ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನ ಸಾಹಿತ್ಯಕ್ಕೆ ಷಣ್ಮುಖ ಶಿವಯೋಗಿಗಳ ಕೊಡುಗೆ ಅಪಾರ

ವಚನಕಾರರ ಜಯಂತಿಯಲ್ಲಿ ಅಲ್ಲಮಪ್ರಭು ಪಾಟೀಲ ಹೇಳಿಕೆ
Last Updated 29 ಫೆಬ್ರುವರಿ 2020, 13:01 IST
ಅಕ್ಷರ ಗಾತ್ರ

ಜೇವರ್ಗಿ: ‘17ನೇ ಶತಮಾನದ ಶ್ರೇಷ್ಠ ವಚನಕಾರ, ಷಣ್ಮುಖ ಶಿವಯೋಗಿಗಳು 800ಕ್ಕೂ ಅಧಿಕ ವಚನಗಳನ್ನು ರಚಿಸುವ ಮೂಲಕ ವಚನ ಸಾಹಿತ್ಯಕ್ಕೆ ಅದ್ವಿತೀಯ ಕೊಡುಗೆ ನೀಡಿದ್ದಾರೆ’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ ಹೇಳಿದರು.

ಪಟ್ಟಣದ ಸರ್ಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ, ನೀಲಮ್ಮನ ಬಳಗ ಹಾಗೂ ಬಸವಪರ ಸಂಘಟನೆಗಳ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಚನಕಾರರಾದ ಜೇವರ್ಗಿಯ ಷಣ್ಮುಖ ಶಿವಯೋಗಿಗಳು, ಸೊನ್ನಲಗಿಯ ಸಿದ್ಧರಾಮೇಶ್ವರ, ಮುದನೂರಿನ ಜೇಡರ ದಾಸೀಮಯ್ಯ, ಮರುಳಶಂಕರ ದೇವರು, ಕಿನ್ನರಿ ಬೊಮ್ಮಯ್ಯನವರ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

‘ಶರಣರ ವಚನಗಳ ಅಧ್ಯಯನದಿಂದ ಮನುಕುಲದ ಉದ್ಧಾರವಾಗುತ್ತದೆ. ಜೇವರ್ಗಿಯ ಷಣ್ಮುಖ ಶಿವಯೋಗಿಗಳು, ನೆಲೋಗಿಯ ಕೋಲಶಾಂತಯ್ಯ, ಚನ್ನೂರ ಜಲಾಲಸಾಹೇಬ, ಕಡಕೋಳದ ಮಡಿವಾಳಪ್ಪ, ರಾಮಪೂರದ ಬಕ್ಕಪ್ಪಯ್ಯ ಸೇರಿದಂತೆ ಅನೇಕ ಜನ ಶರಣರು, ಸಂತರು, ದಾರ್ಶನಿಕರು ಬಾಳಿ ಬೆಳಗಿದ ಪುಣ್ಯಭೂಮಿಯಲ್ಲಿ ತಾವೆಲ್ಲರೂ ಜನ್ಮತಾಳಿರುವುದು ಪುಣ್ಯ’ ಎಂದು ಹೇಳಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ ಚಿಗರಳ್ಳಿ ಮರುಳಶಂಕರ ಗುರುಪೀಠದ ಸಿದ್ಧಬಸವ ಕಬೀರಾನಂದ ಸ್ವಾಮೀಜಿ ಮಾತನಾಡಿ, ‘ಪ್ರತಿಯೊಬ್ಬರು ಸತ್ಯ, ಶುದ್ಧ ಕಾಯಕ ಮೈಗೂಡಿಸಿಕೊಳ್ಳಬೇಕು’ ಎಂದು ಹೇಳಿದರು.

ಕಲಬುರ್ಗಿಯ ಎಚ್.ಬಿ.ಪಾಟೀಲ ‘ವಚನಕಾರರ ಜೀವನ ಸಾಧನೆ’ ಕುರಿತು ಉಪನ್ಯಾಸ ನೀಡಿದರು. ಜಾಗತಿಕ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಸಂಗಣ್ಣಗೌಡ ಪಾಟೀಲ ಗುಳ್ಳಾಳ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಉಪನ್ಯಾಸಕ ವಿಶ್ವನಾಥ ಡೋಣೂರ, ರಾಜಶೇಖರ ಮರಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ‘ಮೈಸೂರು ರಾಜ್ಯದ ಹಳೆ ಜನಗಣತಿಗಳು, ಲಿಂಗಾಯತ ಮತ್ತು ಚಾತುರ್ವರ್ಣ ನಂಬಿಕೆ’ ಎಂಬ ಗ್ರಂಥವನ್ನು ಬಿಡುಗಡೆ ಮಾಡಲಾಯಿತು.

ಬಸವ ಕೇಂದ್ರ ತಾಲ್ಲೂಕು ಘಟಕದ ಅಧ್ಯಕ್ಷ ಶರಣಬಸವ ಕಲ್ಲಾ, ಪುರಸಭೆ ಸದಸ್ಯ ಷಣ್ಮುಖಪ್ಪ ಸಾಹು ಗೋಗಿ, ಭೀಮಾಶಂಕರ ಪಾಟೀಲ ಕಟ್ಟಿಸಂಗಾವಿ, ಮಲ್ಲಣ್ಣಗೌಡ ಕನ್ಯಾ ಕೋಳೂರ, ಬಾಪುಗೌಡ ಬಿರಾಳ, ವಿಜಯಕುಮಾರ ಪಾಟೀಲ ಸೇಡಂ, ವಿಶ್ವನಾಥರೆಡ್ಡಿ ರಾಜಳ್ಳಿ, ಮಹಾಂತೇಶ ಸಾಹು ಹರವಾಳ, ನೀಲಕಂಠ ಕಟ್ಟಿಸಂಗಾವಿ, ಮಲ್ಲಿಕಾರ್ಜುನ ಬಿರಾದಾರ, ಶಾಂತಪ್ಪ ಬಿರಾದಾರ, ಕಲ್ಲಪ್ಪ ಬಡದಾಳ, ವಿಜಯಕುಮಾರ ಬಡಿಗೇರ, ಬಸವರಾಜ ರಾಸಣಗಿ, ಶಿವಕುಮಾರ ಬಿದರಿ ಸೇರಿದಂತೆ ಜಾಗತಿಕ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕದ ಪದಾಧಿಕಾರಿಗಳು ಇದ್ದರು.

ಕಾವೇರಿ ಪಾಟೀಲ ಸ್ವಾಗತಿಸಿದರು. ಶಿಕ್ಷಕ ಪಂಡಿತ ನೆಲ್ಲಗಿ ನಿರೂಪಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT