ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಆಕ್ಸಿಜನ್ ಸಿಲಿಂಡರ್‌ನೊಂದಿಗೆ ಆಟೊದಲ್ಲಿ ಅಲೆದ ಮಹಿಳೆ!

ಆಸ್ಪತ್ರೆಯಲ್ಲಿ ಹಾಸಿಗೆ ಸಿಗದೇ ಪರದಾಟ
Last Updated 19 ಏಪ್ರಿಲ್ 2021, 3:58 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯಲ್ಲಿ ತೀವ್ರವಾಗಿ ಕೋವಿಡ್‌ ವ್ಯಾಪಿಸುತ್ತಿದ್ದು, ಇತರೆ ಕಾಯಿಲೆಯಿಂದ ಬಳಲುತ್ತಿರುವವರೂ ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ಹಾಸಿಗೆ ಸಿಗದ ಕಾರಣ ಭಾನುವಾರ ಮಹಿಳೆಯೊಬ್ಬರು ಆಟೊದಲ್ಲಿ ಆಕ್ಸಿಜನ್ ಸಿಲಿಂಡರ್‌ನೊಂದಿಗೆ ಆಸ್ಪತ್ರೆಗಳಿಗೆ ಅಲೆದಾಡಿದ್ದಾರೆ.

ಇಲ್ಲಿನ ಬಸವ ನಗರದ 55 ವರ್ಷದ ಮಹಿಳೆ ಕೆಮ್ಮು ಮತ್ತು ಉಸಿರಾಟದ ಸಮಸ್ಯೆಯಿಂದ ಅಸ್ವಸ್ಥಗೊಂಡ ಕಾರಣ ಅವರನ್ನು ಕುಟುಂಬದವರು ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ದರು. ‘ಐಸಿಯು ಹಾಸಿಗೆ ಖಾಲಿ ಇಲ್ಲ’ ಎಂದು ಹೇಳಿ ಆಸ್ಪತ್ರೆಯವರು ಆಕ್ಸಿಜನ್ ಸಿಲಿಂಡರ್ ಅಳವಡಿಸಿ ಕೃತಕ ಉಸಿರಾಟದ ವ್ಯವಸ್ಥೆ ಮಾಡಿದರು.

‘ಐಸಿಯು ಹಾಸಿಗೆಗಾಗಿ ಆಕ್ಸಿಜನ್ ಸಿಲಿಂಡರ್‌ನೊಂದಿಗೆ ಆಟೊದಲ್ಲಿ ನಾಲ್ಕು ಖಾಸಗಿ ಆಸ್ಪತ್ರೆಗಳು ಮತ್ತು ಇಎಸ್‌ಐ ಆಸ್ಪತ್ರೆಗೆ ಅಲೆದು ಜಿಮ್ಸ್ ಆಸ್ಪತ್ರೆಗೆ ಹೋದೆವು. ಆದರೆ, ಎಲ್ಲಿಯೂ ಹಾಸಿಗೆ ಸೌಲಭ್ಯವಾಗಲಿಲ್ಲ. ಮೂರು ಗಂಟೆಯವರೆಗೆ ಆಸ್ಪತ್ರೆ ಹೊರಗಡೆಯೇ ಉಳಿಯಬೇಕಾಯಿತು’ ಎಂದು ಕುಟುಂಬದವರು ತಿಳಿಸಿದ್ದಾರೆ.

ಮಧ್ಯಾಹ್ನದ ವೇಳೆಗೆ ಜಿಮ್ಸ್ ಆಸ್ಪತ್ರೆಯವರೇ ಐಸಿಯು ಘಟಕದಲ್ಲಿ ಮತ್ತೊಂದು ಹಾಸಿಗೆ ವ್ಯವಸ್ಥೆ ಮಾಡಿ, ಒಂದೇ ಯಂತ್ರಕ್ಕೆ ಎರಡು ‘ಫ್ಲೋ ಮೀಟರ್’ ಅಳವಡಿಸಿ ಚಿಕಿತ್ಸೆ ನೀಡಿದರು. ಈ ಕುರಿತು ಪ್ರತಿಕ್ರಿಯೆ ನೀಡಿದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅಂಬಾರಾಯ ರುದ್ರವಾಡಿ, ‘ಆಕ್ಸಿಜನ್ ಸಿಲಿಂಡರ್‌ನೊಂದಿಗೆ ಮಹಿಳೆ ಆಸ್ಪತ್ರೆಗೆ ಬಂದಿರುವ ಮಾಹಿತಿ ತಿಳಿಯುತ್ತಿದ್ದಂತೆ ಹಾಸಿಗೆ ಇಲ್ಲದಿದ್ದರೂ ಐಸಿಯುನಲ್ಲಿ ಮತ್ತೊಂದು ಹಾಸಿಗೆ ವ್ಯವಸ್ಥೆ ಮಾಡಿದೆವು. ಕೊರೊನಾ ತಪಾಸಣೆಯನ್ನೂ ಮಾಡಿಸಲಾಗಿದ್ದು, ವರದಿಗಾಗಿ ಕಾಯುತ್ತಿದ್ದೇವೆ’ ಎಂದರು.

ಮತ್ತೊಂದು ಪ್ರಕರಣದಲ್ಲಿ ಕೋವಿಡ್‌ನಿಂದ ಬಳಲುತ್ತಿರುವ ವೃದ್ಧರೊಬ್ಬರು ಆಟೊದಲ್ಲಿ ವಿವಿಧ ಆಸ್ಪತ್ರೆಗಳಿಗೆ ಅಲೆದಾಡಿದರು. ಆದರೆ, ಎಲ್ಲಿಯೂ ಅವರಿಗೆ ಹಾಸಿಗೆ ದೊರೆಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT