ಶನಿವಾರ, ಜನವರಿ 28, 2023
18 °C
ಅಧಿಕಾರಿಗಳ ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗಳ್ಳಿ ಸೂಚನೆ

ಎಸ್‌ಸಿಪಿ, ಟಿಎಸ್‌ಪಿ ಅನುದಾನ ಕಾಲಮಿತಿಯಲ್ಲಿ ಬಳಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ‘ಪ್ರಸಕ್ತ ಸಾಲಿನಲ್ಲಿ ವಿವಿಧ ಇಲಾಖೆಗಳಿಗೆ ಹಂಚಿಕೆಯಾಗಿರುವ ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪಯೋಜನೆಯ ಅನುದಾನವನ್ನು ಕಾಲ ಮಿತಿಯಲ್ಲಿ ಖರ್ಚು ಮಾಡಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗಳ್ಳಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಗಿರಿಜನ ಉಪಯೋಜನೆಯ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಮಾತನಾಡಿ,‘ಜಿಲ್ಲಾ ಉಸ್ತುವಾರಿ ಸಚಿವರು ವಿಜನ್‌–2050 ಡಾಕ್ಯುಮೆಂಟ್ ತಯಾರಿಸಲು ಸೂಚಿಸಿದ್ದಾರೆ. ಕೃಷಿ ಹಾಗೂ ತೋಟಗಾರಿಕೆಗೆ ಒತ್ತು ನೀಡಬೇಕಾಗಿದೆ. ಆದ್ದರಿಂದ ಜಿಲ್ಲೆಯಲ್ಲಿರುವ ತೋಟಗಾರಿಕೆ ಪ್ರದೇಶದ ವಿಸ್ತೀರ್ಣ, ಬೆಳೆಗಳು, ಬೆಳೆ ಬೆಳೆಯಲು ಇರುವ ಅವಕಾಶಗಳು ಹಾಗೂ ನೀರಾವರಿ ಸೌಲಭ್ಯದ ಕುರಿತು ಮಾಹಿತಿ ನೀಡಬೇಕು’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗೆ ಸೂಚಿಸಿದರು.

‘ಗ್ರಾಮೀಣ ಭಾಗದ ವಸತಿ ಯೋಜನೆಯ ನಿಗದಿತ ಗುರಿ 1707ರಲ್ಲಿ 225ಕ್ಕೆ ಮಾತ್ರ ಅನುಮೋದನೆ ನೀಡಿ ರಾಜೀವ್‌ ಗಾಂಧಿ ವಸತಿ ನಿಗಮಕ್ಕೆ ಕಳುಹಿಸಲಾಗಿದೆ. ‌ನಿಯಮದಂತೆ ಫಲಾನುಭವಿಗಳ ಗ್ರಾಮದಲ್ಲಿಯೇ ಗ್ರಾಮ ಸಭೆ ನಡೆಸಿ ಅನುಮೋದನೆ ನೀಡಬೇಕು. ಆದರೆ, ಬಹುತೇಕ ಕಡೆ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಯೇ ಗ್ರಾಮ ಸಭೆ ನಡೆಸಲಾಗಿದೆ. ಆದ್ದರಿಂದ ಉಳಿದ ಮನೆಗಳು ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿಯಲ್ಲಿ ಪರಿಶೀಲನಾ ಹಂತದಲ್ಲಿವೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಕಿಶೋರಕುಮಾರ ದುವೆ ಮಾಹಿತಿ ನೀಡಿದರು.

ನಿಯಮ ಪಾಲನೆಯಾಗದಿದ್ದಲ್ಲಿ ಅದನ್ನು ತಿರಸ್ಕರಿಸಿ ಹೊಸದಾಗಿ ಸಭೆ ನಡೆಸಿ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ತಿಳಿಸಿದರು.

ಪ್ರಗತಿ ಪರಿಶೀಲನೆ ವೇಳೆ ಕೆಲವೊಂದು ಇಲಾಖೆಗಳಿಗೆ ಕೇಂದ್ರ ಕಚೇರಿಯಿಂದ ಇನ್ನೂ ಅನುದಾನ ಬಿಡುಗಡೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದರು. ಸಂಬಂಧಪಟ್ಟ ಅಧಿಕಾರಿಗಳು ಮೇಲಧಿಕಾರಿಗಳಿಗೆ ಪತ್ರ ಬರೆಯಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗಳ್ಳಿ ನಿರ್ದೇಶನ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಬಿ.ಶುಭ, ವ್ಯವಸ್ಥಾಪಕ ಎಸ್.ಎಂ.ಪಾಟೀಲ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು