ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ನಿ ಮುಡಿದು ವಿಜಯದಶಮಿಗೆ ಮಂಗಳ

ಆಯುಧ ಪೂಜೆ ಮಾಡಿ ಸಂಭ್ರಮಿಸಿದ ಜನ, ಘಟಸ್ಥಾಪನೆಯ ಕಾರ್ಯಗಳೂ ಸಂಪನ್ನ
Last Updated 16 ಅಕ್ಟೋಬರ್ 2021, 4:14 IST
ಅಕ್ಷರ ಗಾತ್ರ

ಕಲಬುರಗಿ: ನಗರವೂ ಸೇರಿದಂತೆ ಜಿಲ್ಲೆಯ ಎಲ್ಲ ಕಡೆ ಶುಕ್ರವಾರ ವಿಜಯದಶಮಿ ಹಬ್ಬಕ್ಕೆ ತೆರೆ ಬಿದ್ದಿತು. ಜನರು ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ, ಪರಸ್ಪರ ಬನ್ನಿ ಮುಡಿಯುವ ಮೂಲಕ ಪ್ರಸಕ್ತ ವರ್ಷದ ನವರಾತ್ರಿ ಹಾಗೂ ದಸರೆಯ ಎಲ್ಲ ಕಾರ್ಯಕ್ರಮಗಳಿಗೂ ಮಂಗಳ ಹಾಡಿದರು.

ಶುಕ್ರವಾರ ನಸುಕಿನಿಂದಲೇ ಎಲ್ಲ ದೇವಸ್ಥಾನಗಳಲ್ಲಿ ಪೂಜಾ ಕೈಂಕರ್ಯಗಳು ಆರಂಭವಾದವು. ನಗರದ ಅಂಬಾಭವಾನಿ, ತುಳಜಾಭವಾನಿ, ಜಗದಂಬೆ, ಲಕ್ಷ್ಮಿ, ರೇಣುಕಾದೇವಿ ದೇವಸ್ಥಾನಗಳಲ್ಲಿ ಭಕ್ತರ ಸಾಲು ಕಂಡುಬಂತು.

ಹೊಸ ಬಟ್ಟೆ ಧರಿಸಿ, ಅಲಂಕಾರ ಮಾಡಿಕೊಂಡ ಮಹಿಳೆಯರು, ಮಕ್ಕಳು, ಹಿರಿಯರು ಸೇರಿ ಮನೆ ಎಲ್ಲ ಸದಸ್ಯರೂ ಕುಟುಂಬ ಸಮೇತ ದೇವಸ್ಥಾನಗಳಿಗೆ ಭೇಟಿ ನೀಡಿದರು. ಬೆಳಿಗ್ಗೆ ಮನೆಗಳಲ್ಲಿಯೂ ದೇವಿಗೆ ಪೂಜೆ ಸಲ್ಲಿಸಿ, ಮಧ್ಯಾಹ್ನ ಹೋಳಿಗೆ– ಪಾಯಸದ ಭೂರಿ ಭೋಜನ ಸವಿದರು. ಬಂಧುಗಳು, ಮಿತ್ರರು ಸೇರಿಕೊಂಡು ಪ್ರೇಕ್ಷಣೀಯ ಸ್ಥಳಗಳಿಗೆ, ಹೊಲಗದ್ದೆಗಳಿಗೆ, ಉದ್ಯಾನಗಳಿಗೆ ಹೋಗಿ ಹಬ್ಬವನ್ನು ಖುಷಿಯಿಂದ ಕಳೆದರು.

ಸಂಜೆಗೆ ಬನ್ನಿ ಮರಕ್ಕೆ ಪೂಜೆ ಸಲ್ಲಿಸುವ ಮೂಲಕ ಅದರ ಎಲೆಗಳನ್ನು ಪರಸ್ಪರ ಹಂಚಿಕೊಂಡು ‘ನಾವು ನೀವು ಬಂಗಾರದ ಹಾಗೆ ಇರೋಣ...’ ಎಂದು ಶುಭಾಶಯ ಹಂಚಿಕೊಂಡರು. ಈ ಮೂಲಕ ಹಳೆಯ ನೋವು, ವಿರಸಗಳನ್ನು ಮರೆತುಬಿಡುವ ಪ್ರತಿಜ್ಞೆ ಮಾಡಿದರು.‌

ಆಯುಧ ಪೂಜೆಯ ಸಡಗರ: ಗುರುವಾರ ಆಯುಧ ಪೂಜೆ ಮಾಡುವ ಮೂಲಕ ನವರಾತ್ರಿ ಸಡಗರಕ್ಕೆ ತೆರೆ ಎಳೆಯಲಾಯಿತು. ತಮ್ಮ ಮನೆಯ ವಾಹನ, ಕೆಲಸದ ಸಾಮಗ್ರಿಗಳು, ಕೂರಿಗೆ– ಕುಂಟೆ– ರೆಂಟೆ– ಚಕ್ಕಡಿ ಸೇರಿದಂತೆ ಎಲ್ಲ ಕೃಷಿ ಉಪಕರಣಗಳು ಹಾಗೂ ಕೊಡಲಿ, ಕುಡುಗೋಲು, ಈಟಿ... ಮುಂತಾದ ವಸ್ತುಗಳನ್ನು ಒಪ್ಪ ಓರಣವಾಗಿ ಜೋಡಿಸಿ
ಪೂಜೆ ಸಲ್ಲಿಸಿದರು.

ಶಾಲೆ– ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು ಪೆನ್ನು– ಪುಸ್ತಕಗಳನ್ನೇ ಆಯುಧಗಳಂತೆ ಇಟ್ಟು ಪೂಜಿಸಿದರು. ಬೈಕ್‌, ಟ್ರ್ಯಾಕ್ಟರ್‌, ಆಟೊ, ಟೆಂಪೊ, ಟಂಟಂ ಸೇರಿ ಎಲ್ಲ ವಾಹನಗಳಿಗೂ ಸವಾರರು ಕಬ್ಬಿನ ಜಲ್ಲೆ, ಬಾಳೆದಿಂಡು, ಹೂಮಾಲೆ ಕಟ್ಟಿ ಸಂಭ್ರಮಿಸಿದರು.

ನವರಾತ್ರಿ ಸಂದರ್ಭದಲ್ಲಿ ಘಟಸ್ಥಾಪನೆ ಮಾಡಿ ಮನೆಯಲ್ಲಿ ನಂದಾದೀಪ ಹಚ್ಚುವುದು ಕಲ್ಯಾಣ ಕರ್ನಾಟಕ ಭಾಗದ ವಿಶೇಷಗಳಲ್ಲಿ ಒಂದು. ಈ ಬಾರಿಯೂ ಘಟಸ್ಥಾಪನೆ ಮಾಡಿದ ಜನ, ಒಂಬತ್ತು ದಿನಗಳ ಕಾಲ ನವದುರ್ಗೆಯ ನವ ಅವತಾರಗಳನ್ನು ಪೂಜೆ ಮಾಡಿದರು. ಕೊನೆಯ ದಿನವಾದ ಗುರುವಾರ ಘಟಸ್ಥಾಪನೆ ಕೊನೆಗೊಳಿಸಲಾಯಿತು. ಹಲವರು ಬನ್ನಿ ಎಲೆಯನ್ನೂ ಖರೀದಿಸಿದರು. ಹಳ್ಳಿಗಳಿಂದ ಬನ್ನಿ ಟೊಂಗೆ ಕಿತ್ತು ತಂದಿದ್ದ ರೈತರು ₹ 10ಕ್ಕೆ ಒಂದು ಹಿಡಿಯಂತೆ ಮಾರಾಟ ಮಾಡಿದರು.

*

ಪಲ್ಲಕ್ಕಿ ಉತ್ಸವ, ಬನ್ನಿವೃಕ್ಷದ ಪೂಜೆ:

ಕಲಬುರಗಿಯ ಶಹಾಬಜಾರ್‌ನ ಅಂಬಾಭವಾನಿ ದೇವಸ್ಥಾನದ ಆವರಣದಲ್ಲಿ ದಸರೆಯ ಪ್ರಯುಕ್ತ ಪಲ್ಲಕ್ಕಿ ಉತ್ಸವ ನೆರವೇರಿತು. ನಗರದ ವಿವಿಧೆಡೆ ಪ್ರತಿಷ್ಠಾಪಿಸಿದ ಭವಾನಿ ಮೂರ್ತಿ ಸಮಿತಿಯವರು ಇಲ್ಲಿ ಸಮಾವೇಶಗೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡರು.

ಸಮೀಪದ ಶ್ರೀನಿವಾಸ ಸರಡಗಿಯಲ್ಲಿರುವ ಮಹಾಲಕ್ಷ್ಮಿ ಶಕ್ತಿಪೀಠದ 9ನೇ ದಸರಾ ಮಹೋತ್ಸವ ಅಂಗವಾಗಿ ಪೀಠಾಧಿಪತಿ ದೇವಿಮುತ್ಯಾ ಅವರ ಮೆರವಣಿಗೆ ಅದ್ಧೂರಿಯಾಗಿ ನೆರವೇರಿತು. ತೆರೆದ ವಾಹನದಲ್ಲಿ ಮುತ್ಯಾ ಅವರನ್ನು ಕೂಡಿಸಿ, ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು.

ಪುರುವಂತರು, ಕುದುರೆ ಸವಾರರು, ವಾಲಗದವರು, ಪೂರ್ಣಕುಂಬ ಹೊತ್ತವರು ಮೆರವಣಿಗೆಯಲ್ಲಿ ಸಾಗಿದರು. ಈ ಮೂಲಕ 10 ದಿನಗಳ ಉತ್ಸವಕ್ಕೆ ತೆರೆ ಬಿತ್ತು. ವಿನೋದ ಪಾಟೀಲ ಸರಡಗಿ, ವಿಶ್ವನಾಥ ಪಾಟೀಲ, ಲಕ್ಷ್ಮಿಕಾಂತ, ಸಂಜುಕುಮಾರ್, ಸಂತೋಷ ಆಡೆ, ರೇವಣಸಿದ್ಧಪ್ಪ, ವಿಶಾಲ, ಪ್ರಶಾಂತ, ಅಮರೇಶ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT