ಲಂಚ ಪಡೆವ ವೈದ್ಯರ ವಿರುದ್ಧ ಕ್ರಮ:

7
ಜಿಲ್ಲಾ ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆ

ಲಂಚ ಪಡೆವ ವೈದ್ಯರ ವಿರುದ್ಧ ಕ್ರಮ:

Published:
Updated:
Prajavani

ರಾಮನಗರ: ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆಗಾಗಿ ರೋಗಿಗಳ ಹತ್ತಿರ ಹಣವನ್ನು ತೆಗೆದುಕೊಳ್ಳುತ್ತಿರುವ ವೈದ್ಯರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಪಿ. ಮುಲ್ಲೈಮುಹಿಲನ್‌ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಸರ್ಕಾರಿ ಆಸ್ಪತ್ರೆಗಳಲ್ಲಿನ ವೈದ್ಯರಿಗೆ ಹಣ ನೀಡದಿದ್ದರೆ ಶಸ್ತ್ರಚಿಕಿತ್ಸೆಯನ್ನು ಮಾಡುವುದಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ರೋಗಿಗಳ ಹತ್ತಿರ ಹಣ ತೆಗೆದುಕೊಳ್ಳುವ ವೈದ್ಯರಿಗೆ ಮೊದಲ ಬಾರಿಗೆ ನೋಟಿಸ್ ನೀಡಿ, ಆದಾಗಿಯೂ ಎಚ್ಚೆತ್ತುಕೊಳ್ಳದಿದ್ದರೆ ಅಂತಹವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಎಂದು ತಿಳಿಸಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲಾ ರೀತಿಯ ಸೌಲಭ್ಯಗಳಿದ್ದರೂ ವೈದ್ಯರು ಅವುಗಳನ್ನು ಸರಿಯಾಗಿ ಬಳಸಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿಲ್ಲ. ಎಲ್ಲಾ ಸವಲತ್ತುಗಳಿದ್ದು ಚಿಕಿತ್ಸೆ ನೀಡದ ವೈದ್ಯರ ವಿರುದ್ಧವೂ ಕ್ರಿಮಿನಲ್ ಪ್ರಕರಣ ದಾಖಲಿಸಿ ಎಂದು ತಿಳಿಸಿದರು.

‘ಸರ್ಕಾರ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳಿಲ್ಲ, ಆಂಬುಲೆನ್ಸ್‌ಗಳಿಲ್ಲ. ಪರಿಸ್ಥಿತಿ ಹೀಗಿದ್ದರೆ ರೋಗಿಗಳಿಗೆ ತಕ್ಷಣಕ್ಕೆ ಚಿಕಿತ್ಸೆ ದೊರೆಯದೆ ಅವರು ನಿಧನರಾಗುತ್ತಾರೆ. ಇನ್ನು ಮುಂದಾದರೂ ಎಚ್ಚೆತ್ತುಕೊಂಡು ಕಾರ್ಯನಿರ್ವಹಿಸಿ’ ಎಂದು ಜಿ.ಪಂ. ಅಧ್ಯಕ್ಷ ಎಂ.ಎನ್. ನಾಗರಾಜು ಹಾಗೂ ಉಪಾಧ್ಯಕ್ಷೆ ಜಿ.ಡಿ. ವೀಣಾಕುಮಾರಿ ಹೇಳಿದರು.

‘ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ನಿಯಮಾನುಸಾರ ಟೆಂಡರ್‌ ಕರೆಯದೆ ಮನಸೋ ಇಚ್ಛೆ ಕಾರ್ಯ ನಿರ್ವಹಿಸುತ್ತಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವೀಣಾ ಆರೋಪಿಸಿದರು. ಹರಾಜಿಗೆ ಮುಂಚೆ ಸುತ್ತಲಿನ ಗ್ರಾಮಗಳಲ್ಲಿ ತಮಟೆ ಹಾಗೂ ಆಟೊ ಪ್ರಚಾರ ನಡೆಸುವಂತೆ ಸೂಚಿಸಿದರು.

ದುರಸ್ತಿಗೆ ಸೂಚನೆ: ಜಿಲ್ಲೆಯಲ್ಲಿ ಹಲವು ಅಂಗನವಾಡಿ ಕಟ್ಟಡಗಳ ನಿರ್ಮಾಣ ಅರ್ಧಕ್ಕೆ ನಿಂತು ಹೋಗಿದೆ. ಅವುಗಳನ್ನು ಪೂರ್ಣಗೊಳಿಸಿ. ಕೆಲವು ಕಡೆ ದುರಸ್ತಿ ಮಾಡಬೇಕಿದೆ. ಆದರೆ ಅಧಿಕಾರಿಗಳು ನೆಪ ಹೇಳಿಕೊಂಡು ಈವರೆಗೂ ಯಾವುದೇ ರೀತಿಯ ಕೆಲಸವನ್ನು ಮಾಡುತ್ತಿಲ್ಲ ಎಂದು ವೀಣಾ ಆರೋಪಿಸಿದರು.

ಚನ್ನಪಟ್ಟಣ ತಾಲ್ಲೂಕಿನ ಬ್ರಹ್ಮಣೀಪುರ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ಇಲ್ಲದೆ ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದೆ. ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಿದರೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

‘ಅಧಿಕಾರಿಗಳು ಕಥೆ ಹೇಳದೆ ಕೆಲಸ ಮಾಡಬೇಕು. ಪ್ರತಿಯೊಂದಕ್ಕೂ ನೆಪ ಹೇಳುತ್ತೀರಾ. ಇನ್ನು ಮುಂದೆ ಪ್ರತಿ ಸೋಮವಾರ ಜಿಲ್ಲೆಯ ಅಂಗನವಾಡಿ ಕಟ್ಟಡಗಳ ಬಗ್ಗೆ ಚಿತ್ರ ಸಹಿತ ವರದಿ ನೀಡಿ’ ಎಂದು ಮುಲ್ಲೈಮುಹಿಲನ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಗುಣಮಟ್ಟ ಕಾಪಾಡಿ: ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಎಲ್ಲಾ ಕಾಮಗಾರಿಗಳಲ್ಲೂ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಎನ್. ನಾಗರಾಜ್ ತಿಳಿಸಿದರು.

ಕಾಮಗಾರಿಗಳು ಮುಗಿದ ಆರು ತಿಂಗಳ ಒಳಗೆ ಶಿಥಿಲವಾಗಬಾರದು. ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡುವ ಮೂಲಕ ಜನರ ವಿಶ್ವಾಸವನ್ನು ಗಳಿಸಿಕೊಳ್ಳಬೇಕು ಎಂದು ತಿಳಿಸಿದರು.

**
ಫಲಿತಾಂಶ ಸುಧಾರಿಸಿ
‘ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆ ತೆಗೆದುಕೊಂಡಿರುವ 13,574 ವಿದ್ಯಾರ್ಥಿಗಳೂ ತೇರ್ಗಡೆಯಾಗಬೇಕು. ಪ್ರತಿ ಅಧಿಕಾರಿಗಳಿಗೂ ಸರ್ಕಾರಿ ಶಾಲೆಗಳನ್ನು ದತ್ತು ನೀಡಬೇಕು. ದತ್ತು ಪಡೆದವರು ಆಯಾ ಶಾಲೆಗಳಿಗೆ ತಿಂಗಳಿಗೆ ಕನಿಷ್ಠ 2 ಬಾರಿಯಾದರೂ ಭೇಟಿ ನೀಡಬೇಕು. ವಿದ್ಯಾರ್ಥಿಗಳೊಂದಿಗೆ ಕಾಲ ಕಳೆಯುವ ಜತೆಗೆ ಧೈರ್ಯ ತುಂಬಬೇಕು. ಪರೀಕ್ಷೆಗೆ ಬೇಕಾದ ಪೂರ್ವಸಿದ್ಧತೆಗಳ ಕುರಿತು ಚರ್ಚಿಸಬೇಕು’ ಎಂದರು.

**
ಶಾಲಾ ಕಟ್ಟಡ ದುರಸ್ತಿಯಾಗಲಿ
‘ಅನೇಕ ಶಾಲೆಗಳ ಕಟ್ಟಡ ಬೀಳುವ ಹಂತದಲ್ಲಿವೆ. ಶಾಲೆಗಳಲ್ಲಿನ ಕಾರ್ಯಕ್ರಮಗಳಿಗೆ ಅತಿಥಿಯಾಗಿ ಹೋಗಲು ನಮಗೆ ನಾಚಿಕೆಯಾಗುತ್ತದೆ’ ಎಂದು ವೀಣಾ ಡಿಡಿಪಿಐ ಅವರನ್ನು ತರಾಟೆಗೆ ತೆಗೆದುಕೊಂಡರು.

ಡಿಡಿಪಿಐ ಗಂಗಮಾರೇಗೌಡ ಮಾತನಾಡಿ ‘ಈಗಾಗಲೇ 2 ಶಾಲೆಗಳ ದುರಸ್ತಿಗೆ ₨5 ಲಕ್ಷ ಅನುದಾನ ಬಂದಿದೆ. ಇನ್ನು 531 ಶಾಲೆಗಳ ಸರ್ವೆ ಕಾರ್ಯ ನಡೆದಿದ್ದು, ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದರು.

**

ಮುಖ್ಯಾಂಶಗಳು
* ಸರ್ಕಾರಿ ಸೌಲಭ್ಯ ಸದ್ಬಳಕೆಗೆ ತಾಕೀತು
* ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳಲು ಸಲಹೆ
* ಅಂಗನವಾಡಿ ಕಟ್ಟಡ ದುರಸ್ತಿಗೆ ಸೂಚನೆ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !