ಪಾಲಿಕೆಯ ನೂತನ ಕಟ್ಟಡದ ಮೇಲೆ ಮತ್ತೆ ಉರ್ದು ನಾಮ ಫಲಕ: ಆಕ್ರೋಶ

7

ಪಾಲಿಕೆಯ ನೂತನ ಕಟ್ಟಡದ ಮೇಲೆ ಮತ್ತೆ ಉರ್ದು ನಾಮ ಫಲಕ: ಆಕ್ರೋಶ

Published:
Updated:

ಕಲಬುರ್ಗಿ: ಇಲ್ಲಿಯ ಮಹಾನಗರ ಪಾಲಿಕೆ ನೂತನ ಕಟ್ಟಡದ ಮೇಲೆ ತಡರಾತ್ರಿ ಉರ್ದು ನಾಮ ಫಲಕ ಅಳವಡಿಸಲಾಗಿದ್ದು, ಇದು ಮತ್ತೆ ವಿವಾದಕ್ಕೆ ಕಾರಣವಾಗಿದೆ.

ಶುಕ್ರವಾರ ರಾತ್ರಿ ಸ್ಥಳಕ್ಕೆ ಬಂದ ಕೆಲವರು ಇಂಗ್ಲಿಷ್ ಮತ್ತು ಉರ್ದು ನಾಮ ಫಲಕ ಅಳವಡಿಸಿದ್ದಾರೆ. ಪಾಲಿಕೆಯ ವಿವಿಧ ಸ್ಥಾಯಿ ಸಮಿತಿಗಳಿಗೆ ಶುಕ್ರವಾರ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿತ್ತು. ಈ ವೇಳೆಯೇ ಉರ್ದು ನಾಮ ಫಲಕ ಅಳವಡಿಕೆಗೆ ಸಿದ್ಧತೆಗಳು ನಡೆದಿದ್ದವು ಎಂದು ಮೂಲಗಳು ಹೇಳುತ್ತವೆ.

ಉರ್ದು ನಾಮ ಫಲಕವನ್ನು ಯಾರು ಅಳವಡಿಸಿದ್ದಾರೆ ಗೊತ್ತಿಲ್ಲ. ಈ ಬಗ್ಗೆ ಸೂಕ್ತ ತನಿಖೆಗೆ ಆದೇಶಿಸಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ.

ಜಿಲ್ಲಾಡಳಿತ ಮತ್ತು ಪಾಲಿಕೆ ಅಧಿಕಾರಿಗಳು ಸೇರಿಯೇ ಈ ನಿರ್ಧಾರ ಕೈಗೊಂಡಿದ್ದಾರೆ. ಈಗ ತಮಗೇನೂ ಗೊತ್ತಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಕನ್ನಡ ಪರ ಸಂಘಟನೆಗಳ ಮುಖಂಡರು ಆರೋಪಿಸುತ್ತಾರೆ. ಸದ್ಯ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಏನಿದು ವಿವಾದ?: ನೂತನ ಕಟ್ಟಡದ ಉದ್ಘಾಟನೆಗೂ ಮುನ್ನ ಕನ್ನಡ, ಇಂಗ್ಲಿಷ್ ಮತ್ತು ಉರ್ದು ನಾಮ ಫಲಕ ಅಳವಡಿಸಲಾಗಿತ್ತು. ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಕನ್ನಡಪರ ಸಂಘಟನೆಗಳು ಧರಣಿ ನಡೆಸಿದ್ದವು. ಅಲ್ಲದೆ, ನಾಮ ಫಲಕಕ್ಕೆ ಕಪ್ಪು ಮಸಿ ಬಳಿದಿದ್ದರು.

ಆಗ 10ಕ್ಕೂ ಅಧಿಕ ಜನರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪಾಲಿಕೆ ಅಧಿಕಾರಿಗಳು ಕನ್ನಡ ನಾಮ ಫಲಕವನ್ನು ಉಳಿಸಿ, ಇಂಗ್ಲಿಷ್ ಮತ್ತು ಉರ್ದು ನಾಮ ಫಲಕವನ್ನು ತೆರವುಗೊಳಿಸಿದ್ದರು. ಅಲ್ಲದೆ, ನಾಮ ಫಲಕ ಅಳವಡಿಕೆಗೆ ಇರುವ ಮಾನದಂಡದ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದರು.

ಕರ್ನಾಟಕ ರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆ. ಹೀಗಾಗಿ ಕನ್ನಡ ಹೊರತು ಪಡಿಸಿ ಬೇರೆ ಭಾಷೆಯಲ್ಲಿ ನಾಮ ಫಲಕ ಅಳವಡಿಕೆಗೆ ಅವಕಾಶ ಇಲ್ಲ ಎಂದು ಸರ್ಕಾರ ಸ್ಪಷ್ಟೀಕರಣ ನೀಡಿತ್ತು. ಸರ್ಕಾರದ ಈ ನಡೆಯಿಂದ ಕೆರಳಿದ ಕೆಲ ಮುಸ್ಲಿಂ ಸಂಘಟನೆಗಳ ಸದಸ್ಯರು ಅಹೋರಾತ್ರಿ ಧರಣಿ ನಡೆಸಿದ್ದರು. ಆಗ ಅವರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 0

  Frustrated
 • 12

  Angry

Comments:

0 comments

Write the first review for this !