ವಾಡಿ: ಶ್ರಾವಣಮಾಸದಲ್ಲಿ ಜನರನ್ನು ಅಧ್ಯಾತ್ಮದಲ್ಲಿ ಮಿಂದೆಳಿಸಿ ಭಕ್ತಿಭಾವ ಮೂಡಿಸುತ್ತಿದ್ದ ಭಜನಾ ಕಲೆ ನಿಧಾನವಾಗಿ ಜನರಿಂದ ಮರೆಯಾಗುತ್ತಿದೆ.
ಬಿಳಿ ಸಮವಸ್ತ್ರದೊಂದಿಗೆ ಪಾದಯಾತ್ರೆ ಮೂಲಕ ಹಲವು ದೇವಸ್ಥಾನಗಳಿಗೆ ಗುಂಪಾಗಿ ತೆರಳುವವರು ದಾರಿಯುದ್ಧಕ್ಕೂ ಭಜನಾ ಗೀತೆಗಳನ್ನು ಹಾಡುತ್ತಾ ಭಕ್ತಿಯ ಅಲೆಯಲ್ಲಿ ತೇಲುತ್ತಾ ನಡಿಗೆಯ ಆಯಾಸ ಮರೆಯುತ್ತಿದ್ದರು. ದಾರಿಯುದ್ದಕ್ಕೂ ಪಾದಯಾತ್ರಿಗಳ ದಂಡೇ ಕಂಡುಬರುತ್ತಿತ್ತು. ಆದರೆ ಇಂದು ಅಂತವರ ಸಂಖ್ಯೆ ಅತ್ಯಂತ ವಿರಳವಾಗುತ್ತಿದೆ.
ಶ್ರಾವಣ ಮಾಸದುದ್ದಕ್ಕೂ ಜನರನ್ನು ಭಕ್ತಿಯಲ್ಲಿ ಪರವಶಗೊಳಿಸುವಲ್ಲಿ ಭಜನಾ ಕಲೆಯದ್ದು ಎತ್ತಿದ ಕೈ ಆಗಿರುತ್ತಿತ್ತು. ದಂಡಗುಂಡ ಬಸವಣ್ಣ, ನಾಗಾವಿ ಯಲ್ಲಮ್ಮ ದೇವಸ್ಥಾನ, ಹಲಕರ್ಟಿ ವೀರಭದ್ರೇಶ್ವರ, ಮಲ್ಲಯ್ಯ ದೇವಸ್ಥಾನ, ಕೋರವಾರ ಅಣವೀರಭದ್ರೇಶ್ವರ, ಕೋರಿಸಿದ್ದೇಶ್ವರ ಸಂಸ್ಥಾನ ಮಠ ಸಹಿತ ಹಲವು ಗುಡಿಗುಂಡಾರಗಳಿಗೆ ಭಜನೆಯೊಂದಿಗೆ ಜನರ ಗಮನ ಸೆಳೆಯುತ್ತಾ ಪಾದಯಾತ್ರೆ ನಡೆಸಲಾಗುತ್ತಿತ್ತು. ಆದರೆ ಈಗ ಭಜನೆ ಅಷ್ಟೇ ಅಲ್ಲ ಪಾದಯಾತ್ರಿಗಳ ಸಂಖ್ಯೆಯೇ ಕುಸಿಯುತ್ತಿದೆ. ಶ್ರಾವಣ ಮಾಸದಲ್ಲಿ ಹಲವು ದೇವಸ್ಥಾನಗಳಲ್ಲಿ ಜನರು ಗುಂಪಾಗಿ ಕುಳಿತು ಸುಶ್ರಾವ್ಯವಾಗಿ ಭಜನಾ ಪದಗಳು ಹಾಡುತ್ತಿದ್ದರು. ಆದರೆ ಬಹುತೇಕ ದೇವಸ್ಥಾನಗಳಲ್ಲಿ ಅದು ಕಾಣಿಸುತ್ತಿಲ್ಲ.
ಹಲವರ ಬಾಯಲ್ಲಿ ಲೀಲಾಜಾಲವಾಗಿ ಹರಿದಾಡುತ್ತಾ ಆಲಿಸಿದವರ ಬಾಯಲ್ಲಿ ಮೇಲುದನಿಯಲ್ಲಿ ಮೆಲ್ಲನೆ ಗುನುಗುತ್ತಿದ್ದ ಭಜನೆಯ ಪದಗಳು ನೇಪಥ್ಯಕ್ಕೆ ಸರಿಯುತ್ತಿರುವುದು ದುರಂತದ ಸಂಗತಿಯಾಗಿದೆ. ಆಧುನಿಕತೆ ಭರಾಟೆಯಲ್ಲಿ ಹಲವು ಗ್ರಾಮಗಳಲ್ಲಿ ಯುವಕರ ನಿರಾಸಕ್ತಿಯಿಂದ ಭಜನಾ ಸೊಗಡು ಮರೆಯಾಗುತ್ತಿದೆ ಎನ್ನುವುದೇ ಖೇದದ ಸಂಗತಿಯಾಗಿದೆ.
ಭಜನಾ ಪದಗಳು ಭಕ್ತಿ-ಭಾವ ಹಾಗೂ ನಂಬಿಕೆಯ ಜಾಗೃತಿಯುಂಟು ಮಾಡುತ್ತಿದ್ದವು. ಆದರೆ ಇಂದು ಮೊಬೈಲ್ ಭರಾಟೆಯಲ್ಲಿ ಭಜನಾ ಕಲೆಗೆ ಕುತ್ತು ಬಂದಿದೆ
- ನಾಗಯ್ಯಸ್ವಾಮಿ ಅಲ್ಲೂರು ಕರ್ನಾಟಕ ಜಾನಪದ ಪರಿಷತ್ ಚಿತ್ತಾಪುರ ತಾಲ್ಲೂಕು ಅಧ್ಯಕ್ಷ
ಭಜನಾ ಮಂಡಳಿ ರಚಿಸಿಕೊಂಡು ಹಳ್ಳಿ ಹಳ್ಳಿಗೆ ಹೋಗಿ ಇಡೀ ರಾತ್ರಿ ಭಜನೆ ಮಾಡುವುದೇ ಅತ್ಯಂತ ಖುಷಿ ಸಂಗತಿ. ಯುವಕರು ಪರಂಪರೆ ಮುಂದುವರಿಸಿಕೊಂಡು ಹೋಗಬೇಕು
- ಸುಭಾಸ್ ಹೆರೂರು ಭಜನಾ ಕಲಾವಿದರು ವಾಡಿ
ಪ್ರತಿಯೊಂದು ಸಮುದಾಯಗಳ ಮಧ್ಯೆ ಜಾನಪದ ಸಾಮರಸ್ಯ ಇತ್ತು. ಇಂದು ಗ್ರಾಮೀಣ ಕಲೆ ಕಡೆಗಣಿಸಿದ್ದಕ್ಕೆ ಸಮುದಾಯಗಳ ಮಧ್ಯೆ ಹೊಂದಾಣಿಕೆ ಇಲ್ಲದೆ ಅಶಾಂತಿ ಮೂಡಿದೆ
-ಪೂಜಾ ಭಂಕಲಗಿ ಚಿಂತಕಿ ಚಿತ್ತಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.