ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ | ಬಳಕೆಯಾಗದೇ ವಾಪಸಾದ ₹ 9.81 ಕೋಟಿ!

ಲೋಪಕ್ಕೆ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಜಿ.ಪಂ. ಸದಸ್ಯರ ಒತ್ತಾಯ
Last Updated 16 ಜೂನ್ 2020, 15:22 IST
ಅಕ್ಷರ ಗಾತ್ರ

ಕಲಬುರ್ಗಿ: ವಿವಿಧ ಕಾಮಗಾರಿಗಳು, ಫಲಾನುಭವಿಗಳಿಗೆ ವಿತರಿಸಲು ಬಿಡುಗಡೆಯಾಗಿದ್ದ ಜಿಲ್ಲಾ ಪಂಚಾಯಿತಿಯ ₹ 9.81 ಕೋಟಿ ಹಣವನ್ನು ಸಕಾಲಕ್ಕೆ ಬಳಕೆ ಮಾಡದೇ ಇದ್ದುದಕ್ಕೆ ಸರ್ಕಾರಕ್ಕೆ ವಾಪಸಾಗಿರುವ ಬಗ್ಗೆ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಲಾಜಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಇಲ್ಲಿನ ಜಿ.ಪಂ. ನೂತನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಂಜೆ ಹೊತ್ತಿಗೆ ಅಂಕಿ ಅಂಶಗಳನ್ನು ಮಂಡಿಸಿದ ಮುಖ್ಯ ಹಣಕಾಸು ಅಧಿಕಾರಿ (ಸಿಎಒ) ರಾಮಣ್ಣ ಅಥಣಿ, ಸಕಾಲಕ್ಕೆ ಬಿಲ್‌ ಸಲ್ಲಿಸದಿರುವುದೂ ಸೇರಿದಂತೆ ವಿವಿಧ ಕಾರಣಗಳಿಗಾಗಿ ಹಣ ಬಳಕೆ ಮಾಡಲು ಆಗಿಲ್ಲ. ಹಲವು ಬಾರಿ ನೆನಪಿಸಿದಾಗಲೂ ಚಿತ್ತಾಪುರ ಹಾಗೂ ಜೇವರ್ಗಿ ತಾಲ್ಲೂಕಿನ ಬಿಲ್‌ಗಳು ನಿಗದಿತ ಸಮಯಕ್ಕಿಂತ ತಡವಾಗಿ ಬಂದವು. ಹೀಗಾಗಿ, ಅವುಗಳು ಪಾಸ್‌ ಆಗಲಿಲ್ಲ. ಲ್ಯಾಪ್ಸ್‌ ಆದ ಹಣವನ್ನು ಖಜಾನೆಗೆ ಮರಳಿಸಲಾಗಿದೆ ಎಂದರು.

ಇದು, ಹಲವು ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು. ಕೊರೊನಾ ಹಾವಳಿಯಿಂದಾಗಿ ಸರ್ಕಾರದಿಂದ ಹಣ ಬರುವುದೇ ಕಷ್ಟವಾಗಿದೆ. ಇಂತಹ ಸಂದ‌ರ್ಭದಲ್ಲಿ ಬಿಡುಗಡೆಯಾದ ಹಣ ವಾಪಸ್‌ ಹೋಗಲು ಬಿಟ್ಟಿದ್ದು ಯಾರು? ಈ ಬಗ್ಗೆ ತನಿಖೆ ನಡೆಸಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಜಿ.ಪಂ. ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ, ಸದಸ್ಯರಾದ ಸಿದ್ದರಾಮ ಪಾಟೀಲ, ಗೌತಮ ಪಾಟೀಲ, ರೇವಣಸಿದ್ದಪ್ಪ ಸಂಕಾಲಿ ಅಧ್ಯಕ್ಷೆ ಸುವರ್ಣಾ ಮಲಾಜಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ರಾಜಾ ಪಿ. ಅವರನ್ನು ಒತ್ತಾಯಿಸಿದರು.

ಜಿ.ಪಂ. ಸದಸ್ಯರಿಗೆ ₹ 50 ಲಕ್ಷ ಕೊಡಿಸಿ: ‘ಪ್ರಿಯಾಂಕ್‌ ಖರ್ಗೆ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿಯ ಎಲ್ಲ ಸದಸ್ಯರಿಗೆ ಪಕ್ಷಭೇದ ಮರೆತು ತಲಾ ₹ 25 ಲಕ್ಷ ಅನುದಾನ ಕೊಡಿಸಿದ್ದರು. ಈಗ ತಲಾ ₹ 50 ಲಕ್ಷ ಕೊಡಿಸಿದರೆ ಅಭಿವೃದ್ಧಿ ಕೆಲಸಗಳಿಗೆ ಅನುಕೂಲವಾಗಲಿದೆ. ಜಿ.ಪಂ. ಅಧ್ಯಕ್ಷರ ನೇತೃತ್ವದಲ್ಲಿ ನಿಯೋಗದಲ್ಲಿ ತೆರಳಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ಭೇಟಿ ಮಾಡೋಣ’ ಎಂಬ ಕೆಲ ಸದಸ್ಯರ ಬೇಡಿಕೆಗೆ ಬಹುತೇಕ ಸದಸ್ಯರು ಒಪ್ಪಿಗೆ ನೀಡಿದರು.

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕುರಿತು ವಿಷಯ ಪ್ರಸ್ತಾಪಿಸಿದ ಗೌತಮ ಪಾಟೀಲ,ಕೆರೆ ಹೂಳೆತ್ತುವ, ಕ್ಷೇತ್ರ ಬದು ಮಾಡುವ ಕಾರ್ಯವನ್ನು ನೀಡಲಾಗುತ್ತಿದೆ. ಹೂಳೆತ್ತಿದ ಮಣ್ಣನ್ನು ಪಕ್ಕದಲ್ಲೇ ಹಾಕುತ್ತಿದ್ದಾರೆ. ಗುಂಡಿ ತೋಡಲು ಜಿ.ಪಂ. ಕೂಲಿಕಾರರನ್ನು ನಿಯೋಜಿಸುತ್ತಿದೆ. ಆ ಮಣ್ಣನ್ನು ಬೇರೆ ಕಡೆಯೂ ಕೊಂಡೊಯ್ಯಲು ನಿಯಮದಲ್ಲಿ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಹರ್ಷಾನಂದ ಗುತ್ತೇದಾರ ಮಾತನಾಡಿ, ‘ಪಶು ಪಾಲನಾ ಇಲಾಖೆ ಉಪನಿರ್ದೇಶಕ ಹನುಮಂತಪ್ಪ ಅವರು ₹ 1 ಕೋಟಿ ಹಣವನ್ನು ಸರ್ಕಾರದ ಮಾರ್ಗಸೂಚಿಯನ್ನು ಉಲ್ಲಂಘಿಸಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪಗಳಿವೆ.ಡಿ ಗ್ರೂಪ್ ಸಿಬ್ಬಂದಿಗೆ ಕಿರುಕುಳ ನೀಡುತ್ತಿದ್ದಾರೆ. ಹೀಗಾಗಿ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದರು.

ಸಿಇಒ ಡಾ. ರಾಜಾ ಪ್ರತಿಕ್ರಿಯಿಸಿ, ‘ಈ ಬಗ್ಗೆ ನೋಟಿಸ್‌ ಜಾರಿ ಮಾಡಿ ಪ್ರತಿಕ್ರಿಯೆ ಪಡೆಯುತ್ತೇನೆ. ಹಣ ದುರ್ಬಳಕೆ ಮಾಡಿಕೊಂಡಿದ್ದು ಸಾಬೀತಾದರೆ ಕ್ರಮ ಕೈಗೊಳ್ಳಲು ಶಿಫಾರಸು ಮಾಡುವೆ’ ಎಂದು ಹೇಳಿದರು.

ಹನುಮಂತಪ್ಪ ಮಾತನಾಡಿ, ‘ಒಟ್ಟು 214 ಯೋಜನೆಗಳಿಗೆ ಹಣವನ್ನು ನಿಯಮಾನುಸಾರ ಖರ್ಚು ಮಾಡಿದ್ದೇನೆ. ಡಿ ಗ್ರೂಪ್ ಸಿಬ್ಬಂದಿ ತಿಂಗಳಾನುಗಟ್ಟಲೇ ಕಚೇರಿಗೆ ಹಾಜರಾಗದೇ ಇದ್ದುದರಿಂದ ಅವರಿಗೆ ಗ್ರಾಮಕ್ಕೆ ನಿಯೋಜನೆ ಮಾಡಿದ್ದೆ’ ಎಂದರು.

ಸಭೆಗೆ ಹಾಜರಾದ ಶಾಂತಪ್ಪ:ಜೇವರ್ಗಿ ತಾಲ್ಲೂಕಿನ ಮಯೂರ ಗ್ರಾಮದ ಬಿಜೆಪಿ ಮುಖಂಡ ಶಿವಲಿಂಗ ಭಾವಿಕಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಜಿಲ್ಲಾ ಪಂಚಾಯಿತಿ ಸದಸ್ಯ ಶಾಂತಪ್ಪ ಕೂಡಲಗಿ ಸಾಮಾನ್ಯ ಸಭೆಗೆ ಹಾಜರಾಗಿದ್ದರು. ಆದರೆ, ಯಾವುದೇ ಚರ್ಚೆಯಲ್ಲಿ ಭಾಗವಹಿಸಲಿಲ್ಲ.

₹ 1547 ಕೋಟಿ ಕ್ರಿಯಾ ಯೋಜನೆಗೆ ಅಸ್ತು

ಜಿಲ್ಲಾ ಪಂಚಾಯತಿಗೆ ಸರ್ಕಾರ 2020–21ನೇ ಸಾಲಿನಲ್ಲಿ ಒದಗಿಸಿರುವ ₹ 1547.85 ಕೋಟಿ ಮೊತ್ತದ ಅನುದಾನಕ್ಕೆ ವಿವಿಧ ಇಲಾಖಾವಾರು ಹಂಚಿಕೆಯ ಕ್ರಿಯಾ ಯೋಜನೆಗೆ (ಲಿಂಕ್ ಡಾಕ್ಯುಮೆಂಟ್) ಸಾಮಾನ್ಯ ಸಭೆಯು ಅನುಮೋದನೆ ನೀಡಿತು.

ಇದರಲ್ಲಿ ಜಿಲ್ಲಾ ಪಂಚಾಯತ್ ಯೋಜನೆಗಳಿಗೆ ₹ 453.73 ಕೋಟಿ ಮೊತ್ತದ ತಾಲ್ಲೂಕು ಪಂಚಾಯಿತಿ ಯೋಜನೆಗಳಿಗೆ ₹ 1093ಕೋಟಿ ಹಾಗೂ ಗ್ರಾಮ ಪಂಚಾಯಿತಿ ಯೋಜನೆಗಳಿಗೆ ₹88 ಲಕ್ಷ ಬಳಸಲು ಸಭೆಯು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿತು.

ಕೊರೊನಾ: ಅಧಿಕಾರಿಗಳಿಗೆ ಚಪ್ಪಾಳೆಯ ಶ್ಲಾಘನೆ

ಮಂಗಳವಾರದ ಸಾಮಾನ್ಯ ಸಭೆ ಎಂದಿಗಿಂತ ವಿಶೇಷವಾಗಿತ್ತು. ಕೊರೊನಾ ನಿಯಂತ್ರಣಕ್ಕಾಗಿ ಶ್ರಮಿಸಿದ ಜಿಲ್ಲಾಡಳಿತ, ವೈದ್ಯಕೀಯ ಸಿಬ್ಬಂದಿ ಹಾಗೂ ಎಲ್ಲ ಕೊರೊನಾ ವಾರಿಯರ್‌ಗಳಿಗೆ ಎಲ್ಲ ಸದಸ್ಯರು ಎದ್ದು ನಿಂತು ಚಪ್ಪಾಳೆಯ ಮೂಲಕ ಅಭಿನಂದನೆ ಸಲ್ಲಿಸಿದರು. ಜಿ.‍ಪಂ. ಅಧ್ಯಕ್ಷೆ ಸುವರ್ಣಾ ಮಾಲಾಜಿ ಹಾಗೂ ಉಪಾಧ್ಯಕ್ಷೆ ಶೋಭಾ ಸಿರಸಗಿ ಅವರು ಸಿಇಒ ಡಾ. ರಾಜಾ ಅವರಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು.

ಸೋಯಾ ಬೆಳೆಯದಂತೆ ಸೂಚನೆ

ಜಿಲ್ಲೆಯಲ್ಲಿ ಸೋಯಾ ಬೆಳೆಯನ್ನು ಬೆಳೆಯಲು ಸೂಕ್ತ ವಾತಾವರಣವಿಲ್ಲ. ಆದ್ದರಿಂದ ಅವುಗಳನ್ನು ಎಲ್ಲ ರೈತ ಸಂಪರ್ಕ ಕೇಂದ್ರಗಳು ಹಾಗೂ ಬೀಜ ಮಾರಾಟಗಾರರಿಂದ ವಾಪಸ್‌ ಪಡೆಯಲಾಗುತ್ತಿದೆ. ಈಗಾಗಲೇ ಬಿತ್ತನೆ ಮಾಡಿದ್ದರೆ ಅದನ್ನು ಹರಗಿ ಮತ್ತೆ ಬೇರೆ ಬೆಳೆಯನ್ನು ಬೆಳೆಯುವಂತೆ ರೈತರಿಗೆ ತಿಳಿಸಲಾಗಿದೆ. ಅದಕ್ಕೆ ವೆಚ್ಚ ಮಾಡಿದ ಖರ್ಚನ್ನು ಕೃಷಿ ಇಲಾಖೆ ಪರಿಹಾರವಾಗಿ ನೀಡಲಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ರತೇಂದ್ರನಾಥ ಸೂಗುರ ಮಾಹಿತಿ ನೀಡಿದರು.

ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಧಂಗಾಪುರ ಅವರ ಪ್ರಶ್ನೆಗೆ ಸಾಮಾನ್ಯ ಸಭೆಯಲ್ಲಿ ಅವರು ಉತ್ತರಿಸಿದರು.

ಶಾಲಾ ಶುಲ್ಕ ಕಟ್ಟಲುಮೊಬೈಲ್ ಸಂದೇಶ

ಕೊರೊನಾ ಪ್ರಯುಕ್ತ ಶಾಲೆಗಳು ಆರಂಭವಾಗದಿದ್ದರೂ ಖಾಸಗಿ ಶಿಕ್ಷಣ ಸಂಸ್ಥೆಗಳು ಪಾಲಕರಿಗೆ ಶುಲ್ಕ ಕಟ್ಟುವಂತೆ ಹಾಗೂ ಎಲ್‌ಕೆಜಿ ಮಕ್ಕಳಿಗೂ ಆನ್ ಲೈನ್ ಕ್ಲಾಸ್ ನಡೆಸುತ್ತಿರುವ ಕುರಿತು ಹರ್ಷಾನಂದ ಗುತ್ತೇದಾರ ಸಭೆಯ ಗಮನ ಸೆಳೆದರು.

ಇದಕ್ಕೆ ಸಿಇಒ ಡಾ. ರಾಜಾ ಹಾಗೂ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಪಿ.ಬಾಡಂಗಡಿ ಪ್ರತಿಕ್ರಿಯೆ ನೀಡಿ, ‘ಯಾವುದೇ ಶುಲ್ಕ ಕಟ್ಟಬೇಕಿಲ್ಲ. ಆದರೆ ಈ ಕುರಿತು ಸರ್ಕಾರದ ಮಟ್ಟದಲ್ಲೇ ಆದೇಶ ಹೊರಡಿಸಿದರೆ ಸೂಕ್ತವಾಗುತ್ತದೆ. ಒತ್ತಾಯಪೂರ್ವಕವಾಗಿ ಶುಲ್ಕ ವಸೂಲಿ ಮಾಡದಂತೆ ಸೂಚಿಸಲಾಗಿದೆ’ ಎಂದರು.

ನಿಯಮ ಉಲ್ಲಂಘಿಸಿ ಟೆಂಡರ್: ನೋಟಿಸ್ ಜಾರಿ

ಜಿಲ್ಲೆಯಲ್ಲಿ ಕುಡಿಯುವ ನೀರಿನ ಕಾಮಗಾರಿಗಳ ಟೆಂಡರ್ ನೀಡುವಲ್ಲಿ ನಿಯಮಾವಳಿ ಉಲ್ಲಂಘನೆಯಾಗಿದೆ. ಕಡಿಮೆ ಮೊತ್ತದ ಟೆಂಡರ್ ಹಾಕಿದ ಗುತ್ತಿಗೆದಾರ ಬಿಟ್ಟು ಹೆಚ್ಚಿನ ಟೆಂಡರ್ ಹಾಕಿದ ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗಿದೆ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸದಸ್ಯ ಸಂಜೀವನ್ ಯಾಕಾಪುರ ಆಗ್ರಹಿಸಿದರು.

ಇದಕ್ಕೆ ಸಿಇಒ, ನೀವು ನೀಡಿದ ಎರಡು ಟೆಂಡರ್ ವಿವರಗಳಲ್ಲಿ ಲೋಪ ಎಸಗಿದ್ದರೆ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT