ಮಂಗಳವಾರ, ನವೆಂಬರ್ 12, 2019
24 °C
ಕೆಡಿಪಿ ಸಭೆ; ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೇಳಿಕೆ

ಬಿತ್ತನೆ ಬೀಜ, ರಸಗೊಬ್ಬರ ಲಭ್ಯ

Published:
Updated:
Prajavani

ವಿಜಯಪುರ: ‘ಹಿಂಗಾರು ಬಿತ್ತನೆಗೆ ಬೇಡಿಕೆಗೆ ತಕ್ಕಷ್ಟು ಬಿತ್ತನೆಬೀಜ, ರಸಗೊಬ್ಬರ ಲಭ್ಯವಿದೆ. ರೈತರು ಆತಂಕ ಪಡುವ ಅಗತ್ಯವಿಲ್ಲ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಶಿವಕುಮಾರ್ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾ ಭವನದಲ್ಲಿ ಗುರುವಾರ ಜರುಗಿದ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.

‘ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದು, 3.36 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ತೊಗರಿ ಬೆಳೆ ಚೇತರಿಸಿಕೊಂಡಿದೆ. ಹಿಂಗಾರು ಹಂಗಾಮಿಗೆ 60 ಸಾವಿರ ಕ್ವಿಂಟಲ್ ಕಡಲೆ, ಬಿಳಿಜೋಳದ ಬೇಡಿಕೆ ಇದ್ದು, ಈ ಪೈಕಿ 24 ಸಾವಿರ ಕ್ವಿಂಟಲ್ ಪೂರೈಕೆಯಾಗಿದೆ. ಆರು ಸಾವಿರ ಮೆಟ್ರಿಕ್ ಟನ್ ರಸಗೊಬ್ಬರಕ್ಕೆ ಬೇಡಿಕೆಯಿದ್ದು, ಈಗಾಗಲೇ 2,800 ಮೆಟ್ರಿನ್ ಟನ್ ಪೂರೈಕೆಯಾಗಿದೆ’ ಎಂದು ತಿಳಿಸಿದರು.

‘ಜಿಲ್ಲೆಯಾದ್ಯಂತ 65 ಸಾವಿರ ರೈತರು ಬೆಳೆ ವಿಮೆ ಮಾಡಿಸಿದ್ದು, ಈ ಪೈಕಿ 41 ಸಾವಿರ ರೈತರಿಗೆ ಹಣ ಜಮೆಯಾಗಿದೆ. ವಿಮೆ ಕಂಪನಿಯು ಪ್ರತಿ ನಿತ್ಯ 1,500 ರಿಂದ 2 ಸಾವಿರ ರೈತರ ಹಣವನ್ನು ಜಮೆ ಮಾಡುತ್ತಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಕಾಸ್ ಕಿಶೋರ್ ಸುರಳಕರ್ ಮಾತನಾಡಿ, ‘ಕೃಷಿ ಯಂತ್ರೋಪಕರಣಗಳ ಖರೀದಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ಯಂತ್ರೋಪಕರಣಗಳನ್ನು ವಿತರಿಸಬೇಕು. ಅನುದಾನದ ಕೊರತೆ ಇದ್ದಲ್ಲಿ, ಈ ಅರ್ಜಿಗಳನ್ನು ಮುಂದಿನ ವರ್ಷದಲ್ಲಿ ಆದ್ಯತೆ ಮೇರೆಗೆ ಪರಿಗಣಿಸಬೇಕು. ಅಲ್ಲಿಯವರೆಗೆ ಸಲ್ಲಿಕೆಯಾಗುವ ಅರ್ಜಿಗಳನ್ನು ಹಾಗೆಯೇ ಉಳಿಸಿಕೊಳ್ಳಬೇಕು. ಅರ್ಜಿ ಸಲ್ಲಿಸಿದ ರೈತರಿಂದ ದೂರುಗಳು ಬರದಂತೆ ನೋಡಿಕೊಳ್ಳಬೇಕು’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಸೂಚಿಸಿದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸಂತೋಷ ಇನಾಮದಾರ ಮಾತನಾಡಿ, ‘ನಮ್ಮ ಇಲಾಖೆಗೆ ₹54 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಹನಿ ನೀರಾವರಿಗಾಗಿ ₹20 ಲಕ್ಷ ಅನುದಾನ ಬಳಸಲಾಗಿದೆ. ಬಸವನಬಾಗೇವಾಡಿ ತಾಲ್ಲೂಕಿನಲ್ಲಿ 100 ಎಕರೆ ಪ್ರದೇಶದಲ್ಲಿ ಅಜವಾನ ಬೆಳೆಯಲಾಗಿದ್ದು, ರೈತರಿಗೆ ಎಕರೆಗೆ ₹1 ರಿಂದ ₹1.20 ಲಕ್ಷ ಆದಾಯ ಸಿಗುತ್ತಿದೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಎನ್.ಕೆ.ಗೋಟೆ ಇದ್ದರು.

ಪ್ರತಿಕ್ರಿಯಿಸಿ (+)