ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಪೌರಕಾರ್ಮಿಕರ ಸಾವು, ದಿಢೀರ್‌ ಪ್ರತಿಭಟನೆ

ಪ್ರಕರಣದ ಕುರಿತು ತನಿಖೆಗೆ ಪೌರಕಾರ್ಮಿಕರ ಆಗ್ರಹ, ತಪ್ಪಿತಸ್ಥರ ವಿರುದ್ಧ ಕ್ರಮ: ಅಧಿಕಾರಿಗಳ ಭರವಸೆ
Last Updated 29 ಜನವರಿ 2021, 1:32 IST
ಅಕ್ಷರ ಗಾತ್ರ

ಕಲಬುರ್ಗಿ: ಒಳಚರಂಡಿ ದುರಸ್ತಿಗೆಂದು ಹೋಗಿದ್ದ ಮೂವರಲ್ಲಿ ಇಬ್ಬರು ಪೌರಕಾರ್ಮಿಕರು ಮೃತಪಟ್ಟ ಸುದ್ದಿ ಗುರುವಾರ ಸಂಜೆ ನಗರದಾದ್ಯಂತ ಕಾಳ್ಗಿಚ್ಚಿನಂತೆ ಹಬ್ಬಿತು. ವಿಷಯ ತಿಳಿದ ಹಲವಾರು ಪೌರಕಾರ್ಮಿಕರು ಸ್ಥಳಕ್ಕೆ ಧಾವಿಸಿದರು. ಮೃತರ ತಂದೆ– ತಾಯಿ ಹಾಗೂ ಬಂಧುಗಳ ರೋದನೆ ಮುಗಿಲು ಮುಟ್ಟಿತ್ತು. ಈ ಸಾವಿಗೆ ಕಾರಣರಾದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪೌರಕಾರ್ಮಿಕರು ದಿಢೀರ್‌ ಪ್ರತಿಭಟನೆ ಕೂಡ ನಡೆಸಿದರು.

ಗುತ್ತಿಗೆ ಆಧಾರದ ಮ್ಯಾನ್ಯುವಲ್‌ ಸ್ಕ್ಯಾವೆಂಜರ್‌ ಆದ ಆಜಾದಪುರ ರಸ್ತೆಯ ನಿವಾಸಿಗಳಾದ ಲಾಲ್‌ ಅಹಮದ್‌ (34) ಹಾಗೂ ರಶೀದ್ ಶೇಖ್‌‌‌ (25) ಮೃತಪಟ್ಟವರು. ಲಾಲ್‍ ಅಹಮದ್‌ ಅವರ ಸಹೋದರ ರಾಜ್ ‌ಅಹಮದ್‌ (21) ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾಲ್ ‌ಅಹಮದ್‌ ಹಾಗೂ ರಾಜ್‌ ಅಹಮದ್‌ ಇಬ್ಬರೂಬುರಾನ್‍ಶೇಖ್‌ ಅವರ ಪುತ್ರರು, ರಶೀದ್‌ ಬುರಾನ್‌ ಅವರ ಮೊಮ್ಮಗ. ಇವರೆಲ್ಲರೂ ಒಳಚರಂಡಿ ಮಂಡಳಿಯ ಗುತ್ತಿಗೆ ಪೌರಕಾರ್ಮಿಕರೇ ಆಗಿದ್ದಾರೆ.ಗುತ್ತಿಗೆದಾರ ಶಫೀಕ್ ಅಹ್ಮದ್ ಎಂಬುವರ ಬಳಿ ಕೆಲಸ ಮಾಡುತ್ತಿ ದ್ದರು.

ಲಾಲ್‌ಅಹಮದ್‌ಗೆ ಪತ್ನಿ, ಮೂವರು ಪುತ್ರಿಯರು ಹಾಗೂ ರಶೀದ್‌ಗೆ ಒಬ್ಬ ಪುತ್ರ, ಒಬ್ಬ ಪುತ್ರಿ ಇದ್ದಾರೆ.

ಘಟನೆಯಿಂದ ರೊಚ್ಚಿಗೆದ್ದ ಪೌರಕಾರ್ಮಿಕರು ಮೃತರ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದ ಜಿಮ್ಸ್‌ ಆವರಣದಲ್ಲಿ ದಿಢೀರ್‌ ಪ್ರತಿಭಟನೆ ನಡೆಸಿದರು. ‘ನಗರದಲ್ಲಿ ಮ್ಯಾನ್ಯುವೆಲ್‌ ಸ್ಕ್ಯಾವೆಂಜರ್‌ ಕೆಲಸವನ್ನು ಪದೇಪದೇ ಮಾಡಿಸುತ್ತಿದ್ದಾರೆ. ಹೊಟ್ಟೆಪಾಡಿಗಾಗಿ ಪೌರಕಾರ್ಮಿಕರು ಅಧಿಕಾರಿ ಹೇಳಿದ ಕೆಲಸ ಮಾಡಲೇಬೇಕಾಗಿದೆ. ಯಂತ್ರಗಳು ಇದ್ದರೂ ಬಳಸುವುದಿಲ್ಲ. ಇಂಥ ಸಾವುಗಳು ಇನ್ನು ಎಷ್ಟು ಸಂಭವಿಸಬೇಕು? ಇದಕ್ಕೆ ಕಾರಣರಾದವರ ಮೇಲೆ ಉಗ್ರ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಸ್ಥಳಕ್ಕೆ ಬಂದ ಅಧಿಕಾರಿಗಳು ಹಾಗೂ ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನ ಮಾಡಲು ಪ್ರಯತ್ನಿಸಿದರು. ಮಂಡಳಿ ಅಧೀಕ್ಷಕ ಎಂಜಿನಿಯರ್‌ ಬಸವರಾಜ ಆಲೆಗಾಂವ, ಕಾರ್ಯಪಾಲಕ ಎಂಜಿನಿಯರ್‌ ನರಸಿಂಹಯ್ಯ, ಡಿಸಿಪಿ ಶ್ರೀಕಾಂತ ಕಟ್ಟಿಮನಿ, ಎಸಿಪಿ ಅಂಶುಕುಮಾರ, ಎಸ್.ಬಿ.ಗಿರೀಶ ಮೊದಲಾವರು ಕುಟುಂಬದವರಿಗೆ ಸಾಂತ್ವನ ಹೇಳಿದರು. ಪರಿಹಾರ ಕೊಡಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.

ಹೇಗಾಯಿತು ಘಟನೆ?: ಇಲ್ಲಿನ ಕೈಲಾಸ್‌ ನಗರದ ಮಹಾಲಕ್ಷ್ಮಿ ಬಡಾವಣೆಯಲ್ಲಿರುವ ಅಗ್ನಿಶಾಮಕ ಠಾಣೆ ಎದುರಿನ ರಸ್ತೆಯಲ್ಲಿ ಒಳಚರಂಡಿ ಕಟ್ಟಿಕೊಂಡಿತ್ತು. ಈ ಬಗ್ಗೆ ಸ್ಥಳೀಯ ನಿವಾಸಿಗಳು ದೂರು ನೀಡಿದ್ದರು. ಗುರುವಾರ ಮಧ್ಯಾಹ್ನ 3.30ರ ಸುಮಾರಿಗೆ ಮೂವರೂ ಸೇರಿಕೊಂಡು ಜೆಟ್ಟಿಂಗ್‌ ಯಂತ್ರ ಸಮೇತ ಒಳಚರಂಡಿ ದುರಸ್ತಿಗೆ ಹೋಗಿದ್ದರು. ಮ್ಯಾನ್‌ಹೋಲ್‌ ತೆರೆದು ಒಳಚರಂಡಿಗೆ ಇಳಿದಾಗ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂಬುದು ಮೃತರ ಕುಟುಂಬದವರ ಹೇಳಿಕೆ.

ಆದರೆ, ಈ ಬಗ್ಗೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಎಂಜಿನಿಯರ್‌ ಹೇಳುವುದೇ ಬೇರೆ. ‘ಜೆಟ್ಟಿಂಗ್‌ ಯಂತ್ರ ಸಮೇತ ಕೆಲಸಕ್ಕೆ ಹೋದಾಗ ರಶೀದ್‌ ಶೇಖ್‌ ಕಾಲು ಜಾರಿ ಮ್ಯಾನ್‌ ಹೋಲ್‌ ಒಳಗೆ ಬಿದ್ದರು. ಅವರನ್ನು ರಕ್ಷಿಸಲು ಲಾಲ್‌ಅಹಮದ್‌ ಹಾಗೂ ರಾಜ್‌ ಅಹಮದ್‌ ಕೂಡ ಮ್ಯಾನ್‌ಹೋಲ್‌ಗೆ ಇಳಿದರು. ಹೀಗಾಗಿ ಇಬ್ಬರು ಮೃತಪಟ್ಟಿದ್ದು, ಒಬ್ಬ ಗಾಯಗೊಂಡಿ
ದ್ದಾರೆ’ ಎಂದು ತಿಳಿಸಿದ್ದಾರೆ.

ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹಗ್ಗದಿಂದ ದೇಹಗಳನ್ನು ಹೊರತೆಗೆಯಲು ಯತ್ನಿಸಿದರೂ ಆಗಲಿಲ್ಲ. ಕೊನೆಗೆ ಜೆಸಿಬಿ ಯಂತ್ರ ತಂದು ಮ್ಯಾನ್‌ಹೋಲ್‌ ಒಡೆದು, ನೆಲ ಅಗೆದು ಹೊರತೆಗೆಯಲಾಯಿತು.

ತಲಾ ₹ 5 ಲಕ್ಷ ಪರಿಹಾರದ ಚೆಕ್‌ ವಿತರಣೆ
ಕಲಬುರ್ಗಿ:
ಮೃತಪಟ್ಟ ಪೌರಕಾರ್ಮಿಕರ ಕುಟುಂಬಕ್ಕೆ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯಿಂದ ತಲಾ ₹ 5 ಲಕ್ಷ ಪರಿಹಾರದ ಚೆಕ್‌ ನೀಡಿದರು.

ಗುರುವಾರ ರಾತ್ರಿ 9ರ ಸುಮಾರಿಗೆ ಜಿಮ್ಸ್‌ ಆಸ್ಪತ್ರೆಗೆ ಬಂದ ಮಂಡಳಿಯ ಅಧಿಕಾರಿಗಳು ಮೃತಪಟ್ಟವರ ಪತ್ನಿಯರು ಹಾಗೂ ತಂದೆ– ತಾಯಿಗೆ ಸಾಂತ್ವನ ಹೇಳಿದರು. ಪತ್ನಿಯರ ಕೈಗೆ ತಲಾ ₹ 5 ಲಕ್ಷ ಚೆಕ್‌ ನೀಡಿದರು.‌

ಆರಂಭದಲ್ಲಿ ಮಂಡಳಿಯ ನಿಯಮದ ಪ್ರಕಾರ ತಲಾ ₹ 3 ಲಕ್ಷದ ಚೆಕ್‌ ನೀಡಲು ಅಧಿಕಾರಿಗಳು ಮುಂದಾದರು. ಆದರೆ, ಸ್ಥಳದಲ್ಲಿದ್ದ ಕಾರ್ಮಿಕ ಮುಖಂಡರು ಇದನ್ನು ಒಪ್ಪಲಿಲ್ಲ. ಕೊನೆಗೆ ಪರಿಹಾರ ಮೊತ್ತವನ್ನು ₹ 5 ಲಕ್ಷಕ್ಕೆ ಏರಿಸಲಾಯಿತು ಎಂದು ಮುಖಂಡರು ಮಾಹಿತಿ ನೀಡಿದರು.

ಯಾರು, ಏನೆಂದರು?

ನಗರದಲ್ಲಿ ಮ್ಯಾನ್‍ಹೋಲ್ ಸ್ವಚ್ಛಗೊಳಿಸಲು ಯಂತ್ರಗಳನ್ನೇ ಬಳಸಲಾಗುತ್ತದೆ. ಆರು ಯಂತ್ರಗಳಿವ. ಯುಸಿಜಿ ನಿರ್ವಹಣೆಯನ್ನು ಟೆಂಡರ್ ಮೂಲಕ ಗುತ್ತಿಗೆ ಪಡೆದವರು ಮಾಡುತ್ತಿದ್ದರು. ಘಟನೆಗೆ ಕಾರಣವೇನು, ಲೋಪಗಳು ಎಲ್ಲಿ ಆಗಿವೆ ಎಂಬುದರ ಕುರಿತು ತನಿಖೆ ನಡೆಯಲಿದೆ.
–ಬಸವರಾಜ ಆಲೇಗಾಂವ, ಅಧೀಕ್ಷಕ ಎಂಜಿನಿಯರ್‌, ಕರ್ನಾಟಕ ನಗರ ನೀರು ಸರಬಾಜು ಮತ್ತು ಒಳಚರಂಡಿ ಮಂಡಳಿ

*
ಮ್ಯಾನ್‌ಹೋಲ್ ದುರಸ್ತಿ ವೇಳೆ ನಡೆದ ಘಟನೆ ಅತ್ಯಂತ ಹೇಯ ಹಾಗೂ ಅಮಾನವೀಯವಾದುದು. ಕಾರ್ಮಿಕರು ಕೆಸಲಕ್ಕೆ ಹಿಂದೇಟುಹಾಕಿದ್ದರೂ ಅಧಿಕಾರಿಗಳು ಬಲವಂತ ಮಾಡಿ ಕಾರ್ಯಾಚರಣೆಗೆ ಇಳಿಸಿದ್ದರು ಎನ್ನುವ ಆರೋಪವಿದೆ. ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕಾನೂನುಕ್ರಮ ಜರುಗಿಸಿ, ಮೃತ ಹಾಗೂ ಅಸ್ವಸ್ಥನಾದ ಕಾರ್ಮಿಕರ ಕುಟಂಬವರ್ಗದವರಿಗೆ ಸೂಕ್ತ ಪರಿಹಾರ ನೀಡಬೇಕು.
–ಪ್ರಿಯಾಂಕ್‌ ಖರ್ಗೆ, ಶಾಸಕ

*
ಪೌರಕಾರ್ಮಿಕರ ಸಾವಿಗೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ ಪಡೆಯಲಾಗುವುದು. ಈ ಘಟನೆಗೆ ಕಾರಣ ಏನು ಮತ್ತು ಯಾರು ಎಂಬುದನ್ನು ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸಫಾಯಿ ಕರ್ಮಚಾರಿಗಳ ಆಯೋಗದ ಗಮನಕ್ಕೆ ತಂದು ಪರಿಹಾರಕ್ಕೆ ಕೋರಲಾಗುವುದು.
–ಸ್ನೇಹಲ್ ಲೋಖಂಡೆ, ಆಯುಕ್ತ, ಕಲಬುರ್ಗಿ ಮಹಾನಗರ ಪಾಲಿಕೆ

*
ಮೃತಪಟ್ಟವರು ಮ್ಯಾನ್‍ಹೋಲ್ ಸ್ವಚ್ಛಗೊಳಿಸಲು ಇಳಿದಿರಲಿಲ್ಲ. ಸಕ್ಕಿಂಗ್ ಯಂತ್ರದಿಂದಲೇ ಸ್ವಚ್ಛಗೊಳಿಸಲಾಗುತಿತ್ತು ಎಂಬ ಮಾಹಿತಿ ನಮಗೆ ಬಂದಿದೆ. ಅದರ ಪ್ರಕಾರ ಒಬ್ಬ ಆಯತಪ್ಪಿ ಬಿದ್ದಾಗ ಆತನನ್ನು ರಕ್ಷಿಸಲು ಇನ್ನಿಬ್ಬರು ಒಳಗಿಳಿದು ಈ ಘಟನೆ ಸಂಭವಿಸಿದೆ.
–ನರಸಿಂಹಯ್ಯ, ಕಾರ್ಯಪಾಲಕ ಎಂಜಿನಿಯರ್‌,ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ

*
ಮಗ ಚರಂಡಿಯಲ್ಲಿ ಬಿದ್ದಾಗ ಹಿಡಿಯಲು ಹೋಗಿ ಇನ್ನಿಬ್ಬರು ಬಿದ್ದಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ, ನನಗೇನೂ ಗೊತ್ತಿಲ್ಲ. ಮಗ ಮತ್ತು ಮೊಮ್ಮಗ ಇಬ್ಬರು ಮೃತಪಟ್ಟಿದ್ದಾರೆ. ಈಗ ಯಾರು ಏನು ಹೇಳಿದರೆ ಏನು ಪ್ರಯೋಜನ. ಈ ಹಿಂದೆ ಕೂಡ ನನ್ನ ಒಬ್ಬ ಮಗ ಸತ್ತಿದ್ದಾನೆ. ಈಗ ಎರಡನೇಯವನೂ ಹೋದ.ಇದೆಲ್ಲ ನಮ್ಮ ಹಣೆಬರಹ.
–ಬುರಾನ್‍ಶೇಖ್‌, ಮೃತನ ತಂದೆ

*
ಯಂತ್ರಗಳಿದ್ದರೂ ಅವುಗಳನ್ನು ಬಳಸದೇ ಕಾರ್ಮಿಕರನ್ನೇ ಮ್ಯಾನ್‌ಹೋಲ್‌ಗೆ ಇಳಿಸಿ ಸ್ವಚ್ಛ ಮಾಡಲಾಗುತ್ತದೆ. ಇಬ್ಬರೂ ಕಾರ್ಮಿಕರ ಬಟ್ಟೆ ತೆಗೆದು ಮ್ಯಾನ್‌ಹೋಲ್‌ಗೆ ಇಳಿದಿದ್ದು ಸ್ಪಷ್ಟವಾಗಿ ಕಾಣುತ್ತದೆ. ಈ ಸಾವಿಗೆ ಕಾರಣರಾದ ಗುತ್ತಿಗೆದಾರರು, ಮಂಡಳಿ ಅಧಿಕಾರಿ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಬೇಕು. ಇವರು ಸುಪ್ರೀಂ ಕೋರ್ಟ್‌ ಆದೇಶವನ್ನೇ ಧಿಕ್ಕರಿಸಿ ಕೆಲಸ ಮಾಡುಸಿದ್ದಾರೆ.
–ಸಂತೋಷ ಮೇಲ್ಮನಿ,ರಿಪಬ್ಲಿಕನ್‌ ಯೂತ್‌ ಫೇಡರೇಷನ್‌ ಗೌರವ ಸಂಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT