ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಎಸ್‌ ಅಧಿಕಾರಿಗಳ ಮಾತು ಸ್ಫೂರ್ತಿಯಾಯಿತು: ಜಗದೀಶ್

ಚಾಲಕನ ಪುತ್ರಗೆ 440ನೇ ರ‍್ಯಾಂಕ್‌
Last Updated 4 ಆಗಸ್ಟ್ 2020, 11:44 IST
ಅಕ್ಷರ ಗಾತ್ರ

ಬೆಳಗಾವಿ: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಉಪವಿಭಾಗಾಧಿಕಾರಿ ಹುದ್ದೆಗೆ ಆಯ್ಕೆಯಾಗಿದ್ದ ಅಥಣಿ ತಾಲ್ಲೂಕಿನ ಮೋಳೆ ಗ್ರಾಮದ ಜಗದೀಶ ಅಡಹಳ್ಳಿ ಅವರು, ಈಗ ಯುಪಿಎಸ್‌ಸಿ ಪರೀಕ್ಷೆಯಲ್ಲಿ 440ನೇ ರ‍್ಯಾಂಕ್‌ ಗಳಿಸಿ ಸಾಧನೆ ಉತ್ತಮಪಡಿಸಿಕೊಂಡಿದ್ದಾರೆ.

ಮಧ್ಯಮ ವರ್ಗದ ಶ್ರೀಕಾಂತ–ಸುಮಿತ್ರಾಅಡಹಳ್ಳಿ ದಂಪತಿಯ ನಾಲ್ವರು ಮಕ್ಕಳಲ್ಲಿ ಜಗದೀಶ ಕಿರಿಯ ಪುತ್ರ. 29 ವರ್ಷದಲ್ಲಿ ದೊಡ್ಡ ಹುದ್ದೆ ಪಡೆಯುವ ಮೂಲಕ ಗಮನಸೆಳೆದಿದ್ದಾರೆ.

2015ನೇ ಬ್ಯಾಚ್‌ನ ಕೆಎಎಸ್ ಅಧಿಕಾರಿ ಆಗಿರುವ ಅವರು, ಪ್ರಸ್ತುತ ಕಲಬುರ್ಗಿಯಲ್ಲಿ ಪ್ರೊಬೇಷನರಿ ಉಪ ವಿಭಾಗಾಧಿಕಾರಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೋದ ವರ್ಷವಷ್ಟೇ ಅವರು ಈ ಹುದ್ದೆಗೆ ಆಯ್ಕೆ ಆಗಿದ್ದರು.

ಮೋಳೆಯ ಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಶೇ 80.06 ಅಂಕ, ಪಿಯುಸಿಯಲ್ಲಿ ಅಥಣಿ ತಾಲ್ಲೂಕಿನ ಜಾಧವಜಿ ಆನಂದಜಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇ. 89 ಅಂಕಗಳನ್ನು ಪಡೆದಿದ್ದರು. ಇಲ್ಲಿನ ಕೆ.ಎಲ್.ಎಸ್. ಜಿಐಟಿಯಲ್ಲಿ ಶೇ. 87ಅಂಕಗಳೊಂದಿಗೆ ಪದವಿ ಪಡೆದಿದ್ದಾರೆ. 2014ರಿಂದ ನವದೆಹಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಕೋಚಿಂಗ್ ಪಡೆಯುತ್ತಿದ್ದರು.

ಸ್ಫೂರ್ತಿ: ‘ಉನ್ನತ ಅಧಿಕಾರಿ ಆಗಬೇಕು ಎಂಬ ಕನಸು ನನ್ನದಾಗಿತ್ತು. ಆದರೆ, ಯಾವ ಹುದ್ದೆ ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲದವಿತ್ತು. ಅಥಣಿ ಶುಗರ್ಸ್‌ ಕಂಪನಿಯಲ್ಲಿ ಚಾಲಕರಾಗಿ ಕಾರ್ಯನಿರ್ವಹಿಸುತ್ತಿರುವ ತಂದೆ, 2013ರಲ್ಲಿ ವಿಧಾನಸಭಾ ಚುನಾವಣಾ ಕೆಲಸಕ್ಕೆ ನಿಯೋಜನೆಗೊಂಡಿದ್ದರು. ಆಗ ನಾನೂ ಅವರೊಂದಿಗೆ ಹೋಗಿದ್ದೆ. ಆಗ ಐಎಎಸ್‌ ಅಧಿಕಾರಿಗಳು ಆಡುತ್ತಿದ್ದ ಮಾತುಗಳ ನನಗೆ ಸ್ಫೂರ್ತಿ ನೀಡಿದವು. ಹೀಗಾಗಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ನಿರಂತರ ಪರಿಶ್ರಮ: ‘2014ರಲ್ಲಿ ನವದೆಹಲಿಯಲ್ಲಿ ಐಎಎಸ್‌ ಕೋಚಿಂಗ್‌ ಸೇರ್ಪಡೆಗೊಂಡು ಅಧ್ಯಯನ ಪ್ರಾರಂಭಿಸಿದೆ. 5 ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದೇನೆ. ಕೆಎಎಸ್‌ 2ನೇ ಬಾರಿಯ ಪರೀಕ್ಷೆಯಲ್ಲಿ ಪಾಸಾಗಿದ್ದೇನೆ. ಯುಪಿಎಸಿಯಲ್ಲಿ 6ನೇ ಬಾರಿಗೆ ಯಶಸ್ಸು ಸಿಕ್ಕಿದೆ. ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ಜನರ ಸೇವೆಯನ್ನು ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ಮಾಡುವುದಕ್ಕೆ ಅವಕಾಶ ಸಿಕ್ಕಿದ್ದಕ್ಕೆ ಖುಷಿಯಾಗಿದೆ’ ಎಂದು ಪ್ರತಿಕ್ರಿಯಿಸಿದರು.

‘ತಂದೆ–ತಾಯಿ ಕಷ್ಟ ಪಟ್ಟು ಓದಿಸಿದ್ದಾರೆ. ಅವರ ಕಷ್ಟಕ್ಕೆ ಹಾಗೂ ನಿಷ್ಠೆಯಿಂದ ಓದಿರುವುದಕ್ಕೆ ಯಶಸ್ಸು ಸಿಕ್ಕಿದೆ. ವರ್ಷದ ಅಂತರದಲ್ಲೇ ಕೆಪಿಎಸ್‌ಸಿ ಹಾಗೂ ಯುಪಿಎಸ್‌ಸಿ ಪರೀಕ್ಷೆಗಳೆರಡರಲ್ಲೂ ಯಶಸ್ಸು ಗಳಿಸಿರುವುದಕ್ಕೆ ಸಂತಸವಾಗಿದೆ’ ಎಂದು ಹೇಳಿದರು.

‘ಪ್ರಜಾವಾಣಿ’ ಪತ್ರಿಕೆಯನ್ನು ನಿಯಮಿತವಾಗಿ ಓದುತ್ತಿದ್ದೆ. ಅದರಿಂದ ಅನುಕೂಲವಾಯಿತು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT