ಮಂಗಳವಾರ, ನವೆಂಬರ್ 19, 2019
23 °C
ಮೂರು ದಿನಗಳ ಯುವಜನೋತ್ಸವಕ್ಕೆ ಅದ್ಧೂರಿ ತೆರೆ

ಗೆದ್ದವರ ಸಂತಸ; ಸೋತವರ ಸಂಕಟ...

Published:
Updated:
Prajavani

ಕಲಬುರ್ಗಿ: ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣ ಜ್ಞಾನಗಂಗಾದಲ್ಲಿ ಮೂರು ದಿನಗಳವರೆಗೆ ಅಂತರಕಾಲೇಜಿನ ಯುವಜನೋತ್ಸವದ ಅಂಗವಾಗಿ ಅಕ್ಷರಶಃ ವಿದ್ಯಾರ್ಥಿಗಳ ಕಲರವ ಹೆಚ್ಚಾಗಿತ್ತು. ಶುಕ್ರವಾರ ಪ್ರಶಸ್ತಿ ಪ್ರದಾನ ಮುಗಿಯುತ್ತಿದ್ದಂತೆಯೇ ವಿ.ವಿ. ಆವರಣ ಭಣಗುಟ್ಟಿತು.

ವಿವಿಧ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಉತ್ತಮ ಪ್ರದರ್ಶನ ತೋರಿಸಿದವರು ಟ್ರೋಫಿ, ಪ್ರಶಸ್ತಿ ಪತ್ರ ಹಿಡಿದು ಬೀಗಿದರೆ, ಸೋತವರು ನಿರಾಸೆಯ ಮುಖ ಹೊತ್ತು ಊರಿನತ್ತ ಹೆಜ್ಜೆ ಹಾಕಿದರು. ಗೆದ್ದೇ ಗೆಲ್ಲುತ್ತೇವೆ ಎಂದು ಬಂದವರಿಗೆ ಪ್ರಶಸ್ತಿ ಸಿಗದೇ ಇರುವುದಕ್ಕೆ ಬೇಸರವಾಯಿತು. ಇದು ಅಳುವಿನ ಮೂಲಕವೂ ಸ್ಫೋಟವಾಯಿತು. ಉತ್ತಮ ಪ್ರತಿಭೆ ಇದ್ದರೂ ಪ್ರಶಸ್ತಿ ಸಿಗಲಿಲ್ಲ. ನಾವೇ ಗೆಲ್ಲುತ್ತೇವೆ ಎಂದು ಹೇಳಿದ್ದರು. ಆದರೆ, ಫಲಿತಾಂಶ ಬಂದಾಗ ಬೇರೆಯೇ ಆಗಿತ್ತು ಎಂದು ನಗರದ ಶರಣಬಸವೇಶ್ವರ ಕಾಲೇಜಿನ ವಿದ್ಯಾರ್ಥಿ ಭೀಮರಾವ್‌ ಹೇಳಿದರು. ಕೆಲಹೊತ್ತು ಸಮಾರೋಪ ಸಮಾರಂಭ ನಡೆದ ಡಾ.ಬಿ.ಆರ್.ಅಂಬೇಡ್ಕರ್‌ ಸಭಾಂಗಣದ ಎದುರು ಕಣ್ಣೀರಿಡುತ್ತಲೇ ಭೀಮರಾವ್‌ ಹಾಗೂ ಕೆಲ ವಿದ್ಯಾರ್ಥಿಗಳು ಪ್ರತಿಭಟನೆಯನ್ನೂ ಮಾಡಿದರು.

ವಿಷಯ ತಿಳಿದು ಅಲ್ಲಿಗೆ ಬಂದ ಪ್ರಭಾರ ಕುಲಪತಿ ಪ್ರೊ.ಪರಿಮಳಾ ಅಂಬೇಕರ್ ಅವರ ಎದುರು ವಿದ್ಯಾರ್ಥಿಗಳು ಬೇಸರ ತೋಡಿಕೊಂಡರು. ಈ ದೂರಿನ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟರು.

ಇದಕ್ಕೂ ಮುನ್ನ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿ.ವಿ. ವಿಶ್ರಾಂತ ಕುಲಪತಿ ಪ್ರೊ.ಹನುಮಣ್ಣ ನಾಯಕ ದೊರೆ ಮಾತನಾಡಿ, ‘ನಾನೂ 1976ರಲ್ಲಿ ಇಲ್ಲಿ ಅರ್ಥಶಾಸ್ತ್ರದ ವಿದ್ಯಾರ್ಥಿಯಾಗಿದ್ದೆ. ಅದೇ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವ ಸೌಭಾಗ್ಯ ಸಿಕ್ಕಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ನಂತರ ‘ಅಕ್ಕ ಕೇಳವ್ವ ನಾನೊಂದು ಕನಸ ಕಂಡೆ...’ ಎಂಬ ಹಾಡನ್ನು ಹಾಡಿದರು.

ಪ್ರತಿಕ್ರಿಯಿಸಿ (+)