ಕರ್ನಾಟಕ ಸ್ಪನ್ ಸಿಲ್ಕ್ ಮಿಲ್‌ಗೆ ಅನುದಾನ ನಿರೀಕ್ಷೆ

7
15 ವರ್ಷಗಳಿಂದ ಮುಚ್ಚಿರುವ ಸಂಸ್ಥೆ ಪುನರಾರಂಭಕ್ಕೆ ರಾಜ್ಯ ಬಜೆಟ್‌ನಲ್ಲಿ ನೆರವು ಸಿಗುವುದೇ?

ಕರ್ನಾಟಕ ಸ್ಪನ್ ಸಿಲ್ಕ್ ಮಿಲ್‌ಗೆ ಅನುದಾನ ನಿರೀಕ್ಷೆ

Published:
Updated:
ಚನ್ನಪಟ್ಟಣದಲ್ಲಿ ಹದಿನೈದು ವರ್ಷಗಳಿಂದ ಮುಚ್ಚಿರುವ ಸ್ಪನ್ ಸಿಲ್ಕ್ ಮಿಲ್

ಚನ್ನಪಟ್ಟಣ: ಪಟ್ಟಣದಲ್ಲಿ ಹದಿನೈದು ವರ್ಷಗಳಿಂದ ಮುಚ್ಚಿರುವ ‘ಕರ್ನಾಟಕ ಸ್ಪನ್ ಸಿಲ್ಕ್ ಮಿಲ್’ ಗೆ (ಕೆಎಸ್‌ಐಸಿ  ಮಿಲ್) ರಾಜ್ಯ ಬಜೆಟ್ ನಲ್ಲಿ ಅನುದಾನ ದೊರೆತು ಸಂಸ್ಥೆ ಪುನರಾರಂಭ ಆಗುವುದೇ ಎಂಬ ಕುತೂಹಲ ಸಾರ್ವಜನಿಕ ವಲಯದಲ್ಲಿ ಮೂಡಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರದ ಶಾಸಕರಾಗಿರುವುದರಿಂದ ಮುಚ್ಚಿರುವ ಮಿಲ್ ಅನ್ನು ಪುನರಾರಂಭಿಸಲು ಬಜೆಟ್ ನಲ್ಲಿ ಅನುದಾನ ಮೀಸಲಿಡಬಹುದು ಎಂಬ ನಿರೀಕ್ಷೆ ಗರಿಗೆದರಿದೆ. ತಾಲ್ಲೂಕಿನ ರೇಷ್ಮೆ ಬೆಳೆಗಾರರಿಗೆ ಏಕೈಕ ಆಸರೆಯಾಗಿದ್ದ ರೇಷ್ಮೆ ಗಿರಣಿ ಮುಚ್ಚಿ 15 ವರ್ಷ ಕಳೆದಿದ್ದರೂ ಅದನ್ನು ಪುನರಾರಂಭಿಸುವ ಯಾವುದೇ ಸಾಧ್ಯತೆ ಕಂಡು ಬಂದಿರಲಿಲ್ಲ. ರೇಷ್ಮೆ ಮಂಡಳಿ ಅಧ್ಯಕ್ಷರಾಗಿದ್ದ ಸಿ.ಪಿ.ಯೋಗೇಶ್ವರ್, ಎಸ್.ಟಿ. ಸೋಮಶೇಖರ್ ಅವರು ಮಿಲ್ ಅನ್ನು ಪುನರಾರಂಭಿಸುವ ಮಾತುಗಳನ್ನಾಡಿದ್ದರು. ಆದರೆ ಅದು ಈಡೇರಿರಲಿಲ್ಲ.

ಈಗ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿರುವ ಕಾರಣ ಈ ಮಿಲ್ ಪುನರಾರಂಭ ವಿಷಯಕ್ಕೆ ಮತ್ತೆ ಮರುಜೀವ ಬಂದಿದೆ.

ಮುಚ್ಚಲು ಕಾರಣ:

ಒಂದು ಕಾಲದಲ್ಲಿ ಜೂಟ್‌ ರೇಷ್ಮೆಯಿಂದ ತಯಾರಾದ ಉತ್ಪನ್ನವನ್ನು ಪಡೆಯಲು ಕಾಶ್ಮೀರದ ವ್ಯಾಪಾರಿಗಳನ್ನು ದಿನಗಟ್ಟಲೆ ಕಾಯಿಸುತ್ತಿದ್ದ ಈ ಕಾರ್ಖಾನೆ ಇಂದು ಅಕ್ಷರಶಃ ಅನಾಥವಾಗಿದೆ. 1936ರಲ್ಲಿ ಜಾಯಿಂಟ್ ಸ್ಟಾಕ್ ಕಂಪನಿಯಿಂದ ಆರಂಭವಾದ ಕಾರ್ಖಾನೆಯನ್ನು ಮೈಸೂರು ಮಹಾರಾಜ ಕೃಷ್ಣರಾಜ ಒಡೆಯರ್ ಅವರು ಉದ್ಘಾಟಿಸಿದ್ದರು. 2003ರ ಡಿಸೆಂಬರ್‌ನಲ್ಲಿ ನಷ್ಟದ ನೆಪವೊಡ್ಡಿ ಈ ಕಾರ್ಖಾನೆಯನ್ನು ಶಾಶ್ವತವಾಗಿ ಮುಚ್ಚಲಾಗಿತ್ತು.

ಸುಮಾರು 33.18 ಎಕರೆ ಪ್ರದೇಶದಲ್ಲಿ ವ್ಯಾಪಿಸಿದ್ದ ಗಿರಣಿ 543 ಮಂದಿಗೆ ಉದ್ಯೋಗ ಕಲ್ಪಿಸಿತ್ತು. ಲಾಭದಲ್ಲಿದ್ದ ಗಿರಣಿ ಮಾರುಕಟ್ಟೆಯ ಸಮಸ್ಯೆಯಿಂದಾಗಿ 1958ರಲ್ಲಿ ಮೊದಲ ಬಾರಿಗೆ ಮುಚ್ಚಲಾಗಿತ್ತು. ಉದ್ದಿಮೆ ಮುಚ್ಚುವುದನ್ನು ತಪ್ಪಿಸಲು ಹಿರಿಯ ರಾಜಕಾರಣಿಗಳಾದ ಎಂ.ಸಿ.ಮರಿಯಪ್ಪ, ವಿ.ವೆಂಕಟಪ್ಪ, ಬಿ.ಜೆ. ಲಿಂಗೇಗೌಡ ಅವರು ಹೋರಾಟ ನಡೆಸಿದ ಪರಿಣಾಮ ಸರ್ಕಾರ 1960ರಲ್ಲಿ ಖಾಸಗಿ ಕಂಪನಿಗೆ ಪರಿಹಾರ ನೀಡಿ ತನ್ನ ಸ್ವಾಮ್ಯಕ್ಕೆ ತೆಗೆದುಕೊಂಡಿತ್ತು.

1966ರಲ್ಲಿ ಅಧುನೀಕರಣಗೊಂಡ ಗಿರಣಿಯು ರೇಷ್ಮೆ ದಾರ, ಜೂಟ್‌ ಹಾಗೂ ಕಾರ್ಪೆಟ್ ಗಳನ್ನು ತಯಾರಿಸಲಾರಂಭಿಸಿತ್ತು. 78 ಟನ್ ಗೂ ಹೆಚ್ಚು ರೇಷ್ಮೆ ಜೂಟ್‌ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದ ಗಿರಣಿ 1992-93ರಲ್ಲಿ ₹ 4 ಕೋಟಿ ಆದಾಯ ಗಳಿಸಿದ್ದ ಇತಿಹಾಸವೂ ಇದೆ. ಕಚ್ಚಾ ಸಾಮಗ್ರಿಯ ಅಭಾವ ಹಾಗೂ ಬೆಲೆ ಏರಿಕೆಯ ನೆಪವೊಡ್ಡಿ ಸರ್ಕಾರವೇ ಜೂಟ್‌ ರೇಷ್ಮೆ ಪೂರೈಕೆ ಮಾಡದ ಕಾರಣ ಗಿರಣಿಯನ್ನು ಶಾಶ್ವತವಾಗಿ ಮುಚ್ಚಲು ಕಾರಣವಾಗಿತ್ತು.

ಮತ್ತೆ ಆರಂಭವಾಗುತ್ತಾ:  ಮುಚ್ಚಿರುವ ಕಾರ್ಖಾನೆಯನ್ನು ಪುನಃ ಆರಂಭಿಸುವ ಮಾತುಗಳು ಐದಾರು ವರ್ಷಗಳಿಂದ ಕೇಳಿ ಬರುತ್ತಿವೆ. ಸಿ.ಪಿ.ಯೋಗೇಶ್ವರ್ ಅವರು ಕೆಎಸ್‌ಐಸಿ ಅಧ್ಯಕ್ಷರಾಗಿದ್ದಾಗ ಗಿರಣಿ ಬಳಿ ರೇಷ್ಮೆ ಮಾರಾಟ ಮಳಿಗೆ ಸ್ಥಾಪಿಸಿದ್ದು ಬಿಟ್ಟರೆ ಇನ್ನೇನೂ ಆಗಲಿಲ್ಲ. ಪುನಶ್ಚೇತನಕ್ಕಾಗಿ ಬಿಜೆಪಿ ಸರ್ಕಾರ ಬಜೆಟ್ ನಲ್ಲಿ ₹ 8 ಕೋಟಿ ಅನುದಾನ ನೀಡಿತ್ತು. ಆದರೂ ಯಾವುದೇ ಪುನಶ್ಚೇತನವಾಗಿಲ್ಲ ಎಂದು ಕಾರ್ಖಾನೆಯಲ್ಲಿ ಕಾರ್ಮಿಕರಾಗಿದ್ದ ಜಯರಾಮು ತಿಳಿಸುತ್ತಾರೆ.

ಕುಮಾರಸ್ವಾಮಿ ಅವರ ಬಳಿ ಕಾರ್ಖಾನೆಯ ಪುನರಾರಂಭಕ್ಕೆ ಅನುದಾನ ನೀಡುವ ಬಗ್ಗೆ ಮಾತುಕತೆ ನಡೆಸಲಾಗಿದೆ ಎಂದು ರೇಷ್ಮೆ ಸಚಿವ ಸಾ.ರಾ.ಮಹೇಶ್ ತಿಳಿಸಿದ್ದಾರೆ. ಇದರಿಂದ ತಾಲ್ಲೂಕಿನ ಜನರಲ್ಲಿ ಇದರ ಪುನರಾರಂಭದ ಬಗ್ಗೆ ಆಶಾಭಾವನೆ ಮೂಡಿದೆ. ಸಿಎಂ ಅವರು ಈ ಬಗ್ಗೆ ಗಮನ ನೀಡಲಿ ಎಂಬುದು ತಾಲ್ಲೂಕಿನ ಬಹುತೇಕ ಮಂದಿಯ ಅಭಿಪ್ರಾಯವಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !