ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರದ್ಧಾ, ಭಕ್ತಿಯಿಂದ ವಾಲ್ಮೀಕಿ ಜಯಂತಿ

ಕರುಣ ರಸದ ಮೇಲೆ ರಚಿತವಾದ ರಾಮಾಯಣ ವಿಶ್ವದ ಶ್ರೇಷ್ಠ ಕೃತಿ: ಹನುಮಣ್ಣನಾಯಕ ದೊರೆ
Last Updated 31 ಅಕ್ಟೋಬರ್ 2020, 15:52 IST
ಅಕ್ಷರ ಗಾತ್ರ

ಕಲಬುರ್ಗಿ: ನಗರವೂ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಶನಿವಾರ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಶ್ರದ್ಧಾ– ಭಕ್ತಿಯಿಂದ ಆಚರಿಸಲಾಯಿತು.

ಕೋವಿಡ್-19 ಮಾರ್ಗಸೂಚಿ ಕಾರಣ ಜಿಲ್ಲಾಡಳಿತದಿಂದ ವಾಲ್ಮೀಕಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ವಿ.ವಿ. ಜೋತ್ಸ್ನಾ ಅವರು ಆದಿಕವಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿಮಿ ಮರಿಯಮ್ ಜಾರ್ಜ್, ಡಿಸಿಪಿ ಡಿ.ಕಿಶೋರ ಬಾಬು, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರ ವಣಿಕ್ಯಾಳ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಅಲ್ಲಾಭಕ್ಷ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಇದ್ದರು.

ಗುಲಬರ್ಗಾ ವಿ.ವಿ: ಇಲ್ಲಿನ ಗಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಪ್ರಭಾರಿ ಕುಲಪತಿ ಪ್ರೊ.ಚಂದ್ರಕಾಂತ ಯಾತನೂರ ಮಾತನಾಡಿ, ಮುಂದಿನ ದಿನಗಳಲ್ಲಿ ಮಹಾಹರ್ಷಿ ವಾಲ್ಮೀಕಿ ಆದರ್ಶ ಕುರಿತು ರಾಷ್ಟ್ರ ಮಟ್ಟದ ಸಮಿನರ ಆಯೋಜಿಸವದಾಗಿ ತಿಳಿಸಿಸಿದರು.

ಕುಲಸಚಿವ (ಮೌಲ್ಯಮಾಪನ) ಡಾ.ಸಂಜೀವಕುಮಾರ ಎಂ., ವಿತ್ತಾಧಿಕಾರಿ ಬಿ.ವಿಜಯ, ಸಮಾರಂಭದ ಸಂಚಾಲಕರಾದ ಪ್ರೊ.ಬಸವರಾಜ ಸಣ್ಣಕ್ಕಿ ವೇದಿಕೆಮೇಲಿದ್ದರು.

ಪ್ರೊ.ಬಸವರಾಜ ಸಣ್ಣಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶರಣಪ್ಪ ದಿದ್ದಿ ನಿರೂಪಿಸಿದರು. ಎಂ.ಎಸ್.ಪಾಸೋಡಿ ವಂದಿಸಿದರು.

ಎಸ್‌ಬಿಆರ್‌: ಇಲ್ಲಿನ ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ ವಾಲ್ಮೀಕಿ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿಯಲ್ಲಿ ಹಿರಿಯ ಉಪನ್ಯಾಸಕರಾದ ಮಹೇಶ ಪಾಟೀಲ, ಶರಣಬಸವ ನೀಲಾ ಅವರು ಪೂಜೆ ಸಲ್ಲಿಸಿದರು.

ಕಾಲೇಜಿನ ಮೇಲ್ವಿಚಾರಕಶ್ರೀಶೈಲ ಹೊಗಾಡೆ ಮತ್ತು ಎಲ್ಲಾ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕ ವರ್ಗದವರು, ಬೋಧಕೇತರ ಸಿಬ್ಬಂದಿ ಇದ್ದರು.

‘ಪರಿವರ್ತನೆಯಿಂದ ಶ್ರೇಷ್ಠರಾದ ವಾಲ್ಮೀಕಿ’

ಕಲಬುರ್ಗಿ: ‘ಮಹರ್ಷಿ ವಾಲ್ಮೀಕಿ ಅವರು ಸಾಮಾನ್ಯವಾಗಿ ಹುಟ್ಟಿ, ವಿಶಿಷ್ಠ ಮತ್ತು ಆದರ್ಶ ವ್ಯಕ್ತಿಯಾಗಿ ಬೆಳೆದು, ಒಬ್ಬ ಶ್ರೇಷ್ಠ ಮಹರ್ಷಿಯಾಗಿ ಪರಿವರ್ತನೆಗೊಂಡರು’ ವಿಶ್ರಾಂತ ಕುಲಪತಿ ಪ್ರೊ.ಹನುಮಣ್ಣ ನಾಯಕ ದೊರೆ ಅಭಿಪ್ರಾಯಪಟ್ಟರು.

ಶರಣಬಸವ ವಿಶ್ವವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯ ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ಅವರು, ‘ನವರಸಗಳಲ್ಲಿ ಒಂದಾದ ಕರುಣ ರಸದ ಮೇಲೆಯೇ ರಾಮಾಯಣ ನಿರ್ಮಾಣವಾಗಿದೆ. ರಾಮಾಯಣ ಮಾಹಾಕಾವ್ಯದಲ್ಲಿ ತಂದೆ– ತಾಯಿ ಮತ್ತು ಮಕ್ಕಳ ನಡುವಿನ ಸಂಬಂಧ, ಸಹೋದರತ್ವ ಸಂಬಂಧ, ಪ್ರಾಣಿ-ಪಕ್ಷಿಗಳ ನಡುವಿನ ಬಾಂಧವ್ಯ ಸಮಾಜಕ್ಕೆ ತಿಳಿಯಪಡಿಸುತ್ತದೆ. ಮಕ್ಕಳು ತಂದೆ ತಾಯಿಗೆ ಯಾವ ರೀತಿ ವಿಧೇಯತೆಯಂದಿರಬೇಕು ಎನ್ನುವುದು ತಿಳಿಯಪಡಿಸುತ್ತದೆ. ಈ ಕಾವ್ಯ ಇಡೀ ವಿಶ್ವಕ್ಕೆ ನೈತಿಕ ಮೌಲ್ಯಗಳನ್ನು ಕೊಡುಗೆಯಾಗಿ ನೀಡಿದೆ’ ಎಂದರು.

‘ರಾಮಾಯಣ ಗ್ರಂಥದ ಕರ್ತೃ ಮಹರ್ಷಿ ವಾಲ್ಮೀಕಿಯವರ ಜನನದ ಬಗ್ಗೆ ವಿವಿಧ ಹೇಳಿಕೆಗಳಿವೆ. ಮಹರ್ಷಿಯವರು ಹುತ್ತದಿಂದ ಹುಟ್ಟಿದವರು. ಬೇಡಜನಾಂಗಕ್ಕೆ ಸೇರಿದವರು, ದರೋಡೆ ಕೋರರಾಗಿದ್ದರು ಎಂಬ ಹೇಳಿಕೆಗಳಿವೆ. ದರೋಡೆಕೋರರಾಗಿದ್ದ ವ್ಯಕ್ತಿ ಒಂದು ಮಹಾನ್ ಕಾವ್ಯ ರಚಿಸುವಷ್ಟು ಶ್ರೇಷ್ಠನಾಗಿ ಪರಿವರ್ತನೆಗೊಳ್ಳುವದು ಸಾಮಾನ್ಯವಾದುದಲ್ಲ’ ಎಂದು ಅಭಿಪ್ರಾಯ ಪಟ್ಟರು.

ಕುಲಸಚಿವ ಡಾ.ಅನೀಲಕುಮಾರ ಬಿಡವೆ ಮಾತನಾಡಿ, ಇತಿಹಾಸದ ಪುಟಗಳಿಂದ ನಾವು ಹಲವು ರೀತಿಯಲ್ಲಿ ಕಲಿಯುತ್ತಿದ್ದೇವೆ. ಮಹಾಕಾವ್ಯಗಳು ಇಂದಿನ ಪೀಳಿಗೆಗೆ ದಾರಿದೀಪವಾಗಿವೆ’ ಎಂದು ತಿಳಿಸಿದರು.

ಮೌಲ್ಯಮಾಪನ ಕುಲಸಚಿವ ಡಾ.ಲಿಂಗರಾಜ ಶಾಸ್ತ್ರಿ ಮಾತನಾಡಿ, ನೈತಿಕ ಮೌಲ್ಯಗಳು, ಸಾಮಾಜಿಕ ಹಾಗೂ ಧಾರ್ಮಿಕ ಮೌಲ್ಯಗಳನ್ನು ರಾಮಾಯಣ ಮತ್ತು ಮಹಾಭಾರತದಿಂದ ನಾವು ತಿಳಿದುಕೊಳ್ಳಬಹುದಾಗಿದೆ. ಮ್ಯಾನೇಜಮೆಂಟ್ ಅಥವಾ ನಿರ್ವಹಣೆ ಕಲಿಕೆಯ ಪಠ್ಯಕ್ರಮದಲ್ಲಿ ನೈತಿಕ ಮೌಲ್ಯಗಳು ಮತ್ತು ನಿರ್ವಹಣಾ ಸಾಮರ್ಥ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಕಲಿಸುವ ದೃಷ್ಟಿಯಿಂದ ರಾಮಾಯಣ ಗ್ರಂಥವನ್ನು ಪಠ್ಯಕ್ರಮದಲ್ಲಿ ಸಾದರಪಡಿಸಬೇಕು’ ಎಂದರು.

ಡೀನ್ ಡಾ.ಲಕ್ಷ್ಮಿ ಪಾಟೀಲ ಮಾಕಾ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಟಿ.ವಿ. ಶಿವಾನಂದನ್ ಇದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ಉದಯಕುಮಾರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT