಳಕೆಯಾಗುತ್ತಿಲ್ಲ.

ಕ್ರೀಡಾಂಗಣದಲ್ಲಿರುವ ಮುಖ್ಯ ಈಜುಕೊಳ, ಬೇಬಿ ಈಜುಕೊಳಗಳನ್ನು ಮೇಲ್ದರ್ಜೆಗೇರಿಸಿ ಫಿಲ್ಟರ್‌, ಪೈಪ್‌ಲೈನ್ ಬದಲಾವಣೆ, ಟೈಲ್ಸ್ ಅಳವಡಿಕೆ ಸೇರಿ ವಿವಿಧ ಸೌಲಭ್ಯಗಳಿಗಾಗಿ ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ)ಯ ₹41.98 ಲಕ್ಷ ಅನುದಾನದಲ್ಲಿ ಈ ಯೋಜನೆ ರೂಪಿಸಲಾಗಿದೆ.

2016ರ ಜನವರಿಯಲ್ಲಿ ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ ಸಿಕ್ಕಿದ್ದು, ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದೆ. ಈಗಾಗಲೇ ಫಿಲ್ಟರ್, ಪೈಪ್‌ಲೈನ್‌, ಟೈಲ್ಸ್‌ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ಆದರೆ, ಉಳಿದ ಕಾಮಗಾರಿಗಳು ಪೂರ್ಣಗೊಳ್ಳದ ಕಾರಣ ಉಪಕರಣಗಳು ದೂಳು ತಿನ್ನುತ್ತಿವೆ.

ಬೇಬಿ ಈಜುಕೊಳದ ಎದುರು ಇರುವ ಕಟ್ಟಡದಲ್ಲಿ ಈ ಸೌಲಭ್ಯಗಳನ್ನು ಅಳವಡಿಸಲಾಗುತ್ತಿದೆ. ಕಟ್ಟಡದಲ್ಲಿ ಜಕ್ಕೂಜಿ, ಸ್ಟೀಂ ಬಾತ್‌, ಸೌನಾ ಬಾತ್‌, ಮಸಾಜ್, ತರಬೇತುದಾರರಿಗೆ ಪ್ರತ್ಯೇಕ ಕೋಣೆಗಳಿವೆ. ಎರಡು ಶೌಚಾಲಯಗಳು ಇವೆ. ಈಜುಕೊಳಕ್ಕೆ ಬರುವ ಈಜುಗಾರರ ಅನುಕೂಲಕ್ಕಾಗಿ ಈ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.

ಈ ಬಗ್ಗೆ ಮಾಹಿತಿ ನೀಡಿದ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಏಕಾಂತಪ್ಪ, ‘ಎಚ್‌ಕೆಆರ್‌ಡಿಬಿಯಿಂದ ಈಗಾಗಲೇ ₹16 ಲಕ್ಷ ಅನುದಾನ ಬಿಡುಗಡೆ ಆಗಿದೆ. ಉಪಕರಣಗಳನ್ನು ಪೂರೈಸಿರುವ ‘ಸನ್‌ಶೈನ್ ಪೂಲ್ಸ್’ ಕಂಪನಿಗೆ ಶೇ 40ರಷ್ಟು ಹಣ ನೀಡಲಾಗಿದೆ’ ಎಂದರು.

ಸೋರುವ ಬೇಬಿ ಈಜುಕೊಳ: ಮುಖ್ಯ ಈಜುಕೊಳದ ಪಕ್ಕದಲ್ಲಿ ಏಳರಿಂದ ಹತ್ತು ವರ್ಷದ ಮಕ್ಕಳ ಅನುಕೂಲಕ್ಕಾಗಿ ಬೇಬಿ ಈಜುಕೊಳ ನಿರ್ಮಿಸಲಾಗಿದೆ. ಆದರೆ, ಅದು ಸೋರುತ್ತಿರುವ ಕಾರಣ ಬಳಕೆಗೆ ಮುಕ್ತಗೊಳಿಸಿಲ್ಲ.

‘2008ರಲ್ಲಿ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್‌)ವು ಬೇಬಿ ಈಜುಕೊಳವನ್ನು ನಿರ್ಮಿಸಿದೆ. ಅದರ ನವೀಕರಣ ಕಾಮಗಾರಿಯನ್ನು ನಮಗೆ ವಹಿಸಲಾಗಿದೆ. ಈಜುಕೊಳ ಸೋರುತ್ತಿರುವ ಬಗ್ಗೆ ಮಾಹಿತಿ ಇದ್ದು, ದುರಸ್ತಿ ಮಾಡಲಾಗುವುದು’ ಎಂದು ಏಕಾಂತಪ್ಪ ಹೇಳಿದರು.

‘ಕೊಳದ ನೀರಿಗೆ ಕ್ಲೋರಿನ್ ಸೇರಿಸುವುದರಿಂದ ಈಜು ಮುಗಿಸಿದ ನಂತರ ಸ್ನಾನ ಮಾಡಬೇಕಾಗುತ್ತದೆ. ಈಜುಕೊಳದಲ್ಲಿರುವ ಶವರ್‌ಗಳಲ್ಲಿ ಸಮರ್ಪಕವಾಗಿ ನೀರು ಬರುವುದಿಲ್ಲ’ ಎಂಬುದು ಈಜುಗಾರರ ದೂರು.

‘ಈಜುಕೊಳದಲ್ಲಿ ಜೀವರಕ್ಷಕರು (ಲೈಫ್‌ಗಾರ್ಡ್‌), ತರಬೇತುದಾರರು ಇದ್ದಾರೆ. ಅವರಿಗೆ ಲೈಫ್ ಜಾಕೆಟ್ ಸೇರಿದಂತೆ ಇನ್ನಿತರ ಸುರಕ್ಷತಾ ಸಾಧನಗಳನ್ನು ನೀಡಿಲ್ಲ. ಇದರಿಂದ ಹೊಸದಾಗಿ ಈಜು ಕಲಿಯಲು ಬರುವವರಿಗೆ ತೊಂದರೆ ಆಗುತ್ತಿದೆ. ಇಲಾಖೆಯವರು ಗಮನರಿಸಿ ಸುರಕ್ಷತಾ ಸಾಧನಗಳನ್ನು ನೀಡಲು ಕ್ರಮ ಕೈಗೊಳ್ಳಬೇಕು’ ಎಂದು ಈಜುಗಾರರು ಒತ್ತಾಯಿಸುತ್ತಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !