ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಗರು ಸ್ವಾಭಿಮಾನಿ, ಅಹಂಕಾರಿಯಲ್ಲ: ದತ್ತಾತ್ರೇಯ ಹೊಸಬಾಳೆ ಅಭಿಮತ

ಆರ್‌ಎಸ್‌ಎಸ್‌ನ ಸಹ ಸರಕಾರ್ಯವಾಹ
Last Updated 12 ಮಾರ್ಚ್ 2021, 21:52 IST
ಅಕ್ಷರ ಗಾತ್ರ

ಬೆಂಗಳೂರು: ‘ಗೋಪಾಲಕೃಷ್ಣ ಅಡಿಗರು ಸ್ವಾಭಿಮಾನದಿಂದ ಬದುಕಿದವರು. ಅವರಲ್ಲಿ ಅಹಂ ಭಾವ ಕಿಂಚಿತ್ತೂ ಇರಲಿಲ್ಲ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿಯು ಜೈನ್‌ ವಿಶ್ವವಿದ್ಯಾಲಯ ಹಾಗೂ ಗೋಪಾಲಕೃಷ್ಣ ಅಡಿಗ ಶತಮಾನ ಪ್ರತಿಷ್ಠಾನದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಎಂ.ಗೋಪಾಲಕೃಷ್ಣ ಅಡಿಗರ ವ್ಯಕ್ತಿತ್ವ ಮತ್ತು ಸಾಹಿತ್ಯ’ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಅಡಿಗರು ಭಾರತದ ಪ್ರಮುಖ ಕವಿಗಳಲ್ಲಿ ಅಗ್ರರೆನಿಸಿಕೊಂಡಿದ್ದರು. ಅವರು ಕನ್ನಡದ ಕಾವ್ಯ ಲೋಕಕ್ಕೆ ಹೊಸ ಮೆರುಗು ನೀಡಿದವರು. ಆಗಿನ ಕಾಲದ ಯುವ ಸಾಹಿತಿಗಳಿಗೆ ಪ್ರೇರಕ ಶಕ್ತಿಯೂ ಆಗಿದ್ದರು’ ಎಂದರು.

‘ಕನ್ನಡಕ್ಕಾಗಿ ಅವರ ಮನಸ್ಸು ಸದಾ ತುಡಿಯುತ್ತಿತ್ತು. ಯಾವುದೇ ಕಾರ್ಯಕ್ರಮಕ್ಕೆ ಕರೆದರೂ ಹೋಗುತ್ತಿದ್ದರು. ಅನೇಕ ಸಲ ಅವರನ್ನು ನಾವು ಸೈಕಲ್‌ನಲ್ಲಿ ಕರೆದುಕೊಂಡು ಹೋಗಿದ್ದೆವು. ಸಮಾಜವಾದಿ ವಿಚಾರಗಳಲ್ಲಿ ನಂಬಿಕೆ ಇಟ್ಟಿದ್ದ ಅಡಿಗರು ವೈಚಾರಿಕ ಸಂಘರ್ಷ ಮತ್ತು ದ್ವಂದ್ವಗಳನ್ನು ಎದುರಿಸಿದ್ದರು. ನಂಬಿದ ಆದರ್ಶ ಮತ್ತು ಸಿದ್ಧಾಂತಕ್ಕಾಗಿ ಪ್ರಾಂಶುಪಾಲ ಹುದ್ದೆಯನ್ನೂ ತ್ಯಜಿಸಿದ್ದರು’ ಎಂದು ತಿಳಿಸಿದರು.

‘ನೆಹರೂ ವಿಚಾರಧಾರೆಗಳನ್ನು ಅವರು ಒಪ್ಪುತ್ತಿರಲಿಲ್ಲ. ಲಂಕೇಶ್‌ ಹಾಗೂ ಅಡಿಗರ ನಡುವೆ ಯಾವುದೋ ವಿಚಾರಕ್ಕೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಹೀಗಾಗಿ 27 ವರ್ಷ ಒಬ್ಬರ ಮುಖ ಮತ್ತೊಬ್ಬರು ನೋಡಿರಲಿಲ್ಲ’ ಎಂದರು.

ನೃಪತುಂಗ ವಿಶ್ವವಿದ್ಯಾಲಯದ ಕುಲಪತಿ ಶ್ರೀನಿವಾಸ ಬಳ್ಳಿ ಮಾತನಾಡಿ, ‘ಅಡಿಗರು ತಮ್ಮ ಪಾಂಡಿತ್ಯದ ಮೂಲಕ ವಿರೋಧಿಗಳ ಮನಸ್ಸನ್ನೂ ಗೆದ್ದಿದ್ದರು. ಬಡ ಮಕ್ಕಳ ಮೇಲೆ ಅವರಿಗೆ ವಿಶೇಷ ಅಕ್ಕರೆ ಇತ್ತು. ಆ ಮಕ್ಕಳ ಶಾಲಾ ಶುಲ್ಕವನ್ನೂ ಭರಿಸುತ್ತಿದ್ದರು’ ಎಂದು ತಿಳಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ್, ‘ಊರುಗೋಲು ಬಯಸದೇ ಬದುಕಿದವರು ಅಡಿಗರು. ಅಹಂ ಅವರ ಹತ್ತಿರವೂ ಸುಳಿಯಲಿಲ್ಲ’ ಎಂದು ಹೇಳಿದರು.

ಅಕಾಡೆಮಿಯ ರಿಜಿಸ್ಟ್ರಾರ್‌ ಎನ್‌.ಕರಿಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT