ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಯಲ್ಲಿ ಡ್ರೋನ್ ಬಳಕೆಗೆ ಸರ್ಕಾರ ನಿರ್ಧಾರ

ರಾಜ್ಯದ ಎಲ್ಲ ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರ ಬಳಕೆಗೆ ವಿತರಣೆ
Last Updated 4 ಮಾರ್ಚ್ 2022, 3:09 IST
ಅಕ್ಷರ ಗಾತ್ರ

ಕಲಬುರಗಿ: ಕೃಷಿ ಚಟುವಟಿಕೆಗಳಲ್ಲಿ ಡ್ರೋನ್‌ಗಳ ಪರಿಣಾಮಕಾರಿ ಬಳಕೆಗೆ ರಾಜ್ಯ ಸರ್ಕಾರ ನಿರ್ಧರಿಸಿದೆ. ರೈತರ ಶ್ರಮ, ಸಮಯ ಉಳಿಸುವ ಮತ್ತು ವೆಚ್ಚ ಕಡಿಮೆಗೊಳಿಸುವ ಉದ್ದೇಶದಿಂದ ಈ ಡ್ರೋನ್‌ಗಳನ್ನು ಈಗಾಗಲೇ ಪ್ರಾಯೋಗಿಕವಾಗಿ ಬಳಕೆ ಮಾಡಲಾಗಿದೆ.

ರಾಜ್ಯದ ಎಲ್ಲ ರೈತ ಸಂಪರ್ಕ ಕೇಂದ್ರಗಳಿಗೂ ಡ್ರೋನ್‌ಗಳನ್ನು ವಿತರಿಸಲಾಗುತ್ತಿದೆ. ರಾಜ್ಯ ಸರ್ಕಾರಪ್ರಸಕ್ತ ಬಜೆಟ್‌ನಲ್ಲೇ ಈ ವಿನೂತನ ಪ್ರಯೋಗದ ಬಗ್ಗೆ ಘೋಷಿಸುವ ಸಾಧ್ಯತೆ ಇದೆ.

ತಾಂತ್ರಿಕ ಸಾಮರ್ಥ್ಯ ಎಷ್ಟು?: ಕನಿಷ್ಠ 8 ಹಾಗೂ ಗರಿಷ್ಠ 16 ತಾಸು ಹಾರಾಡಬಲ್ಲ ಸಾಮರ್ಥ್ಯ ಹೊಂದಿರುವ ಡ್ರೋನ್‌ಗಳಲ್ಲಿ ಉತ್ತಮ ಗುಣಮಟ್ಟದ ವಿಡಿಯೊ ರೆಕಾರ್ಡಿಂಗ್‌ ಮತ್ತು ಫೋಟೊ ಕ್ಲಿಕ್ಕಿಸುವಂಥಹೈ ಡೆಫಿನಿಷನ್‌ ಕ್ಯಾಮೆರಾಗಳು ಇರುತ್ತವೆ. ಸದ್ಯ ಬ್ಯಾಟರಿ ಚಾಲಿತ ಡ್ರೋನ್‌ಗಳನ್ನು ನೀಡಲಾಗುತ್ತಿದೆ.

ಪ್ರಯೋಜನ ಹೇಗೆ?: ಕೃಷಿ ಇಳುವರಿ, ಅತಿವೃಷ್ಟಿ– ಅನಾವೃಷ್ಟಿಯಿಂದಾದ ಹಾನಿ, ರೋಗಬಾಧೆ, ಕೀಟಗಳ ಹಾವಳಿಯನ್ನು ನಿಖರವಾಗಿ ಅರಿಯಲು ಇದು ಸಹಕಾರಿ. ಅತಿವೃಷ್ಟಿ, ಪ್ರವಾಹದ ವೇಳೆ ಬೆಳೆ ಸಮೀಕ್ಷೆಗೆ ನೀರು ಹರಿದುಹೋಗುವವರೆಗೂ ಕಾಯಬೇಕಾದ ಸ್ಥಿತಿ ಈಗ ಇದೆ. ಆದರೆ, ಡ್ರೋಣ್‌ ಮೂಲಕ ಪ್ರವಾಹದ ಮರುದಿನವೇ ಸಮೀಕ್ಷೆ
ನಡೆಸಬಹುದು.

ದಟ್ಟವಾಗಿ ಬೆಳೆದ ಕಬ್ಬು ಬೆಳೆಯ ಒಳ ಹೋಗಿ ಇಳುವರಿಪರಿಶೀಲನೆ ಕಷ್ಟ. ಆದರೆ, ಅತ್ಯಂತ ತೀಕ್ಷ್ಣ ಚಿತ್ರಗಳ ಮೂಲಕ ಈ ಯಂತ್ರ ಯಾವ ಬೆಳೆ ಹೇಗೆ ಬೆಳೆದಿದೆ, ಯಾವ ಬಾಧೆ ಇದೆ ಎಂಬುದನ್ನೂ ನಿಖರವಾಗಿ ತಿಳಿಸಬಲ್ಲದು. ಇದರಿಂದ ರೋಗ– ಕೀಟ ಬಾಧೆ ಉಲ್ಬಣಗೊಳ್ಳುವ ಮುನ್ನವೇ ನಿಯಂತ್ರಿಸಬಹುದು.

ಕಬ್ಬು, ಜೋಳ, ಸೂರ್ಯಕಾಂತಿ ಮುಂತಾದ ಎತ್ತರದ ಬೆಳೆಗಳಿಗೆ ಕೀಟನಾಶಕ ಸಿಂಪಡಿಸಲು, ಗೊಬ್ಬರ ಹರವಲು ಡ್ರೋಣ್‌ ಬಳಕೆ ಸಾಧ್ಯವಾಗಲಿದೆ. ಒಬ್ಬ ವ್ಯಕ್ತಿ ಹತ್ತು ದಿನದಲ್ಲಿ ಮಾಡುವ ಕೆಲಸವನ್ನು ಇದು ಒಂದೇ ದಿನದಲ್ಲಿ ಮುಗಿಸಬಲ್ಲದು. ಕೀಟನಾಶಕ ಸಿಂಪಡಣೆ ವೇಳೆ ಅದರ ವಿಷಕಾರಿ ಪದಾರ್ಥ ವ್ಯಕ್ತಿಯ ಮೈ ಮೇಲೆ ಬಿದ್ದು ದೇಹ ಸೇರುವ ಸಾಧ್ಯತೆ ಹೆಚ್ಚು. ಡ್ರೋಣ್‌ ಬಳಕೆಯಿಂದ ಈ ಅಪಾಯ ತಪ್ಪಲಿದೆ.

ಹಕ್ಕಿಗಳಿಂದ ಬೆಳೆ ರಕ್ಷಿಸಲು ಗಲಲ್‌ ಬಳಸುವುದು, ತಟ್ಟೆಬಡಿಯುವುದು ಸಾಮಾನ್ಯ. ಈ ಕೆಲಸಗಳನ್ನೂ ಡ್ರೋಣ್‌ ಮಾಡಬಲ್ಲದು. ಗದ್ದೆಗಳಿಗೆ ಬೆಂಕಿ ಬಿದ್ದಾಗ ರಾಸಾಯನಿಕ, ಫೈರ್‌ಗ್ಯಾಸ್‌ ಮೂಲಕ ಅದನ್ನು ನಂದಿಸಲೂ ಇವು ಸಹಕಾರಿ. ಅತಿವೃಷ್ಟಿ, ಪ್ರವಾಹದ ಸಂದರ್ಭದಲ್ಲಿ ಅದರ ತೀವ್ರತೆ, ಅಪಾಯಕಾರಿ ಸ್ಥಳಗಳನ್ನೂ ಕರಾರುವಾಕ್‌ ಆಗಿ ತಿಳಿಯಬಹುದು.

ಅಡಕೆ, ತೆಂಗು, ಮಾವು ಸೇರಿದಂತೆ ಎಲ್ಲ ಮರಗಳ ಸ್ಥಿತಿಗತಿಯನ್ನು ಕೆಳಗೆ ನಿಂತುಕೊಂಡೇ ಪರಿಶೀಲಿಸಬಹುದು. ಕಾರ್ಮಿಕರ ಕೊರತೆ ಬಿದ್ದಾಗ, ಸಮಯದ ಅಭಾವವಿದ್ದಾಗ ಇವು ರೈತರಿಗೆ ವರದಾನವಾಗಲಿವೆ. ಕಾಡಂಚಿನ ಗ್ರಾಮಗಳಲ್ಲಿ ವನ್ಯಮೃಗಗಳು ದಾಳಿ ಇಟ್ಟಾಗಲೂ ಅವುಗಳ ನಿಖರ ಚಲನವಲನ ತಿಳಿಯುವುದಕ್ಕೂ ಅನುಕೂಲ.

ಆದರೆ, ಎರಡು ಮುಖ್ಯ ಅನನುಕೂಲಗಳೂ ಇದರಲ್ಲಿವೆ.ಕೆಲವೊಮ್ಮೆ ಅತ್ಯಂತ ಖಾಸಗಿಯಾದ ಚಿತ್ರ, ವಿಡಿಯೊಗಳನ್ನೂ ಇವು ಸೆರೆಹಿಡಿಯುವ ಸಾಧ್ಯತೆ ಇದೆ. ಜತೆಗೆ, ಮಳೆ– ಗಾಳಿಯಿಂದ ಹಾನಿಯಾಗಬಹುದು. ಆಗ ಕೃಷಿ ಕೆಲಸ ಅರ್ಧಕ್ಕೆ ನಿಲ್ಲುವ
ಅಪಾಯವೂ ಇದೆ.

ಕೃಷಿ ನಿರೀಕ್ಷಕರಿಗೆ ತರಬೇತಿ ನೀಡಿ ಅವರನ್ನು ‘ಡ್ರೋಣ್‌ ಪೈಲೆಟ್‌’ ಆಗಿ ನಿಯೋಜಿಸಲು ಇಲಾಖೆಗೆ ಈಗಾಗಲೇ ನಿರ್ದೇಶನವೂ ಬಂದಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT