ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಗಣತಿಯಲ್ಲಿ ಜಾತಿ ಅಂಶಗಳೂ ಮುಖ್ಯ

ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್.ಕಾಂತರಾಜ ಅಭಿಮತ
Last Updated 6 ಮಾರ್ಚ್ 2021, 15:59 IST
ಅಕ್ಷರ ಗಾತ್ರ

ಕಲಬುರ್ಗಿ: ‘ಪ್ರಸಕ್ತ ಸಮಾಜದಲ್ಲಿಯೂ ಅಸಮಾನತೆ ಇದೆ ಎಂಬುದಕ್ಕೆ ಮೀಸಲಾತಿ ಹೋರಾಟಗಳೇ ಸಾಕ್ಷಿ. ಅಸಮಾನತೆ ಹೋಗಲಾಡಿಸಬೇಕೆಂದರೆ ನಿಖರ ಅಂಕಿ– ಅಂಶವುಳ್ಳ ಜನಗಣತಿ ಅಗತ್ಯ’ ಎಂದುಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್.ಕಾಂತರಾಜ ಅಭಿಪ್ರಾಯ ಪಟ್ಟರು.

ಕರ್ನಾಟಕ ರಾಜ್ಯ ವಕೀಲರ ಪರಿಷತ್, ವಕೀಲರ ಸಂಘದ ಜಿಲ್ಲಾ ಘಟಕ ಹಾಗೂ ವಕೀಲರ ಸಂಘದ ಕಲಬುರ್ಗಿ ಹೈಕೋರ್ಟ್ ಘಟಕದ ಸಹಯೋಗದಲ್ಲಿ ನಗರದಲ್ಲಿ ಶನಿವಾರ ಪ್ರೊ.ಎ.ಲಕ್ಷ್ಮಿಸಾಗರ ಸ್ಮರಣಾರ್ಥ ಆಯೋಜಿಸಿದ್ದ ‘ಜನಗಣತಿ ಮತ್ತು ಸಂವಿಧಾನದ ಆಶಯ’ ಕುರಿತ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ಇಂದಿಗೂ ಅನಕ್ಷರತೆ, ಆರ್ಥಿಕ ಅಸಮಾನತೆ, ಜಾತಿ ಪದ್ಧತಿ, ಅಪೌಷ್ಟಿಕತೆ, ಲಿಂಗ ತಾರತಮ್ಯ, ವಲಸೆ ಸೇರಿದಂತೆ ಹಲವು ಸಮಸ್ಯೆಗಳು ಜೀವಂತವಾಗಿದೆ. ಕಾಯಿಲೆ ಗೊತ್ತಿಲ್ಲದ ಹೊರತು ಔಷಧಿ ಕಂಡುಹಿಡಿಯಲು ಸಾಧ್ಯವಿಲ್ಲ. ಅದರಂತೆ ಸಮಾಜದಲ್ಲಿರುವ ನ್ಯೂನತೆಗಳನ್ನು ಕಂಡುಹಿಡಿಯದ ಹೊರತು ಸಮಾಜದ ಅಭಿವೃದ್ಧಿ ಸಾಧ್ಯವಿಲ್ಲ. ಹಾಗಾಗಿ, ಮೊದಲು ಸಾಮಾಜಿಕನ್ಯೂನತೆಗಳನ್ನು ಅರಿತುಕೊಂಡು ಅವುಗಳನ್ನು ಹೋಗಲಾಡಿಸಲು ನಿಖರ ಅಂಕಿ– ಅಂಶವುಳ್ಳ ಜನಗಣತಿ ಮಾಡಬೇಕಿದೆ’ ಎಂದೂ ಅವರು ಹೇಳಿದರು.

‘1931ರ ಜನಗಣತಿಯಲ್ಲಿ ಜಾತಿ ಅಂಶ ಇತ್ತು. ಆದರೆ, ನಂತರದ ಜನಗಣತಿಗಳಲ್ಲಿ ಅದನ್ನು ತೆಗೆದುಹಾಕಲಾಗಿದೆ. ಇದರಿಂದಾಗಿ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ದೊರಕುತ್ತಿಲ್ಲ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಬೇಕು ಎಂದು ಮಂಡಲ್ ಸಮಿತಿಯು ಶಿಫಾರಸು ಮಾಡಿದ ಸಂದರ್ಭದಲ್ಲಿ ಅಂಕಿ–ಅಂಶಗಳ ಕೊರತೆಯಿಂದಾಗಿ ಹಿಂದುಳಿದ ವರ್ಗಗಳಿಗೆ ಕಡಿಮೆ ಪ್ರಮಾಣದ ಮೀಸಲಾತಿ ದೊರೆಯಿತು. ಮೀಸಲಾತಿ ಎಂಬುದು ಸಾಮಾಜಿಕ ನ್ಯಾಯದ ಒಂದು ಭಾಗವಷ್ಟೇ. ಜನಗಣತಿಯಲ್ಲಿ ಜಾತಿ ಅಂಶ ಸೇರಿಸಿದರೆ ಸಾಮಾಜಿಕ ಅಸಮಾನತೆಯನ್ನು ಅಧ್ಯಯನ ಮಾಡಬಹುದು. ಈ ದಿಸೆಯಲ್ಲಿ ಪ್ರೊ.ಲಕ್ಷ್ಮಿಸಾಗರ ಬಹು ದೊಡ್ಡ ಹೋರಾಟ ಮಾಡಿದ್ದಾರೆ’ ಎಂದೂ ಸ್ಮರಿಸಿದರು.

ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಆರ್.ಜೆ. ಸತೀಶ ಸಿಂಗ್ ಮಾತನಾಡಿದರು.

ವಕೀಲರ ಪರಿಷತ್ ಉಪಾಧ್ಯಕ್ಷ ಕಿವಾಡ ಕಲ್ಮೇಶ್ವರ ತುಕಾರಾಮ, ಸದಸ್ಯ ಮೋತಕಪಲ್ಲಿ ಕಾಶೀನಾಥ, ವಕೀಲರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಶರಣಬಸವ ಸಿ. ಪಸ್ತಾಪುರ, ಹೈಕೋರ್ಟ್ ಘಟಕದ ಕಾರ್ಯದರ್ಶಿ ಬಸವರಾಜ ಸಿ. ಜಾಕಾ, ಪ್ರಮುಖರಾದ ರಾಜಶೇಖರ ಬಿ.ಆರ್.ಡೊಂಗರಗಾಂವ, ಶಿವಾನಂದ, ಸಂತೋಷ ಪಾಟೀಲ, ಸುಧೀರಸಿಂಗ್, ಶರಣಗೌಡ ಪಾಟೀಲ, ಹಣಮಂತರಾಯ ಎಸ್. ಅಟೂರ, ಎಚ್.ಎಲ್.ವಿಶಾಲರಘು, ಕಾಮರಡ್ಡಿ, ಮುನಿಯಪ್ಪ ಇದ್ದರು.

₹ 7 ಕೋಟಿ ಪರಿಹಾರ, ಚಿಕಿತ್ಸೆಗೆ ನೆರವು

‘ರಾಜ್ಯದಲ್ಲಿ1.10 ಲಕ್ಷ ವಕೀಲರು ಇದ್ದೇವೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ನಮ್ಮ ಶಕ್ತಿ ದೊಡ್ಡದು. ಅದರೊಂದಿಗೆ ನಮ್ಮ ಜವಾಬ್ದಾರಿ ಅರಿತು ನಾವು ದುಡಿಯಬೇಕು. ಪರಿಷತ್‌ನಿಂದ ಲಾಕ್‌ಡೌನ್‌ ವೇಳೆ ₹ 7 ಕೋಟಿ ಪರಿಹಾರ ನೀಡಲಾಗಿದೆ. ಯುವ ವಕೀಲರು, ಮಹಿಳಾ ವಕೀಲರು ಸೇರಿ 10 ಸಾವಿರ ಮಂದಿಗೆ ಆರ್ಥಿಕ ನೆರವು ನೀಡಿದ್ದೇವೆ. 7 ಸಾವಿರ ಜನರಿಗೆ ಚಿಕಿತ್ಸಾ ವೆಚ್ಚ ಭರಿಸಿದ್ದೇವೆ’ ಎಂದು ಬಾರ್‌ ಕೌನ್ಸಿಲ್‌ ಅಧ್ಯಕ್ಷ ಎಲ್‌.ಶ್ರೀನಿವಾಸಬಾಬು ತಿಳಿಸಿದರು.

‘ಕಲಬುರ್ಗಿ ಜಿಲ್ಲೆಯು ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಭೇಟಿ ನೀಡಿದ ಜಾಗ. ಇಲ್ಲಿನ ವಕೀಲರು ಮಹಾನಾಯಕನನ್ನು ಎದೆಯಲ್ಲಿ ಇಟ್ಟುಕೊಂಡು ಜವಾಬ್ದಾರಿ ನಿರ್ವಹಿಸಬೇಕು. ಅಶಿಸ್ತನ್ನು ಪರಿಷತ್‌ ಸಹಿಸುವುದಿಲ್ಲ. ಯಾರು ಎಷ್ಟೇ ರಾಜಕೀಯವಾಗಿ ಪ್ರಭಾವ ಬೀರಲು ಮುಂದಾದರೂ ಪ್ರಯೋಜನವಿಲ್ಲ. ಯಾವ ಶಕ್ತಿಗೂ ನಾವು ಮಣಿಯುವುದಿಲ್ಲ. ತಪ್ಪು ಮಾಡಿದವರಿಗೆ ಅದರ ಪ್ರತಿಫಲ ಸಿಕ್ಕೇಸಿಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT