ಬುಧವಾರ, ಸೆಪ್ಟೆಂಬರ್ 18, 2019
25 °C
ವೀರಶೈವ ಮಹಾಸಭಾ ಕರೆದಿದ್ದ ಸಭೆಯಲ್ಲಿ ಕಾವೇರಿದ ವಾತಾವರಣ

ಚುನಾವಣೆ ನಡೆಸಲು ಸದಸ್ಯರ ಪಟ್ಟು

Published:
Updated:
Prajavani

ಕಲಬುರ್ಗಿ: ಅಖಿಲ ಭಾರತ ವೀರಶೈವ ಮಹಾಸಭೆಯ ಜಿಲ್ಲಾ ಘಟಕಕ್ಕೆ ಈ ಬಾರಿಯೂ ಅವಿರೋಧವಾಗಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಬೇಕು ಎಂಬ ಸಮಾಜದ ಹಿರಿಯರ ಮನವಿಗೆ ಓಗೊಡದ ಸದಸ್ಯರು ಈ ಬಾರಿ ಚುನಾವಣೆ ನಡೆಸಲೇಬೇಕು ಎಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ತೀವ್ರ ವಾಗ್ವಾದವೂ ನಡೆಯಿತು.

ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಭಾನುವಾರ ಸಂಜೆ ನಡೆದ ಮಹಾಸಭಾ ಪದಾಧಿಕಾರಿಗಳು ಹಾಗೂ ವೀರಶೈವ–ಲಿಂಗಾಯತ ಸಮಾಜದ ಪ್ರಮುಖ ಸಭೆ ಆರಂಭವಾಗುತ್ತಿದ್ದಂತೆಯೇ ಚುನಾವಣೆ ನಡೆಯಲೇಬೇಕು ಎಂದು ಬಹುತೇಕ ಸದಸ್ಯರು ಪಟ್ಟು ಹಿಡಿದರು. 

ಸಭೆಯಲ್ಲಿ ಮಾತನಾಡಿದ ಹಲವು ಮುಖಂಡರು, ಚುನಾವಣೆ ನಡೆಸುವುದರಿಂದ ಮನೆಗಳು, ಮನಸ್ಸುಗಳು ಒಡೆಯುತ್ತವೆ. ದುಡ್ಡು ಸಾಕಷ್ಟು ಖರ್ಚಾಗುತ್ತದೆ. ಇದು ಅನಗತ್ಯ. ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಯಾರಾದರೂ ಇದ್ದರೆ ವೇದಿಕೆಗೆ ಬರಬೇಕು ಎಂದು ಮುಖಂಡರು ಆಹ್ವಾನಿಸಿದರು. ಆದರೆ, ಯಾರೊಬ್ಬರೂ ವೇದಿಕೆಗೆ ಬರಲಿಲ್ಲ. ಆದರೆ, ಪ್ರೇಕ್ಷಕರ ಸಾಲಿನಲ್ಲಿ ಎದ್ದುನಿಂತ ಕೆಲವರು ಅಧ್ಯಕ್ಷರು ಹಾಗೂ ಸದಸ್ಯರನ್ನು ಚುನಾವಣೆಯ ಮೂಲಕವೇ ನೇಮಕ ಮಾಡಬೇಕು. ಯಾರು ಸಮಾಜದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವರೋ ಅವರು ಆಯ್ಕೆಯಾಗುತ್ತಾರೆ ಎಂದರು.

ವೀರಶೈವ ಮಹಾಸಭಾ ಜಿಲ್ಲಾ ಅಧ್ಯಕ್ಷ ಅರುಣಕುಮಾರ್‌ ಪಾಟೀಲ ಮಾತನಾಡಿ, ‘ಮಹಾಸಭಾ ಯಾರಪ್ಪನ ಸ್ವತ್ತೂ ಅಲ್ಲ. ಈ ಹುದ್ದೆಯಲ್ಲಿ ನಾನೇ ಇನ್ನಷ್ಟು ವರ್ಷ ಮುಂದುವರಿಯಬೇಕು ಎಂಬ ಇಚ್ಛೆಯೂ ಇಲ್ಲ. ಚುನಾವಣೆ ನಡೆಯಲಿ. ನಾನು ಅಧಿಕಾರದಲ್ಲಿ ಇಲ್ಲದಿದ್ದರೂ ಸಮಾಜದ ಕೆಲಸ ಮುಂದುವರಿಸುತ್ತೇನೆ’ ಎಂದು ಹೇಳಿದರು.

ಸಮಾಜದ ಮುಖಂಡ ಮಹೇಶ ಪಾಟೀಲ, ‘ಸಮಾಜದ ಮುಖಂಡರ ಮೇಲೆ ಜಾತಿ ನಿಂದನೆ ದೌರ್ಜನ್ಯ ಪ್ರಕರಣಗಳು ಉದ್ದೇಶಪೂರ್ವಕವಾಗಿ ದಾಖಲಾಗುತ್ತಿವೆ. ವೀರಶೈವ–ಲಿಂಗಾಯತ ಸಮಾಜದ ಜನರು ಕಷ್ಟಪ‍ಟ್ಟು ಖರೀದಿಸಿದ ನಿವೇಶನಗಳನ್ನು ಕಬಳಿಸುವ ವ್ಯವಸ್ಥಿತ ಜಾಲವೇ ಇದೆ. ಈ ಬಗ್ಗೆ ಪ್ರಶ್ನಿಸಿದರೆ ಜಾತಿ ಬಲದಿಂದ ಹೆದರಿಸಲಾಗುತ್ತಿದೆ. ಈ ಬಗ್ಗೆ ಮಹಾಸಭಾ ಯಾವ ಕ್ರಮ ಕೈಗೊಂಡಿದೆ. ಸಮಾಜದ ಮುಖಂಡರ ಹೆಣ್ಣು ಮಕ್ಕಳ ಮೇಲೆಯೂ ಮಾನಭಂಗದ ಪ್ರಯತ್ನಗಳು ನಡೆದಿವೆ. ಆದರೂ, ಅವರು ತಮ್ಮ ವೋಟ್‌ ಬ್ಯಾಂಕ್‌ ಕಳೆದುಕೊಳ್ಳಬೇಕಾಗುತ್ತದೆ ಎಂಬ ಅಂಜಿಕೆಯಿಂದ ಸುಮ್ಮನಾಗಿದ್ದಾರೆ. ಇಂಥವರ ನೆರವಿಗೆ ಮಹಾಸಭಾ ಎಂದೂ ಬಂದೇ ಇಲ್ಲ. ಇದ್ದು ಸತ್ತಂತಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿಜಲಿಂಗಪ್ಪ ಕೊರಳ್ಳಿ ಮಾತನಾಡಿ, ‘ಸರ್ಕಾರಿ ನೌಕರಿ ಮಾಡುವುದೇ ದುಸ್ತರವಾಗಿದ್ದು, ಹಿಂದುಳಿದ ಸಮುದಾಯದ ಅಧಿಕಾರಿಗಳು ಅನಗತ್ಯವಾಗಿ ಜಾತಿ ನಿಂದನೆ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ನಾನು ಎಂಟು ದಿನಗಳ ಬಳಿಕ ನಿರೀಕ್ಷಣಾ ಜಾಮೀನು ಪಡೆದು ಬಂದಿದ್ದೇನೆ’ ಎಂದು ನೊಂದುಕೊಂಡರು.

ಬಿಜೆಪಿ ನಾಯಕಿ ದಿವ್ಯಾ ಹಾಗರಗಿ, ‘ನಾನು ಈ ಬಾರಿ ಮಹಾಸಭಾ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಆದರೆ, ಎಲ್ಲ ಹುದ್ದೆಗಳು ಆದಿಮ, ಪಂಚಮರಿಗಷ್ಟೇ ಹಂಚಿಕೆಯಾಗಬಾರದು. ಲಿಂಗಾಯತ ಸಮಾಜದ ಎಲ್ಲ ಉಪಪಂಗಡವದವರಿಗೂ ಪ್ರಾತಿನಿಧ್ಯ ಸಿಗಬೇಕು. ಪ್ರತಿ ವರ್ಷ ಜಿಲ್ಲೆಯ ಐದು ಗ್ರಾಮಗಳನ್ನು ದತ್ತು ಪಡೆದು ಅಲ್ಲಿ ಬಸವಣ್ಣನವರ ಮೂರ್ತಿಗಳನ್ನು ಸ್ಥಾಪಿಸಬೇಕು’ ಎಂದು ಸಲಹೆ ನೀಡಿದರು.

ವಿಧಾನಪರಿಷತ್‌ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಉಪಾಧ್ಯಕ್ಷ ಕಲ್ಯಾಣರಾವ ಪಾಟೀಲ ಮಳಖೇಡ, ಕಾರ್ಯದರ್ಶಿ ಶ್ರೀಶೈಲ ಗೂಳಿ, ತಾಲ್ಲೂಕು ಅಧ್ಯಕ್ಷ ಸಾತಪ್ಪ ಗೂಳಿ, ಶರಣು ಪಪ್ಪಾ, ಎಂ.ಎಸ್‌.ಪಾಟೀಲ ನರಿಬೋಳ ಇತರರು ಮಾತನಾಡಿದರು.

Post Comments (+)