ಶುಕ್ರವಾರ, ಡಿಸೆಂಬರ್ 6, 2019
24 °C
ಕದ್ದರಗಿ ತಾಂಡಾದ ಕಷ್ಟಗಳಿಗೆ ಸ್ಪಂದಿಸದ ಭಾಗೋಡಿ ಗ್ರಾ.ಪಂ; ಆರೋಪ

ಮೂರು ತಿಂಗಳಿನಿಂದ ನೀರಿನ ಸಮಸ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ತಾಪುರ: ತಾಲ್ಲೂಕಿನ ಭಾಗೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕದ್ದರಗಿ ತಾಂಡಾದಲ್ಲಿ ಮೂರು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಇದ್ದರೂ ಪಂಚಾಯಿತಿ ಆಡಳಿತ ಸ್ಪಂದಿಸಿಲ್ಲ.

30 ಮನೆಗಳಿರುವ ಈ ತಾಂಡಾದಲ್ಲಿ 160 ಜನ ವಾಸಿಸುತ್ತಿದ್ದಾರೆ. ತಾಂಡಾದಲ್ಲಿ ಕುಡಿಯುವ ನೀರು ಸರಬರಾಜು ಮಾಡಲೆಂದು ನಿರ್ಮಿಸಿರುವ ಮೂರು ನೀರಿನ ಗುಮ್ಮಿಗಳು ಹನಿ ನೀರಿಲ್ಲದೆ ಪಾಳು ಬಿದ್ದಿವೆ. ಕೊಳವೆ ಬಾವಿಯ ಸ್ಟಾರ್ಟರ್‌ ಕೆಟ್ಟು ಮೂರು ತಿಂಗಳಾದರೂ ದುರಸ್ತಿ ಮಾಡಿಸದಿರುವುದು ಆಡಳಿತದ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತಿದೆ. ನೀರಿಗಾಗಿ ಪರದಾಡುವ ಪರಿಸ್ಥಿತಿ ಉಂಟಾಗಿದೆ.

ಭಾಗೋಡಿ ಗ್ರಾಮದ ಹತ್ತಿರದ ಮೇಲ್ಮಟ್ಟದ ಜಲಸಂಗ್ರಹಾಗಾರದಿಂದ ತಾಂಡಾಕ್ಕೆ ಕುಡಿಯುವ ನೀರು ಸರಬರಾಜಿಗೆ ಪೈಪ್ ಲೈನ್ ಕಾಮಗಾರಿ ಮಾಡಿಸಲಾಗಿದೆ. ಹೊಲಗಳಲ್ಲಿ ಹಾದು ಬಂದಿರುವ ಪೈಪುಗಳು ಅಲ್ಲಲ್ಲಿ ಒಡೆದು ಹಾನಿಯಾಗಿ ನೀರು ತಾಂಡಾಕ್ಕೆ ಬರುತ್ತಿಲ್ಲ. ದುರಸ್ತಿ ಮಾಡಿಸಲು ಹೇಳಿದರೂ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಾಗೂ ಅಭಿವೃದ್ಧಿ ಅಧಿಕಾರಿ ಕಡೆಗಣಿಸಿದ್ದಾರೆ ಎಂದು ತಾಂಡಾದ ಮುಖಂಡ ಗಣಪತರಾವ ನಾಯಕ ಅವರು ಮಂಗಳವಾರ ‘ಪ್ರಜಾವಾಣಿ’ಗೆ ತಮ್ಮ ಅಳಲು ತೋಡಿಕೊಂಡರು.

‘ಮೂರು ತಿಂಗಳಿನಿಂದ ನೀರು ಸೋರಿಕೆಯಾಗಿ ಸಮಸ್ಯೆ ಉಂಟಾಗಿದೆ. ಪೈಪ್ ದುರಸ್ತಿ ಮಾಡಿಸುತ್ತಿಲ್ಲ. ಕೇಳಿದರೆ ಜೆಸಿಬಿ ಯಂತ್ರ ಸಿಗುತ್ತಿಲ್ಲ, ಸಿಕ್ಕರೂ ಹೆಚ್ಚಿನ ಹಣ ಕೇಳುತ್ತಿದ್ದಾರೆ ಎಂದು ಉತ್ತರ ನೀಡುತ್ತಿದ್ದಾರೆ. ನೀರಿನ ಕೆಲಸಕ್ಕೆಂದು ಬೋಗಸ್ ಬಿಲ್ ಮಾಡಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಜಿಲ್ಲಾ ಪಂಚಾಯಿತಿ ಸಿಇಒ, ಜಿಲ್ಲಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತರು ಗಮನ ಹರಿಸಿ ಕದ್ದರಗಿ ತಾಂಡಾದ ನೀರಿನ ಸಮಸ್ಯೆ ಪರಿಹರಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ನೀರಿಗಾಗಿ ದಿನಾಲೂ ಕೊಳವೆ ಬಾವಿಯ ಕೈಪಂಪು ಹೊಡೆದು ಸುಸ್ತಾಗುತ್ತಿದ್ದೇವೆ. ಮಕ್ಕಳು ಕೊಡ ಹಿಡಿದು ನೀರು ತರುತ್ತಿದ್ದಾರೆ.ನೀರು ಕೊಡದಿದ್ದರೆ ಸರ್ಕಾರ ನಮಗೇಕೆ ಬೇಕು ಎಂದು ತಾಂಡಾದ ವೃದ್ಧೆ ರಾಮಿಬಾಯಿ ರಾಠೋಡ್ ಅವರು ಆಕ್ರೋಶ ವ್ಯಕ್ತ ಮಾಡಿದರು.ತಾಂಡಾದ ಹತ್ತಿರದ ಮೌಲಾಲಿ ದರ್ಗಾದಲ್ಲೂ ನೀರಿನ ಸಮಸ್ಯೆ ಉಂಟಾಗಿ  ಭಕ್ತರಿಗೆ ತೊಂದರೆ ಆಗುತ್ತಿದೆ. ಎತ್ತಿನ ಗಾಡಿಯಲ್ಲಿ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಕುಡಿಯುವ ನೀರು ಒದಗಿಸದಿದ್ದರೆ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ, ತಾಲ್ಲೂಕು ಪಂಚಾಯಿತಿ ಕಚೇರಿ ಮುಂದೆ ಧರಣಿ ನಡೆಸಿ ಪ್ರತಿಭಟಿಸುತ್ತೇವೆ ಎಂದು ತಾಂಡಾ ಜನರು ಅಧಿಕಾರಿಗಳಿಗೆ ಎಚ್ಚರಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು