ಶಿವಮೊಗ್ಗ ಜಿಲ್ಲೆ | ತುಂಗಾ ನದಿ ಪ್ರವಾಹ; 2,150 ಜನ ಅತಂತ್ರ, ಒಬ್ಬರು ನೀರುಪಾಲು

ಶಿವಮೊಗ್ಗ: ತುಂಗಾ ಜಲಾಶಯದಿಂದ 1.15 ಲಕ್ಷ ಕ್ಯುಸೆಕ್ ನದಿಗೆ ಬಿಟ್ಟ ಪರಿಣಾಮ ಶಿವಮೊಗ್ಗ ನಗರದ ಹಲವು ಬಡಾವಣೆಗಳು ಜಲಾವೃತವಾಗಿವೆ.
ಕುಂಬಾರಗುಂಡಿ, ಬಿ.ಬಿ. ರಸ್ತೆ, ಮಂಜುನಾಥ ಟಾಕೀಸ್ ರಸ್ತೆ, ಮಹಾಕವಿ ಕಾಳಿದಾಸ ರಸ್ತೆ, ವಿದ್ಯಾನಗರ, ಚಿಕ್ಕಲ್, ಗುರುಪುರ ಬಡಾವಣೆಗಳು ಜಲಾವೃತವಾಗಿವೆ. ರಾಜಾಕಾಲುವೆ ನೀರು ನುಗ್ಗಿದ ಪರಿಣಾಮ ಟ್ಯಾಂಕ್ ಮೊಹಲ್ಲಾ, ಬಾಪೂಜಿ ನಗರದ ಮನೆಗಳಿಗೆ ನೀರು ನುಗ್ಗಿದೆ. ತುಂಗಾ ನಾಲೆ ನೀರು ನುಗ್ಗಿ ಅಶ್ವತ್ಥ ನಗರ, ಎಲ್‌ಬಿಎಸ್ ನಗರಗಳು ಜಲಾವೃತಗೊಂಡಿವೆ. 7 ಬಡಾವಣೆಗಳ ಜನರನ್ನು ಸ್ಥಳಾಂತರಿಸಲಾಗಿದೆ. ಜಿಲ್ಲೆಯಲ್ಲಿ 14 ನೆರೆ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, 2,150 ಜನರಿಗೆ ಆಶ್ರಯ ನೀಡಲಾಗಿದೆ.
ಅಮರನಾಥ್ ನೀರು ಪಾಲು:
ಕುಂಸಿ–ಚೋರಡಿ ಮಧ್ಯೆ ಇರುವ ಕುಮುದ್ವತಿ ಸೇತುವೆ ಮೇಲೆ ಜೀಪ್ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ನದಿಗೆ ಬಿದ್ದಿದ್ದಾರೆ. ನಾಗರಾಜ್ ಅವರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಪತ್ರಿಕಾ ವಿತರಕ ಅಮರನಾಥ್ (56) ಪತ್ತೆಗೆ ಹುಡುಕಾಟ ನಡೆದಿದೆ. ಇಬ್ಬರೂ ಕುಂಸಿಯಿಂದ ನದಿ ಪ್ರವಾಹ ನೋಡಲು ಬೈಕ್‌ನಲ್ಲಿ ತೆರಳಿದ್ದರು.
ಜರುಗಿದ ಗುಡ್ಡ:
ತೀರ್ಥಹಳ್ಳಿ ಸಮೀಪದ ಸಿಂಗನಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲಗತ್ತಿಯ ಬಳಿ ಒಂದು ಕಿ.ಮೀ.ನಷ್ಟು ಗುಡ್ಡ ಕುಸಿದ ಪರಿಣಾಮ 30 ಎಕರೆ ಪ್ರದೇಶದ ಅಡಿಕೆ, ಭತ್ತದ ಬೆಳೆ ನಾಶವಾಗಿದೆ. ಮಳೆ ಕಾರಣ ರೈತರು ಹೊಲಗದ್ದೆಗಳಿಗೆ ತೆರಳಿರಲಿಲ್ಲ. ಹಾಗಾಗಿ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಸಂಚಾರ ಬಂದ್:
ಭಾರಿ ಪ್ರಮಾಣದ ನೀರು, ಸೇತುವೆ ಕುಸಿತದ ಕಾರಣ ಆಯನೂರು–ಬೆಜ್ಜುವಳ್ಳಿ, ಶಿವಮೊಗ್ಗ–ತೀರ್ಥಹಳ್ಳಿ, ಹಿರೇಬೈಲು–ಕನ್ನಂಗಿ, ಹೊಳೆಹೊನ್ನೂರು–ಚನ್ನಗಿರಿ ರಸ್ತೆ, ಶಿಕಾರಿಪುರ–ಶಿರಾಳಕೊಪ್ಪ ರಸ್ತೆಗಳು ಬಂದ್ ಆಗಿವೆ.
ನೀರಿಗೆ ಹಾಹಾಕಾರ:
ಶಿವಮೊಗ್ಗ ಪಂಪ್ ಹೌಸ್ ಸೇರಿದಂತೆ ಹಲವೆಡೆ ಕುಡಿಯುವ ನೀರಿನ ಪೂರೈಕೆ ಕೇಂದ್ರಗಳಿಗೆ ನೀರು ನುಗ್ಗಿದೆ. ಇದರಿಂದ ಕುಡಿಯುವ ನೀರಿಗೂ ಆಹಾಕಾರ ಸೃಷ್ಟಿಯಾಗಿದೆ. ನೆಲ್ಲಿಕೊಪ್ಪ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.