ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇತುರಾಮ್‌ಗೆ ಮಾಸ್ತಿ ಕಥಾ ಪುರಸ್ಕಾರ

Last Updated 24 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಾಸ್ತಿ ಟ್ರಸ್ಟ್‌ ನೀಡುವ ಮಾಸ್ತಿ ಕಥಾ ಪುರಸ್ಕಾರಕ್ಕೆ ಎಸ್‌.ಎನ್‌.ಸೇತುರಾಮ್‌ ಅವರ ‘ನಾವಲ್ಲ’ ಕಥಾ ಸಂಕಲನ ಮತ್ತು ಮಾಸ್ತಿ ಕಾದಂಬರಿ ಪುರಸ್ಕಾರಕ್ಕೆ ತೇಜಸ್ವಿನಿ ಹೆಗಡೆ ಅವರ ‘ಹಂಸಯಾನ’, ಚೀಮನಹಳ್ಳಿ ರಮೇಶ್‌ ಬಾಬು ಅವರ ‘ಟೈರ್ಸಾಮಿ’ ಕೃತಿಗಳು ಆಯ್ಕೆಯಾಗಿವೆ.

ಸೇತುರಾಮ್‌ ಮತ್ತು ತೇಜಸ್ವಿನಿ ಬೆಂಗಳೂರಿನವರು. ರಮೇಶ್‌ ಬಾಬು ಅವರು ಚಿಂತಾಮಣಿಯವರು. ಕೃತಿಗಳ ಲೇಖಕರಿಗೆ ತಲಾ ₹ 25 ಸಾವಿರ, ಪ್ರಕಾಶಕರಿಗೆ ತಲಾ ₹ 10 ಸಾವಿರ ನಗದು ಪುರಸ್ಕಾರ ನೀಡಲಾಗುತ್ತದೆ. ಪುರಸ್ಕಾರ ಸಮಾರಂಭ ಜೂನ್‌ ಅಥವಾ ಜುಲೈನಲ್ಲಿ ನಡೆಯಲಿದೆ ಎಂದು ಟ್ರಸ್ಟ್‌ ಅಧ್ಯಕ್ಷ ಮಾವಿನಕೆರೆ ರಂಗನಾಥನ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೈಸೂರು– ರೇಣಿಗುಂಟ ಹೊಸ ರೈಲು

ಮೈಸೂರು: ಮೈಸೂರು ಹಾಗೂ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ರೇಣಿಗುಂಟ ನಡುವೆ (ಬೆಂಗಳೂರು ಮೂಲಕ) ಜೂನ್‌ 1ರಿಂದ ವಾರಕ್ಕೊಮ್ಮೆ ಹೊಸ ರೈಲು ಸಂಚಾರ ಆರಂಭಿಸಲು ನೈರುತ್ಯ ರೈಲ್ವೆ ಮುಂದಾಗಿದೆ.

‘ಮೈಸೂರು– ರೇಣಿಗುಂಟ ವೀಕ್ಲಿ ಎಕ್ಸ್‌ಪ್ರೆಸ್‌’ ರೈಲು (ಸಂಖ್ಯೆ 11065) ಪ್ರತಿ ಶುಕ್ರವಾರ ರಾತ್ರಿ 10.55ಕ್ಕೆ ಮೈಸೂರಿನಿಂದ ಹೊರಟು ಶನಿವಾರ ಬೆಳಿಗ್ಗೆ 8.25ಕ್ಕೆ ರೇಣಿಗುಂಟ ತಲುಪಲಿದೆ. ಹಾಗೆಯೇ ಈ ರೈಲು (ಸಂಖ್ಯೆ 11066) ಶನಿವಾರ ಸಂಜೆ 5.50ಕ್ಕೆ ರೇಣಿಗುಂಟದಿಂದ ಹೊರಟು ಭಾನುವಾರ ಬೆಳಗ್ಗಿನ ಜಾವ 3.15ಕ್ಕೆ ಮೈಸೂರು ತಲುಪಲಿದೆ.

ಈ ರೈಲು ಮಂಡ್ಯ, ಬೆಂಗಳೂರು, ಜೋಲಾರ್‌ಪೇಟೆ, ಕಾಟ್‌ಪಾಡಿ ಮಾರ್ಗದಲ್ಲಿ ಸಂಚರಿಸಲಿದೆ.

ರಂಗ ಶಿಕ್ಷಣಕ್ಕೆ ಅರ್ಜಿ ಆಹ್ವಾನ

ಬೆಂಗಳೂರು: ಹರಪನಹಳ್ಳಿಯಲ್ಲಿನ ಪೃಥ್ವಿರಂಗಶಾಲೆ ಒಂದು ವರ್ಷದ ಸಮಗ್ರ ರಂಗತರಬೇತಿಗೆ ಅರ್ಜಿಗಳನ್ನು ಆಹ್ವಾನಿಸಿದೆ.

ಊಟ, ವಸತಿ ಉಚಿತ. ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಇರುತ್ತದೆ. ಅಭ್ಯರ್ಥಿಗಳು ಪಿಯುಸಿ ಉತ್ತೀರ್ಣವಾಗಿರಬೇಕು. ವಯೋಮಿತಿ 30ರೊಳಗಿರಬೇಕು. ಆಸಕ್ತರು ಜೂನ್ 20ರ ಒಳಗಾಗಿ ಅರ್ಜಿ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಮಾನ್ಯತೆ ಪಡೆದ ರಂಗಶಾಲೆ ಇದಾಗಿದೆ. ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ ಅವರ ಮಾರ್ಗದರ್ಶನದಲ್ಲಿ ರಂಗಶಿಕ್ಷಣ ನೀಡಲಾಗುವುದು. ಸಂದರ್ಶನದ ಮೂಲಕ ತರಬೇತಿಗೆ ಆಯ್ಕೆ ಮಾಡಿಕೊಳ್ಳಲಾಗುವುದು.

₹100ರ ಡಿಡಿ ತೆಗೆದು ಪ್ರಾಂಶುಪಾಲರು, ಪೃಥ್ವಿರಂಗಶಾಲೆ, ಹರಪನಹಳ್ಳಿ ಇವರ ಹೆಸರಿಗೆ ಕಳುಹಿಸಬೇಕು. ವಿಳಾಸ: ಪ್ರಾಂಶುಪಾಲರು, ಪೃಥ್ವಿರಂಗಶಾಲೆ, ಹಡಗಲಿರಸ್ತೆ, ಹರಪನಹಳ್ಳಿ. ಹೆಚ್ಚಿನ ಮಾಹಿತಿಗೆ - 9449434664 ಸಂಪರ್ಕಿಸಬಹುದು.

ಜೂನ್‌ನಲ್ಲಿ ಹಳಗನ್ನಡ ಸಾಹಿತ್ಯ ಸಮ್ಮೇಳನ

ಶ್ರವಣಬೆಳಗೊಳ: ಶ್ರವಣಬೆಳಗೊಳದಲ್ಲಿ ಮೊದಲ ಬಾರಿಗೆ ಅಖಿಲ ಭಾರತ ಹಳಗನ್ನಡ ಸಾಹಿತ್ಯ ಸಮ್ಮೇಳನವನ್ನು ಜೂನ್‌ ತಿಂಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಇಲ್ಲಿ ಗುರುವಾರ ತಿಳಿಸಿದರು.

ಡಾ.ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಈ ಮಾಹಿತಿ ನೀಡಿದರು.

‘ಹಳಗನ್ನಡ ಸಾಹಿತ್ಯ ಸಮ್ಮೇಳನವನ್ನು ಜೂನ್ 24ರಿಂದ ಮೂರು ದಿನ ನಡೆಸಲು ಉದ್ದೇಶಿಸಿದೆ. ಹಳಗನ್ನಡದ ಶ್ರೇಷ್ಠ ಸಾಹಿತ್ಯವನ್ನು ಓದುಗರಿಗೆ ತಲುಪಿಸುವುದು ಇದರ ಉದ್ದೇಶ’ ಎಂದರು.

81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿಗಾಗಿ ಡಾ.ಸಿದ್ದಲಿಂಗಯ್ಯ ಅವರ ಹೆಸರಿನಲ್ಲಿ ಈ ದತ್ತಿ ಪ್ರಶಸ್ತಿ ಸ್ಥಾಪನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT