ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಮೇಲೆ ಅಡುಗೆ ಮಾಡಿ ಆಕ್ರೋಶ

ಅಡುಗೆ ಅನಿಲ ಬೆಲೆ ಹೆಚ್ಚಳಕ್ಕೆ ನಂದಿಕೂರ ಮಹಿಳೆಯರ ಖಂಡನೆ
Last Updated 3 ಸೆಪ್ಟೆಂಬರ್ 2021, 4:45 IST
ಅಕ್ಷರ ಗಾತ್ರ

ಕಲಬುರ್ಗಿ: ಕೇಂದ್ರದ ಬಿಜೆಪಿ ಸರ್ಕಾರವು ಅಡುಗೆ ಅನಿಲ ಸೇರಿದಂತೆ ಇನ್ನಿತರ ವಸ್ತುಗಳ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಅನಿತಾ ವಳಕೇರಿ ನೇತೃತ್ವದಲ್ಲಿ ನಗರದ ಹೊರವಲಯದ ನಂದಿಕೂರ ಗ್ರಾಮದ ತೇಲಕರ ನಗರದ ರಸ್ತೆಯಲ್ಲಿ ಗುರುವಾರ ಅಡುಗೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‌ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಡುಗೆಯ ಅನಿಲದ ಉಚಿತ ಸಂಪರ್ಕ ನೀಡಿ ಈಗ ಗ್ಯಾಸ್ ಸಿಲಿಂಡರ ಬೆಲೆಯನ್ನು 9 ತಿಂಗಳಲ್ಲಿ 190 ಹೆಚ್ಚು ಮಾಡಿದ್ದಾರೆ. ಕೇವಲ ಒ೦ದು ತಿಂಗಳಲ್ಲಿಯೇ ₹ 50 ಬೆಲೆ ಹೆಚ್ಚಳವಾಗಿದೆ. ಸರ್ಕಾರದ ಉಚಿತ ಯೋಜನೆಯು ವಿಫಲವಾಗಿ ಅರ್ಥ ಕಳೆದುಕೊಂಡಂತಾಗಿದೆ. ಪುನಃ ಮಹಿಳೆಯರು ಕಟ್ಟಿಗೆಯ ಒಲೆ ಹತ್ತಿಸಿ ಅಡುಗೆ ಮಾಡುವುದು ಅನಿವಾರ್ಯವಾಗಿದೆ ಎಂದು ಆಕ್ರೋಶ ಹೊರಹಾಕಿದರು.

‘ಮಹಾಮಾರಿ ಕೊರೊನಾ ಹೊಡೆತದಿಂದ ಬಡ ರೈತರು ಕೂಲಿ ಕಾರ್ಮಿಕರ ಅರ್ಥಿಕ ಪರಿಸ್ಥಿತಿಯು ಹದಗೆಟ್ಟಿದದ್ದು, ಈ ಗ್ಯಾಸ್‌ ಸಿಲಿಂಡರ್‌ ಬೆಲೆ ಏರಿಕೆಯಿಂದಾಗಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಬೇಳೆ ಕಾಳುಗಳ ಪ್ರತಿ ಕೆ.ಜಿಗೆ ₹ 50 ಹೆಚ್ಚಾಗಿದ್ದರಿಂದ ಬಡವರು ಖರೀದಿಸಲಾಗದೇ ಪುಡಿಖಾರ ರೊಟ್ಟಿ ತಿನ್ನುವಂತಾಗಿದೆ. ಪ್ರಧಾನಿ ಮೋದಿಯವರು ನೀಡಿದ ಎಲ್ಲಾ ಭರವಸೆಗಳು ಸುಳ್ಳಾಗಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಭಾವತಿ ತೇಲಕರ ಮಹಿಳಾ ಸಂಘದ ಅಧ್ಯಕ್ಷೆ ಮಲ್ಲಮ್ಮ ಭೋಜರಾಜ ಮಠ, ಉಪಾಧ್ಯಕ್ಷೆ ರೋಷನಬಿ ಉತನಾಳ, ಅಂಬಿಕಾ ಸಂಗಮೇಶ, ಚನ್ನಮ್ಮ ಶಕೀಲ್, ತಾನುಬಾಯಿ ಶರಣಪ್ಪ ಮನಜಳೆಕರ, ಬಸವಶ್ರೀ ಮಠ, ಮಲ್ಲಣ್ಣಗೌಡ ನಂದಿಕೂರ, ಅಬ್ಬಾಸಲಿ ಧಂಗಾಪುರ, ಭೋಜರಾಜ ಮಠ, ಪವನಕುಮಾರ ಬಿ.ವಳಕೇರಿ ಹಾಗೂ ಗ್ರಾಮದ ಮಹಿಳೆಯರ, ಮಕ್ಕಳು ಇದ್ದರು.

ಜನವಾದಿ ಮಹಿಳಾ ಸಂಘಟನೆ ಖಂಡನೆ: ಕೇಂದ್ರ ಬಿಜೆಪಿಗೆ ಸರ್ಕಾರ ಅಡುಗೆ ಅನಿಲ ದರವನ್ನು ₹ 25ಕ್ಕೆ ಏರಿಕೆ ಮಾಡಿರುವುದನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಕೆ. ನೀಲಾ, ಜಿಲ್ಲಾ ಕಾರ್ಯದರ್ಶಿ ನಂದಾದೇವಿ ಮಂಗೊಂಡಿ ಖಂಡಿಸಿದ್ದಾರೆ.

‘ಕೋವಿಡ್ ಸೊಂಕಿನಿಂದ ದೇಶದಲ್ಲಿ ಜನರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಅವರ ಜೀವನ ನಿರ್ವಹಣೆಯೇ ಕಷ್ಟಕರವಾಗಿದ್ದು, ಇದರ ಜೊತೆಯಲ್ಲಿ ಮೇಲಿಂದ ಮೇಲೆ ಅಡುಗೆ ಅನಿಲದ ದರ ಏರಿಕೆ ಮಾಡಿರುವುದು ಸಾಮಾನ್ಯ ಜನರಿಗೆ ಇನ್ನಷ್ಟು ಹೊರೆಯಾಗುವುದಲ್ಲದೆ, ಗಾಯದ ಮೇಲೆ ಬರೆ ಎಳೆದಂತಾಗಿದೆ. ಜನರ ಆರ್ಥಿಕ ಪರಿಸ್ಥಿತಿ ಹದಗೆಟ್ಟಾಗ ಅವರ ಸಮಸ್ಯೆಗೆ ಸ್ಪಂದನೆ ಮಾಡಬೇಕಾದ ಸರ್ಕಾರಗಳು ಅಗತ್ಯ ವಸ್ತುಗಳ ಬೆಲೆ ಏರಿಕೆ ಏರಿಕೆ ಮಾಡಿದ್ದು ಒಂದೆಡೆಯಾದರೆ, ಇನ್ನೊಂದು ಕಡೆ ಅಡುಗೆ ಅನಿಲ ಏರಿಸುತ್ತಾ ಇನ್ನಷ್ಟು ಹೊರೆ ಮಾಡುತ್ತದೆ. ಕಳೆದ ಎರಡು ತಿಂಗಳಿನಲ್ಲಿ ಮೂರು ಬಾರಿ ಎಲ್‌ಪಿಜಿ ಬೆಲೆ ಹೆಚ್ಚಳವಾಗಿದೆ’ ಎಂದಿದ್ದಾರೆ.

‘ಕೇಂದ್ರ ಸರ್ಕಾರ ಗ್ರಾಮೀಣ ಜನರಿಗೆ ಉಚಿತ ಗ್ಯಾಸ್ ನೀಡುವುದಾಗಿ ಹೇಳಿ ಉಜ್ವಲಾ ಪಲಾನುಭವಿಗಳನ್ನು ಒಳಗೊಂಡು ಎಲ್ಲ ಅಡುಗೆ ಅನಿಲ ಬಳಕೆದಾರರ ಸಬ್ಸಿಡಿಗಳನ್ನು ಹಿಂಪಡೆದಿದೆ. ಈಗ ಪದೇ ಪದೇ ಅನಿಲ ದರ ಏರಿಕೆ ಮಾಡುವ ಮೂಲಕ ಜನರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡುತ್ತದೆ. ಮುಂದೊಂದು ದಿನ ಕಟ್ಟಿಗೆ ಒಲೆಗೆ ದೂಡುತ್ತದೆ. ಬೆಲೆ ಏರಿಕೆಯು ನೇರ ಬಡವರು ಮತ್ತು ಮಹಿಳೆಯರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹಾಗಾಗಿ ಏರಿಸಿರುವ ಗ್ಯಾಸ್ ದರವನ್ನು ಹಿಂಪಡೆಯಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT