ಕಲಬುರ್ಗಿಯಲ್ಲಿ ವೈಷ್ಣೊ ದೇವಿ ಆಲಯ

7
ಕರ್ನಾಟಕದಲ್ಲಿ ಮೊದಲ ವೈಷ್ಣೊ ದೇವಿ ಮಂದಿರ, ಸಾಗಿಬರುತ್ತಿರುವ ಭಕ್ತರ ದಂಡು

ಕಲಬುರ್ಗಿಯಲ್ಲಿ ವೈಷ್ಣೊ ದೇವಿ ಆಲಯ

Published:
Updated:
Deccan Herald

ಅಂದು ಭಾನುವಾರ ಸಂಜೆ 5 ಗಂಟೆ ಮೋಡ ಕವಿದ ವಾತಾವರಣ ಸುಮ್ಮನೆ ಹಾಗೆ ಹೊರಗೆ ಹೋಗೋಣವೆಂದು ಬೈಕ್‌ ಹತ್ತಿ ನಾನು ನನ್ನ ಪತಿ ಹೊರೆಟೆವು. ಕಲಬುರ್ಗಿಯ ಆಳಂದ ಮುಖ್ಯ ರಸ್ತೆಯಿಂದ ದೂರದಲ್ಲಿರುವ ಈ ದೇವಾಲಯ ಬೆಟ್ಟದ ರೀತಿಯಲ್ಲಿ ಕಾಣಿಸಿತು. ಇದ್ಯಾವ ಬೆಟ್ಟ ಎಂದು ಹತ್ತಿರಕ್ಕೆ ಹೋದೆವು. ನೋಡಿದರೆ ಆಶ್ಚರ್ಯ. ಅದು ಬೆಟ್ಟವಲ್ಲ, ಅದರ ಶೈಲಿಯಲ್ಲಿರುವ ವೈಷ್ಣೊ ದೇವಿ ಮಂದಿರ ನಮ್ಮನ್ನು ಸೆಳೆಯಿತು.

ಇಲ್ಲಿನ ಗಬರಾದಿ ಲೇಔಟ್‌ನಲ್ಲಿ ನಿರ್ಮಿತವಾದ ವೈಷ್ಣವರ ಆರಾಧ್ಯ ದೇವಿಯಾದ ವೈಷ್ಣೊ ದೇವಿಯ ಮಂದಿರವು ಹಲವಾರು ವಿಶೇಷತೆಗಳಿಂದ ಕೂಡಿದೆ. ಕಲಬುರ್ಗಿಯಲ್ಲಿ ಇದು ಮೊದಲ ವೈಷ್ಣವಿ ದೇವಿ ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೇವಸ್ಥಾನದ ಸುತ್ತಮುತ್ತ ಜನಸಾಗರವೇ ಇತ್ತು. ಎಲ್ಲಿ ನೋಡಿದರಲ್ಲಿ ಭಕ್ತರ ದಂಡೆ ಕಾಣಿಸುತ್ತಿತ್ತು. ನಾವು ಸಾಲಿನಲ್ಲಿ ನಿಂತು ದರ್ಶನ ಪಡೆಯಲು ಮುಂದಾದೆವು. ಕೆಲವರು ದೇವರ ದರ್ಶನ ಪಡೆಯಲು ಉತ್ಸುಕರಾಗಿದ್ದರೆ, ಇನ್ನು ಕೆಲವರು ಸೆಲ್ಫಿ ತೆಗೆದುಕೊಳ್ಳವಲ್ಲಿ ನಿರತರಾಗಿದ್ದರು.

ಈ ದೇವಾಲಯದ ಕುರಿತು ಮಾಹಿತಿ ಪಡೆಯುವ ಕುತೂಹಲ ಹೆಚ್ಚಿತು. ಯಾರ ಬಳಿ ಮಾಹಿತಿ ದೊರೆಯಬಹುದು ಎನ್ನುವ ಆಲೋಚನೆಯಲ್ಲಿದ್ದ ನನಗೆ ದೇವಾಲಯದ ಟ್ರಸ್ಟ್‌ನ ಕಾರ್ಯದರ್ಶಿ ರಾಜು ಗಬರಾದಿ ಅವರು ದೇವಸ್ಥಾನದ ಬಳಿ ಇದ್ದದ್ದು ತಿಳಿಯಿತು. ಅವರನ್ನು ಹುಡುಕಿಕೊಂಡು ಹೋದೆ. ಅವರಿಗೆ ನಮ್ಮ ಬಗ್ಗೆ ಹೇಳಿದೆ. ನಂತರ ಅವರ ಜೊತೆ ಮಾತಿಗಿಳಿದ ನನಗೆ ಅನೇಕ ವಿಷಯಗಳು ತಿಳಿದವು.

ಜಮ್ಮುವಿನಲ್ಲಿರುವ ಮಂದಿರದ ಶೈಲಿಯಲ್ಲೇ ಈ ಮಂದಿರದ ನಿರ್ಮಾಣವಾಗಿರುವುದು ವಿಶೇಷವಾಗಿದೆ. 1 ಎಕರೆ ಜಾಗದಲ್ಲಿ 108 ಅಡಿ ಎತ್ತರವಿದ್ದು, ಮೆಟ್ಟಿಲು, ಇಳಿಜಾರು ಮತ್ತು ಬೆಟ್ಟದ ರೀತಿಯ ವಿನ್ಯಾಸವನ್ನು ಒಳಗೊಂಡಿದೆ. ಗಬರಾದಿ ರಿಲಿಜಿಯನ್‌ ಟ್ರಸ್ಟ್‌ ಮೂಲಕ ಅನೇಕ ಜನ ಸ್ನೇಹಿತರು ಒಗ್ಗೂಡಿ ಈ ದೇವಾಲಯದ ನಿರ್ಮಾಣ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಸರ್ಕಾರದ ನೆರವಿಲ್ಲದೆ ಸ್ವಂತ ಖರ್ಚಿನಲ್ಲಿ ಮಂದಿರ ನಿರ್ಮಿಸುತ್ತಿದ್ದಾರೆ. ಬಾಗಲಕೋಟೆ, ವಿಜಯಪುರ, ಸೊಲ್ಲಾಪುರ, ಪುಣೆ, ರಾಯಚೂರು, ದಾರವಾಡ, ಮುಂಬೈ ಹೀಗೆ ವಿವಿಧ ಜಿಲ್ಲೆಗಳಿಂದ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಈ ದೇವಾಲಯದ ಹೆಗ್ಗಳಿಕೆಯಾಗಿದೆ.

ಪ್ರತಿದಿನ 700–800ರವರೆಗೆ ಭಕ್ತಾದಿಗಳು ಆಗಮಿಸುತ್ತಿದ್ದಾರೆ. ಭಾನುವಾರದಂದು ಸುಮಾರು 2 ಸಾವಿರದ ವರೆಗೆ ಭಕ್ತರು ಇಲ್ಲಿಗೆ ಬರುತ್ತಾರೆ. ಇಲ್ಲಿ ಪ್ರಸಾದ ವ್ಯವಸ್ಥೆ ಇಲ್ಲ. ಕೇವಲ ಟ್ರಸ್ಟ್‌ ಮೂಲಕ ತೆಂಗಿನಕಾಯಿ ಹಾಗೂ ದೇವಿಯ ಚಿತ್ರವಿರುವ ಚಿಕ್ಕ ನಾಣ್ಯವನ್ನು ಮಾರಾಟ ಮಾಡಲಾಗುತ್ತಿದೆ. ಆದರೆ ಇಲ್ಲಿ ತೆಂಗಿನ ಕಾಯಿ ಒಡೆಯುವಂತಿಲ್ಲ. ಮನೆಯ ಜಗುಲಿಯ ಮೇಲಿಟ್ಟು ಪೂಜೆ ಮಾಡಬೇಕು.

ಬಡವರು ಜಮ್ಮುವಿಗೆ ಹೋಗಲು ಸಾಧ್ಯವಿರದ ಕಾರಣ ಇಲ್ಲೇ ದೇವಾಲಯ ನಿರ್ಮಿಸಬೇಕೆಂಬ ಕನಸು ಇತ್ತು. ಆದ್ದರಿಂದ ಟ್ರಸ್ಟ್‌ ಮೂಲಕ ಗೆಳೆಯರೆಲ್ಲಾ ಸೇರಿ 2014ರ ಫೆಬ್ರವರಿ 20ರಿಂದ 2018ರ ಜೂನ್‌ 20ರವರೆಗಿನ ಅವಧಿಯಲ್ಲಿ ಈ ದೇವಾಲಯದ ನಿರ್ಮಾಣ ಮಾಡಲಾಗಿದೆ. ಜನರಿಂದ ಉತ್ತಮ ಸ್ಪಂಧನೆ ದೊರೆಯುತ್ತಿದೆ. ಇದರಿಂದ ತುಂಬಾ ಸಂತೋಷವಾಗುತ್ತಿದೆ ಎಂದು ಟ್ರಸ್ಟ್‌ನ ಕಾರ್ಯದರ್ಶಿ ರಾಜು ಗಬರಾದಿ ಹೇಳಿದರು.

ಮಂಗಳವಾರ,ಶುಕ್ರವಾರ ಮತ್ತು ಭಾನುವಾರ ದೇವಾಲಯ ಜನರ ದರ್ಶನಕ್ಕೆ ತೆಗೆದಿರುತ್ತದೆ. ಬೆಟ್ಟದ ಮೇಲೆ ಹತ್ತಲು ಮತ್ತು ಇಳಿಯಲು ಮೆಟ್ಟಿಲು, ಇಳಿಜಾರಿನ ಹಾದಿಯ ಜೊತೆಗೆ ವಯಸ್ಸಾದ ಹಿರಿಯರು, ಅಶಕ್ತರಿಗಾಗಿ ಹಾಗೂ ಮಕ್ಕಳಿಗಾಗಿ ಲಿಫ್ಟ್‌ ಸೌಲಭ್ಯವನ್ನು ಮಾಡಲಾಗಿದೆ. ಬೆಟ್ಟದ ಮೇಲೆ ಹತ್ತುವಾಗ ಮೊದಲು ಗಣೇಶ, ಹನುಮಂತ, ಚಾಮುಂಡಿ ದೇವಿಯ ದರ್ಶನವಾಗುತ್ತದೆ. ಬೆಟ್ಟದ ನಡುವೆ ಪಾರ್ವತಿ, ವೈಷ್ಣವಿ, ಸರಸ್ವತಿ ದೇವಿಯ ಆಲಯದೊಳಗೆ ಪ್ರವೇಶ, ನಂತರದಲ್ಲಿ ದತ್ತಾತ್ರೆಯ, ಭೈರವ, ಕಾಳಿಕಾ ಮಾತೆ, ಬಾಲಾಜಿ, ಚರಣ ಪಾದುಕೆಯ ದರ್ಶನ ದೊರೆಯುತ್ತದೆ. ಬೆಟ್ಟದ ಮೇಲಿಂದ ನೋಡಿದರೆ ಜನ ಸಾಗರವೇ ಕಾಣುತ್ತದೆ. ಬೀಸುವ ತಂಪಾದ ಗಾಲಿಯಿಂದ ಮನಸು ಒಂದರೆ ಕ್ಷಣ ಹಾಯ್‌ ಎನಿಸುವುದಂತೂ ನಿಜ.

ಭೈರವ ಗುಹೆ ಕಟ್ಟಡ ಕಾರ್ಯ ಚಾಲ್ತಿಯಲ್ಲಿದೆ. ಇನ್ನು 2 ರಿಂದ 3 ತಿಂಗಳಿನಲ್ಲಿ ಭಕ್ತರ ವೀಕ್ಷಣೆಗೆ ತೆರೆಯಲಾಗುತ್ತದೆ. ನಂತರದಲ್ಲಿ ಅಮರನಾಥದಲ್ಲಿರುವಂತೆ ಮಂಜುಗಡ್ಡೆ ಅಮರಾಥನ ರೀತಿಯಲ್ಲಿ ಇಲ್ಲಿಯೂ ಸಹ ವರ್ಷದ ಪೂರ್ತಿ ಇರುವಂತ ಮಂಜುಗಡ್ಡೆ ಅಮರನಾಥನ ಮೂರ್ತಿಯನ್ನು ನಿರ್ಮಿಸಲಾಗುತ್ತಿದೆ. ಇನ್ನು ಮುಂದಿನ ದಿನಗಳಲ್ಲಿ ರಾಘವೇಂದ್ರ,ಅಯ್ಯಪ್ಪ,ಮಾಹಾವೀರ,ನವಗ್ರಹ ದೇವಾಲಯಗಳನ್ನು ನಿರ್ಮಿಸಲಾಗುತ್ತದೆ.

ಮಧ್ಯಪ್ರದೇಶದ ಬಿಲ್ಡಿಂಗ್‌ ಕಾಂಟ್ರಾಕ್ಟರ್‌ ಜಾನಿಯವರು ಬೆಟ್ಟದ ಶೈಲಿ ಕಲ್ಲು ಬಂಡೆಗಳನ್ನು ನಿರ್ಮಾಣ ಮಾಡಿದ್ದಾರೆ. ಮೆಟ್ಟಿಲು ಮತ್ತು ಇಳಿಜಾರಿನ ಹಾದಿಯನ್ನು ಖಾಜಾಮಿಯಾ ಲೇಬರ್‌ ಕಾಂಟ್ರ್ಯಾಕ್ಟರ್‌ ನಿರ್ಮಿಸಿದ್ದಾರೆ. ಸೋನಾಪುರದ ಇಂಜಿನಿಯರ್‌ ದೇವಾಲಯದ ನೀಲ ನಕ್ಷೆ ಸಿದ್ಧ ಪಡಿಸಿಕೊಟ್ಟಿದ್ದಾರೆ. ದೇವಾಲಯದ ಸುತ್ತಲೂ ಆವರಣ ಗೋಡೆ ಹಾಗೂ ಉದ್ಯಾನವನ್ನು ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದು, ಇನ್ನು ಕೆಲವು ತಿಂಗಳುಗಳಲ್ಲಿ ಕಾರ್ಯ ರೂಪಕ್ಕೆ ಬರಲಿದೆ. ಜನರಿಗೆ ಸಾಲಿನಲ್ಲಿ ನಿಂತು ದರ್ಶನ ಪಡೆಯಲು ಗೇಟ್‌ ವ್ಯವಸ್ಥೆ ಮಾಡಲಾಗುತ್ತಿದೆ. ಒಮ್ಮೆ ನೋಡಿದ ಈ ದೇವಾಲ ಮತ್ತೆ ಮತ್ತೆ ನೋಡಬೇಕು ಎನಿಸುವ ಪ್ರೇಕ್ಷಣೀಯ ತಾಣವಾಗಿದೆ.

ಪೂಜಾ ಸಮಯ
ಬೆಳಿಗ್ಗೆ 6 ಗಂಟೆಗೆ ಪೂಜೆ, 7 ಗಂಟೆಗೆ ಆರತಿ ಮಾಡಲಾಗುತ್ತದೆ. ಸಂಜೆ 7 ಗಂಟೆಗೆ ಆರತಿ ನೆರವೇರಿಸಲಾಗುತ್ತದೆ.

ದೇವಾಲಯದ ಸಮಯ
ಮಂಗಳವಾರ, ಶುಕ್ರವಾರ ಮತ್ತು ಭಾನುವಾರ ಬೆಳಿಗ್ಗೆ 6 ಗಂಟೆಯಿಂದ ಮದ್ಯಾಹ್ನ 2 ಗಂಟೆವರೆಗೆ ಹಾಗೂ ಮಧ್ಯಾಹ್ನ 4 ಗಂಟೆಯಿಂದ ಸಂಜೆ 8 ಗಂಟೆವರೆಗೆ ದೇವಾಲಯ ತೆರೆದಿರುತ್ತದೆ.

ದೇವಾಲಯದ ವಿಶೇಷತೆಗಳು
ಇಳಿಜಾರು ಮತ್ತು ಮೆಟ್ಟಿಲುಗಳ ನಿರ್ಮಾಣ, ಲಿಫ್ಟ್‌ ವ್ಯವಸ್ಥೆ, ಬೆಟ್ಟದ ಶೈಲಿಯ ನಿರ್ಮಾಣ, ಜೈಪುರದಿಂದ ಮೂರ್ತಿಗಳನ್ನು ತಂದು ಪ್ರತಿಷ್ಠಾಪನೆ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !