ಭಾನುವಾರ, ಡಿಸೆಂಬರ್ 15, 2019
17 °C
ವಿದ್ಯಾರ್ಥಿನಿಯರ ಸಾಹಸ ದೃಶ್ಯ ಮೊಬೈಲ್‌ನಲ್ಲಿ ವೈರಲ್‌

ಕಲಬುರ್ಗಿ | ಕುಡಿದು ಹಾಸ್ಟೆಲ್‌ಗೆ ನುಗ್ಗಿದವನಿಗೆ ವಿದ್ಯಾರ್ಥಿನಿಯರಿಂದ ಧರ್ಮದೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಇಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಬಾಲಕಿಯರ ಹಾಸ್ಟೆಲ್‌ಗೆ ತಡರಾತ್ರಿ ನುಗ್ಗಿದ ಯುವಕನನ್ನು ಬಾಲಕಿಯರೇ ಹಿಡಿದು ಮುಖಕ್ಕೆ ಕಾರದ ಪುಡಿ ಎರಚಿ ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಶುಕ್ರವಾರ ರಾತ್ರಿ ಕುಡಿದ ಮತ್ತಿನಲ್ಲಿ ವ್ಯಕ್ತಿ ಗೋಡೆಯ ಸಹಾಯದಿಂದ ಒಳ ನುಗ್ಗಿದ್ದಾನೆ. ಗೋಡೆಯ ಮೂಲಕವೇ ಮೂರನೇ ಮಹಡಿಗೆ ಹೋಗಿದ್ದಾನೆ. ಈ ವೇಳೆ ಅನುಮಾನಗೊಂಡ ಯುವತಿಯರ ಕೊಠಡಿಗಳಿಂದ ಹೊರಬಂದಿದ್ದಾರೆ. ಆಗ ಆರೋಪಿ ಮೆಟ್ಟಿಲು ಇಳಿದು ಓಡಲು ಯತ್ನಿಸಿದ್ದಾನೆ. ತಕ್ಷಣವೇ ಯುವತಿಯರು ಗುಂಪು ಸೇರಿ ಭದ್ರತಾ ಸಿಬ್ಬಂದಿ ನೆರವಿನಿಂದ ಆತನನ್ನು ಅಡ್ಡಗಟ್ಟಿ ಹಿಡಿದಿದ್ದಾರೆ. ವಿದ್ಯಾರ್ಥಿನಿಯೊಬ್ಬಳು ಕಾರದ ಪುಡಿ‌ ತಂದು ಆರೋಪಿಯ ಮುಖಕ್ಕೆ ಎರಚಿದ್ದಾಳೆ. ಇದರಿಂದ ಕಣ್ಣುರಿ ಬಂದು ಅಲ್ಲೇ ಕುಸಿದು ಬಿದ್ದಿದ್ದಾನೆ. ನಂತರ ಎಲ್ಲರೂ ಸೇರಿಕೊಂಡು ಥಳಿಸಿ ಬುದ್ಧಿ ಕಲಿಸಿದ್ದಾರೆ.‌

ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ವಿಷಯದ ತಿಳಿದು ಹಾಸ್ಟೆಲ್‌ಗೆ ಧಾವಿಸಿದ್ದಾರೆ. ಹಾಸ್ಟೆಲ್ ವಾರ್ಡನ್ ಹಾಗೂ ಯುವತಿಯರು ಕೂಡಿಕೊಂಡು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯನ್ನು ಹಿಡಿದು ಥಳಿಸಿದ ಗಟ್ಟಿಗಿತ್ತಿ ವಿದ್ಯಾರ್ಥಿನಿಯರ ಸಾಹಸ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಅವರ ಧೈರ್ಯಕ್ಕೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಜಂಟಿ ಸತೀಶ್ ಕೆ.ಎಚ್. ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರ ಆತನನ್ನು ವಿಚಾರಣೆ ನಡೆಸಿದರು. ಕುಡಿದ ಮತ್ತಿನಲ್ಲಿ ಹಾಸ್ಟೆಲ್ ಗೆ ನುಗ್ಗಿದ್ದನೆಂದು ತಪ್ಪೊಪ್ಪಿಕೊಂಡಿದ್ದು ಎಚ್ಚರಿಕೆ ನೀಡಿ ಆರೋಪಿಯನ್ನು ಬಿಟ್ಟು ಬಿಡಲಾಗಿದೆ ಎಂದು ಸ್ಟೇಷನ್ ಬಜಾರ್ ಠಾಣೆ ಪೊಲೀಸರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು