ಕಲಬುರಗಿ: ಜಿಲ್ಲೆಯ ಕಮಲಾಪುರ, ಚಿತ್ತಾಪುರ, ಜೇವರ್ಗಿ ತಾಲ್ಲೂಕಿನ ವಿವಿಧ ಶಾಲೆಗಳ ಕೊಠಡಿಗಳು ಶಿಥಿಲಾವಸ್ಥೆ ತಲುಪಿದ್ದು ಅವುಗಳನ್ನು ದುರಸ್ತಿ ಮಾಡಬೇಕು ಮತ್ತು ಅಲ್ಲಿಯವರೆಗೂ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ ಎಐಡಿಎಸ್‌ಒ ಜಿಲ್ಲಾ ಸಮಿತಿ ನಿಯೋಗದ ಸದಸ್ಯರು ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಸಕ್ರೆಪ್ಪಗೌಡ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.
ಕಮಲಾಪುರ ತಾಲ್ಲೂಕಿನ ನಾವದಗಿ(ಬಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1–8ನೇ ತರಗತಿ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇರುವ 6 ಕೋಣೆಗಳ ಪೈಕಿ 2 ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆ ತಲುಪಿವೆ. ಚಿತ್ತಾಪುರ ಪಟ್ಟಣದ ಬಸ್ ನಿಲ್ದಾಣದ ಎದುರು ಇರುವ ಸರ್ಕಾರಿ ಬಾಲಕರ ಪ್ರೌಢಶಾಲೆ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು ಕನ್ನಡ ಮತ್ತು ಉರ್ದು ಮಾಧ್ಯಮದ ವಿದ್ಯಾರ್ಥಿಗಳ ಜತೆಗೆ ಸರ್ಕಾರಿ ಕನ್ಯಾ ಪ್ರೌಢಶಾಲೆ ಮತ್ತು ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಒಟ್ಟು 1 ಸಾವಿರ ವಿದ್ಯಾರ್ಥಿಗಳು ಭಯದ ವಾತಾವರಣದಲ್ಲಿ ಅಭ್ಯಾಸ ಮಾಡುವಂತಾಗಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಜೇವರ್ಗಿ ತಾಲ್ಲುಕಿನ ಕುರುನಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಬೀಳುವ ಸ್ಥಿತಿಯಲ್ಲಿದೆ. ನಿರಂತರ ಮಳೆಯಿಂದ ಚಾವಣಿ ಹಂತ ಹಂತವಾಗಿ ಉದುರಿ ಬೀಳುತ್ತಿದೆ. ಈ ರೀತಿಯ ಸಮಸ್ಯೆಗಳಿಂದ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಶಿಥಿಲಗೊಂಡಿರುವ ಎಲ್ಲ ಶಾಲಾ ಕಟ್ಟಡಗಳನ್ನು ಗುರುತಿಸಿ, ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಎಲ್ಲ ಶಾಲೆಗಳಿಗೂ ಮೂಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ನಿಯೋಗದ ಸದಸ್ಯರು ಆಗ್ರಹಿಸಿದ್ದಾರೆ.
ಮನವಿ ಸಲ್ಲಿಕೆ ವೇಳೆ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷೆ ಸ್ನೇಹಾ ಕಟ್ಟಿಮನಿ, ಕಾರ್ಯದರ್ಶಿ ತುಳಜರಾಮ ಎನ್.ಕೆ., ಸದಸ್ಯರಾದ ವೆಂಕಟೇಶ ದೇವರ್ದುಗ, ನಾಗರಾಜ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.