ಬುಧವಾರ, ಮಾರ್ಚ್ 3, 2021
18 °C
ಪಠ್ಯ ಚಟುವಟಿಕೆಗಳ ಜತೆಯಲ್ಲೇ ಶಿಬಿರಗಳ ಆಯೋಜನೆ; ಉಚಿತವಾಗಿ ತರಬೇತಿ

ಜ್ಞಾನಕ್ಕಾಗಿ ಕನ್ನಡ; ಆರೋಗ್ಯಕ್ಕಾಗಿ ಯೋಗ..!

ಬಾಬುಗೌಡ ರೋಡಗಿ Updated:

ಅಕ್ಷರ ಗಾತ್ರ : | |

Deccan Herald

ವಿಜಯಪುರ: ವೃತ್ತಿಯಲ್ಲಿ ಕನ್ನಡ ಶಿಕ್ಷಕ. ಆರೋಗ್ಯಕರ ಸಮಾಜ ನಿರ್ಮಾಣದ ಧ್ಯೇಯೋದ್ದೇಶ ಹೊಂದಿರುವ ಆರ್‌.ಎಂ.ಚವ್ಹಾಣ, ಇದರ ಸಾಕಾರಕ್ಕಾಗಿ ಜನ ಸಾಮಾನ್ಯರಿಗೆ ಉಚಿತವಾಗಿ ಯೋಗಾಸನ ಹೇಳಿಕೊಡುತ್ತಿದ್ದಾರೆ. ಇದರಿಂದ ಇವರೀಗ ‘ಯೋಗ ಗುರು’ ಎಂದೇ ಜನಪ್ರಿಯರಾಗಿದ್ದಾರೆ.

ಬಸವನಬಾಗೇವಾಡಿ ತಾಲ್ಲೂಕು ಶರಣ ಸೋಮನಾಳ ಗ್ರಾಮದ ಎಸ್.ಎಸ್.ಬಿ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಆರ್.ಎಂ.ಚವ್ಹಾಣ ಗುರುಗಳೆಂದರೇ ಮಕ್ಕಳಿಗೆ ಅಚ್ಚುಮೆಚ್ಚು. ‘ಜ್ಞಾನಕ್ಕಾಗಿ ಕನ್ನಡ, ಆರೋಗ್ಯಕ್ಕಾಗಿ ಯೋಗ’ ಇದು ಚವ್ಹಾಣ ಗುರುಗಳ ಬದುಕಿನ ನೀತಿ ಸೂತ್ರ.

ಬಾಲ್ಯದಿಂದಲೂ ನಿತ್ಯ ವಾಯುವಿಹಾರ ಇವರ ಬದುಕಿನ ಪರಿಪಾಠ. ಅಲರ್ಜಿಯಿಂದ ಬಳಲುತ್ತಿದ್ದ ಇವರು, ನಿವಾರಣೆಗಾಗಿ ಯೋಗದ ಮೊರೆ ಹೊಕ್ಕರು. ನಾಲ್ಕು ವರ್ಷಗಳ ಹಿಂದೆ ಯೋಗ ತರಬೇತಿ ಪಡೆದುಕೊಂಡರು. ಕಪಾಲ್‌ ಬಾತಿ ಆಸನ ಅಭ್ಯಾಸದಿಂದ ಅಲರ್ಜಿಯಿಂದ ಮುಕ್ತರಾಗುತ್ತಿದ್ದಂತೆ, ಬೋಧನೆ ಜತೆ ಯೋಗವನ್ನು ತಮ್ಮ ಸೇವಾ ಕ್ಷೇತ್ರವನ್ನಾಗಿಸಿಕೊಂಡರು.

ಯೋಗದಲ್ಲಿ ಆಸಕ್ತಿ ಹೆಚ್ಚಿಸಿಕೊಂಡು ನಿಪುಣರಾದರು. ನಂತರ ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಬೇಕು ಎಂಬ ಕಲ್ಪನೆಯಿಂದ ಗ್ರಾಮೀಣ ಪ್ರದೇಶವಾದ ಹೂವಿನ ಹಿಪ್ಪರಗಿಯಲ್ಲಿ ನಿತ್ಯವೂ ಯೋಗ ತರಬೇತಿ ನೀಡುತ್ತಿದ್ದಾರೆ. ಹಲವರು ಇದರಲ್ಲಿ ಭಾಗಿಯಾಗಿ ಪ್ರಯೋಜನ ಪಡೆದಿದ್ದಾರೆ.

‘ಹೂವಿನ ಹಿಪ್ಪರಗಿಯಲ್ಲಿ ನಿತ್ಯವೂ ಯೋಗಾಸನ ಕಲಿಸುವ ಚವ್ಹಾಣ ಸರ್‌, ಸುತ್ತಮುತ್ತಲಿನ ಹಳ್ಳಿಗಳ ಜನರು ಆಸಕ್ತಿಯಿಂದ ಯೋಗ ಕಲಿಸುವಂತೆ ಆಹ್ವಾನ ನೀಡಿದರೆ, ಸ್ವಂತ ಖರ್ಚಿನಲ್ಲಿ ಹೋಗಿ ತರಬೇತಿ ಕೊಟ್ಟು ಬರುತ್ತಾರೆ. ಹುಣಶ್ಯಾಳ, ಹಿರೂರ ಗ್ರಾಮಗಳಲ್ಲಿ ತಲಾ 15 ದಿನದ ಶಿಬಿರ ನಡೆಸಿದ್ದಾರೆ. ತಮ್ಮ ಶಾಲಾ ಅವಧಿ ಹೊರತುಪಡಿಸಿ, ಇತರೆ ಶಾಲೆಗಳಿಗೆ ತೆರಳಿ, ಮಕ್ಕಳಿಗೆ ವಿವಿಧ ವಿಷಯಗಳ ಕುರಿತು ಬೋಧನೆಯನ್ನೂ ಮಾಡುವುದು ವಿಶೇಷ’ ಎಂದು ಹುಣಶ್ಯಾಳ ಖಾಸಗಿ ಪ್ರೌಢಶಾಲೆಯ ಶಿಕ್ಷಕ ಪಿ.ಎಸ್.ಅರಳಿಚಂಡಿ ತಿಳಿಸಿದರು.

‘ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಒಂದಿಷ್ಟು ಕಾಣಿಕೆ ನೀಡಬೇಕೆಂಬ ಉದ್ದೇಶದಿಂದ ನಿತ್ಯ ಕೆಲ ಸಮಯ ಸಾರ್ವಜನಿಕರಿಗೆ ಸಿದ್ಧ ಸಮಾದಿ ಯೋಗ ಮತ್ತು ಪತಂಜಲಿ ಯೋಗ ತರಬೇತಿ ನೀಡುತ್ತಿದ್ದೇನೆ. ಇದರಿಂದ ನನ್ನ ಆರೋಗ್ಯವೂ ವೃದ್ಧಿಗೊಳ್ಳುವ ಜತೆಗೆ ಇತರರಿಗೆ ಆರೋಗ್ಯಕರ ಜೀವನ ಕಲ್ಪಿಸುತ್ತಿರುವ ಖುಷಿಯಿದೆ. ಲಾಭದ ಉದ್ದೇಶ ತಮದ್ದಲ್ಲ’ ಎನ್ನುತ್ತಾರೆ ಶಿಕ್ಷಕ ಆರ್.ಎಂ.ಚವ್ಹಾಣ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು