ಬುಧವಾರ, ಜೂನ್ 29, 2022
26 °C

ಬಸವ ಜಯಂತಿ: ಪಾದಯಾತ್ರೆಗೆ ಸಂಭ್ರಮದ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಬಸವ ಜಯಂತಿ ಅಂಗವಾಗಿ ಜೈ ಭಾರತ ಮಾತಾ ಸೇವಾ ಸಮಿತಿ ಆಯೋಜಿಸಿದ್ದ ಬೃಹತ್‌ ಪಾದಯಾತ್ರೆ ಮಂಗಳವಾರ ನಗರ ಪ್ರವೇಶಿಸಿತು. ಇಲ್ಲಿನ ರಾಮಮಂದಿರ ಸರ್ಕಲ್‌ ಬಳಿ ಹಿಂದೂ, ಕ್ರೈಸ್ತ, ಮುಸ್ಲಿಂ, ಬೌದ್ಧ ಧರ್ಮದ ಹಲವು ಮುಖಂಡರು ಯಾತ್ರೆಯನ್ನು ಸಂಭ್ರಮದಿಂದ ಸ್ವಾಗತಿಸಿದರು.

ಅಲ್ಲಿಂದ ಆರಂಭವಾದ ಮೆರವಣಿಗೆ ಹೊಸ ಜೇವರ್ಗಿ ರಸ್ತೆಯ ಮೂಲಕ ಸಂಚರಿಸಿ ರಾಷ್ಟ್ರಪತಿ ಚೌಕ್‌ ತಲುಪಿತು. ಅಲ್ಲಿ ಸಾಲಾಗಿ ನಿಲ್ಲಿಸಿದ್ದ ವಾಹನಗಳಲ್ಲಿ ಮಹಾತ್ಮರ ಪ್ರತಿಮೆಗಳಿಗೆ ನಿರಗುಡಿಯ ಹವಾ ಮಲ್ಲಿನಾಥ ಮಹಾರಾಜರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಮುಂದೆ ಸಾಗಿ, ಸರ್ದಾರ್‌ ವಲ್ಲಭಭಾಯಿ ಪ‍ಟೇಲ್‌ ವೃತ್ತ, ಜಗತ್ ವೃತ್ತ, ಸೂಪರ್‌ ಮಾರ್ಕೆಟ್‌, ಚೌಕ್‌ ಪೊಲೀಸ್‌ ಠಾಣೆ, ಕಿರಾಣಾ ಬಜಾರ್‌, ಹುಮನಾಬಾದ್‌ ರಿಂಗ್‌ ರಸ್ತೆ ಮೂಲಕ ಸಾಗಿ ಬಸವ ಕಲ್ಯಾಣದತ್ತ ಪ್ರಯಾಣ ಬೆಳೆಸಿತು.

ಮುಂಚೂಣಿಯಲ್ಲಿ 27 ಅಡಿ ಎತ್ತರದ ಬಸವೇಶ್ವರರ ದೊಡ್ಡ ಪ್ರತಿಮೆ ಹೊತ್ತ ವಾಹನ, ಅದರ ಹಿಂದೆ ಶ್ರೀರಾಮ, ಬುದ್ಧ, ಅಂಬೇಡ್ಕರ್‌, ಛತ್ರಪತಿ ಶಿವಾಜಿ, ಮಹಾತ್ಮ ಗಾಂಧಿ, ಸಂಗೊಳ್ಳಿ ರಾಯಣ್ಣ, ಅಕ್ಕಮಹಾದೇವಿ, ಮೆಕ್ಕಾ– ಮದೀನಾ ಮಸೀದಿ, ಏಸುಕ್ರಿಸ್ತ, ಗುರುನಾನಕ್, ಸೇವಾಲಾಲ್‌ ಮಹಾರಾಜ, ದಾಸರು, ಶರಣರ ಪ್ರತಿಮೆ ಹಾಗೂ ಕಟೌಟ್‌ಗಳ ಮೆರವಣಿಗೆಯೂ ಸಾಗಿತು.

ಇದಕ್ಕೂ ಮುನ್ನ ರಾಮಮಂದಿರ ಬಳಿ ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ, ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ಮುಖಂಡರಾದ ಶಾಮ ನಾಟಿಕಾರ, ಪ್ರಕಾಶ ಮೂಲಭಾರತಿ, ಮಜರ್‌ ಹುಸೇನ್, ಸಯ್ಯದ್‌ ಖಾತ್ರಿ, ಅಖ್ತರ್‌ ಪರ್ವೀನ್‌ ನಾಡಗೌಡ, ಅರುಣಕುಮಾರ ಪಾಟೀಲ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶರಣಕುಮಾರ ಮೋದಿ, ಕಲ್ಯಾಣರಾವ ಪಾಟೀಲ ಮಳಖೇಡ, ದಿಲೀಪ ಮೂಲಭಾರತಿ, ನಾಮದೇವ ಬಬಲಾದ, ಬಾಲರಾಜ ಗುತ್ತೇದಾರ, ಹರ್ಷಾನಂದ ಗುತ್ತೇದಾರ, ಪಾಲಿಕೆಯ ಸದಸ್ಯರಾದ ಸಚಿನ ಕಡಗಂಚಿ, ದೇವದುರ್ಗ, ಚನ್ನು ಲಿಂಗನವಾಡಿ ಪಾಲ್ಗೊಂಡಿದ್ದರು.

ಜಗತ್‌ ವೃತ್ತದಲ್ಲಿ ಜಿಲ್ಲಾಧಿಕಾರಿ ಯಶವಂತ್‌ ಗುರುಕರ್‌ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗಳ್ಳಿ ಅವರು ಮೆರವಣಿಗೆಯನ್ನು ಸ್ವಾಗತಿಸಿದರು. ಬಸವೇಶ್ವರ ಹಾಗೂ ಅಂಬೇಡ್ಕರ್‌ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಯಾತ್ರೆ ಮತ್ತೆ ಮುಂದುವರಿಯಿತು.

ಬಸವಣ್ಣನ ಜನ್ಮಭೂಮಿ ಬಸವನ ಬಾಗೇವಾಡಿಯಿಂದ ಆರಂಭವಾದ ಈ ಪಾದಯಾತ್ರೆ, ಕರ್ಮಭೂಮಿ ಬಸವಕಲ್ಯಾಣದವರೆಗೂ ನಡೆಯಲಿದೆ. ಮೇ 10ಕ್ಕೆ ಆರಂಭವಾಗಿದ್ದು, ಮೇ 30ಕ್ಕೆ ಕೊನೆಗೊಳ್ಳಲಿದೆ. ಸರ್ವ ಧರ್ಮಗಳ ಸಮನ್ವಯ, ಸಾಮಾಜಿಕ ಸೌಹಾರ್ದ ಮೂಡಿಸುವ ಉದ್ದೇಶದಿಂದ ಯಾತ್ರೆ ಆರಂಭಿಸಲಾಗಿದೆ. ಎಲ್ಲ ಸಮುದಾಯಗಳ ಮುಖಂಡರೂ ಇದರಲ್ಲಿ ಪಾಲ್ಗೊಂಡಿದ್ದಾರೆ ಎಂದು ಹವಾ ಮಲ್ಲಿನಾಥ ಮಹಾರಾಜ್‌ ಹೇಳಿದರು.

ಮುಸ್ಲಿಂ ಮುಖಂಡರಾದ ಮಜರ್ ಹುಸೇನ್, ಸೈಯದ್ ಜಾಫರ್ ಹುಸೇನ್ ಸೇಠ್‌ ಮುಂತಾದವರ ನೇತೃತ್ವದಲ್ಲಿ ಯಾತ್ರಾರ್ಥಿಗಳಿಗೆ ಉಪಾಹಾರ ಹಾಗೂ ಊಟದ ವ್ಯವಸ್ಥೆ ಮಾಡಲಾಯಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು