ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿ ಎಲ್ಲವೂ ‘ಕಾರ್ಗಿಲ್‌’ಮಯ..

ಮುದ್ದೇಬಿಹಾಳ ತಾಲ್ಲೂಕು ಬಳವಾಡ ಗ್ರಾಮದ ಯೋಧ ಹುತಾತ್ಮ
Last Updated 25 ಜುಲೈ 2019, 19:30 IST
ಅಕ್ಷರ ಗಾತ್ರ

ಮದುವೆಗೆ ಹೆದರಿ ಮನೆಒಳಗೆ ಬಂದಿರಲಿಲ್ಲ!
‘ನಮ್ಮ ಅಣ್ಣ ದಾವಲಸಾನ ಮದುವೆ ಮಾಡುವ ಬಗ್ಗೆ ಚರ್ಚೆ ನಡೆದಿತ್ತು. ಒಂದೆರಡು ಕಡೆ ಹುಡುಗಿ ನೊೋಡುವ ಶಾಸ್ತ್ರವೂ ಮುಗಿದಿತ್ತು. ಅದೊಂದು ದಿನ ಹುಡುಗಿಯ ತಂದೆ ನಮ್ಮ ಮನೆಗೆ ಬಂದಿದ್ದರು. ನಮ್ಮ ಅಣ್ಣ ರಜೆಗೆಂದು ಊರಿಗೆ ಬಂದಿದ್ದ. ಸ್ನೇಹಿತರ ಜತೆ ಹೊರಗೆ ಹೋಗಿದ್ದ. ವಾಪಸು ಮನೆಗೆ ಬಂದಾಗ ಬಾಗಿಲು ಬಳಿಯ ಚಪ್ಪಲಿ ನೋಡಿ ಯಾರು ಬಂದಿದ್ದಾರೆ ಎಂದು ಹೊರಗಿನಿಂದಲೇ ಕೇಳಿದ. ಹೀಗೆ ಎಂದು ಹೇಳಿದಾಗ ಅವರು ಹೋಗುವವರೆಗೆ ಮನೆ ಒಳಗೇ ಬಂದಿರಲಿಲ್ಲ’ ಎಂದು ದಾವಲಸಾ ಅವರ ಸಹೋದರ ನಬೀಸಾ ಹೇಳಿದರು.

ಸುಂದರ ಪುತ್ಥಳಿ ನಿರ್ಮಾಣ
ಮುದ್ದೇಬಿಹಾಳ ಪಟ್ಟಣದ ಹಳೆ ನ್ಯಾಯಾಲಯದ ಬಳಿ ಮೃತ ದಾವಲಸಾ ಕಂಬಾರ ಅವರ ಪುತ್ಥಳಿಯನ್ನು ನಿರ್ಮಿಸಲಾಗಿದೆ. ₹2 ಲಕ್ಷ ವೆಚ್ಚದಲ್ಲಿ ಪುತ್ಥಳಿಯನ್ನು ತಯಾರಿಸಲಾಗಿದೆ. ಪಟ್ಟಣದ ಅನೇಕರು ಪುತ್ಥಳಿ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ. ಸುಂದರ ಮಂಟಪ ನಿರ್ಮಿಸಲಾಗಿದ್ದು, ಮೇಲ್ಚಾವಣಿ ಅಳವಡಿಕೆ ಕಾಮಗಾರಿ ಬಾಕಿ ಉಳಿದುಕೊಂಡಿದೆ.

ದಾವಲಸಾ ಎರಡನೇಯವರು..

ಕಾರ್ಗಿಲ್ ಯುದ್ಧದಲ್ಲಿ ರಾಜ್ಯದ 18 ಯೋಧರು ಮೃತಪಟ್ಟಿದ್ದು, ಅವರಲ್ಲಿ ದಾವಲಸಾ ಎರಡನೇಯವರಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಚೊಳಚಗುಡ್ಡದ ಯೋಧರೊಬ್ಬರು ಮೃತಪಟ್ಟಿದ್ದಾರೆ. ಕಾರ್ಗಿಲ್ ಯೋಧರ ನೆನಪಿಗಾಗಿ ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಸಮೀಪ ‘ಕಾರ್ಗಿಲ್ ಸ್ತೂಪ’ವನ್ನು ನಿರ್ಮಿಸಲಾಗಿದ್ದು, ಪ್ರತಿ ವರ್ಷ ಜುಲೈ 26ರಂದು ಅಲ್ಲಿ ವಿಜಯೋತ್ಸವ ಆಚರಿಸಲಾಗುತ್ತಿದೆ. ದಾವಲಸಾ ಕುಟುಂಬದ ಸದಸ್ಯರೂ ಆ ವಿಜಯೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.

‘ಕಾರ್ಗಿಲ್’ ಆಟೊಮೊಬೈಲ್ಸ್..
ದಾವಲಸಾ ಮೃತಪಟ್ಟ ಬಳಿಕ ಅವರ ಎರಡನೇ ಸಹೋದರ ಲಾಡ್‌ಸಾ ಅವರು ‘ಕಾರ್ಗಿಲ್’ ಆಟೊಮೊಬೈಲ್ಸ್‌ ಆರಂಭಿಸಿದ್ದಾರೆ. ಮೂರನೇ ಸಹೋದರ ನಬೀಸಾ ವೃತ್ತಿಯಲ್ಲಿ ಮೆಕ್ಯಾನಿಕ್. ಇವರಿಬ್ಬರೂ ಸೇರಿಕೊಂಡು ಆಟೊಮೊಬೈಲ್ಸ್‌ ಉದ್ದಿಮೆಯನ್ನು ಮುನ್ನಡೆಸುತ್ತಿದ್ದಾರೆ. ಎಂಟು ಕಾರ್ಮಿಕರಿಗೆ ಕೆಲಸ ಕೊಟ್ಟಿದ್ದು, ಅವರೆಲ್ಲರಿಗೂ ನೀಲಿ ಬಣ್ಣದ ಟೀಶರ್ಟ್‌ಗಳನ್ನು ಕೊಡಲಾಗಿದೆ. ಅದರ ಮೇಲೆ ‘ಕಾರ್ಗಿಲ್’ ಎಂದು ಬರೆಯಲಾಗಿದೆ.

‘ನಮ್ಮ ಕುಟುಂಬದಲ್ಲಿ ಏನೇ ಮಾಡಿದರೂ ಅದು ‘ಕಾರ್ಗಿಲ್’ ಹೆಸರಿನಲ್ಲೇ ಇರಬೇಕು’ ಎಂದು ನಬೀಸಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

‘ಅಣ್ಣನ ನೆನಪು ಅಜರಾಮರ’
‘ಅಣ್ಣ ದೇಶಕ್ಕಾಗಿ ಪ್ರಾಣ ತೆತ್ತಿದ್ದಾನೆ. ಆತ ಇಲ್ಲ ಎಂಬುದನ್ನು ನೆನಪಿಸಿಕೊಂಡರೆ ಇವತ್ತಿಗೂ ಕರುಳು ಕಿತ್ತು ಬಂದಂತಾಗುತ್ತದೆ. ಆದರೆ, ದೇಶಕ್ಕಾಗಿ ಆತ ಪ್ರಾಣ ಸಮರ್ಪಿಸಿದ್ದಾನೆ ಎಂಬ ಹೆಮ್ಮೆ ನಮಗಿದೆ. ಹೀಗಾಗಿ ಅಣ್ಣನ ನೆನಪು ಅಜರಾಮರ’ ಎಂದು ಹೇಳುತ್ತಲೇ ಮೃತಯೋಧ ದಾವಲಸಾ ಅವರ ಸಹೋದರ ನಬೀಸಾ ಗದ್ಗದಿತರಾದರು.

ಕೆಲಹೊತ್ತು ಮೌನಕ್ಕೆ ಜಾರಿದರು. ಮನೆಯ ಪಡಸಾಲೆಯಲ್ಲಿ ಆಳೆತ್ತರವಿರುವ ಸಹೋದರನ ಭಾವಚಿತ್ರವನ್ನು ನೋಡಿ ಭಾವುಕರಾದರು. ಕಣ್ಣಲ್ಲಿ ನೀರು ಜಾರಿತು..

ಮರು ಕ್ಷಣವೇ ಮತ್ತೆ ಮಾತು ಮುಂದುವರಿಸಿ, ‘ಏನೋ ಗೊತ್ತಿಲ್ಲ. ಅಣ್ಣ ಮೃತಪಟ್ಟು 20 ವರ್ಷಗಳಾದರೂ ಆತನ ನೆನಪು ಬಂದಾಗಲೆಲ್ಲ ಕಣ್ಣಲ್ಲಿ ನೀರು ಬರುತ್ತದೆ’ ಎಂದು ಕಣ್ಣೀರು ಒರೆಸಿಕೊಂಡರು.

‘ಅಣ್ಣ ನಮ್ಮನ್ನು ತುಂಬ ಪ್ರೀತಿಸುತ್ತಿದ್ದ. ಊರಿಗೆ ಬಂದಾಗ ಕೇಳಿದ್ದೆಲ್ಲವನ್ನೂ ಕೊಡಿಸುತ್ತಿದ್ದ. ಹಣ ಕೊಡುತ್ತಿದ್ದ. ಆತನ ನೆನಪಿನಲ್ಲಿ ಸ್ಥಳೀಯ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ ಆಯೋಜಿಸಿ, ಬಹುಮಾನಗಳನ್ನು ಕೊಡುತ್ತಿದ್ದೇವೆ. ಸೇನೆ ಸೇರಬೇಕು ಎಂದು ನನಗೂ ಆಸೆ ಇತ್ತು. ಆದರೆ, ಹಿರಿಯಣ್ಣ ಮೃತಪಟ್ಟ ಕಾರಣ ತಂದೆ–ತಾಯಿ ಒಪ್ಪಲಿಲ್ಲ. ಅಣ್ಣನ ನಿಧನದ 5 ವರ್ಷಗಳ ಬಳಿಕ ತಂದೆ ಹೃದಯಾಘಾತದಿಂದ ಮೃತಪಟ್ಟರು. ಆ ಬಳಿಕ ತಾಯಿ ಅನಾರೋಗ್ಯದಿಂದ ಕೊನೆಯುಸಿರೆಳೆದರು’ ಎಂದು 20 ವರ್ಷಗಳ ಕಥೆಯನ್ನು ದುಃಖದಿಂದಲೇ ಬಿಚ್ಚಿಟ್ಟರು.

‘ಕಾರ್ಗಿಲ್‌’ ಯುದ್ಧದ ಬಳಿಕ ಜನರಿಗೆ ಯೋಧರ ಬಗ್ಗೆ ಗೌರವ ಹೆಚ್ಚಾಯಿತು, ಸರ್ಕಾರವೂ ಸಾಕಷ್ಟು ಸವಲತ್ತುಗಳನ್ನು ನೀಡಲು ಆರಂಭಿಸಿತು. ನಮ್ಮ ಅಣ್ಣ ಸೇನೆಗೆ ಸೇರಿದ್ದನ್ನೇ ಸ್ಫೂರ್ತಿಯಾಗಿ ಇಟ್ಟುಕೊಂಡು ಅನೇಕರು ಸೇನೆಗೆ ಸೇರಿದ್ದಾರೆ. ಈಗ ನೌಕರಿಗಿಂತ ದೇಶಪ್ರೇಮ, ದೇಶದ ರಕ್ಷಣೆ ಎಂಬ ಹೆಮ್ಮೆ ಮೂಡಿದೆ’ ಎಂದರು.

ಇದಾದ ಬಳಿಕ ದಾವಲಸಾ ಅನೇಕ ಬಾರಿ ರಜೆಗೆ ಬಂದು ಹೋಗಿದ್ದರು. ಮನೆಗೆ ಪತ್ರ ಬರೆಯುತ್ತಿದ್ದರು. ಅಪ್ಪ–ಅಮ್ಮ, ಸಹೋದರರ ನೆನಪು ಉಕ್ಕಿ ಬಂದಾಗ, ಒಂದು ನಿಮಿಷವಾದರೂ ಅವರೊಂದಿಗೆ ಮಾತನಾಡಬೇಕು ಎಂದೆನೆಸಿದಾಗ ಲ್ಯಾಂಡ್‌ಲೈನ್ ಹೊಂದಿರುವ ಪಕ್ಕದ ಮನೆಯವರಿಗೆ ದೂರವಾಣಿ ಕರೆ ಮಾಡಿ, ತಂದೆ–ತಾಯಿಯನ್ನು ಕರೆಯುವಂತೆ ಹೇಳುತ್ತಿದ್ದ. ಮತ್ತೆ ಹತ್ತು ನಿಮಿಷ ಬಿಟ್ಟು ಕರೆ ಮಾಡಿ ಅವರೊಂದಿಗೆ ಮಾತನಾಡುತ್ತಿದ್ದ.

ದಿನಗಳು ಹೀಗೆಯೇ ಉರುಳಿದವು. ಮನೆಯಲ್ಲಿ ದಾವಲಸಾ ಮದುವೆ ತಯಾರಿಯ ಚರ್ಚೆ ಆರಂಭವಾಯಿತು. ಒಂದೆರಡು ಕಡೆ ಹುಡುಗಿಯರನ್ನು ನೋಡಿ ಬಂದಿದ್ದ ಪಾಲಕರು, ಮಗನಿಗೂ ಈ ವಿಷಯ ತಿಳಿಸಿದ್ದರು. ದಾವಲಸಾ ಏನೇನೋ ನೆಪ ಹೇಳಿ ಮುಂದೂಡಿಕೊಂಡು ಬಂದಿದ್ದರು.

ಹೀಗೆ ಜೀವನ ನಡೆಯುತ್ತಿರುವಾಗ ಅದೊಂದು ದಿನ ಬರಸಿಡಿಲಿನಂತಹ ಸುದ್ದಿಯೊಂದು ಬಂದೆರಗಿತು. ಮನೆಗೆ ಬಂದ ಪೊಲೀಸರು, ಕಾರ್ಗಿಲ್ ಯುದ್ಧದಲ್ಲಿ ತಮ್ಮ ಮಗನ ಕಾಲಿಗೆ ಗಾಯವಾಗಿದೆ ಎಂದು ಹೇಳಿದರು. ಆಗ ಕುಟುಂಬದ ಸದಸ್ಯರ ರೋದನ ಮುಗಿಲು ಮುಟ್ಟಿತು. ಕಾಲಿಗೆ ಗಾಯ ಎಂದು ಹೇಳಿದ ನಂತರ ಊರಿಗೆ ಅಧಿಕಾರಿಗಳು, ಶಾಸಕರು, ಗಣ್ಯರು ಭೇಟಿ ನೀಡಲು ಆರಂಭಿಸಿದರು. ಹೀಗೆ ಹೇಳಿದ ಮೂರನೇ ದಿನಕ್ಕೆ ಸೇನೆಯ ವಾಹನಗಳು ಪಟ್ಟಣಕ್ಕೆ ಬಂದವು. ವಾಹನದಿಂದ ಪೆಟ್ಟಿಗೆಯೊಂದನ್ನು ಕೆಳಗಿಳಿಸಿದರು. ಅದರಲ್ಲಿ ದಾವಲಸಾ ಹೆಣವಾಗಿ ಮಲಗಿದ್ದರು. ಇದನ್ನು ನೋಡಿದ ಪಾಲಕರು, ಸಹೋದರರ ದುಃಖದ ಕಟ್ಟೆ ಒಡೆಯಿತು. ಎಲ್ಲರೂ ಎದೆ ಬಡಿದುಕೊಂಡು ಅಳಲಾರಂಭಿಸಿದರು. ಸರ್ಕಾರಿ ಗೌರವಗಳೊಂದಿಗೆ ಮೆರವಣಿಗೆ ಬಳಿಕ ಮಗನ ಅಂತ್ಯಕ್ರಿಯೆ ನೆರವೇರಿತು. ಆ ಕುಟಂಬದ ಮೊದಲ ಜೀವ ದೇಶಕ್ಕಾಗಿ ಪ್ರಾಣ ಸಮರ್ಪಿಸಿ, ಮಣ್ಣಲ್ಲಿ ಲೀನವಾಗಿತ್ತು.

ಇದಾದ ಬಳಿಕ ಮುಂದಿನದ್ದೆಲ್ಲವೂ ಬರೀ ನೋವು. ಮೊದಲ ಮಗ ಹುತಾತ್ಮನಾದ ಬೆನ್ನಲ್ಲೇ ಕುಟುಂಬದಲ್ಲಿ ದುಃಖ ಮಡುಗಟ್ಟಿತು. ಕೇಂದ್ರ ಮತ್ತು ರಾಜ್ಯ ಸರ್ಕಾರ, ವಿವಿಧ ಸಂಘ ಸಂಸ್ಥೆಗಳು ಸಾಕಷ್ಟು ಧನಸಹಾಯ ನೀಡಿದವು. ಹೀಗೆ ಬಂದ ಅನುದಾನದಲ್ಲಿ ‘ಕಾರ್ಗಿಲ್’ ನಿವಾಸವನ್ನು ಕಟ್ಟಿಸಿದರು. ಬೈಕ್, ಕಾರಿಗೆ ‘ಕಾರ್ಗಿಲ್’ ನಾಮಕರಣ ಮಾಡಿದರು. ‘ಕಾರ್ಗಿಲ್’ ಆಟೊಮೊಬೈಲ್ಸ್‌ ಆರಂಭಿಸಿ, ಎಂಟು ಜನರಿಗೆ ಕೆಲಸವನ್ನು ಕೊಟ್ಟರು. ದಾವಲಸಾ ಅವರ ತಂದೆ–ತಾಯಿ ಈಗ ಇಲ್ಲ. ಊರಿನ ಯಾವುದೇ ಮೂಲೆಯಲ್ಲಿ ನಿಂತು ‘ಕಾರ್ಗಿಲ್’ ಎಂದರೆ ಸಾಕು, ಅಕ್ಕಪಕ್ಕದ ಜನರು ದಾವಲಸಾ ಅವರ ಮನೆ ಅಥವಾ ಅಂಗಡಿಗೆ ಕರೆದುಕೊಂಡು ಹೋಗಿ ಬಿಡುತ್ತಾರೆ. ಇದು ‘ಕಾರ್ಗಿಲ್‌’ ಮಯ ಕಥನ..

******

ಮುದ್ದೇಬಿಹಾಳ (ವಿಜಯಪುರ ಜಿಲ್ಲೆ): ಆ ಮನೆಯ ಹೆಸರು ‘ಕಾರ್ಗಿಲ್’ ನಿವಾಸ. ಬೈಕ್, ಕಾರುಗಳಿಗೆ ‘ಕಾರ್ಗಿಲ್’ ನಾಮಕರಣ. ಆಟೊಮೊಬೈಲ್ ಅಂಗಡಿ ಹೆಸರು ‘ಕಾರ್ಗಿಲ್’ ಆಟೊಮೊಬೈಲ್ಸ್.. ಕಾರ್ಮಿಕರಿಗೆ ಕೊಟ್ಟಿರುವ ಟೀಶರ್ಟ್‌ಗಳ ಮೇಲೂ ‘ಕಾರ್ಗಿಲ್’ ಹೆಸರು.. ಇಲ್ಲಿ ಎಲ್ಲವೂ ‘ಕಾರ್ಗಿಲ್‌’ ಮಯ..

–ಇವು ಮುದ್ದೇಬಿಹಾಳ ಪಟ್ಟಣದಲ್ಲಿ ಕಂಡು ಬರುವ ದೃಶ್ಯ. ‘ಕಾರ್ಗಿಲ್’ ಯುದ್ಧದಲ್ಲಿ ಗುಂಡೇಟು ತಿಂದು, ಜೀವನ್ಮಮರಣ ಹೋರಾಟದ ಮಧ್ಯೆಯೇ ಮೂವರು ಪಾಕಿಸ್ತಾನಿ ಸೈನಿಕರನ್ನು ಬಲಿತೆಗೆದುಕೊಂಡು ಮೃತಪಟ್ಟ ಯೋಧ ದಾವಲಸಾ ಅಲ್ಲಿಸಾ ಕಂಬಾರ ಅವರ ಕುಟುಂಬದ ಸದ್ಯದ ಚಿತ್ರಣ.

ಮುದ್ದೇಬಿಹಾಳ ತಾಲ್ಲೂಕು ಬಳವಾಡ ಗ್ರಾಮದ ಅಲ್ಲಿಸಾ ಕಂಬಾರ ಮತ್ತು ಚಾಂದ್‌ಬಿ ದಂಪತಿಯ ನಾಲ್ವರು ಪುತ್ರರಲ್ಲಿ ದಾವಲಸಾ ಹಿರಿಯವರು. ಲಾಡ್‌ಸಾ, ನಬೀಸಾ ಮತ್ತು ಷಹಜಾನ್‌ ಕಿರಿಯ ಸಹೋದರರು. ಇವರಿಗೆ 6 ಎಕರೆ ಕೃಷಿ ಜಮೀನಿದೆ. ಕಂಬಾರಿಕೆ, ಬಡಿಗತನ ಮೂಲ ಉದ್ಯೋಗ. ಇದರಲ್ಲೇ ತೃಪ್ತಿಪಟ್ಟುಕೊಂಡು ಈ ದಂಪತಿ ಜೀವನ ಸಾಗಿಸುತ್ತಿದ್ದರು. ಹಿರಿಯ ಪುತ್ರ ದಾವಲಸಾ ಎಸ್ಸೆಸ್ಸೆಲ್ಸಿ ಪಾಸಾಗಿ, ವಿಜಯಪುರದ ಅಂಜುಮನ್ ಕಾಲೇಜಿನಲ್ಲಿ ಪ್ರಥಮ ಪಿಯು ಪ್ರವೇಶ ಪಡೆದುಕೊಂಡಿದ್ದರು. ಈ ವೇಳೆ ವಿಜಯಪುರದಲ್ಲಿ ಸೇನಾ ಭರ್ತಿ ರ್‍ಯಾಲಿ ನಡೆಯಿತು. ತಾವೇಕೆ ಒಂದು ಕೈ ನೋಡಬಾರದು ಎಂಬ ಹಂಬಲದೊಂದಿಗೆ ರ್‍ಯಾಲಿಯಲ್ಲಿ ಭಾಗವಹಿಸಿದ್ದ ದಾವಲಸಾ, ಮೊದಲ ಪ್ರಯತ್ನದಲ್ಲೇ ಎಲ್ಲಾ ಪರೀಕ್ಷೆಗಳಲ್ಲಿ ಅರ್ಹತೆ ಪಡೆದರು. ಅಷ್ಟೇ ಅಲ್ಲ, ನೇಮಕಾತಿ ಪತ್ರವನ್ನು ಕೈಯಲ್ಲಿ ಹಿಡಿದುಕೊಂಡು ಮನೆಗೆ ಬಂದು ತಂದೆಯ ಎದುರು ತಮ್ಮ ಮನದಿಂಗಿತವನ್ನು ವ್ಯಕ್ತಪಡಿಸಿದರು.

ತಂದೆ ಒಂದು ಕ್ಷಣ ಗಾಬರಿಯಾದರು. ತಾಯಿಯ ಕಣ್ಣಲ್ಲಿ ನೀರು. ಅದು ಆನಂದಭಾಷ್ಪವೂ ಹೌದು, ಮಗ ಸೇನೆಗೆ ಸೇರಿ ಏನಾದರೂ ಅನಾಹುತವಾದರೆ ಹೇಗೆ ಎಂಬ ಆತಂಕವೂ ಆಗಿತ್ತು. ಏನೇ ಆಗಲಿ ಮಗನ ಆಸೆಗೆ ತಣ್ಣೀರು ಎರಚುವುದು ಬೇಡ ಎಂದು ನಿರ್ಧಿರಿಸಿದ ದಂಪತಿ ಮಗನನ್ನು ಸೇನೆಗೆ ಕಳುಹಿಸಲು ತುಂಬು ಮನಸ್ಸಿನಿಂದ ತೀರ್ಮಾನಿಸಿದರು. ಕೊನೆಗೂ ಆ ಗಳಿಗೆ ಬಂದೇ ಬಿಟ್ಟಿತು. ಮಗನಿಗೆ ಆತ್ಮಸ್ಥೈರ್ಯ ತುಂಬಿ, ಮನದುಂಬಿ ಆಶೀರ್ವದಿಸಿ ಆತನನ್ನು ಸೇನೆಗೆ ಕಳುಹಿಸಿಕೊಟ್ಟರು.

ಈ ಎಲ್ಲವೂ ನಡೆದಿದ್ದು 1991–92ರ ಅವಧಿಯಲ್ಲಿ. ಸೇನೆಗೆ ಸೇರಿದ ಮಗ, ಒಂಬತ್ತು ತಿಂಗಳ ಆರಂಭಿಕ ತರಬೇತಿಯನ್ನು ಪೂರ್ಣಗೊಳಿಸಿ ರಜೆಗೆಂದು ಊರಿಗೆ ಬಂದಾಗ ಕುಟುಂಬದ ಸದಸ್ಯರಲ್ಲಿ ಸಂತಸ ಮನೆ ಮಾಡಿತ್ತು. ಆತ ತಂದೆ–ತಾಯಿ, ಮೂವರು ಸಹೋದರರಿಗೆ ಹಲವು ಉಡುಗೊರೆಗಳು, ಸಿಹಿ ತಿನ್ನಿಸು ತಂದಿದ್ದ. ಅಷ್ಟೇ ಅಲ್ಲ, ಠಾಕು–ಠೀಕಿನಿಂದ ಓಡಾಡುತ್ತಿದ್ದ. ಇದನ್ನು ಗಮನಿಸಿದ ಪಾಲಕರಲ್ಲಿ ಸಂತಸದ ಹೊನಲು ಹರಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT