ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌಚಾಲಯ ಸಮಸ್ಯೆ; ಎಲ್ಲೆಡೆ ಬಹಿರ್ದೆಸೆ

ವಾಡಿ: ನಿರ್ವಹಣೆಯಲ್ಲಿ ಎಡವಿದ ಪುರಸಭೆ: ಸಾರ್ವಜನಿಕರ ಆರೋಪ
Last Updated 17 ಫೆಬ್ರುವರಿ 2020, 7:23 IST
ಅಕ್ಷರ ಗಾತ್ರ

ವಾಡಿ: ಪಟ್ಟಣವನ್ನು ಬಯಲು ಶೌಚ ಮುಕ್ತಗೊಳಿಸಲು ಲಕ್ಷಾಂತರ ರೂಪಾಯಿ ವಿನಿಯೋಗಿಸಲಾಗಿದ್ದರೂ ಬಯಲು ಬಹಿರ್ದೆಸೆ ಸಮಸ್ಯೆ ಬೆನ್ನು ಬಿಡದೆ ಕಾಡುತ್ತಿದೆ. ಏಷಿಯಾದಲ್ಲೇ ಎರಡನೇ ಅತಿ ದೊಡ್ಡ ಸಿಮೆಂಟ್ ಉತ್ಪಾದನಾ ಕಂಪನಿ ಹೊಂದಿರುವ ಪಟ್ಟಣದಲ್ಲಿ ಬಯಲು ಬಹಿರ್ದೆಸೆ ಪ್ರವೃತ್ತಿ ಮುಂದುವರಿದಿದ್ದು, ಸ್ವಚ್ಛತೆಗೆ ದೊಡ್ಡ ಸವಾಲಾಗಿದೆ.

23 ವಾರ್ಡ್‌ ವ್ಯಾಪ್ತಿಯಲ್ಲಿ 45 ಸಾವಿರ ಜನಸಂಖ್ಯೆ ಹೊಂದಿರುವ ಪಟ್ಟಣದಲ್ಲಿ ಬಹುತೇಕ ಬಡ ಕೂಲಿ ಕಾರ್ಮಿಕರೇ ವಾಸವಿದ್ದಾರೆ. ಹಲವು ಜನ ಈಗಲೂ ನಿತ್ಯಕರ್ಮಕ್ಕೆ ಮುಳ್ಳು ಕಂಟಿಗಳ ಪೊದೆ, ಸ್ಮಶಾನ, ರೈಲ್ವೆ ಹಳಿ ಆಶ್ರಯಿಸಿದ್ದಾರೆ.

ಸೂರ್ಯೋದಯಕ್ಕೂ ಮುನ್ನ ಹಾಗೂ ಸೂರ್ಯಾಸ್ತ ನಂತರ ಚೊಂಬು, ಪಾತ್ರೆಗಳನ್ನು ಹಿಡಿದು ಜನಸಂಚಾರ ವಿರಳ ಇರುವ ಜಾಗಗಳನ್ನು ಹುಡುಕುತ್ತಾ ಹೋಗುವ ದೃಶ್ಯಗಳು ಸಾಮಾನ್ಯವಾಗಿವೆ. ನಗರ ಪ್ರದೇಶದಲ್ಲಿ ನೂರು ಪುರುಷರಿಗೆ ಒಂದರಂತೆ ಹಾಗೂ ನೂರು ಮಹಿಳೆಯರಿಗೆ ಎರಡರಂತೆ ಶೌಚಾಲಯ ಇರಬೇಕು ಎಂದು ಸ್ವಚ್ಛ ಸರ್ವೇಕ್ಷಣಾ ಮಿಷನ್ ಮಾರ್ಗದರ್ಶಿ ಸೂತ್ರದಲ್ಲಿ ತಿಳಿಸಲಾಗಿದೆ. ಆದರೆ, ಪಟ್ಟಣದಲ್ಲಿ ಕೇವಲ 5 ಸಾರ್ವಜನಿಕ ಶೌಚಾಲಯಗಳಿವೆ. ಅವೂ ನಿರ್ವಹಣೆ ಇಲ್ಲದೆ ಗಬ್ಬು ನಾರುತ್ತಿವೆ.

ವಾರ್ಡ್ ಸಂಖ್ಯೆ 7ರಲ್ಲಿ ನಿರ್ಮಿಸಿದ ಶೌಚಾಲಯ ಸಂಪೂರ್ಣ ಹಾಳು ಬಿದ್ದಿದೆ. 12, 4, 15 ಹಾಗೂ 23 ನೇ ವಾರ್ಡ್‌ಗಳಲ್ಲಿ ಸಾರ್ವಜನಿಕ ಶೌಚಾಲಯಗಳು ನಿರ್ವಹಣೆ ಕೊರತೆಯಿಂದ ಬಳಸಲು ಯೋಗ್ಯವಾಗಿಲ್ಲ. ಇವುಗಳಿಗೆ ನೀರು ಸರಬರಾಜು ಮಾಡುವ ಕೊಳವೆಬಾವಿ ಹಾಳಾಗಿವೆ. ನೀರಿನ ಟ್ಯಾಂಕ್, ಪೈಪು ಒಡೆದಿವೆ. ವಿದ್ಯುತ್ ಸೌಲಭ್ಯ ಇಲ್ಲ.

ಹಲವು ಶೌಚಾಲಯಗಳ ಸುತ್ತ ಜಾಲಿ ಗಿಡಗಳು ಬೆಳೆದು ನಿಂತಿದ್ದು, ಭಯ ಹುಟ್ಟಿಸುತ್ತವೆ. ಮನೆಯಿಂದ ನೀರು ತೆಗೆದುಕೊಂಡು ದುರ್ನಾತ ಹಾಗೂ ಭೀತಿಯ ಮಧ್ಯೆ ಒಳಹೋಗಿ ನಿತ್ಯಕರ್ಮ ಮುಗಿಸಿಕೊಂಡು ಬರುವುದು ಮಹಿಳೆಯರಿಗೆ ದೊಡ್ಡ ಸವಾಲಾಗಿದೆ. ಪುರಸಭೆ ಲೆಕ್ಕದಲ್ಲಿ ಶೌಚಾಲಯಗಳ ನಿರ್ವಹಣೆ ಹೆಸರಿನಲ್ಲಿ ಲಕ್ಷಗಟ್ಟಲೇ ಹಣದ ಬೋಗಸ್ ಖರ್ಚು ತೋರಿಸಲಾಗಿದೆ ಎಂದು ಸಾರ್ವಜನಿಕರು ಗಂಭೀರವಾಗಿ ಆರೋಪಿಸುತ್ತಾರೆ.

ಸಾರ್ವಜನಿಕ ಶೌಚಾಲಯಗಳು ಇಲ್ಲದ ಕಾರಣ ಅಂಗವಿಕಲರು, ಗರ್ಭಿಣಿಯರು, ರೋಗಿಗಳು, ವಯೋವೃದ್ದರು, ಮಕ್ಕಳು ನಿತ್ಯ ಸಂಕಷ್ಟ ಪಡುವಂತಾಗಿದೆ. ಕೈಯಲ್ಲಿ ಚೆಂಬು ಹಿಡಿದುಕೊಂಡು ಮುಳ್ಳು ಕಂಟಿ ಕಡೆ ಹೋಗುವುದು ಅನಿವಾರ್ಯವಾಗಿದೆ.

‘ಮನೆಯಲ್ಲಿ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಹೇಳುತ್ತಾರೆ. ಅದರೆ, ಬಡತನ ಹಾಗೂ ಜಾಗದ ಸಮಸ್ಯೆಯಿಂದ ಇದು ಸಾಧ್ಯವಾಗುತ್ತಿಲ್ಲ. ಸಾಮೂಹಿಕ ಶೌಚಾಲಯ ನಿರ್ಮಿಸಿಕೊಡಿ ಎಂಬ ನಮ್ಮ ಕೂಗು ಆಡಳಿತಕ್ಕೆ ಕೇಳುತ್ತಿಲ್ಲ. ಬಾಣಂತಿಯರು, ವೃದ್ಧರು, ಅಂಗವಿಕಲರಿಗೆ ದೊಡ್ಡ ಸಮಸ್ಯೆಯಾಗಿದೆ’ ಎಂದು ಲಕ್ಷ್ಮೀ ರಾಜೊಳ್ಳಿ, ರತ್ನಮ್ಮ, ಅಂಬ್ರಮ್ಮ, ಆನಂದಮ್ಮ, ಸೀತಾಬಾಯಿ, ಪುಷ್ಪಾ ‘ಪ್ರಜಾವಾಣಿ’ಗೆ ತಿಳಿಸಿದರು.

ಕಳಪೆ ಕಾಮಗಾರಿ: ‘ಶೌಚಾಲಯ ನಿರ್ಮಾಣ ಕಾಮಗಾರಿ ಪಡೆದಿದ್ದ ಗ್ರೇಟ್ ಫೌಂಡೇಶನ್‌ ನಿರ್ಮಾಣ ಸಂಸ್ಥೆ ಪಟ್ಟಣದಲ್ಲಿ ಬಹುತೇಕ ಶೌಚಾಲಯ ನಿರ್ಮಿಸಿದೆ. ಆದರೆ, ಅವು ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಗೆ ಸಾಕ್ಷಿ ಎನ್ನುವಂತಿವೆ. ಕೆಲ ಕಡೆ ಶೌಚಾಲಯ ಕಟ್ಟಡಗಳು ಗೋದಾಮುಗಳಾಗಿವೆ’ ಎಂದು ಪುರಸಭೆ ಸದಸ್ಯ ದೇವಿಂದ್ರ ಕರದಳ್ಳಿ ಹೇಳುತ್ತಾರೆ.

‘ಕೆಲ ವಾರ್ಡ್‌ಗಳಲ್ಲಿ ಇಕ್ಕಟ್ಟಾದ ಜಾಗ ಶೌಚಾಲಯ ನಿರ್ಮಾಣಕ್ಕೆ ಸವಾಲಾಗಿದೆ. 11, 12, 13, 17 ಹಾಗೂ 18ನೇ ವಾರ್ಡ್‌ನಲ್ಲಿ ಇಕ್ಕಟ್ಟಾದ ಜಾಗದ ಸಮಸ್ಯೆಯಿಂದ ಶೌಚಾಲಯ ನಿರ್ಮಿಸಿಕೊಳ್ಳಲು ಸಾಧ್ಯ ಆಗುತ್ತಿಲ್ಲ’ ಎಂದು ಹೇಳುವ ಅಲ್ಲಿನ ನಿವಾಸಿಗಳು ಸಾಮೂಹಿಕ ಶೌಚಾಲಯ ನಿರ್ಮಿಸಿಕೊಡುವಂತೆ ಆಗ್ರಹಿಸುತ್ತಾರೆ.

'ವಾರ್ಡ್ ಸಂಖ್ಯೆ 7ರಲ್ಲಿ ಸಾರ್ವಜನಿಕ ಶೌಚಾಲಯ ಹಾಳು ಬಿದ್ದು ಎರಡು ವರ್ಷವಾಯಿತು. ನಿರ್ವಹಣೆ ಮಾಡಿ ಮಹಿಳೆಯರಿಗೆ ಅನುಕೂಲ ಮಾಡಿಕೊಡಿ ಎಂದು ಹಲವು ಬಾರಿ ಮನವಿ ಮಾಡಿದರೂ ಸ್ಪಂದನೆಯಿಲ್ಲ. ಮಹಿಳೆಯರು ಗಿಡಗಂಟಿ ಹಾಗೂ ಸ್ಮಶಾನದಲ್ಲಿ ನಿತ್ಯಕರ್ಮ ಮುಗಿಸುವ ಅನಿವಾರ್ಯತೆ ಇದೆ' ಎನ್ನುತ್ತಾರೆ ದಲಿತ ವಿದ್ಯಾರ್ಥಿ ಒಕ್ಕೂಟದ ಸ್ಥಳೀಯ ಸಂಚಾಲಕ ವಿಜಯಕುಮಾರ ಯಲಸತ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT