ಶುಕ್ರವಾರ, ಡಿಸೆಂಬರ್ 6, 2019
17 °C
ಮಲೆನಾಡಿನ ಭಾಗದಲ್ಲಿ ಈ ವರ್ಷವೂ ಕಾಣಿಸಿಕೊಂಡ ಮಂಗನಕಾಯಿಲೆ

ಆರು ದಶಕದಲ್ಲಿ ಎಂಟುನೂರು ಜನರ ಬಲಿ!

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Deccan Herald

ಶಿವಮೊಗ್ಗ: ಆರು ದಶಕಗಳಲ್ಲಿ ಸುಮಾರು 800 ಜನರನ್ನು ಬಲಿ ಪಡೆದ ಮಂಗನಕಾಯಿಲೆ (ಕೆಎಫ್‌ಡಿ– ಕ್ಯಾಸನೂರು ಫಾರೆಸ್ಟ್ ಡಿಸೀಸ್) ಮತ್ತೆ ಕಾಣಿಸಿಕೊಂಡಿರುವುದು ಮಲೆನಾಡಿನ ಜನರ ನಿದ್ದೆಗೆಡಿಸಿದೆ.

ಮಲೆನಾಡಿನ ಅರಣ್ಯ ಪ್ರದೇಶಗಳ ಗ್ರಾಮಗಳಲ್ಲಿ ಈ ಕಾಯಿಲೆ ಸಾಮಾನ್ಯವಾಗಿ ಬೇಸಿಗೆ ಆರಂಭದಲ್ಲಿ (ಮಾರ್ಚ್‌, ಏಪ್ರಿಲ್‌) ಕಾಣಿಸಿಕೊಂಡು ಮಳೆ ಆರಂಭವಾಗುತ್ತಿದ್ದಂತೆ ಕಡಿಮೆಯಾಗುತ್ತದೆ. ಆದರೆ, ಈ ಬಾರಿ ಚಳಿಗಾಲದ ಆರಂಭದಲ್ಲೇ ಸಾಗರ ತಾಲ್ಲೂಕಿನ ಅರಳಗೋಡಿನ ಇಬ್ಬರಲ್ಲಿ ರೋಗ ಲಕ್ಷಣ ಕಾಣಿಸಿಕೊಂಡಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

ವರ್ಷದ ಹಿಂದೆ ತೀರ್ಥಹಳ್ಳಿ ತಾಲ್ಲೂಕಿನ ಬಾಂಡ್ಯ–ಕುಕ್ಕೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಕುಡುಮಲ್ಲಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲೂ ಆತಂಕ ಸೃಷ್ಟಿಸಿತ್ತು ಎರಡು ವರ್ಷದ ಹಿಂದೆ ಈ ಕಾಯಿಲೆಗೆ ಚಿಡುವ ಭಾಗದಲ್ಲಿ ಮೂವರು ಮೃತಪಟ್ಟಿದ್ದರು. ಈ ಬಾರಿಯೂ ಒಂದು ಸುತ್ತು ಕೆಎಫ್‌ಡಿ ರೋಗ ನಿರೋಧಕ ಚುಚ್ಚುಮದ್ದು ಹಾಕಿದ್ದರೂ, ಸಾಗರ ತಾಲ್ಲೂಕಿನ ಭಾಗದಲ್ಲಿ ರೋಗಲಕ್ಷಣ ಕಾಣಿಸಿಕೊಂಡಿದೆ.

ಕಾಯಿಲೆಗೆ ಕಾರಣವಾಗುವ ಈ ವೈರಸ್‌ ಝೈಕಾ ಮತ್ತು ಡೆಂಗಿ ಪ್ರಭೇದಕ್ಕೆ ಸೇರಿದೆ. ಈ ಆಧಾರದ ಮೇಲೆ ಬೆಂಗಳೂರಿನ ಹೆಬ್ಬಾಳದಲ್ಲಿರುವ ಪ್ರಯೋಗಾಲಯದಲ್ಲಿ ಕೆಎಫ್‌ಡಿ ನಿರೋಧಕ ಲಸಿಕೆ ಅಭಿವೃದ್ಧಿಪಡಿಸಲಾಗಿದೆ. ಇದೇ ಲಸಿಕೆಯನ್ನು ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಬಳಸಲಾಗುತ್ತಿದೆ.

ಈ ರೋಗ ನಿಯಂತ್ರಣಕ್ಕೆ ನಾಲ್ಕು ವಾರಗಳ ಅಂತರದಲ್ಲಿ ಎರಡು ರೋಗ ನಿರೋಧಕ ಚುಚ್ಚುಮದ್ದು ಹಾಕಿಸಿಕೊಳ್ಳಬೇಕು. ನಂತರ 6ರಿಂದ 9 ತಿಂಗಳ ಅಂತರದಲ್ಲಿ ಮತ್ತೊಂದು ಚುಚ್ಚುಮದ್ದು ಹಾಕಿಸಿಕೊಳ್ಳಬೇಕು.

6 ವರ್ಷದ ಕೆಳಗಿನ ಮಕ್ಕಳಿಗೆ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕುವುದು ನಿಷಿದ್ಧ. ಒಂದು ಬಾರಿ ತೆಗೆದುಕೊಂಡರೆ ಅವರಲ್ಲಿ ರೋಗ ನಿರೋಧಕಶಕ್ತಿ ವೃದ್ಧಿಸಲು ಕನಿಷ್ಠ 60 ದಿನ ಬೇಕು. ಅಷ್ಟರ ಒಳಗೆ ಸತ್ತ ಮಂಗಗಳ ಮೇಲಿದ್ದ ಉಣ್ಣೆ ಕಚ್ಚಿದರೆ ಚುಚ್ಚುಮದ್ದು ಪಡೆದಿದ್ದರೂ ಕಾಯಿಲೆಗೆ ಒಳಗಾಗುತ್ತಾರೆ.

ಪ್ರತಿ ಬಾರಿ ತೀರ್ಥಹಳ್ಳಿ ಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಂಗನಕಾಯಿಲೆ ಈ ಬಾರಿ ಸಾಗರದಲ್ಲಿ ಪತ್ತೆಯಾಗಿದೆ. ಈಗಾಗಲೇ ಮೊದಲ ಹಂತದ ಲಿಸಿಕೆ ಹಾಕಲಾಗಿದೆ. ಎರಡನೇ ಹಂತದ ಲಿಸಿಕೆ ಹಾಕಲು ಸಿದ್ಧತೆ ನಡೆದಿದೆ. ಅಂಗನವಾಡಿ ಕಾರ್ಯಕರ್ತೆಯರು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಮನೆಮನೆಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ರೋಗ ಲಕ್ಷಣ ಕಾಣಿಸಿಕೊಂಡ ಜನರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿ, ಸೂಕ್ತ ಚಿಕಿತ್ಸೆ ನೀಡಲು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ’ ಎಂದು ಮಾಹಿತಿ ನೀಡುತ್ತಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೆಂಕಟೇಶ್.

ಆರು ದಶಕಗಳಾದರೂ ಮಂಗನ ಕಾಯಿಲೆಗೆ ನಿರ್ದಿಷ್ಟ ಲಸಿಕೆ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಬ್ರಿಟನ್‌ ಸರ್ಕಾರದ ಅಧೀನ ಸಂಸ್ಥೆ ಯುಕೆ ಮೆಡಿಕಲ್‌ ರಿಸರ್ಚ್ ಕೌನ್ಸಿಲ್‌ನ ವೈದ್ಯರು ಮತ್ತು ತಜ್ಞರನ್ನು ಒಳಗೊಂಡ ತಂಡ ವರ್ಷದ ಹಿಂದೆ ಜಿಲ್ಲೆಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿತ್ತು. ಆದರೆ, ಲಿಸಿಕೆ ಅಭಿವೃದ್ಧಿಪಡಿಸುವ ಪ್ರಗತಿಯಲ್ಲಿ ಯಶಸ್ಸು ದೊರೆತಿಲ್ಲ.

‘ಅರಣ್ಯ ಪ್ರದೇಶಗಳಿಗೆ ಕಟ್ಟಿಗೆ, ಇತರೆ ಉತ್ಪನ್ನ ಸಂಗ್ರಹಿಸಲು ತೆರಳುವ ಜನರು ಆರೋಗ್ಯ ಇಲಾಖೆ ಉಚಿತವಾಗಿ ನೀಡುವ ಎಣ್ಣೆ ಹಚ್ಚಿಕೊಳ್ಳಬೇಕು. ಕಾಡಿನಿಂದ ಹಿಂದಿರುಗಿದ ನಂತರ ಕಟ್ಟಿಗೆಯನ್ನು ಮನೆಯಿಂದ ದೂರದಲ್ಲಿ ಸಂಗ್ರಹಿಸಿ ಇಡಬೇಕು. ಮಂಗಗಳು ಸತ್ತುಬಿದ್ದಿರುವ ವಿಷಯ ತಿಳಿದರೆ ತಕ್ಷಣ ಮಾಹಿತಿ ನೀಡಬೇಕು’ ಎಂದು ಕೋರುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

ಪ್ರತಿಕ್ರಿಯಿಸಿ (+)