ಬುಧವಾರ, ಸೆಪ್ಟೆಂಬರ್ 30, 2020
20 °C

ಕಲಬುರ್ಗಿ | ತಾತ್ಕಾಲಿಕ ಮಾರುಕಟ್ಟೆಯ ದುಸ್ಥಿತಿ: ಟಾರ್ಚ್ ಬೆಳಕಲ್ಲಿ ವ್ಯಾಪಾರ

ಸತೀಶ್‌ ಬಿ. Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಇಲ್ಲಿಯ ಅಟಲ್‌ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿರುವ ತಾತ್ಕಾಲಿಕ ಮಾರುಕಟ್ಟೆಯಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಇಲ್ಲದ್ದರಿಂದ ವ್ಯಾಪಾರಿಗಳು ಟಾರ್ಚ್ ಬೆಳಕಿನಲ್ಲಿ ವ್ಯಾಪಾರ ಮಾಡಬೇಕಾಗಿದೆ.

ಕೊರೊನಾ ನಿಯಂತ್ರಣಕ್ಕೆ ಲಾಕ್‌ಡೌನ್ ಜಾರಿ ಆದಾಗಿನಿಂದ ನಗರದ ಕಣ್ಣಿ ಮಾರುಕಟ್ಟೆಯನ್ನು ಬಂದ್ ಮಾಡಲಾಗಿದೆ. ಹೀಗಾಗಿ ಅದನ್ನು ತಾತ್ಕಾಲಿಕವಾಗಿ ವಾಜಪೇಯಿ ಬಡಾವಣೆಗೆ ಸ್ಥಳಾಂತರ ಮಾಡಲಾಗಿದೆ.

ಜಿಲ್ಲೆಯ ವಿವಿಧ ತಾಲ್ಲೂಕುಗಳು ಮತ್ತು ಹೊರ ಜಿಲ್ಲೆಗಳ ರೈತರು ಇಲ್ಲಿಗೆ ಬಂದು ಸಗಟು ದರದಲ್ಲಿ ತರಕಾರಿ ಮಾರಾಟ ಮಾಡುತ್ತಾರೆ. ಅಗತ್ಯ ಸೌಲಭ್ಯಗಳು ಇಲ್ಲದ್ದರಿಂದ  ತೊಂದರೆ ಅನಿಭವಿಸಬೇಕಾಗಿದೆ ಎಂದು ರೈತರು, ವ್ಯಾಪಾರಿಗಳು ದೂರುತ್ತಿದ್ದಾರೆ.

‘ನಾಲ್ಕು ತಿಂಗಳಿಂದ ವಾಜಪೇಯಿ ಬಡಾವಣೆಯಲ್ಲಿ ವ್ಯಾಪಾರ ಮಾಡುತ್ತಿದ್ದೇವೆ. ಆರಂಭದ ಮೂರು ತಿಂಗಳು ಎಪಿಎಂಸಿಯಿಂದ ಬೆಳಕಿನ ವ್ಯವಸ್ಥೆ ಮಾಡಲಾಗಿತ್ತು. ಒಂದು ತಿಂಗಳಿಂದ ಕತ್ತಲಲ್ಲೇ ವ್ಯಾಪಾರ ಮಾಡಬೇಕಾಗಿದೆ’ ಎಂದು ವ್ಯಾಪಾರಿ ಕಲ್ಯಾಣಿ ಹೇಳಿದರು.

ಕೆಲವರು ಟಾರ್ಚ್‌ ತರುತ್ತಾರೆ. ಇನ್ನೂ ಕೆಲವರು ಮೊಬೈಲ್ ಟಾರ್ಚ್ ಬಳಸುತ್ತಾರೆ. ಹೀಗಾಗಿ ಸರಿಯಾಗಿ ವ್ಯಾಪಾರ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ಮೊದಲು ರಾತ್ರಿ 12 ಗಂಟೆವರೆಗೂ ವ್ಯಾಪಾರ ನಡೆಯುತ್ತಿತ್ತು. ಈಗ ಬೆಳಕಿನ ವ್ಯವಸ್ಥೆ ಇಲ್ಲದ್ದರಿಂದ ರಾತ್ರಿ ಹತ್ತು ಗಂಟೆ ಒಳಗೆ ವ್ಯಾಪಾರ ಮುಗಿಸಬೇಕಾಗಿದೆ. ದೂರದ ಊರುಗಳಿಂದ ತರಕಾರಿ ತರುವ ರೈತರಿಗೆ ಇದರಿಂದ ನಷ್ಟವಾಗುತ್ತಿದೆ ಎಂದರು.

ಅಫಜಲಪುರ, ಮಿಣಜಗಿ, ಆಳಂದ, ಮಾದನಹಿಪ್ಪರಗಾ, ಲಿಂಗದಳ್ಳಿ, ಅತನೂರು, ಜೇವರ್ಗಿ, ಶಹಾಪುರ, ಸುರಪುರ, ಬಸವಕಲ್ಯಾಣದಿಂದ ರೈತರು ಬರುತ್ತಾರೆ. ಸಂಜೆ 5.30ಕ್ಕೆ ಈ ಮಾರುಕಟ್ಟೆ ಆರಂಭವಾಗುತ್ತದೆ. ರೈತರು ಬರುವ ವೇಳೆಗೆ ಸಾಕಷ್ಟು ಸಮಯವಾಗಿರುತ್ತದೆ. ಹೀಗಾಗಿ ಕಡಿಮೆ ಬೆಲೆಗೆ ಮಾರಾಟ ಮಾಡಿ ಹೋಗಬೇಕಾಗಿದೆ ಎಂದು ಕೆಲ ರೈತರು ಹೇಳಿದರು.

‘ಇಲ್ಲಿ ಬಹುತೇಕ ಸಗಟು ವ್ಯಾಪಾರ ನಡೆಯುತ್ತದೆ. ಚಿಲ್ಲರೆ ವ್ಯಾಪಾರ ಕಡಿಮೆ. ತರಕಾರಿ ಮಾರಾಟವಾಗದಿದ್ದರೆ ಅದನ್ನು ಎಪಿಎಂಸಿಗೆ ತೆಗೆದುಕೊಂಡು ಹೋಗಬೇಕು. ಅಲ್ಲಿ ಕಡಿಮೆ ಬೆಲೆಗೆ ಕೇಳುತ್ತಾರೆ. ಒಂದು ವೇಳೆ ಮಾರಾಟವಾಗದಿದ್ದರೆ ತರಕಾರಿ ಕೊಳೆತು ಹೋಗುತ್ತದೆ’ ಎಂದು ಮಾದನ ಹಿಪ್ಪರಗಾದ ರೈತ ಕೇಶವ ಹೇಳಿದರು.

ಆರಂಭದಲ್ಲಿ ಮಾರುಕಟ್ಟೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗುತ್ತಿತ್ತು. ಈಗ ಪೊಲೀಸರು ಬರುವುದಿಲ್ಲ. ಹೀಗಾಗಿ ಗ್ರಾಹಕರು ಅಂತರ ಕಾಪಾಡುವುದಿಲ್ಲ. ಬಹುತೇಕರು ಮಾಸ್ಕ್‌ ಧರಿಸದೆಯೇ ಬರುತ್ತಾರೆ ಎನ್ನುತ್ತಾರೆ ವ್ಯಾಪಾರಿ ಕೇದಾರನಾಥ.

ಶೆಡ್‌ ಇಲ್ಲದ್ದರಿಂದ ಮಳೆ ಬಂದರೆ ತರಕಾರಿ ಹಾಳಾಗುತ್ತದೆ. ಅಲ್ಲದೆ, ಈಡೀ ಮಾರುಕಟ್ಟೆ ಕೆಸರುಗದ್ದೆಯಂತಾಗುತ್ತದೆ. ಅಂತರ ಕಾಪಾಡಿಕೊಳ್ಳಲು ಅಳವಡಿಸಿದ್ದ ಕಟ್ಟಿಗೆಗಳನ್ನು ಕಿತ್ತುಕೊಂಡು ಹೋಗಿದ್ದಾರೆ. ವಾಪಸ್ ಕಣ್ಣಿ ಮಾರುಕಟ್ಟೆಗೆ ಹೋಗುತ್ತೇವೆ ಎಂದರೂ ಅವಕಾಶ ನೀಡುತ್ತಿಲ್ಲ ಎಂದರು.

ಬೆಳಕಿನ ವ್ಯವಸ್ಥೆ ಇಲ್ಲದ್ದರಿಂದ ವ್ಯಾಪಾರಿಗಳ ಹಣ, ಮೊಬೈಲ್‌ ಕಳವು ಪ್ರಕರಣಗಳೂ ನಡೆದಿವೆ. ಹೀಗಾಗಿ ಸಂಬಂಧಪಟ್ಟವರು ಗಮನ ಹರಿಸಿ ಬೆಳಕಿನ ವ್ಯವಸ್ಥೆ ಮಾಡಬೇಕು ಮತ್ತು ಕಣ್ಣಿ ಮಾರುಕಟ್ಟೆಗೆ ಸ್ಥಳಾಂತರವಾಗುವವರೆಗೆ ತಾತ್ಕಾಲಿಕ ಶೆಡ್‌ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.

**

‘ವಾಜಪೇಯಿ ಬಡಾವಣೆಯಲ್ಲಿ ರೈತರು, ವ್ಯಾಪಾರಿಗಳಿಗೆ ಆಗುತ್ತಿರುವ ಸಮಸ್ಯೆ ಗಮನಕ್ಕೆ ಬಂದಿರಲಿಲ್ಲ. ಈ ಬಗ್ಗೆ ಜಿಡಿಎ, ಜೆಸ್ಕಾಂ ಅಧಿಕಾರಿಗಳೊಂದಿಗೆ ಚರ್ಚಿಸಿ, ಅಗತ್ಯ ವ್ಯವಸ್ಥೆ ಮಾಡಲಾಗುವುದು’
-ರಾಹುಲ್ ಪಾಂಡ್ವೆ, ಪಾಲಿಕೆ ಆಯುಕ್ತ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು