ಭಾನುವಾರ, ಮಾರ್ಚ್ 7, 2021
19 °C
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ

ದಕ್ಷಿಣ ಭಾರತದ ಭಾಷೆಗಳ ಲಿಪಿ ಕನ್ನಡವೇ ಆಗಿತ್ತು : ಮನು ಬಳಿಗಾರ್ ಪ್ರತಿಪಾದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಹತ್ತನೇ ಶತಮಾನದವರೆಗೂ ದಕ್ಷಿಣ ಭಾರತದ ಎಲ್ಲ ಭಾಷೆಗಳ ಲಿಪಿ ಕನ್ನಡವೇ ಆಗಿತ್ತು. ಈ ಸಂಗತಿ ಅಲ್ಲಗಳೆಯಲು ಇದುವರೆಗೂ ಯಾರಿಗೂ ಸಾಧ್ಯವಾಗಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಪ್ರತಿಪಾದಿಸಿದರು.

ಪ್ರೆಸ್‌ಟ್ರಸ್ಟ್‌ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಹಾಗೂ ತಾಲ್ಲೂಕು ಸಾಹಿತ್ಯ ಪರಿಷತ್ ಘಟಕಗಳು ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಶೇ 100ರಷ್ಟು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಅವರು ಮಾತನಾಡಿದರು.

ನಂತರದ ದಿನಗಳಲ್ಲಿ ಮಲೆಯಾಳಿ, ತಮಿಳು, ತೆಲುಗು ಭಾಷೆಗಳು ತಮ್ಮದೇ ಲಿಪಿ ಅಳವಡಿಸಿಕೊಂಡವು. ಭಾಷಾಭಿಮಾನವೂ ಬೆಳೆಯಿತು. ಇತ್ತ ಕನ್ನಡಿಗರು ಅಭಿಮಾನ ಶೂನ್ಯರಾದರು. ಕನ್ನಡ ಹಿಂದಿಕ್ಕಿ ಸಾಕಷ್ಟು ಅಭಿವೃದ್ಧಿ ಕಂಡವು. ಈಚಿನ ದಿನಗಳಲ್ಲಿ ಕನ್ನಡ ಭಾಷೆ ಅವನತಿಯತ್ತ ಸಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ಇತರೆ ಭಾಷೆ ಕಲಿಯಬೇಕು. ಓದಬೇಕು. ಆದರೆ, ಕನ್ನಡ ಮರೆಯಬಾರದು. ಕನ್ನಡ ಪತ್ರಿಕೆಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಕನ್ನಡದ ಅಭಿಮಾನ ಸದಾ ಇರಬೇಕು. ಕೇಂದ್ರ ಸರ್ಕಾರ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು. ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು ಎಂದರು.

12 ಶತಮಾನದ ಸಮಯದಲ್ಲಿ ಜಗತ್ತಿನ ಯಾವ ಭಾಷೆಯಲ್ಲೂ ಆಗದ ಸಾಹಿತ್ಯ ಕೃಷಿ ಕನ್ನಡದಲ್ಲಿ ನಡೆಯಿತು. ವಚನ ಚಳವಳಿ, ದಾಸ ಸಾಹಿತ್ಯ ಸೇರಿದಂತೆ ಹಲವು ಪ್ರಕಾರಗಳಲ್ಲಿ ಕನ್ನಡ ಸಾಹಿತ್ಯ ಉತ್ತುಂಗ ತಲುಪಿತ್ತು. ಬಸವಣ್ಣ, ಅಕ್ಕಮಹಾದೇವಿ, ಕುವೆಂಪು ಅವರ ಸಂದೇಶಗಳು ಇಂದಿಗೂ ವಿಶ್ವಮಾನ್ಯ ಎಂದು ಬಣ್ಣಿಸಿದರು.

ನಿಷ್ಠೆಯಿಂದ ಯಾವುದೇ ಕಾಯಕದಲ್ಲಿ ತೊಡಗಿಸಿಕೊಂಡರೂ ಯಶಸ್ಸು ಸಾಧ್ಯ. ಜಗತ್ತಿನ ಇತರೆ ಭಾಷೆಗಳ ಅಧ್ಯಯನವೂ ಅಗತ್ಯ. ಕನ್ನಡದ ಶಾಲೆಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿಯೂ ನಮ್ಮ ಮೇಲಿದೆ ಎಂದರು.

ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಬಿ.ಶಂಕರಪ್ಪ, ತಾಲ್ಲೂಕು ಅಧ್ಯಕ್ಷ ಜಿ.ಪಿ.ಸಂಪತ್‌ಕುಮಾರ್, ಕಾರ್ಯದರ್ಶಿ ಎಂ.ಎನ್‌.ಸುಂದರ್‌ರಾಜ್, ರುದ್ರಮುನಿ ಸಜ್ಜನ್, ಚಂದ್ರಕಲಾ ಅರಸ್‌ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು