ಅಂಗನವಾಡಿ ಅವ್ಯವಹಾರ; ತನಿಖೆಗೆ ಆಗ್ರಹ

7
ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ; ಸದಸ್ಯರ ಆಕ್ರೋಶ

ಅಂಗನವಾಡಿ ಅವ್ಯವಹಾರ; ತನಿಖೆಗೆ ಆಗ್ರಹ

Published:
Updated:
Prajavani

ಕಲಬುರ್ಗಿ: ‘ಜಿಲ್ಲೆಯ ಅಂಗನವಾಡಿಗಳಿಗೆ ಪೂರೈಕೆಯಾಗುವ ಆಹಾರ ಪದಾರ್ಥ ಮತ್ತು ಮೊಟ್ಟೆ ವಿತರಣೆಯಲ್ಲಿ ವ್ಯಾಪಕ ಅವ್ಯವಹಾರ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಜಿಲ್ಲಾ ಪಂಚಾಯಿತಿಯ ಕೆಲವು ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಹೊಸ ಸಭಾಂಗಣದಲ್ಲಿ ಶನಿವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶರಣಗೌಡ ಪಾಟೀಲ ಮಾತನಾಡಿ, ‘ಮಾತೃಪೂರ್ಣ ಯೋಜನೆಯಡಿ ಅಂಗನವಾಡಿಗಳಲ್ಲಿ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಸರಿಯಾಗಿ ವಿತರಿಸುತ್ತಿಲ್ಲ. ದಾಖಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚು ತೋರಿಸಿ, ಅವ್ಯವಹಾರ ನಡೆಸಲಾಗುತ್ತಿದೆ. ಆದ್ದರಿಂದ ಈ ಬಗ್ಗೆ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಾಜಾ ಪಿ., ‘ಅಂಗನವಾಡಿಗಳು ಜಿಲ್ಲಾಧಿಕಾರಿ ವ್ಯಾಪ್ತಿಗೆ ಬರುತ್ತವೆ. ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸುವ ನಿರ್ಣಯ ಕೈಗೊಳ್ಳಬಹುದು’ ಎಂದು ಹೇಳಿದರು.

ಶಿವರಾಜ ಪಾಟೀಲ ಮಾತನಾಡಿ, ‘ಅಂಗನವಾಡಿ ಅವ್ಯವಹಾರದಲ್ಲಿ ಎಲ್ಲರೂ ಶಾಮೀಲಾಗಿದ್ದಾರೆ. ಸಿಡಿಪಿಒಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರ ಮಾತು ಕೇಳುತ್ತಿಲ್ಲ’ ಎಂದು ದೂರಿದರು.

ಇದಕ್ಕೆ ಪೂರಕವಾಗಿ ಮಾತನಾಡಿದ ಗೌತಮ ಪಾಟೀಲ, ‘ಅಂಗನವಾಡಿಗಳಲ್ಲಿ ಅತೀ ಹೆಚ್ಚು ಭ್ರಷ್ಟಾಚಾರ ನಡೆಯುತ್ತಿದೆ. ಮೊಟ್ಟೆ ಹಣವನ್ನು ಕಾರ್ಯಕರ್ತೆಯರ ಖಾತೆಗೆ ಜಮಾ ಮಾಡಲಾಗುತ್ತಿದೆ. ಇದು ಸರಿಯಲ್ಲ. ತಾಂಡಾಗಳಲ್ಲಿರುವ ಅಂಗನವಾಡಿಗಳಿಗೆ ಮಕ್ಕಳು ಬಂದಿರುವುದಿಲ್ಲ. ಆದರೂ, ಮೊಟ್ಟೆ ವಿತರಣೆ ಖರ್ಚು ತೋರಿಸುತ್ತಿದ್ದಾರೆ. ಆದ್ದರಿಂದ ಮೊಟ್ಟೆ ಹಣವನ್ನು ಅವರ ಖಾತೆಗೆ ಹಾಕಬಾರದು’ ಎಂದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಸಿರಸಗಿ ಮಾತನಾಡಿ, ‘ಮಾತೃಪೂರ್ಣ ಯೋಜನೆ ಅಪೂರ್ಣವಾಗಿದೆ. ಗರ್ಭಿಣಿಯರು ಊಟ ಮಾಡುತ್ತಿಲ್ಲ. ಆ ಯೋಜನೆ ಇದ್ದೂ ಇಲ್ಲಂದಾತಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಅಂಗನವಾಡಿಗಳಿಗೆ ಪೂರೈಕೆ ಮಾಡುತ್ತಿರುವ ಪೌಡರ್ ರೂಪದ ಆಹಾರವನ್ನು ನಿಲ್ಲಿಸಬೇಕು. ಕಾಳುಗಳನ್ನು ಪೂರೈಕೆ ಮಾಡಬೇಕು. ಮೊಟ್ಟೆ ವಿತರಣೆಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಅಂಗನವಾಡಿಗಳಲ್ಲಿ ನಡೆದಿರುವ ಅವ್ಯವಹಾರವನ್ನು ತಡೆಗಟ್ಟಬೇಕು’ ಎಂದು ಸದಸ್ಯರು ಆಗ್ರಹಿಸಿದರು.

ಹರ್ಷಾನಂದ ಗುತ್ತೇದಾರ, ಶಾಂತಪ್ಪ ಕೂಡಗಿ, ಸಂಜೀವನ್ ಯಾಕಾಪುರ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಲಾಜಿ, ಉಪಾಧ್ಯಕ್ಷೆ ಶೋಭಾ ಸಿರಸಗಿ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪ್ರವೀಣ್ ಪ್ರಿಯಾ ಡೇವಿಡ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !