ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಟ್ಟಿನ ವಿಷಯದ ಸುತ್ತಮುತ್ತ

Last Updated 12 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಈಗ ಎಲ್ಲರದ್ದೂ ವೇಗದ ಬದುಕು. ತಲೆಗೂದಲಿಗೆ ಹಾಕುವ ಬ್ಯಾಂಡ್‌ನಿಂದ ಚಪ್ಪಲಿ ತುದಿಯವರೆಗಿನ ವಿನ್ಯಾಸದಲ್ಲಿಯೂ ಆಧುನಿಕತೆಯ ಗಂಧ. ದಿರಿಸಿನಲ್ಲಿ ಪಾಶ್ಚಾತ್ಯ ಮೆರುಗು. ಆದರೆ ಒಳ ಉಡುಪಿನ ವಿಷಯ ಬಂದಾಗ ಮಾತ್ರ ಎಲ್ಲವೂ ಗುಟ್ಟುಗುಟ್ಟು. ಅವುಗಳ ಕುರಿತಾಗಿ ಮಾತನಾಡುವುದು, ಚರ್ಚಿಸುವುದು, ಮಾಹಿತಿ ಹಂಚಿಕೊಳ್ಳುವುದು ಎಲ್ಲವೂ ಗುಟ್ಟು.

ಆದರೆ ಇತ್ತೀಚೆಗೆ ಇಂದಿರಾನಗರದ ಆಟಗಲಾಟ ಆಯೋಜಿಸಿದ್ದ ‘ಲಿಂಗರಿ ಕಾರ್ಯಾಗಾರ’ ಒಳ ಉಡುಪುಗಳ ವಿಷಯದ ಬಗ್ಗೆ ಮುಕ್ತವಾಗಿ ಚರ್ಚಿಸಲು ಕಾರಣವಾಯಿತು. ಒಳ ಉಡುಪು ಅದರಲ್ಲೂ ಬ್ರಾ ಆಯ್ಕೆ ಹೇಗಿರಬೇಕು, ಅದನ್ನು ತೊಡುವ ಸರಿಯಾದ ಕ್ರಮ ಹೇಗೆ, ನಿರ್ವಹಣೆ ಹೇಗೆ, ಆರೋಗ್ಯಕ್ಕೆ ಹಾಗೂ ಮಹಿಳೆಯರಲ್ಲಿ ಆತ್ಮವಿಶ್ವಾಸ ಬೆಳೆಯುವಲ್ಲಿ ಅವುಗಳು ಹೇಗೆ ಪೂರಕ ಎನ್ನುವ ಕುರಿತಾಗಿ ಸಂವಾದ ನಡೆಯಿತು. ನಗರದಲ್ಲಿ ‘ಬಟರ್‌ ಕಪ್ಸ್‌’ ಎನ್ನುವ ಲಿಂಗರಿ ಬೋಟಿಕ್‌ ಪ್ರಾರಂಭಿಸಿರುವ ಅರ್ಪಿತಾ ಗಣೇಶ್‌ ಕಾರ್ಯಾಗಾರ ನಡೆಸಿಕೊಟ್ಟರು.

ವಿದೇಶಗಳಲ್ಲಿ ಅರ್ಪಿತಾ ಗಣೇಶ್‌ ಅವರನ್ನು ಗುರುತಿಸುವುದು ‘ಇಂಡಿಯನ್‌ ಬ್ರಾ ಲೇಡಿ’ ಎಂದೇ. ಈ ಬಗ್ಗೆ ಅವರಿಗೆ ಹೆಮ್ಮೆ, ಖುಷಿ ಎರಡೂ ಇದೆ. 2008ರಿಂದ ‘ಬಟರ್‌ ಕಪ್ಸ್‌’ ಬೋಟಿಕ್‌ ನಡೆಸುತ್ತಿರುವ ಅವರ ಬ್ರ್ಯಾಂಡ್‌ಗೆ ದೇಶದಾದ್ಯಂತ ಈಗಾಗಲೇ ಮೂರು ಸಾವಿರಕ್ಕೂ ಹೆಚ್ಚು ಗ್ರಾಹಕರಿದ್ದಾರೆ. ಹೋಟೆಲ್‌ ಮ್ಯಾನೇಜ್‌ಮೆಂಟ್‌ ಓದಿ ಹತ್ತು ವರ್ಷಗಳ ಕಾಲ ಜಾಹೀರಾತು ಕಂಪೆನಿಯನ್ನು ನಡೆಸಿದ ಅನುಭವ ಅವರದ್ದು. ನ್ಯೂಯಾರ್ಕ್‌ನಲ್ಲಿ ‘ಬ್ರಾ ಫಿಟಿಂಗ್‌ ಸೆಷನ್‌’ ಒಂದರಲ್ಲಿ ಪಾಲ್ಗೊಂಡ ಮೇಲೆ ಅವರ ಚಿಂತನೆ ಸಂಪೂರ್ಣ ಬದಲಾಯಿತು.

‘ಭಾರತದಲ್ಲಿ, ಎಂಥ ಒಳ ಉಡುಪು ಧರಿಸಬೇಕು ಎನ್ನುವ ಬಗೆಗೆ ಯಾರೂ ಹೇಳಿಕೊಡುವುದಿಲ್ಲ. ಶೇ90ರಷ್ಟು ಮಹಿಳೆಯರು ಸರಿಯಾದ ಫಿಟಿಂಗ್‌ ಇರುವ ಒಳಉಡುಪು ಧರಿಸುತ್ತಿಲ್ಲ. ಅಂಗಡಿಗೆ ಹೋದರೆ ಹೆಚ್ಚಾಗಿ ಪುರುಷರೇ ಇರುತ್ತಾರೆ. ಕೆಲವೆಡೆ ಮಹಿಳೆಯರೇ ಇದ್ದರೂ ಅವರಲ್ಲಿ ಅಗತ್ಯ ಮಾಹಿತಿ ಇರುವುದಿಲ್ಲ. 150ಕ್ಕೂ ಹೆಚ್ಚು ಬಗೆಯ ಲಿಂಗರಿ (ಒಳಉಡುಪು) ಬ್ರಾಂಡ್‌ಗಳಿವೆ. ಆದರೆ ಭಾರತದಲ್ಲಿ ಸಿಗುತ್ತಿರುವುದು ಕೇವಲ 40. ಯಾವುದೇ ಬ್ರಾಂಡ್ ಮಹಿಳೆಗೆ ಪೂರ್ಣ ಸಮಾಧಾನ ನೀಡುತ್ತಿಲ್ಲ. ಈ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆ ನಡೆಸಿದ್ದೇನೆ’ ಎನ್ನುತ್ತಾರೆ ಅವರು.

ಒಳಉಡುಪುಗಳು ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ ನಮ್ಮ ವ್ಯಕ್ತಿತ್ವಕ್ಕೆ ಗಾಂಭೀರ್ಯವನ್ನು ತಂದು ಕೊಡುತ್ತದೆ. ‘ಮೊದಲಿನಿಂದಲೂ ನಾನು ತುಸು ದಪ್ಪವೇ ಇದ್ದೆ. ಯಾವಾಗಲೂ ನನ್ನ ಅಳತೆಗಿಂತ ದೊಡ್ಡದಾದ, ಅಗಲವಾದ ದಿರಿಸು ತೊಡುತ್ತಿದ್ದೆ. ನನ್ನ ವ್ಯಕ್ತಿತ್ವದ ಬಗ್ಗೆ ನನ್ನಲ್ಲಿ ವಿಶ್ವಾಸ ಕಡಿಮೆ ಇತ್ತು. ಯಾವಾಗ ನನಗೆ ಫಿಟಿಂಗ್‌ ಬಗ್ಗೆ ಸರಿಯಾದ ಕಲ್ಪನೆಬಂತೊ ಅಂದಿನಿಂದ ನಾನು ತೊಡುವ ದಿರಿಸಿನಿಂದ ಹಿಡಿದು ನನ್ನ ಆತ್ಮವಿಶ್ವಾಸದಲ್ಲಿಯೂ ಸಾಕಷ್ಟು ಬದಲಾವಣೆ ಆಗಿದೆ. ಇದು ಎಲ್ಲಾ ಹೆಣ್ಣುಮಕ್ಕಳ ಅನುಭವ ಆಗಬೇಕು’ ಎಂದು ಅರ್ಪಿತಾ ತಮ್ಮ ಆಶಯವನ್ನು ವ್ಯಕ್ತಪಡಿಸುತ್ತಾರೆ.

**

ದೇಹಕ್ಕೆ ಒಪ್ಪುವ ಉಡುಪು

‘ಬಟರ್‌ ಕಪ್ಸ್‌‘ ಮಹಿಳೆಯರಿಗೆ ಪರ್ಸನಲೈಸ್ಡ್‌ ಫಿಟಿಂಗ್‌ ಅವಕಾಶ ನೀಡಿದೆ. ಬೆಂಗಳೂರಿನಲ್ಲಿ ಲೀಲಾ ಪ್ಯಾಲೆಸ್‌ನಲ್ಲಿ ಬಟರ್‌ ಕಪ್ಸ್‌ ಫಿಟಿಂಗ್‌ ರೂಮ್‌ ಇದೆ. ಇಲ್ಲಿ ಭೇಟಿ ನೀಡಿ ಮಹಿಳೆಯರು ತಮಗೆ ಸರಿಹೊಂದುವ ಬ್ರಾಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನೂ ನೀಡಲಾಗಿದೆ.

ಈಗ ಲಭ್ಯವಿರುವ ಬ್ರಾಂಡ್‌ಗಳಲ್ಲಿ ಕಪ್‌ಸೈಸ್‌ ಎಯಿಂದ ಸಿ ಇಲ್ಲವೇ ಡಿವರೆಗೆ ಲಭ್ಯವಿರುತ್ತದೆ. ಆದರೆ ಇಲ್ಲಿ ಕಪ್‌ಸೈಸ್‌ ಜಿವರೆಗೂ ವಿನ್ಯಾಸಗೊಳಿಸಿರುವ ಬ್ರಾಗಳು ಲಭ್ಯವಿವೆ. ಭಾರತೀಯ ಮಹಿಳೆಯರ ಆಂಗಿಕ ರಚನೆಯನ್ನೇ ಮನಸಿನಲ್ಲಿಟ್ಟುಕೊಂಡು ಇವುಗಳನ್ನು ವಿನ್ಯಾಸಗೊಳಿಸಲಾಗಿದೆ. ಎಲ್ಲಾ ಶೈಲಿಯ ವಿನ್ಯಾಸಗಳು ಲಭ್ಯ. ಆನ್‌ಲೈನ್‌ನಲ್ಲಿಯೂ ಖರೀದಿಸಬಹುದು.

ಮಾಹಿತಿಗೆ: buttercups.in

**

ಅಳತೆಗೆ ತಕ್ಕ ಆಯ್ಕೆ

* ನಿಮ್ಮ ದೇಹದ ಸುತ್ತಳತೆಯನ್ನು ಕಡ್ಡಾಯವಾಗಿ ಕಂಡುಕೊಂಡ ನಂತರವೇ ಅದಕ್ಕನುಗುಣವಾಗಿ ಖರೀದಿ ಇರಲಿ.

* ಋತುಸ್ರಾವಕ್ಕೆ ಮುಂಚಿನ ಐದು ದಿನ, ಋತುಸ್ರಾವದ ಸಂದರ್ಭ ಹಾಗೂ ಋತುಸ್ರಾವದ ನಂತರದ ಐದು ದಿನ ಬ್ರಾ ಆಯ್ಕೆ ಮಾಡಬೇಡಿ. ಈ ಸಂದರ್ಭದಲ್ಲಿ ನಿಮ್ಮ ದೇಹದಲ್ಲಿ ಬದಲಾವಣೆ ಆಗಿರುತ್ತದೆ.

* ಕನಿಷ್ಠ ನಾಲ್ಕು ತಿಂಗಳು ಗರಿಷ್ಠ ಆರು ತಿಂಗಳು ಮಾತ್ರ ಒಂದು ಬ್ರಾ ಬಳಕೆ ಇರಲಿ.

* ಯಾವುದೇ ಕಾರಣಕ್ಕೂ ಅವುಗಳನ್ನು ವಾಷಿಂಗ್‌ ಮೆಷಿನ್‌ನಲ್ಲಿ ತೊಳೆಯಬಾರದು. ಅವುಗಳ ಶೇಪ್‌ ಬದಲಾಗುವುದಲ್ಲದೆ, ಬಳಸಲಾದ ಬಟ್ಟೆಗಳು ಬೇಗನೆ ಹಾಳಾಗುತ್ತವೆ.

* ಪ್ಯಾಡೆಡ್‌ ಬ್ರಾಗಳನ್ನು ಮನಬಂದಂತೆ ಹಿಂಡುವುದು, ಮಡಚುವುದು ಸರಿಯಲ್ಲ. ಅವುಗಳು ಬೇಗನೆ ವಿಕಾರಗೊಳ್ಳುತ್ತವೆ.

* ತ್ವಚೆಗೂ ಉಸಿರಾಟದ ಅವಶ್ಯಕತೆ ಇರುತ್ತದೆ. ಹೀಗಾಗಿ ರಾತ್ರಿ ಮಲುಗುವಾಗ ಕಡ್ಡಾಯವಾಗಿ ಬ್ರಾ ಬಳಕೆ ನಿಷಿದ್ಧ.

* ವ್ಯಾಯಾಮ, ಯೋಗದಂಥ ಫಿಟ್‌ನೆಸ್‌ಗೆ ಸಂಬಂಧಿಸಿದ ಚಟುವಟಿಕೆ ಮಾಡುವಾಗ ಕಡ್ಡಾಯವಾಗಿ ಸ್ಪೋರ್ಟ್ಸ್‌ ಒಳ ಉಡುಪುಗಳನ್ನು ಧರಿಸಿ

**

ಮಹಿಳೆಯರು ದುಬಾರಿ ದಿರಿಸು ಖರೀದಿಸಿ ಧರಿಸುತ್ತಾರೆ. ಆದರೆ ಒಳ ಉಡುಪುಗಳ ಬಗೆಗೆ ನಿರ್ಲಕ್ಷ ವಹಿಸುತ್ತಾರೆ.ಬೆಲೆ ದುಬಾರಿಯಾದರೂ ಆರಾಮದಾಯಕ, ಸರಿಯಾದ ಅಳತೆಯ ಒಳ ಉಡುಪು ಧರಿಸುವ ಬಗೆಗೆ ಮಹಿಳೆಯರಲ್ಲಿ ಹೆಚ್ಚಿನ ಜಾಗೃತಿ ಮೂಡಬೇಕಿದೆ

–ಅರ್ಪಿತಾ ಗಣೇಶ್‌, ಬಟರ್‌ ಕಪ್ಸ್‌ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT