ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲು ಕ್ಷೇತ್ರದ ಮೇಲಿನ ಹಿಡಿತಕ್ಕೆ ತವಕ

ಸುಳ್ಯ ಎಸ್‌ಸಿ ಮೀಸಲು ವಿಧಾನಸಭಾ ಕ್ಷೇತ್ರ
Last Updated 31 ಮಾರ್ಚ್ 2018, 10:19 IST
ಅಕ್ಷರ ಗಾತ್ರ

ಮಂಗಳೂರು: ಕರಾವಳಿಯ ಮೂರೂ ಜಿಲ್ಲೆಗಳ ಏಕೈಕ ಮೀಸಲು ವಿಧಾನಸಭಾ ಕ್ಷೇತ್ರವಾಗಿರುವ ಸುಳ್ಯ ಸತತ ಐದು ಅವಧಿಯಿಂದ ಬಿಜೆಪಿಯ ವಶದಲ್ಲಿದೆ. ಆರು ದಶಕಗಳಿಂದ ಮೀಸಲು ಕ್ಷೇತ್ರವಾಗಿಯೇ ಉಳಿದಿರುವ ಇಲ್ಲೀಗ ಕಾಂಗ್ರೆಸ್‌ ಪಕ್ಷಕ್ಕೆ ‘ಅಸ್ತಿತ್ವ’ದ ಪ್ರಶ್ನೆ ಎದುರಾಗಿದ್ದರೆ, ಬಿಜೆಪಿಗೆ ಆರನೇ ಬಾರಿ ಗೆದ್ದು ದಾಖಲೆ ಬರೆಯುವ ತವಕ. ಕ್ಷೇತ್ರವನ್ನು ಮೀಸಲಿನಿಂದ ಹೊರತರುವ ಕೂಗಿನ ನಡುವೆಯೇ ನಡೆಯುತ್ತಿರುವ ವಿಧಾನಸಭಾ ಚುನಾವಣೆ ಈ ಕ್ಷೇತ್ರವನ್ನು ಕುತೂಹಲದ ಕಣವನ್ನಾಗಿಸಿದೆ.

ಸುಳ್ಯ ಕ್ಷೇತ್ರ 1952ರಲ್ಲಿ ಮದ್ರಾಸ್‌ ವಿಧಾನಸಭೆಯ ವ್ಯಾಪ್ತಿಯಲ್ಲಿತ್ತು. 1957ರಿಂದ ಕರ್ನಾಟಕ ವಿಧಾನಸಭೆ ವ್ಯಾಪ್ತಿಗೆ ಬಂದಿತ್ತು. 1962ರ ಚುನಾವಣೆಯವರೆಗೂ ಪರಿಶಿಷ್ಟ ಪಂಗಡಗಳ (ಎಸ್‌ಟಿ) ಮೀಸಲು ಕ್ಷೇತ್ರವಾಗಿತ್ತು. 1967ರಿಂದ ಅದು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಯಿತು. ಐದು ದಶಕಗಳಿಂದಲೂ ಎಸ್‌ಸಿ ಮೀಸಲು ಕ್ಷೇತ್ರವಾಗಿಯೇ ಉಳಿದಿದೆ.

ಮದ್ರಾಸ್‌ ವಿಧಾನಸಭೆಗೆ ನಡೆದ ಒಂದು ಚುನಾವಣೆಯೂ ಸೇರಿದಂತೆ ಒಟ್ಟು 14 ಚುನಾವಣೆಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ತಲಾ ಆರು ಬಾರಿ ಸುಳ್ಯ ಕ್ಷೇತ್ರದಲ್ಲಿ ಗೆಲುವು ಕಂಡಿವೆ. 1967ರಲ್ಲಿ ಎ.ರಾಮಚಂದ್ರ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದರೆ, 1978ರ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಕಣಕ್ಕಿಳಿದು ವಿಜಯಪತಾಕೆ ಹಾರಿಸಿದ್ದರು. ಸಮಬಲದ ಗೆಲುವು ಸಾಧಿಸಿರುವ ಈ ಕಣದಲ್ಲಿ ಯಾರೇ ಗೆದ್ದರೂ ದಾಖಲೆ ಬರೆದಂತೆಯೇ.

ಸುಳ್ಯದಲ್ಲಿ ಸತತ ನಾಲ್ಕು ಬಾರಿ ಕಾಂಗ್ರೆಸ್‌ ಗೆಲುವು ಸಾಧಿಸಿತ್ತು. 1983ರಲ್ಲಿ ಬಾಕಿಲ ಹುಕ್ರಪ್ಪ ಗೆಲುವು ಸಾಧಿಸುವ ಮೂಲಕ ಅಲ್ಲಿ ಬಿಜೆಪಿ ಖಾತೆ ತೆರೆದಿತ್ತು. ಮತ್ತೆ ಎರಡು ಬಾರಿ ಕಾಂಗ್ರೆಸ್‌ನ ಕೆ.ಕುಶಲ ಗೆದ್ದು ಬಂದಿದ್ದರು. 1994ರ ಚುನಾವಣೆಯಿಂದ ಎಸ್‌.ಅಂಗಾರ ಸತತವಾಗಿ ಐದು ಬಾರಿ ಗೆದ್ದಿದ್ದಾರೆ. 2013ರ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧೂಳೀಪಟವಾಗಿದ್ದ ಬಿಜೆಪಿಯ ಮಾನ ಉಳಿಸಿದ ಏಕೈಕ ಅಭ್ಯರ್ಥಿ ಅವರು.

ಈ ಬಾರಿಯೂ ಅಂಗಾರ ಅವರೇ ಸುಳ್ಯ ಕ್ಷೇತ್ರದಲ್ಲಿ ಬಿಜೆಪಿ ಹುರಿಯಾಳು ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ನಿಕ್ಕಿಯಾಗಿರುವ ಏಕೈಕ ಕ್ಷೇತ್ರವಿದು ಎಂಬುದು ಮತ್ತೊಂದು ವಿಶೇಷ. ಜಿಲ್ಲೆಯ ಇತರೆ ಕ್ಷೇತ್ರಗಳಿಗೆ ಹೋಲಿಸಿದರೆ ಇಲ್ಲಿ ಬಿಜೆಪಿ ತುಸು ಹೆಚ್ಚೇ ತಾಲೀಮು ನಡೆಸಿಕೊಂಡಿದೆ.

ಅಂತರದ ಹಾವು– ಏಣಿ ಆಟ: 1989ರ ಚುನಾವಣೆಯಲ್ಲಿ ಮೊದಲ ಚುನಾವಣೆ ಎದುರಿಸಿದ್ದ ಅಂಗಾರ ಕಾಂಗ್ರೆಸ್‌ನ ಕೆ.ಕುಶಲ ಎದುರು 10,840 ಮತಗಳ ಅಂತರದಲ್ಲಿ ಸೋತಿದ್ದರು. 1994ರ ಚುನಾವಣೆಯಲ್ಲಿ ಕುಶಲ ಅವರನ್ನು 15,044 ಮತಗಳ ಅಂತರದಿಂದ ಸೋಲಿಸಿ ವಿಧಾನಸಭೆ ಪ್ರವೇಶಿಸಿದ್ದರು. 1999ರ ಚುನಾವಣೆಯಲ್ಲೂ ಕುಶಲ ಅವರನ್ನು 6,007 ಮತಗಳ ಅಂತರದಿಂದ ಮಣಿಸಿದ್ದರು.

2004ರಿಂದ ಡಾ.ಬಿ.ರಘು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದು ಸತತ ಮೂರು ಬಾರಿ ಅಂಗಾರ ಅವರ ಎದುರು ಸೋಲು ಕಂಡಿದ್ದಾರೆ. ಮೊದಲ ಚುನಾವಣೆಯಲ್ಲಿ ರಘು 17,085 ಮತಗಳ ಅಂತರದಿಂದ ಸೋಲು ಕಂಡಿದ್ದರು. 2008ರಲ್ಲಿ ಈ ಅಂತರ 4,322ಕ್ಕೆ ಕುಸಿದಿದ್ದರೆ, 2013ರ ಚುನಾವಣೆಯಲ್ಲಿ ಅದು ಕೇವಲ 1,373.

ಕಳೆದ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ನಂದರಾಜ್‌ ಸಂಕೇಶ, ಮಡಿಕೇರಿ ನಗರಸಭೆಯ ಮಾಜಿ ಅಧ್ಯಕ್ಷ ನಂದಕುಮಾರ್‌ ಮತ್ತು ಮಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಅಪ್ಪಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ಗೆ ಪ್ರಯತ್ನಿಸುತ್ತಿರುವ ಇತರ ಪ್ರಮುಖರು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸೇರಿದಂತೆ ಪ್ರಮುಖ ನಾಯಕರು ರಘು ಬೆಂಬಲಕ್ಕೆ ನಿಂತಿದ್ದು, ಮತ್ತೊಮ್ಮೆ ಅವರನ್ನೇ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ.

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರ ಮೈತ್ರಿ ರಾಜಕಾರಣದ ಭಾಗವಾಗಿ ಈ ಬಾರಿ ಇಲ್ಲಿ ಬಹುಜನ ಸಮಾಜ ಪಕ್ಷವೂ ಕಣಕ್ಕಿಳಿಯುತ್ತಿದೆ. ಬಿಎಸ್‌ಪಿ ಮುಖಂಡರಾದ ರಘು ಧರ್ಮಸೇನ, ಪಕ್ಷದ ಜಿಲ್ಲಾ ಘಟಕದ ಸಂಯೋಜಕ ನಾರಾಯಣ್ ಬೋಧ್, ಚಂದ್ರಶೇಖರ್‌ ಏನೆಕಲ್ಲು ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ದಲಿತ ಸಮುದಾಯದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿ ಬಿಎಸ್‌ಪಿ ಕಡೆ ವಾಲಿದರೆ ಗೆಲುವಿಗೆ ಕುತ್ತಾಗಬಹುದು ಎಂಬ ಸಣ್ಣ ಆತಂಕ ಬಿಜೆಪಿ ಮತ್ತು ಕಾಂಗ್ರೆಸ್‌ ಮುಖಂಡರನ್ನು ಚುನಾವಣಾಪೂರ್ವದಲ್ಲೇ ಆವರಿಸಿಕೊಂಡಿದೆ.

ಸುಳ್ಯ ಕ್ಷೇತ್ರದ ಮೇಲಿನ ಹಿಡಿತವನ್ನು ಭದ್ರಪಡಿಸಿಕೊಳ್ಳಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸೇರಿದಂತೆ ಹಲವು ಪ್ರಭಾವಿ ಮುಖಂಡರು ಅಲ್ಲಿಗೆ ಬಂದು ಹೋಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಿಜೆಪಿಯ ಹಲವು ಕಾರ್ಯಕ್ರಮಗಳಿಗೆ ಜಿಲ್ಲೆಯಲ್ಲೇ ಅತ್ಯಧಿಕ ಬೆಂಬಲವೂ ವ್ಯಕ್ತವಾಗಿದೆ. ಅದಕ್ಕೆ ಸವಾಲೊಡ್ಡುವ ರೀತಿಯಲ್ಲೇ ಕಾಂಗ್ರೆಸ್‌ ಕೂಡ ತಯಾರಿ ನಡೆಸಿಕೊಂಡಿದೆ. ಎರಡೂ ಪಕ್ಷಗಳ ನಡುವಿನ ಬಲಾಬಲದ ಅಂತರ ತೆಳುವಾದ ಗೆರೆಯಂತಿದ್ದು, ಕೊನೆ ಕ್ಷಣದಲ್ಲಿ ಅದನ್ನು ಬಲ‍ಪಡಿಸುವ ಕಸರತ್ತಿನಲ್ಲಿ ಇಬ್ಬರೂ ಮುಳುಗಿದ್ದಾರೆ.

**

ಗೌಡರದೇ ಪ್ರಾಬಲ್ಯ

ಸುಳ್ಯ ಎಸ್‌ಸಿ ಮೀಸಲು ವಿಧಾನಸಭಾ ಕ್ಷೇತ್ರವಾದರೂ ಇಲ್ಲಿ ಅರೆಭಾಷೆ ಗೌಡ ಜಾತಿಯ ಮತದಾರರೇ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಎರಡನೇ ಸ್ಥಾನದಲ್ಲಿದ್ದಾರೆ. ನಂತರದಲ್ಲಿ ಮುಸ್ಲಿಮರು, ಬಂಟರು, ಬ್ರಾಹ್ಮಣರು, ಕ್ರೈಸ್ತರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT