ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ‘ಸವಿರುಚಿ ಸಂಚಾರಿ ಕ್ಯಾಂಟೀನ್‌’

ಅಕ್ಷರ ಗಾತ್ರ

ಕಲಬುರ್ಗಿ: ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರ ಜಾರಿಗೊಳಿಸಿದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡಿರುವವರ ಸಂಖ್ಯೆ ತುಸು ವಿರಳ ಎನ್ನಬಹುದು. ಆದರೆ, ನಗರದ ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟದ ಸದಸ್ಯೆಯರು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಮಹಿಳೆಯರಿಗಾಗಿ ‘ಸವಿರುಚಿ ಸಂಚಾರಿ ಕ್ಯಾಂಟೀನ್‌’ ನಡೆಸಲು ನೀಡುವ ₹ 10 ಲಕ್ಷ ಸಾಲ ಸೌಲಭ್ಯವನ್ನು ಬಳಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.

ಸ್ವಾವಲಂಬನೆಯತ್ತ ಹೆಜ್ಜೆಹಾಕಲು ಮಹಿಳೆಯರೇ ಶುರುಮಾಡಿದ ಈ ಸಂಚಾರಿ ಕ್ಯಾಂಟೀನ್‌ ನಗರದ ಗಂಜ್‌ನಲ್ಲಿನ ನಗರೇಶ್ವರ ಪ್ರೌಢಶಾಲೆ ಎದುರು ನಿತ್ಯ ಸಂಜೆ 4 ರಿಂದ ರಾತ್ರಿ 9.30ರ ತನಕ ತೆರೆದಿರುತ್ತದೆ.

ಒಕ್ಕೂಟದ ಜಿಲ್ಲಾಧ್ಯಕ್ಷೆ ಮಲ್ಲಮ್ಮ ಎ. ಕಡ್ಲಾ, ಸದಸ್ಯೆಯರಾದ ಜಗದೇವಿ, ವಿಜಯಲಕ್ಷ್ಮಿ ಹಾಗೂ ಲಕ್ಷ್ಮಿ ಸೇರಿದಂತೆ ಒಟ್ಟು ನಾಲ್ವರು ಮಹಿಳೆಯರೇ ಸ್ವತಃ ಉಪಾಹಾರ, ತಿಂಡಿ– ತಿನಿಸುಗಳನ್ನು ತಯಾರಿಸಿ ಅವರೇ ಗ್ರಾಹಕರಿಗೆ ಬಡಿಸುತ್ತಾರೆ.

ಮಹಿಳಾ ಅಭಿವೃದ್ಧಿ ನಿಗಮದಿಂದ ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಮೂಲಕ ಸಂಚಾರಿ ಕ್ಯಾಂಟೀನ್‌ ನಡೆಸಲು ₹ 10 ಲಕ್ಷ ಸೌಲಭ್ಯ ಪಡೆದಿರುವ ಒಕ್ಕೂಟದ ಈ ಮಹಿಳೆಯರು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಶುಚಿ–ರುಚಿಯಾದ ತಿಂಡಿ ತಿನಿಸುಗಳನ್ನು ತಯಾರಿಸಿ ಕಡಿಮೆ ದರದಲ್ಲಿ ಕೊಡುತ್ತಾರೆ. ಸರ್ಕಾರಿ ಕಚೇರಿ ಹಾಗೂ ಖಾಸಗಿ ಶಾಲೆ– ಕಾಲೇಜುಗಳಿಂದಲೂ ಆರ್ಡರ್‌ ಪಡೆದು ಬೇಡಿಕೆಗೆ ತಕ್ಕಂತೆ ರಿಯಾಯಿತಿ ದರದಲ್ಲಿ ಊಟ ಹಾಗೂ ಉಪಾಹಾರವನ್ನೂ ಒದಗಿಸುತ್ತಾರೆ.

ಒಂದು ಪ್ಲೇಟ್‌ ವಡಾ ಪಾವ್‌, ಕಾಂದಾ ಭಜಿ ಹಾಗೂ ಮಿರ್ಚಿ ಭಜಿಗೆ ₹ 20 ಪಡೆಯುತ್ತಾರೆ. ₹ 5 ಕ್ಕೆ ಬಿಸಿ ಬಿಸಿ ಕಾಫಿ, ಟೀ ನೀಡುತ್ತಾರೆ. ವಾಹನದಲ್ಲಿಯೇ ವಾಡಾ ಪಾವ್‌, ಕಾಂದಾ ಭಜಿ ತಯಾರಿಸಿಕೊಟ್ಟರೆ, ಬೇಡಿಕೆ ಇದ್ದಲ್ಲಿ ಊಟ– ಉಪಾಹಾರವನ್ನು ನಗರದ ಬಾಲಕರ ಬಾಲ ಮಂದಿರದಲ್ಲಿ ತಯಾರಿಸಿ ಗ್ರಾಹಕ ಇರುವೆಡೆಗೆ ತಲುಪಿಸುತ್ತಾರೆ.

‘ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮಹಿಳೆಯರ ಸ್ವಾವಲಂಬನೆ ಬದುಕಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಅವರ ಆಡಳಿತದ ಅವಧಿಯಲ್ಲಿ ‘ಸವಿರುಚಿ ಸಂಚಾರಿ ಕ್ಯಾಂಟೀನ್‌’ ಎಂಬ ವಿನೂತನ ಯೋಜನೆಯನ್ನು ಜಾರಿಗೊಳಿಸಿದ್ದರು. ಆಸಕ್ತ ಮಹಿಳೆಯರಿಗಾಗಿ ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಮೂಲಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ₹ 10 ಲಕ್ಷ ಸಾಲ ಸೌಲಭ್ಯವನ್ನೂ ಒದಗಿಸಿದ್ದರು. ಇದನ್ನು ಸದುಪಯೋಗ ಪಡೆದುಕೊಂಡು ನಾವು ಕ್ಯಾಂಟೀನ್‌ ಆರಂಭಿಸಿ, ಸ್ವಾವಲಂಬನೆಯ ಬದುಕನ್ನು ನಡೆಸುತ್ತಿದ್ದೇವೆ’ ಎಂದು ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಮಲ್ಲಮ್ಮ ಎ. ಕಡ್ಲಾ ಹೆಮ್ಮೆಯಿಂದ ಹೇಳಿದರು.

‘ನಿಗಮದಿಂದ ಪಡೆದ ₹ 10 ಲಕ್ಷ ಸಾಲದಲ್ಲಿ ಸಂಚಾರಿ ಕ್ಯಾಂಟೀನ್‌ಗಾಗಿ ₹ 7 ಲಕ್ಷ ನೀಡಿ ನಾವೇ ಸ್ವತಃ ವಾಹನ ಖರೀದಿಸಿದ್ದೇವೆ. ಉಳಿದ ₹ 3 ಲಕ್ಷದಲ್ಲಿ ಅಡುಗೆ ಪರಿಕರಗಳನ್ನು ಖರೀದಿಸಿ, ಕ್ಯಾಂಟೀನ್‌ ನಡೆಸುತ್ತಿದ್ದೇವೆ. ಪ್ರತಿ ತಿಂಗಳು ₹ 40 ಸಾವಿರದಿಂದ ₹ 50 ಸಾವಿರ ವಹಿವಾಟು ನಡೆಸುತ್ತಿದ್ದೇವೆ. ಇದರಲ್ಲಿಯೇ ವಾಹನ ಚಾಲಕ ಸೇರಿದಂತೆ ಮೂವರು ಮಹಿಳೆಯರಿಗೆ ತಿಂಗಳಿಗೆ ಒಟ್ಟು ₹ 28 ಸಾವಿರ ವೇತನ ನೀಡುತ್ತೇವೆ. ಪ್ರತಿ ತಿಂಗಳು ಸಾಲದ ಕಂತು ಪಾವತಿಸುತ್ತೇವೆ. ಉಳಿದ ಹಣದಲ್ಲಿ ಅಡುಗೆ ಸಾಮಾಗ್ರಿಗಳನ್ನು ಖರೀದಿಸುತ್ತೇವೆ’ ಎಂದು ಅವರು ಮಾಹಿತಿ ನೀಡಿದರು.

‘ಮನೆಯಲ್ಲಿ ಕಾಲಹರಣ ಮಾಡುವುದಕ್ಕಿಂತ ಜನರಿಗೆ ಇಷ್ಟವಾದ ತಿಂಡಿ– ತಿನಿಸುಗಳನ್ನು ತಯಾರಿಸಿಕೊಡುವುದು ನಮಗೆ ಖುಷಿಯಾಗುತ್ತದೆ. ಜೊತೆಗೆ ಪ್ರತಿ ತಿಂಗಳ ನಮ್ಮ ಮನೆಯ ಖರ್ಚಿಗೆ ಸ್ವಲ್ಪ ಹಣವೂ ಬರುತ್ತದೆ’ ಎಂದರು ಜಗದೇವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT