ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವರು ಬಂದರೂ ನೀಗದ ನೀರ ದಾಹ

ಅಫಜಲಪುರ ತಾಲ್ಲೂಕಿನ ಗೊಬ್ಬೂರ (ಬಿ) ಗ್ರಾಮಸ್ಥರಿಗೆ ತೀರದ ಜಲ ಸಂಕಟ
Last Updated 15 ಜುಲೈ 2019, 20:00 IST
ಅಕ್ಷರ ಗಾತ್ರ

ಕಲಬುರ್ಗಿ: ಬರ ಪರಿಹಾರ ಕಾಮಗಾರಿಗಳ ವೀಕ್ಷಣೆಗೆಂದು ಅಫಜಲಪುರ ತಾಲ್ಲೂಕಿನ ಗೊಬ್ಬೂರ (ಬಿ) ಗ್ರಾಮಕ್ಕೆ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಅವರು ಭೇಟಿ ನೀಡಿ 12 ದಿನ ಕಳೆದಿವೆ. ಅಂದು ಎಲ್ಲರಿಗೂ ನೀರು ಕೊಟ್ಟಿದ್ದ ಟ್ಯಾಂಕರ್‌ ಇಂದು ಎರಡು ದಿನಕ್ಕೊಮ್ಮೆ ಬರಲು ಆರಂಭಿಸಿದ್ದು, ಜನರ ದಾಹ ನೀಗಿಸಲು ಆಡಳಿತ ವಿಫಲವಾಗಿದೆ.

ನಿತ್ಯವೂ ಮಹಿಳೆಯರು ಕೂಲಿ ಕೆಲಸ ಬಿಟ್ಟು ಗ್ರಾಮದ ಅಕ್ಕಪಕ್ಕದ ತೋಟ, ಹೊಲಗಳಲ್ಲಿನ ಕೊಳವೆಬಾವಿಗಳನ್ನು ಹುಡುಕಿಕೊಂಡು ಹೋಗಬೇಕಿದ್ದು, ಅಲ್ಲಿಯೂ ನೀರು ಸಿಗುತ್ತದೆ ಎಂಬ ಖಾತ್ರಿ ಇಲ್ಲವಾಗಿದೆ.

ಗಾಯದ ಮೇಲೆ ಬರೆ ಎಳೆದಂತೆ, ಗ್ರಾಮ ಪಂಚಾಯಿತಿಯು ಖಾಸಗಿ ಕೊಳವೆಬಾವಿ ಮಾಲೀಕರೊಂದಿಗೆ ಮಾಡಿಕೊಂಡ ಒಪ್ಪಂದ ಸೋಮವಾರ ಮುಕ್ತಾಯವಾಗಿದ್ದು, ಜನರಿಗೆ ದಿಕ್ಕೇ ತೋಚದಂತಾಗಿದೆ. ಗ್ರಾಮದ ಶಿವಾಜಿನಗರದ ಪ್ರಾಥಮಿಕ ಶಾಲೆ ಎದುರಿನ ಜಿನುಗುವ ನೀರಿನ ಕೊಳವೆಬಾವಿಯಲ್ಲಿ ಎಷ್ಟು ಸಿಗುತ್ತದೋ ಅಷ್ಟು ನೀರನ್ನು ಪಡೆದುಕೊಳ್ಳಲು ಮಹಿಳೆಯರು ಜಾತಕ ಪಕ್ಷಿಯಂತೆ ಕಾಯಬೇಕಾಗಿದೆ. ಆ ಕೊಳವೆಬಾವಿ ಬಳಿ ಪಾಳಿ ಹಚ್ಚಿದವರಿಗೆಲ್ಲ ನೀರು ಸಿಗುತ್ತದೆ ಎಂಬ ಖಾತ್ರಿಯೂ ಇಲ್ಲ. ಅಂತರ್ಜಲ ಬತ್ತಿರುವುದರಿಂದ ಹೆಚ್ಚೆಂದರೆ ದಿನಕ್ಕೆ 8ರಿಂದ 10 ಕೊಡಗಳಷ್ಟು ನೀರನ್ನು ಮಾತ್ರ ಅಲ್ಲಿಂದ ಪಡೆಯಬಹುದು. ಹಾಗೆ ನೀರು ಪಡೆದವರ ಪಾಳಿ ಮತ್ತೆ ಎರಡು ದಿನ ಬಿಟ್ಟು ಬರುತ್ತದೆ.

‘ಸರಿಯಾಗಿ ಮಳೆಯಾಗಿಲ್ಲ. ದಿನೇ ದಿನೇ ನೀರಿನ ಸಮಸ್ಯೆ ಬಿಗಡಾಯಿಸುತ್ತಿದೆ. ಬಾಡಿಗೆ ಆಧಾರದಲ್ಲಿ ತೋಟದಿಂದ ಪಡೆಯುತ್ತಿದ್ದ ನೀರು ಬಂದ್‌ ಆಗಿದೆ ಎಂದು ಕೊಳವೆಬಾವಿ ಮಾಲೀಕರು ಹೇಳಿದ್ದು, ಪರ್ಯಾಯವಾಗಿ ಗ್ರಾಮ ಪಂಚಾಯಿತಿಯವರು ನೀರಿನ ವ್ಯವಸ್ಥೆ ಮಾಡಬೇಕಿತ್ತು. ಆದರೆ, ಇಲ್ಲಿಯವರೆಗೆ ಪರ್ಯಾಯ ವ್ಯವಸ್ಥೆ ಮಾಡಿಲ್ಲ’ ಎಂದು ಗ್ರಾಮದ ಯುವಕ ಹನುಮಂತ ಬೇಸರ ವ್ಯಕ್ತಪಡಿಸಿದರು.

‘ಮನೆಗೆ ಬೀಗರು ಬಂದರೆ ಅವರಿಗೂ ನೀರು ಖರ್ಚಾಗುತ್ತದಲ್ಲಾ ಎಂದು ನಾವು ಚಿಂತಿ ಮಾಡಬೇಕಾಗೇದ. ನಾಲ್ಕು ಕೊಡ ನೀರಿಗೆ ರಸ್ತಾದಾಗ ಬಂದು ಕುಂದ್ರೂವಂಗ ಆಗೇದ. ಯಾವ ಮಂತ್ರಿ ಬಂದ್ರೂ ನಮ್ಮ ಹಣೆಬರಹ ಏನು ಬದಲಾಗಲಿಲ್ಲ ನೋಡ್ರಿ’ ಎಂದು ನೀರು ಹಿಡಿಯಲು ಕೊಳವೆಬಾವಿ ಬಳಿ ಬಂದಿದ್ದ ಗೃಹಿಣಿ ಶರಣವ್ವ ಗೋಳು ತೋಡಿಕೊಂಡರು.

ಎರಡು ದಿನಕ್ಕೊಮ್ಮೆ ಟ್ಯಾಂಕರ್ ಬಂದರೂ ಪ್ರತಿ ಮನೆಗೆ ಎಂಟು ಕೊಡಗಳಷ್ಟು ಮಾತ್ರ ನೀರನ್ನು ಪಡೆಯಬಹುದು. ಮತ್ತೆ ಅವರ ಪಾಳಿ ಎರಡು ದಿನಕ್ಕೆ ಬರುತ್ತದೆ. ಟ್ಯಾಂಕರ್‌ ನೀರು ಬಂದಾಗ ಮನೆಯಲ್ಲಿ ಇಲ್ಲದೇ ಹೋದರೆ ಮತ್ತೆ ನೀರು ಪಡೆಯುವ ಅವಕಾಶವೂ ತಪ್ಪುತ್ತದೆ. ಇದು ಬಹುತೇಕ ಹೆಣ್ಣುಮಕ್ಕಳ ಚಿಂತೆಗೆ ಕಾರಣವಾಗಿದೆ. ಇದಕ್ಕಾಗಿ ಟ್ಯಾಂಕರ್‌ ನೀರು ಯಾವಾಗ ಬರುತ್ತದೋ ಎಂದು ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಕಾಯುವಂತಾಗಿದೆ ಎಂದು ಐದಾರು ಕೊಡಗಳನ್ನು ಮಗಳೊಂದಿಗೆ ತಂದು ತಮ್ಮ ಪಾಳಿಗಾಗಿ ಕಾಯುತ್ತಿದ್ದ ಮಲ್ಲವ್ವ ಹುಣಸಿಹಡಗಿಲ್‌ ಬೇಸರ ವ್ಯಕ್ತಪಡಿಸಿದರು.

‘ಕಂದಾಯ ಮಂತ್ರಿ ದೇಶಪಾಂಡೆ ಸಾಹೇಬ್ರು ಬರುವುದಕ್ಕೆ 15 ದಿನ ಮೊದಲು ನಮಗೆ ಟ್ಯಾಂಕರ್‌ ನೀರು ಸಿಕ್ಕಿರಲಿಲ್ಲ. ಆಮೇಲೆ ಟ್ಯಾಂಕರ್‌ ಬರಲು ಶುರುವಾಯಿತಾದರೂ ಐದು ಸಾವಿರ ಜನಕ್ಕೆ ಒಂದು ಟ್ಯಾಂಕರ್‌ ನೀರು ಹೆಂಗ್ರಿ ಸಾಲ್ತದ’ ಎಂದು ಮಹಿಳೆಯರ ಗುಂಪು ಈ ವರದಿಗಾರನನ್ನು ಪ್ರಶ್ನಿಸಿತು.

ಆರು ತಿಂಗಳಿಂದ ಘಟಕ ಸ್ಥಗಿತ
ಗೊಬ್ಬೂರ (ಬಿ) ಗ್ರಾಮದ ಜನರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸುವ ಉದ್ದೇಶದಿಂದ ಶಾಲೆಯ ಪಕ್ಕದಲ್ಲಿಯೇ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಘಟಕವನ್ನು ಆರು ತಿಂಗಳ ಹಿಂದೆ ನಿರ್ಮಿಸಲಾಗಿದೆ. ಆದರೆ, ಘಟಕಕ್ಕೆ ನೀರು ಒದಗಿಸುವ ಕೊಳವೆಬಾವಿ ಬತ್ತಿ ಹೋಗಿರುವುದರಿಂದ ಘಟಕವೂ ಸ್ಥಗಿತಗೊಂಡಿದೆ. ಒಂದು ದಿನವೂ ನೀರು ಕುಡಿದಿದ್ದು ನಮಗೆ ನೆನಪಿಲ್ಲ ಎಂದು ಗ್ರಾಮದ ಮಹಿಳೆ ಸಿದ್ದಮ್ಮ ತಳವಾರ ಹೇಳಿದರು.

ಹೇಗಾದರೂ ಇರಲಿ ಆ ನೀರನ್ನೇ ಕೊಡ್ರಿ ಎಂದರೂ ಕೊಡುತ್ತಿಲ್ಲ. ಇನ್ನು ಶುದ್ಧ ನೀರು ಕೊಡುವ ಮಾತು ದೂರವೇ ಉಳಿಯಿತು ಎಂದರು.

ಹುಸಿಯಾದ ಪ್ರಿಯಾಂಕ್‌ ಮಾತು!
ಟ್ಯಾಂಕರ್‌ ನೀರು ಪೂರೈಕೆಗೆ ಚಾಲನೆ ನೀಡಲು ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಅವರೊಂದಿಗೆ ಗ್ರಾಮಸ್ಥರು ಅಸಮರ್ಪಕ ಕುಡಿಯುವ ನೀರಿನ ವಿಚಾರಕ್ಕಾಗಿ ವಾಗ್ವಾದ ನಡೆಸಿದ್ದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಕುಡಿಯುವ ನೀರಿನ ಯೋಜನೆಗಾಗಿ ₹1 ಕೋಟಿ ಬಿಡುಗಡೆ ಮಾಡಲಾಗಿದೆ. ಪೈಪ್‌ಲೈನ್‌ ಅಳವಡಿಕೆ ಕಾರ್ಯವೂ ಪ್ರಗತಿಯಲ್ಲಿದೆ. ಮೂರು ದಿನಗಳಲ್ಲಿ ಮುಕ್ತಾಯಗೊಂಡು ನೀರು ಪೂರೈಕೆ ಆರಂಭವಾಗಲಿದೆ ಎಂದು ಭರವಸೆ ನೀಡಿದ್ದರು.

ಸಚಿವರು ನೀಡಿದ ಭರವಸೆಯು 12 ದಿನಗಳಾದರೂ ಈಡೇರಿಲ್ಲ ಎಂದು ಗ್ರಾಮದ ಮಹಿಳೆಯರು ಬೇಸರ ವ್ಯಕ್ತಪಡಿಸಿದರು.

*
ಸರಿಯಾಗಿ ನೀರು ಸಿಗಲಾರ್ದಕ್ಕ ಒಬ್ಬರ ಜುಟ್ಟಾ ಇನ್ನೊಬ್ರು ಹಿಡಕೊಂಡು ಜಗಳಾಡೂದು ಆಗೇತ್ರಿ. ದಿನಾ ನೀರು ಸಿಗುವಂಗ ಆದ್ರ ಕಿರಿ ಕಿರಿ ತಪ್ತದ.
-ಸಿದ್ದವ್ವ ತಳವಾರ, ಗೊಬ್ಬೂರ (ಬಿ) ಗ್ರಾಮ

*
ಕೊಳವೆಬಾವಿಗಳಲ್ಲಿ ನೀರು ಬರುವವರೆಗೂ ಟ್ಯಾಂಕರ್‌ ನೀರು ಪೂರೈಸಲು ಅವಕಾಶವಿದೆ. ಅಗತ್ಯವಿರುವಷ್ಟು ನೀರನ್ನು ಗೊಬ್ಬೂರ ಗ್ರಾಮಕ್ಕೆ ಕಳಿಸುವ ವ್ಯವಸ್ಥೆ ಮಾಡುತ್ತೇನೆ
-ಡಾ.ರಾಜಾ ಪಿ, ಜಿಲ್ಲಾ ಪಂಚಾಯಿತಿ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT