ಮಂಗಳವಾರ, ಡಿಸೆಂಬರ್ 7, 2021
26 °C

ಸಂಭ್ರಮದ ಹಲಕರ್ಟಿ ವೀರಭದ್ರೇಶ್ವರ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಲಕರ್ಟಿ(ವಾಡಿ): ಹಲಕರ್ಟಿಯ ಪ್ರಸಿದ್ಧ ವೀರಭದ್ರೇಶ್ವರ ರಥೋತ್ಸವ ಬುಧವಾರ ಸಂಜೆ ಅಪಾರ ಭಕ್ತರ ಜಯಘೋಷಗಳ ಮಧ್ಯೆ ಸಂಭ್ರಮ ಸಡಗರದಿಂದ ಜರುಗಿತು.

ಜಾತ್ರಾ ನಿಮಿತ್ತ ಕಳೆದ 6 ದಿನಗಳಿಂದ ಆರಂಭವಾಗಿದ್ದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಅಂತಿಮ ಭಾಗವಾಗಿ ಜರುಗಿದ ರಥೋತ್ಸವಕ್ಕೆ ರಾಜ್ಯ ಹಾಗೂ ಹೊರರಾಜ್ಯದ ಸಾವಿರಾರು ಭಕ್ತರು ಭಾಗವಹಿಸಿ ಭಕ್ತಿ ಮೆರೆದರು.

ರಥವನ್ನು ಹೂವುಗಳು, ಛತ್ರಿ, ಚಾಮರಗಳಿಂದ ಸಿಂಗರಿಸಲಾಗಿತ್ತು. ಸಂಜೆ 6.30ಕ್ಕೆ ಕಟ್ಟಿಮನಿ ಹಿರೇಮಠದ ಮುನೀಂದ್ರ ಶಿವಾಚಾರ್ಯರು ರಥಕ್ಕೆ ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

ಪಟಾಕಿಗಳು ಬಾನಂಗಳದಲ್ಲಿ ಬಗೆಬಗೆಯ ಚಿತ್ತಾರ ಮೂಡಿಸಿದರೆ, 'ವೀರಭದ್ರೇಶ್ವರ ಮಹಾರಾಜಕೀ ಜೈ', ‘ದುಷ್ಟ ಸಂಹಾರಿ ವೀರಭದ್ರ ಹರ ಹರ’ ಎಂಬ ಭಕ್ತರು ಜಯಘೋಷ ಮೊಳಗಿಸಿದರು.ಗ್ರಾಮದ ಚೌಡೇಶ್ವರಿ ದೇವಸ್ಥಾನದಿಂದ ಚೌಡಕಿ ಮೆರವಣಿಗೆ ನಡೆಯಿತು. ದೇಶಮುಖ ಮನೆಯಿಂದ ಮೆರವಣಿಗೆ ಮೂಲಕ ಕುಂಭ ತರಲಾಯಿತು.

ಇದಕ್ಕೂ ಮೊದಲು ಮಂಗಳವಾರ ತಡರಾತ್ರಿ ದೇವಸ್ಥಾನದ ಆವರಣದಲ್ಲಿ ಭಕ್ತರ ಹರಕೆಯ ಅಗ್ನಿ ಪ್ರವೇಶ ಜರುಗಿತು. ಸಾವಿರಾರು ಭಕ್ತರು ನಿಗಿ ನಿಗಿ ಕೆಂಡದ ರಾಶಿ ತುಳಿದು ಭಕ್ತಿಯ ಪರಕಾಷ್ಟೆ ಮೆರೆದರು. ಪೂಜಾರಿಗಳು ಹಾಗೂ ಪುರವಂತರು ಅಗ್ನಿಯ ಸುತ್ತ ಪ್ರದಕ್ಷಿಣೆ ಹಾಕುತ್ತಾ ನಂತರ ಅಗ್ನಿ ಪ್ರವೇಶ ಮಾಡಿದ ನಂತರ ಸಾಲಾಗಿ ನಿಂತಿದ್ದ ಭಕ್ತರು ವೀರಭದ್ರೇಶ್ವರ ನಾಮಸ್ಮರಣೆ ಜಪಿಸುತ್ತಾ ಕೆಂಡ ತುಳಿದು ಭಕ್ತ ಸಮರ್ಪಿಸಿದರು.

ದೇವಸ್ಥಾನದ ಭಕ್ತರಾದ ದಿ.ದಾನಮ್ಮ ಪುಟ್ಟಪ್ಪ ಮಲೆಬೆನ್ನೂರು ಸ್ಮರಣಾರ್ಥ ಮಲೆಬೆನ್ನೂರಿನ ಬೆನಕೊಂಡಿ ಪರಿವಾರ ಹಾಗೂ ಫರತಾಬಾದಿನ ವಿಜಯಕುಮಾರ ಶಂಕ್ರಣ್ಣ ಸಜ್ಜನ ಕುಟುಂಬದ ವತಿಯಿಂದ ಹಾಗೂ ವೀರಭದ್ರೇಶ್ವರ ದೇವಸ್ಥಾನದ ವತಿಯಿಂದ ಭಕ್ತರಿಗೆ ಉಚಿತ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ವಿಜಯಪುರ ಶಂಕರ ಮಹಾದೇವಪ್ಪ ಮತ್ತು ವೀರೇಶ ಮಹಾದೇವಪ್ಪ ಹಳಕರ್ಟಿ ಅವರು ರಥೋತ್ಸವಕ್ಕೂ ಮುನ್ನ ಮದ್ದು ಸುಡುವ ಮೂಲಕ ಭಕ್ತಿ ಸಮರ್ಪಿಸಿದರು. ವಾಡಿ ಠಾಣೆಯಿಂದ ಪೊಲೀಸ್ ಬಂದೋಬಸ್ತು ಕಲ್ಪಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.