ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಮ್ಮಿ, ಡ್ಯಾಡಿ ಸಂಸ್ಕೃತಿ ಬೇಡ

ಸಂಸ್ಥಾಪನಾ ದಿನಾಚರಣೆ; ಲೀಲಾದೇವಿ ಹೇಳಿಕೆ
Last Updated 24 ಸೆಪ್ಟೆಂಬರ್ 2019, 10:42 IST
ಅಕ್ಷರ ಗಾತ್ರ

ವಿಜಯಪುರ: ‘ಮಾತೃಭಾಷೆಯಲ್ಲೇ ಅಸಂಖ್ಯ ಸುಂದರ ಶಬ್ದಗಳಿರುವಾಗ ಮಮ್ಮಿ, ಡ್ಯಾಡಿ ಸಂಸ್ಕೃತಿ ಒಳ್ಳೆಯದಲ್ಲ. ಆದ್ದರಿಂದ, ಮಮ್ಮಿ, ಡ್ಯಾಡಿಯನ್ನು ಹೊರಹಾಕಿ, ಅಪ್ಪ, ಅಮ್ಮನನ್ನು ಸಾಕಿ’ ಎಂದು ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ ಮಾರ್ಮಿಕವಾಗಿ ಹೇಳಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಪರಿಷತ್‌ನ 104ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ವಿದೇಶಿ ಭಾಷೆ ಹಾಗೂ ವಿದೇಶಿ ಸಂಸ್ಕೃತಿಯ ಅತಿಯಾದ ವ್ಯಾಮೋಹ ಸಲ್ಲದು. ಬದುಕಿರುವಾಗಲೇ ನಮ್ಮ ಹೆತ್ತವರನ್ನು ಪದಗಳಿಂದ ಹೆಣವಾಗಿಸುವುದರಲ್ಲಿ ಅರ್ಥವಿಲ್ಲ. ಆದ್ದರಿಂದ, ಅಮ್ಮ, ಅಪ್ಪ ಎಂದೇ ಕರೆಯಬೇಕು’ ಎಂದರು.

ಭೈರವಾಡಗಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ. ಸವಿತಾ ಝಳಕಿ ಮಾತನಾಡಿ, ‘ಕನ್ನಡ ಸಾಹಿತ್ಯ ಪರಿಷತ್‌ಗೆ ತನ್ನದೇಯಾದ ವಿಶೇಷ ಘನತೆ ಮತ್ತು ಇತಿಹಾಸವಿದೆ. ಮಹತ್ತರವಾದ ತಿರುವಿನಲ್ಲಿ ಮೈದಳೆದು ನಿಂತ ಕಸಾಪ ತನ್ನ ಕಾರ್ಯವ್ಯಾಪ್ತಿಯನ್ನು ಕೇವಲ ತಾಲ್ಲೂಕು, ಜಿಲ್ಲಾ, ರಾಜ್ಯಮಟ್ಟದಲ್ಲಷ್ಟೇ ಅಲ್ಲದೆ, ರಾಜ್ಯಗಳ ಗಡಿದಾಟಿ ವಿದೇಶಗಳಲ್ಲಿಯೂ ತನ್ನ ಕಂಪನ್ನು ಸೂಸುತ್ತಿರುವುದು ಶ್ಲಾಘನೀಯ’ ಎಂದು ನುಡಿದರು.

ಹಿರಿಯ ಸಾಹಿತಿ ಸಂಗಮೇಶ ಬದಾಮಿ ಮಾತನಾಡಿ, ‘ಕಸಾಪವನ್ನು ಕಟ್ಟಿದ ಎಲ್ಲ ಮಹನೀಯರು ಪ್ರಾತಃಸ್ಮರಣೀಯರು. ಅನೇಕ ಏಳು-ಬೀಳುಗಳನ್ನು ಕಂಡು ಕಸಾಪ ಇಂದು ಬೃಹದಾಕಾರವಾಗಿ ಬೆಳೆದು ನಿಂತಿದೆ. ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆ ಎಂದೇ ಎನಿಸಿಕೊಂಡಿರುವ ಪರಿಷತ್‌ ಯಾವತ್ತೂ ನಿಂತ ನೀರಾಗಿಲ್ಲ. ಅದು ಹರಿಯುವ ಜೀವನದಿಯಂತೆ ಇದೆ’ ಎಂದು ಅಭಿಪ್ರಾಯಪಟ್ಟರು.

ಹಿರಿಯ ಸಾಹಿತಿ ಡಾ.ಎಂ.ಎನ್.ವಾಲಿ ಅಧ್ಯಕ್ಷತೆ ವಹಿಸಿದ್ದರು.

ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಬಸವರಾಜ ಕುಂಬಾರ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ತಾಲ್ಲೂಕು ಘಟಕದ ಅಧ್ಯಕ್ಷ ಪ್ರೊ.ಯು.ಎನ್. ಕುಂಟೋಜಿ, ಸಾಹೇಬಗೌಡ ಬಸರಕೋಡ, ಮಲ್ಲಿಕಾರ್ಜುನ ಅವಟಿ, ಮಂಗಳಾದೇವಿ ಬಿರಾದಾರ, ಚಂದ್ರು ಹಿರೇಮಠ ಇದ್ದರು.

ಶರಣಗೌಡ ಪಾಟೀಲ ಸ್ವಾಗತಿಸಿದರು. ರಾಜೇಂದ್ರಕುಮಾರ ಬಿರಾದಾರ ನಿರೂಪಿಸಿ, ದಾಕ್ಷಾಯಣಿ ಬಿರಾದಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT