ಭಾನುವಾರ, ಜೂನ್ 26, 2022
29 °C

ಬೈಕ್ ದಾಖಲೆ ಪರಿಶೀಲಿಸುವಾಗ ಮಹಿಳಾ ಎಎಸ್‌ಐ ಮೇಲೆ ಹಲ್ಲೆ: ಜೋಗೂರ ಯುವಕನ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ನಗರದ ರಾಷ್ಟ್ರಪತಿ ವೃತ್ತದಲ್ಲಿ ಮಂಗಳವಾರ ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ತಡೆದು ದಾಖಲೆ ತಪಾಸಣೆ ಮಾಡುತ್ತಿದ್ದ ಮಹಿಳಾ ಎಎಸ್‌ಐ ಸುಮಂಗಲಾ ರೆಡ್ಡಿ ಅವರ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಾಲ್ಲೂಕಿನ ಜೋಗೂರ ಗ್ರಾಮದ ಮಹೇಶ ಶಿವಶರಣಪ್ಪ ಹೂಗಾರ ಎಂಬಾತನನ್ನು ಬಂಧಿಸಿದ್ದಾರೆ.

ಬೆಳಿಗ್ಗೆ ನಗರದ ಜೇವರ್ಗಿ ರಸ್ತೆಯಲ್ಲಿ ಸುಮಂಗಲಾ ಅವರು ಕರ್ತವ್ಯ ನಿಭಾಯಿಸುತ್ತಿದ್ದರು. ಈ ವೇಳೆ ವೃತ್ತದ ಮೂಲಕ ಹಾದು ಹೋಗುತ್ತಿದ್ದ ಯುವಕ ಮಹೇಶನ ಬೈಕ್ ತಡೆದು ಜಪ್ತಿ ಮಾಡಲು ಮುಂದಾಗಿದ್ದಾರೆ. ಆಗ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಬಳಿಕ ದಾಖಲೆ ತೋರಿಸುವಂತೆ ಕೇಳಿದಾಗ ಮಹೇಶ ಗಡಸಾಗಿ ಮಾತನಾಡಿದ್ದಾನೆ. ದಂಡ ವಿಧಿಸಲು ಮುಂದಾದಾಗಲೂ ವಾದ ನಡೆದಿದೆ. ಆಗ ಸಿಟ್ಟಿಗೆದ್ದ ಎಎಸ್‌ಐ ಸುಮಂಗಲಾ ಯುವಕನ ಕಪಾಳಕ್ಕೆ ಹೊಡೆದಿದ್ದಾರೆ. ಯುವಕನೂ ಪ್ರತಿಯಾಗಿ ಸುಮಂಗಲಾ ಅವರಿಗೆ ಹೊಡೆದಿದ್ದಾನೆ. ಇದರಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.

ಘಟನೆ ನೋಡುತ್ತಿದ್ದ ದಾರಿಹೋಕರು ಎಎಸ್‌ಐ ನೆರವಿಗೆ ಧಾವಿಸಿ, ಯುವಕನನ್ನು ಹಿಡಿದು ಕಂಬಕ್ಕೆ ಕಟ್ಟಿದ್ದಾರೆ. ನಂತರ ಆತನನ್ನು ಅಶೋಕ ನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ಮಾಡಿದ್ದಾರೆ. ಆತನ ವಿರುದ್ಧ ಪ್ರಕರಣ ದಾಖಲು ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎಎಸ್‌ಐ ಸುಮಂಗಲಾ ರೆಡ್ಡಿ ಅಶೋಕ ನಗರ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಡಿಪಿಸಿ ಡಿ. ಕಿಶೋರಬಾಬು, ‘ಘಟನೆ ನಡೆದಿರುವುದು ದುರದೃಷ್ಟಕರ. ಯುವಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೂ ಒಪ್ಪಿಸಲಾಗಿದೆ. ತನಿಖೆ ನಡೆಯುತ್ತಿದೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು