ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾವ ಮುಖ ಇಟ್ಟುಕೊಂಡು ಜನಾಶೀರ್ವಾದ ಕೇಳುತ್ತೀರಿ?: ಬಿಜೆಪಿಗೆ ಖಾದರ್‌ ಪ್ರಶ್ನೆ

ಮಹಾನಗರ ಪಾಲಿಕೆ ಚುನಾವಣೆಯ ಕಾಂಗ್ರೆಸ್‌ ಉಸ್ತುವಾರಿ, ಶಾಸಕ ಯು.ಟಿ.ಖಾದರ್‌ ಪ್ರಶ್ನೆ
Last Updated 20 ಆಗಸ್ಟ್ 2021, 15:02 IST
ಅಕ್ಷರ ಗಾತ್ರ

ಕಲಬುರ್ಗಿ: ‘ಜನರಿಗೆ ಸುಳ್ಳು ಹೇಳಿ, ಮೋಸ ಮಾಡಿ ಆಡಳಿತ ನಡೆಸುತ್ತಿರುವ ಬಿಜೆಪಿ ಮಂತ್ರಿಗಳು ಯಾವ ಪುರುಷಾರ್ಥಕ್ಕೆ ಜನಾಶೀರ್ವಾದ ಯಾತ್ರೆ ಮಾಡುತ್ತಿದ್ದೀರಿ? ಯಾವ ಮುಖ ಇಟ್ಟುಕೊಂಡು ಜನರ ಬಳಿ ಆಶೀರ್ವಾದ ಕೇಳುತ್ತಿದ್ದೀರಿ?’ ಎಂದು ಕಲಬುರ್ಗಿ ಮಹಾನಗರ ಪಾಲಿಕೆ ಚುನಾವಣೆಯ ಕಾಂಗ್ರೆಸ್‌ ಉಸ್ತುವಾರಿ, ಶಾಸಕ ಯು.ಟಿ.ಖಾದರ್‌ ಖಾರವಾಗಿ ಪ್ರಶ್ನಿಸಿದರು.

‘ನೀವೇ ಮಾಡಿದ ಕೊರೊನಾ ಮಾರ್ಗಸೂಚಿಗಳನ್ನು ನೀವೇ ಧಿಕ್ಕರಿಸಿದ್ದೀರಿ. ನಿಮ್ಮ ಪಕ್ಷದ ಕಾರ್ಯಕರ್ತರನ್ನು ಕೂಡಿಹಾಕಿಕೊಂಡು ಜೈಕಾರ ಮಾಡಿಸಿಕೊಳ್ಳುತ್ತೀರಿ. ಈ ಯಾತ್ರೆಗಳಲ್ಲಿ ಎಲ್ಲಿಯಾದರೂ ಸಾಮಾನ್ಯ ಜನರು ಕಾಣಿಸಿದ್ದಾರೆಯೇ? ಅವರಿಗೆ ಏನು ಉಪಕಾರ ಮಾಡಿದ್ದೀರಿ ಎಂದು ನಿಮಗೆ ಆಶೀರ್ವಾದ ಮಾಡುತ್ತಾರೆ’ ಎಂದೂ ಅವರು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹರಿಹಾಯ್ದರು.

‘ಶ್ರಾವಣ ಮಾಸ ಹಿಂದೂ ಬಾಂಧವರಿಗೆ ಶ್ರೇಷ್ಠ ಮಾಸ. ಎಲ್ಲ ಮಠ– ಮಂದಿರಗಳಲ್ಲಿ ಪ್ರವೇಶ ನಿರ್ಬಂಧ ಮಾಡಿದ್ದೀರಿ. ಆದರೆ, ಜನಾಶೀರ್ವಾದ ಯಾತ್ರೆಗೆ ಮಾತ್ರ ಸಾವಿರಾರು ಕಾರ್ಯಕರ್ತರು ಸೇರಬಹುದೇ? ದೇವರ ದರ್ಶನ ಮಾಡಲಾಗದಿದ್ದರೂ ನಿಮ್ಮ ದರ್ಶನ ಮಾಡಬೇಕೆ ಜನರು? ನೀವೇನು ದೇವರಿಗಿಂತ ದೊಡ್ಡವರಾ?’ ಎಂದು ಖಾರವಾಗಿ ಕೇಳಿದರು.

ದೇಶದಾದ್ಯಂತ ಲೂಟಿ:‘ಅಡುಗೆ ಅನಿಲ ದರ, ಅಡುಗೆ ಎಣ್ಣೆ, ಪೆಟ್ರೋಲ್‌– ಡೀಸೆಲ್‌ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆಯನ್ನೂ ಕೇಂದ್ರ ಸರ್ಕಾರ ದುಪ್ಪಟ್ಟು ಮಾಡಿದೆ. ಜನ ಸಾಮಾನ್ಯರು ಬದುಕದಂಥ ಸ್ಥಿತಿ ನಿರ್ಮಾಣವಾಗಿದೆ. ಮೋದಿ ಅವರು ‘ಲೂಟ್‌ ಇಂಡಿಯಾ, ಸೇಲ್‌ ಇಂಡಿಯಾ’ ಎಂಬರ್ಥದಲ್ಲಿ ಆಡಳಿತ ನಡೆಸುತ್ತಿದ್ದಾರೆ. ಕನಿಷ್ಠ ಜ್ಞಾನವೂ ಇಲ್ಲದವರನ್ನು ಅರ್ಥಸಚಿವ ಮಾಡಿದರೆ ಇನ್ನೇನಾಗುತ್ತದೆ. ಇವರ ಯಾವುದೇ ಆರ್ಥಿಕ ನೀತಿ ಯಶಸ್ವಿಯಾಗಲಿಲ್ಲ. ದೇಶದ ಜನರ ತೆರಿಗೆಯನ್ನು ಸುಲಿಯುವುದಕ್ಕಷ್ಟೇ ಅಧಿಕಾರಿ ಹಿಡಿದಿದ್ದಾರೆ’ ಎಂದು ಖಾದರ್‌ ಆರೋಪಿಸಿದರು.

‘ಮೊದಲು ಹೊಟ್ಟೆಪಾಡಿಗಾಗಿ ದುಡಿಯಬೇಕು ಎನ್ನುವ ಮಾತಿತ್ತು. ಆದರೆ, ಈಗ ಪೆಟ್ರೋಲ್‌ಗಾಗಿಯೇ ದುಡಿಯಬೇಕಾದ ದಿನಗಳು ಬಂದಿವೆ. ಪೆಟ್ರೋಲ್‌ ಬಂಕ್‌ಗಳೇ ಇವರ ಲೂಟಿ ಕೇಂದ್ರಗಳಾಗಿವೆ. ವಿಮಾನ, ರೈಲು, ಪೆಟ್ರೀಲ್‌ ಕಂಪನಿ ಸೇರಿದಂತೆ ಅತಿಮುಖ್ಯ ಇಲಾಖೆಗಳನ್ನು ಖಾಸಗಿ ವ್ಯಕ್ತಿಗಳ ಕೈಗೆ ನೀಡುತ್ತಿದ್ದಾರೆ. ಬ್ಯಾಂಕುಗಳನ್ನು ವಿಲೀನ ಮಾಡಿ, ಉದ್ಯೋಗ ಕಡಿಮೆ ಮಾಡುತ್ತಿದ್ದಾರೆ’ ಎಂದರು.

‘ಕಾಂಗ್ರೆಸ್‌ ಸರ್ಕಾರ ಇದ್ದಾಗ ಎಲ್ಲವನ್ನೂ ರಾಷ್ಟ್ರೀಕರಣ ಮಾಡುತ್ತ ಬಂದಿದೆ. ಆದರೆ, ಇವರು ಖಾಸಗೀಕರಣ ಮಾಡುತ್ತ ಹೊರಟಿದ್ದಾರೆ. ವಿಚಿತ್ರವೆಂದರೆ ರಾಷ್ಟ್ರೀಯಕಣ ಮಾಡಿದವರು ದೇಶದ್ರೋಹಿಗಳು– ಖಾಸಗೀಕರಣ ಮಾಡಿದವರು ದೇಶಪ್ರೇಮಿಗಳು ಎಂಬ ಭ್ರಮೆಯನ್ನು ಯುವಸಮುದಾಯದಲ್ಲಿ ತುಂಬುತ್ತಿದ್ದಾರೆ. ಮೀಸಲಾತಿಯನ್ನು ಸಂಪೂರ್ಣವಾಗಿ ತೆಗೆದುಹಾಕುವ ಉದ್ದೇಶದಿಂದ ಖಾಸಗಿಯ ತೆಕ್ಕೆಗೆ ನೀಡುತ್ತಿದ್ದಾರೆ’ ಎಂದು ದೂರಿದರು.

‘ಯಾವುದೇ ಸರ್ಕಾರ ಬಂದರೂ ಐದು ವರ್ಷ ಪೂರೈಸಬೇಕು ಎಂಬುದು ಕಾಂಗ್ರೆಸ್‌ ತತ್ವ. ಹಾಗಾಗಿ, ನಾವು ಯಡಿಯೂರಪ್ಪ ಅವರ ಸರ್ಕಾರಕ್ಕೆ ಸಹಕಾರ ನೀಡಿದ್ದೇವೆ. ಆದರೆ, ಬಿಜೆಪಿ ಮುಖಂಡರೇ ಚಾಡಿ ಹೇಳಿ, ಪತ್ರ ಬರೆದು ಅವರನ್ನು ಕೆಳಗೆ ಇಳಿಸಿದ್ದಾರೆ. ಆ ಪಕ್ಷದ ರಾಷ್ಟ್ರೀಯ ನಾಯಕರು ಯಡಿಯೂರಪ್ಪ ಅವರಿಗೆ ನೀಡಿದ ಹಿಂಸೆ ಎಷ್ಟಿತ್ತೆಂದರೆ; ಅವರು ಕಣ್ಣೀರು ಇಡುತ್ತ ನಿರ್ಗಮಿಸಬೇಕಾಯಿತು. ಇಂಥ ಹಿಂಸೆಯನ್ನು ಬಸವರಾಜ ಬೊಮ್ಮಾಯಿ ಅವರಿಗಾದರೂ ನೀಡಬೇಡಿ ಎನ್ನುವುದೇ ನನ್ನ ಮನವಿ’ ಎಂದು ಮೂದಲಿಸಿದರು.

ಶಾಸಕಿ ಖನೀಜ್‌ ಫಾತಿಮಾ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ, ಚೇತನ ಗೋನಾಯಕ, ಅಲಿಖಾನ್‌, ಯೂನುಸ್‌ಖಾನ್‌ ಲಾಲ್‌ಅಹ್ಮದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT