ಸೋಮವಾರ, ಜೂನ್ 27, 2022
28 °C
ತಂಗಿಯ ನಿಶ್ಚಿತಾರ್ಥ ಮುರಿಯಲು ಯತ್ನಿಸಿದರೊಂದಿಗೆ ಜಗಳ, ಮಾರಕಾಸ್ತ್ರಗಳಿಂದ ಹೊಡೆದ ದುಷ್ಕರ್ಮಿಗಳು

ಯುವಕನ ಕೊಲೆ, ತಾಯಿ–ಸಹೋದರನ ಸ್ಥಿತಿ ಗಾಯ‌

ಪ್ರಜಾವಾಣಿ ವಾರ್ತೆ‌ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಯುವತಿಯೊಬ್ಬರ ನಿಶ್ಚಿತಾರ್ಥ ಮುರಿಯಲು ಮುಂದಾದ ಯುವಕರೊಂದಿಗೆ ಸಂಧಾನ ನಡೆಸುವ ವೇಳೆ ನಡೆದ ಜಗಳವು ವಿಕೋಪಕ್ಕೆ ತಿರುಗಿ, ಯುವತಿಯ ಸಹೋದರನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲಾಗಿದೆ. ಆಕೆಯ ತಾಯಿ ಹಾಗೂ ಅಣ್ಣ ಗಂಭೀರವಾಗಿ ಗಾಯಗೊಂಡಿದ್ದಾರೆ.

ಇಲ್ಲಿನ ವಾಜಪೇಯಿ ಬಡಾವಣೆಯ ತರಕಾರಿ ಮಾರುಕಟ್ಟೆಯಲ್ಲಿ ಶನಿವಾರ ಮಧ್ಯಾಹ್ನ ಘಟನೆ ನಡೆದಿದೆ. ಕೊಲೆಯಾದ ಯುವಕನನ್ನು ಕರುಣೇಶ್ವರ ನಗರದ ನಿವಾಸಿ ನಿಖಿಲ್‌ ರಾಜು ಕನೇಗಾರ (22) ಎಂದು ಗುರುತಿಸಲಾಗಿದೆ. ಹೊಡೆದಾಟದಲ್ಲಿ ಈತನ ತಾಯಿ ಕಮಲಾ, ಹಿರಿಯ ಸಹೋದರ ವಿಕಾಸ್‌ ಹಾಗೂ ಇನ್ನೊಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ. ಕಮಲಾ ಹಾಗೂ ವಿಕಾಸ್ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಯುನೈಟೆಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಡೆದಿದ್ದೇನು?: ಕೊಲೆಯಾದ ನಿಖಿಲನ ತಂಗಿಯ ಮದುವೆ ಮುಂಬೈ ಮೂಲದ ವ್ಯಕ್ತಿಯೊಬ್ಬರೊಂದಿಗೆ ನಿಶ್ಚಯವಾಗಿತ್ತು. ಇದಕ್ಕೆ ಸೋಮವಾರ ನಿಶ್ಚಿತಾರ್ಥ ದಿನವನ್ನೂ ನಿಗದಿ ಮಾಡಲಾಗಿತ್ತು. ಆದರೆ, ಯುವತಿಯನ್ನು ತಾನು ಪ್ರೀತಿಸಿದ್ದಾಗಿ ಇಂದಿರಾನಗರದ ಉದಯ ಎಂಬಾತ ವರನಿಗೆ ಕರೆ ಮಾಡಿ ತಿಳಿಸಿದ್ದ. ಈತನೊಂದಿಗೆ ವಿಜಯ್‌ ಎಂಬ ಸ್ನೇಹಿತನೂ ಸೇರಿಕೊಂಡಿದ್ದ. ಈ ವಿಷಯವನ್ನು ಸ್ವತಃ ವರನೇ ಯುವತಿಯ ಸಹೋದರರಿಗೆ ಹೇಳಿದ.

ಕರೆ ಮಾಡಿದ್ದು ಯಾರು ಎಂದು ಪತ್ತೆ ಮಾಡಿದ ಯುವತಿಯ ಸಹೋದರರಾದ ನಿಖಿಲ್‌ ಹಾಗೂ ವಿಕಾಸ್‌ ಯುವಕರಿಗೆ ಬೈದಿದ್ದರು. ಆದರೂ ಕೇಳದ ಆರೋಪಿಗಳು ಮದುವೆಯನ್ನು ಮುರಿದೇ ತೀರುತ್ತೇವೆ ಎಂದು ಪಟ್ಟುಹಿಡಿದಿದ್ದರು.

ಈ ಬಗ್ಗೆ ಮುಖಾಮುಖಿ ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸೋಣ ಬನ್ನಿ ಎಂದು ನಿಖಿಲ್‌ ಹಾಗೂ ವಿಕಾಸ್‌ ಯುವಕರಿಗೆ ತಿಳಿಸಿದ್ದರು. ಅವರೊಂದಿಗೆ ಅವರ ತಾಯಿ ಹಾಗೂ ಸಂಬಂಧಿಕರೂ ಹೋಗಿದ್ದರು.

ಜೇವರ್ಗಿ ರಸ್ತೆಗೆ ಹೊಂದಿಕೊಂಡ ವಾಜಪೇಯಿ ಬಡಾವಣೆಯ ತರಕಾರಿ ಮಾರುಕಟ್ಟೆಯಲ್ಲಿ ಸಂಧಾನದ ಮಾತುಕತೆ ನಡೆದಿತ್ತು. ‘ಇಷ್ಟು ದಿನ ಆಗಿದ್ದು ಆಗಿ ಹೋಗಿದೆ. ಈಗ ನನ್ನ ತಂಗಿಯ ಮದುವೆ ನಿಶ್ಚಯವಾಗಿದೆ. ಅವಳು ಮುಂಬೈಗೆ ಹೋಗುತ್ತಾಳೆ. ಅವಳ ಪಾಡಿಗೆ ಅವಳನ್ನು ಬದುಕಲು ಬಿಡಿ’ ಎಂದು ನಿಖಿಲ್‌ ಕೇಳಿಕೊಂಡ.

ಇದಕ್ಕೆ ಮಣಿಯದ ಯುವಕರು ಪದೇ ಪದೇ ಮುಂಬೈನ ವರನಿಗೆ ಕರೆ ಮಾಡಲು ಯತ್ನಿಸಿದರು. ಈ ವೇಳೆ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸಿದರು.

ಇದೇ ವೇಳೆ ತನ್ನ ನಾಲ್ಕಾರು ಸ್ನೇಹಿತರಿಗೆ ಕರೆ ಮಾಡಿದ ದುಷ್ಕರ್ಮಿಗಳು, ಮಾರಕಾಸ್ತ್ರಗಳ ಸಮೇತ ಬರುವಂತೆ ಕರೆದರು. ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಓಡಿಬಂದ ಯುವಕರ ಗುಂಪು ನಿಖಿಲ್‌, ವಿಕಾಸ್‌ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿತು. ನಿಖಿಲ್‌ಗೆ ಬಲವಾದ ಪೆಟ್ಟುಬಿದ್ದು ನೆಲಕ್ಕುರುಳಿದ. ಜಗಳ ಬಿಡಿಸಲು ಮುಂದಾದ ಆತನ ತಾಯಿ ಕಮಲಾ ಅವರ ಮೇಲೂ ದುಷ್ಕರ್ಮಿಗಳು ದಾಳಿ ಮಾಡಿದರು. ಜಗಳ ಬಿಡಿಸಲು ಬಂದಿದ್ದ ಇನ್ನೊಬ್ಬ ವ್ಯಕ್ತಿಗೂ ಸಣ್ಣ ಗಾಯಗಳಾದವು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೊಲೆಯಾದ ನಿಖಿಲ್‌ ತಳ್ಳುವ ಗಾಡಿಯಲ್ಲಿ ಭಜ್ಜಿ ವ್ಯಾಪಾರ ಮಾಡಿಕೊಂಡಿದ್ದ. ತಾಯಿ ತರಕಾರಿ ಮಾರುತ್ತಿದ್ದರು. ತಂದೆ ರಾಮಮಂದಿರ ಬಳಿಯ ಕಾಲೇಜೊಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದಾರೆ.

ಘಟನೆಯಿಂದಾಗಿ ತರಕಾರಿ ಮಾರುಕಟ್ಟೆ, ಕರುಣೇಶ್ವರ ನಗರ ಸುತ್ತ ಭಯದ ವಾತಾವರಣ ನಿರ್ಮಾಣವಾಗಿತ್ತು. ಎರಡೇ ದಿನಗಳಲ್ಲಿ ನಿಶ್ಚಿತಾರ್ಥದ ಸಂಭ್ರಮ ನಡೆಯಬೇಕಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

ಡಿಸಿಪಿ ಕಿಶೋರ್‌ಬಾಬು, ಎಸಿಪಿ ಜೆ.ಎಚ್.ಇನಾಮದಾರ, ಇನ್‌ಸ್ಪೆಕ್ಟರ್ ಶಿವಾನಂದ ಗಾಣಿಗೇರ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾತರಕಾರಿ ಮಾರುಕಟ್ಟೆ, ಕರುಣೇಶ್ವರ ನಗರ ರೆ. ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತರ ಪತ್ತೆಗೆ ಜಾಲ ಬೀಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು