ಸೋಮವಾರ, ಸೆಪ್ಟೆಂಬರ್ 20, 2021
21 °C
ಹೊಲದ ದಾರಿಗಾಗಿ ನಡೆದ ತಂಟೆಯಲ್ಲಿ ಗುಂಡು ಹಾರಿಸಿದ ಆರೋಪಿ, ಮಹಿಳೆ ಪ್ರಾಣಾಪಾಯದಿಂದ ಪಾರು

ಮಹಿಳೆಗೆ ಗುಂಡೇಟು: ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಆಳಂದ ತಾಲ್ಲೂಕಿನ ಕಡಗಂಚಿಯಲ್ಲಿ ಸೋಮವಾರ ಮಹಿಳೆಯೊಬ್ಬರಿಗೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಲಾಗಿದೆ. ಅದೃಷ್ಟವಶಾತ್‌ ಮಹಿಳೆ ಪ್ರಾಣಾಪಾಯರಿಂದ ಪಾರಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಕಡಗಂಚಿ ಗ್ರಾಮದ ನಿರ್ಮಲಾ ಸಾತಲಿಂಗಪ್ಪ (38) ಗುಂಡೇಟಿನಿಂದ ಗಾಯಗೊಂಡವರು. ಇದೇ ಗ್ರಾಮದ ನಾಗರಾಜ ರಾಮಚಂದ್ರಪ್ಪ ವಾಣಿ ಆರೋಪಿ. ನಿರ್ಮಲಾ ಅವರ ಪತಿ ಸಾತಲಿಂಗಪ್ಪ ಹಾಗೂ ನಾಗರಾಜ ಅವರ ಮಧ್ಯೆ ಇದ್ದ ಹಳೆಯ ವೈಷಮ್ಯವೇ ಈ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ನಡೆದಿದ್ದೇನು?: ‘ಹೊಲಕ್ಕೆ ಹೋಗುವ ದಾರಿಯ ಸಂಬಂಧವಾಗಿ ನಾಗರಾಜ ಮತ್ತು ಸಾತಲಿಂಗಪ್ಪ ಅವರ ನಡುವೆ ನಾಲ್ಕು ವರ್ಷಗಳಿಂದಲೂ ಆಗಾಗ ತಂಟೆ– ತಕರಾರು ನಡೆಯುತ್ತಿತ್ತು. ದಾರಿ ಇರುವ ಜಮೀನು ಪರಿಶಿಷ್ಟ ಸಮುದಾಯಕ್ಕೆ ಸರ್ಕಾರದಿಂದ ಮಂಜೂರಾಗಿದೆ. ಇದರಲ್ಲಿ ದಾರಿ ಬಿಡಬೇಕು ಎಂಬ ವಿಚಾರವಾಗಿ ತಂಟೆ ನಡೆಯುತ್ತಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.

‘ನಿರ್ಮಲಾ ಹಾಗೂ ಅವರ ಪತಿ ಸಾತಲಿಂಗಪ್ಪ ಮಂಗಳವಾರ ಬೇರೊಬ್ಬರ ಹೊಲದಲ್ಲಿ ಕೂಲಿ ಕೆಲಸಕ್ಕೆ ಹೋಗಿದ್ದರು. ಕೆಲಸದಿಂದ ಮರಳಿ ದಾರಿಯಲ್ಲಿ ಬರುವಾಗ ಸ್ಥಳಕ್ಕೆ ಬಂದ ಮುಖ್ಯ ಆರೋಪಿ ನಾಗರಾಜ ರಾಮಚಂದ್ರಪ್ಪ ವಾಣಿ ಅವರ ಜತೆಗಿದ್ದ ರಾಮಚಂದ್ರಪ್ಪ ವಾಣಿ, ಶ್ರೀಶೈಲ ರಾಮಚಂದ್ರಪ್ಪ ವಾಣಿ, ಅಶೋಕ ಲಕ್ಷ್ಮಣ ಬಗಶೆಟ್ಟಿ ಸೇರಿಕೊಂಡು ಜಗಳ ತೆಗೆದರು. ಜಾತಿ ನಿಂದನೆ ಮಾಡಿ ಬೈದರು. ಈ ವೇಳೆ ಮಾತಿಗೆ ಮಾತು ಬೆಳೆದು ನಾಗರಾಜ ತಮ್ಮ ಬಳಿ ಇದ್ದ ಪಿಸ್ತೂಲಿನಿಂದ ಎರಡು ಸುತ್ತು ಗುಂಡು ಹಾರಿಸಿದರು. ಅದರಲ್ಲಿ ಒಂದು ಗುಂಡು ಗಾಳಿಯಲ್ಲಿ ತೇಲಿ, ಇನ್ನೊಂದು ನಿರ್ಮಲಾ ಅವರ ಭುಜಕ್ಕೆ ತಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಗೊಂಡು ಪ್ರಜ್ಞೆ ತಪ್ಪಿ ಬಿದ್ದ ನಿರ್ಮಲಾ ಅವರನ್ನು ಜಿಮ್ಸ್ ಆಸ್ಪತ್ರೆ ದಾಖಲಿಸಲಾಯಿತು. ಗುಂಡು ಮಹಿಳೆಯ ಭುಜ ಸೀಳಿಕೊಂಡು ಹೊರಹೋಗಿದ್ದರಿಂದ ಅವರ ಪ್ರಾಣಕ್ಕೆ ಅಪಾಯವಾಗಿಲ್ಲ ಎಂದು ಜಿಮ್ಸ್‌ ವೈದ್ಯರು ಮಾಹಿತಿ ನೀಡಿದ್ದಾರೆ.

ಸಾತಲಿಂಗಪ್ಪ ಅವರು ನೀಡಿದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ನಾಗರಾಜ ಅವರನ್ನು ಬಂಧಿಸಿದರು. ಆಳಂದ ಡಿಎಸ್ಪಿ ಮಲ್ಲಿಕಾರ್ಜುನ ಸಾಲಿ ಮತ್ತು ಸಿಬ್ಬಂದಿ ಭೇಟಿ ನೀಡಿದರು. ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.