ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಪಾಳು ಬಿದ್ದ ಶುದ್ಧ ನೀರಿನ ಘಟಕಗಳು

ನಂದರಗಿ ಗ್ರಾಮದಲ್ಲಿ ಕುಡಿಯುವ ನೀರಿಗೆ ಪರದಾಟ
Last Updated 6 ಮೇ 2020, 3:19 IST
ಅಕ್ಷರ ಗಾತ್ರ

ಅಫಜಲಪುರ: ತಾಲ್ಲೂಕಿನ ನಂದರಗಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಹತ್ತು ವರ್ಷಗಳಿಂದ ನಿರ್ವಹಣೆ ಇಲ್ಲದೆ ತುಕ್ಕು ಹಿಡಿದು ಹಾಳಾಗುತ್ತಿವೆ. ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ.

ನಂದರಗಿಯು ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾಗಿದ್ದು, ಜಿಲ್ಲಾ ಪಂಚಾಯತಿಯ ಮಾಶಾಳ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಸುಮಾರು 4 ಸಾವಿರ ಜನಸಂಖ್ಯೆ ಇದೆ.

ಗ್ರಾಮದಿಂದ ಒಂದು ಕಿ.ಮೀ ಅಂತರದಲ್ಲಿ ಜಲ ನಿರ್ಮಲ ಯೋಜನೆ ಅಡಿಯಲ್ಲಿ ನೀರಿನ ಟ್ಯಾಂಕ್, ಶುದ್ಧೀಕರಣ ಘಟಕ ನಿರ್ಮಿಸಿ ಹತ್ತು ವರ್ಷಗಳಾಗಿವೆ. ಅದರ ಕಡೆಗೆ ಯಾರೂ ಕಣ್ಣೆತ್ತಿ ನೋಡುತ್ತಿಲ್ಲ. ಸದ್ಯಕ್ಕೆ 10 ವರ್ಷಗಳ ನಂತರ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ!

ಇನ್ನೊಂದು ಕಡೆ ಗ್ರಾಮದ ತೆಲ್ಲುಣಗಿ ರಸ್ತೆ ಬದಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಅದು ಸಹ ಹತ್ತು ವರ್ಷಗಳಿಂದ ಹಾಳಾಗಿ ಹೋಗಿದೆ. ‘ಗುತ್ತಿಗೆದಾರರು ಬಿಲ್‌ ಪಡೆಯಲು ಮತ್ತು ಇಲಾಖೆಯವರು ಪರ್ಸೆಂಟೇಜ್‌ ಪಡೆಯುವದಕ್ಕಾಗಿಯೇ ಇದನ್ನು ಮಾಡಿದಂತಿದೆ. ಇವರ ನಡುವೆ ನಾವು ಪರದಾಡುವಂತಾಗಿದೆ’ ಎಂದು ಗ್ರಾಮಸ್ಥರು ಹೇಳುತ್ತಾರೆ.

‘ತಾಲ್ಲೂಕಿನ ಕೆಲವೆಡೆ ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ವಹಣೆ ಇಲ್ಲದೆ ಸ್ಥಗಿತವಾಗಿವೆ. ಇನ್ನು ಕೆಲವು ಕಡೆ ಯಂತ್ರಗಳ ರಿಪೇರಿ ಆಗಬೇಕಾಗಿದೆ. ಅದಕ್ಕಾಗಿ ಟೆಂಡರ್ ಕರೆಯಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉಪ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಮೊಹ್ಮದ ನೂರುದ್ದೀನ ಪ್ರತಿಕ್ರಿಯಿಸಿದರು.

‘ನಂದರಗಿ ಗ್ರಾಮಕ್ಕೆ ಕುಡಿಯುವ ನೀರಿನ ಯೋಜನೆಗಳು ಕಡಿಮೆ ಇಲ್ಲ. ಆದರೆ ಅವುಗಳ ನಿರ್ವಹಣೆ ಇಲ್ಲ. ನೀರಿನ ಘಟಕ ಅಳವಡಿಸಿ ಹೋದವರು ಅದು ಏನಾಗಿದೆ ಎಂದು ನೋಡಲು ಬಂದಿಲ್ಲ. ಹಲವಾರು ಬಾರಿ ದೂರು ನೀಡಿದರೂ ಪ್ರಯೋಜನ ಆಗಿಲ್ಲ. ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಇದೆ. ಜನಪ್ರತಿನಿಧಿಗಳು ಸ್ಪಂದಿಸಬೇಕು’ ಎಂದು ಹೇಳುತ್ತಾರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಶರಣಗೌಡ ಪಾಟೀಲ.

‘ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆ ಮಂಜೂರು ಮಾಡಿಸಿದ ಮಾತ್ರಕ್ಕೆ ಜನಪ್ರತಿನಿಧಿಗಳ ಜವಾಬ್ದಾರಿ ಮುಗಿಯುವುದಿಲ್ಲ. ಅದು ಯಾವ ಪರಿಸ್ಥಿತಿಯಲ್ಲಿ ಇದೆ ಎಂಬುದನ್ನು ನೋಡಿಕೊಳ್ಳಬೇಕು. ಸಂಬಂಧಪಟ್ಟ ಅಧಿಕಾರಿಗಳು ಕಲಬುರ್ಗಿಯಲ್ಲಿ ಕುಳಿತು ಆಡಳಿತ ನಡೆಸಿದರೆ ಜನರ ಸಮಸ್ಯೆ ಬಗೆಹರಿಯುವುದಿಲ್ಲ’ ಎಂದು ಗ್ರಾಮದ ಮುಖಂಡರಾದ ಸಿದ್ದರಾಮ ಕುಂಬಾರ, ಶಿವಶರಣಪ್ಪ ಜಾಗೀರದಾರ, ಇಂತಿಹಾಸ ಜಾಗೀರದಾರ, ನಾಗೇಂದ್ರ ಜಗದಿ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT