ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗನ ಕಾಯಿಲೆ, ಕೋವಿಡ್-19 ಭೀತಿಗೆ ನಲುಗಿದ ಜನ

ವಿದೇಶದಿಂದ ಬಂದ 17 ಮಂದಿ ಮೇಲೆ ತೀವ್ರ ನಿಗಾ; ಯಾರಲ್ಲಿಯೂ ಕೋವಿಡ್‌–19 ಲಕ್ಷಣಗಳಿಲ್ಲ
Last Updated 17 ಮಾರ್ಚ್ 2020, 10:06 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಮಂಗನ ಕಾಯಿಲೆ ಜೊತೆಗೆ ಕೊರೊನಾ ವೈರಸ್ ತಾಲ್ಲೂಕಿನ ಜನತೆಯನ್ನು ಬೆಚ್ಚಿ ಬೀಳಿಸಿದೆ. ಇನ್ನೂ 3 ಮಂದಿಗೆ ಮಂಗನ ಕಾಯಿಲೆ ರೋಗಾಣು ಇರುವುದು ಸೋಮವಾರ ದೃಢಪಟ್ಟಿದ್ದು, ಇದರಿಂದಾಗಿ ತಾಲ್ಲೂಕಿನಲ್ಲಿ ಮಂಗನ ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ 76ಕ್ಕೆ ಏರಿದಂತಾಗಿದೆ.

ಈ ನಡುವೆ ಕೊರೊನಾ ಸೋಂಕಿನ ಭೀತಿ ಹೆಚ್ಚಿದ್ದು, ಬೇರೆ ಬೇರೆ ದೇಶಗಳಿಂದ ಊರಿಗೆ ಮರಳುತ್ತಿರುವವರ ಕುರಿತು ಪೊಲೀಸರಿಂದ ಮಾಹಿತಿ ಪಡೆದು ಅವರ ಮೇಲೆ ತೀವ್ರ ನಿಗಾ ಇಡಲಾಗಿದೆ. ತಾಲ್ಲೂಕು ವ್ಯಾಪ್ತಿಯಲ್ಲಿ ಇದುವರೆಗೆ ವಿದೇಶದಿಂದ 17 ಮಂದಿ ಬಂದಿದ್ದು, ಅವರು ಮನೆಯಿಂದ ಹೊರ ಹೋಗದಂತೆ ಸೂಚನೆ ನೀಡಲಾಗಿದೆ. ಮಂಗನ ಕಾಯಿಲೆ ಜೊತೆಗೆ ಕೋವಿಡ್–19 ಮೇಲೆಯೂ ನಿಗಾ ಇಡುವ ಹೊಣೆಗಾರಿಕೆ ಹೆಚ್ಚುವರಿಯಾಗಿದೆ.

ವಿದೇಶದಿಂದ ಬಂದಿರುವವರು ಮನೆಯಲ್ಲಿ ಪಾಲಿಸಬೇಕಾದ ಕ್ರಮಗಳನ್ನು ಆರೋಗ್ಯ ಇಲಾಖೆ ಸಿಬ್ಬಂದಿ ತಿಳಿಸುವ ಕೆಲಸ ಮಾಡುತ್ತಿದ್ದಾರೆ. ವಿದೇಶದಿಂದ ಮರಳಿದ ಯಾರಲ್ಲಿಯೂ ಇದುವರೆಗೂ ಕೋವಿಡ್‌–19 ಲಕ್ಷಣಗಳು ಕಂಡುಬಂದಿಲ್ಲ. ಲಕ್ಷಣ ಕಂಡುಬಂದರೆ ತಕ್ಷಣ ಸ್ಥಳೀಯ ವೈದ್ಯರನ್ನು ಸಂಪರ್ಕಿಸುವಂತೆ ಸೂಚನೆ ನೀಡಲಾಗಿದೆ.

ಕೋವಿಡ್‌–19, ಮಂಗನ ಕಾಯಿಲೆ ವ್ಯಾಪಿಸದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವ ಕುರಿತು ಆರೋಗ್ಯ ಇಲಾಖೆ ಸಿಬ್ಬಂದಿಗೆ ತಾಲ್ಲೂಕು ವೈದ್ಯಾಧಿಕಾರಿ ನೇತೃತ್ವದಲ್ಲಿ ತರಬೇತಿ ನೀಡಲಾಗಿದೆ.

ಮಂಗನ ಕಾಯಿಲೆ ಉಲ್ಬಣಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಸರ್ಕಾರ ಆರ್ಥಿಕ ನೆರವು ನೀಡುವುದನ್ನು ಸ್ಥಗಿತಗೊಳಿಸಿದೆ. ಕಳೆದ ವರ್ಷ ಜ್ವರ ಪೀಡಿತರಿಗೆ ಮಣಿಪಾಲ ಸೇರಿ ಆನೇಕ ಅಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲು ಸರ್ಕಾರ ಆದೇಶ ಹೊರಡಿಸಿತ್ತು. ಈ ವರ್ಷ ಮಂಗನ ಕಾಯಿಲೆ ಕುರಿತು ಸರ್ಕಾರ ನಿರ್ಲಕ್ಷ್ಯ ತೋರಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

‘ಮಂಗನಕಾಯಿಲೆ ರೋಗ ನಿರೋಧಕ ಲಸಿಕೆಯನ್ನು ಜಿಲ್ಲೆಯಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಜನರು ಹೆಚ್ಚು ಪಡೆದುಕೊಂಡಿದ್ದಾರೆ. ತಾಲ್ಲೂಕಿನಲ್ಲಿ ಇದುವರೆಗೆ 76 ಸಾವಿರ ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. 35 ಸಾವಿರ ಡಿಎಂಪಿ ತೈಲದ ಬಾಟಲಿಗಳನ್ನು ಹಂಚಲಾಗಿದೆ. ಮಂಗ ಸತ್ತ ಪ್ರದೇಶಕ್ಕೆ ಸಿಂಪಡಣೆ ಮಾಡಲು 2 ಕ್ವಿಂಟಲ್ ಮೆಲಾಥಿನ್ ಪುಡಿಯನ್ನು ಸಂಗ್ರಹಿಸಿಡಲಾಗಿದೆ. ಕಾಯಿಲೆ ಕುರಿತು ತೀರ್ಥಹಳ್ಳಿ ತಾಲ್ಲೂಕಿನ ಜನರಲ್ಲಿ ಹೆಚ್ಚು ಜಾಗೃತಿ ಮೂಡಿದೆ’ ಎಂದು ಶಿವಮೊಗ್ಗ ಪರಿಮಾಣು ಕ್ರಿಮಿ ಸಂಶೋಧನಾ ಪ್ರಯೋಗಾಲಯದ ಉಪನಿರ್ದೇಶಕ ಡಾ.ಕಿರಣ್ ತಿಳಿಸಿದರು.

ಮಲೆನಾಡು ಭಾಗದ ಜನರನ್ನು 40 ವರ್ಷಗಳಿಂದ ನಿರಂತರವಾಗಿ ಕಾಡುತ್ತಿರುವ ಮಂಗನ ಕಾಯಿಲೆಗೆ 2014ರಿಂದ ಇಲ್ಲಿಯವರೆಗೆ ತಾಲ್ಲೂಕಿನಲ್ಲಿ 7 ಮಂದಿ ಮೃತಪಟ್ಟಿದ್ದಾರೆ. ಕಳೆದ ಸಾಲಿನಲ್ಲಿ ಇಬ್ಬರು ಮೃತಪಟ್ಟಿದ್ದರು. ಮೃತಪಟ್ಟ ಕುಟುಂಬಗಳಿಗೆ ಸರ್ಕಾರ ಪರಿಹಾರ ನೀಡಿಲ್ಲ. ಬಿಸಿಲು ಹೆಚ್ಚಾದಂತೆ ಮಂಗನಕಾಯಿಲೆ ವ್ಯಾಪಿಸತೊಡಗಿದೆ. ತಾಲ್ಲೂಕಿನ ಕನ್ನಂಗಿ, ಮಂಡಗದ್ದೆ, ಕಟ್ಟೆಹಕ್ಕಲು, ಮಾಳೂರು, ಬಾಂಡ್ಯ, ದಾನಸಾಲೆ, ಕುಕ್ಕೆ, ತೋಟದಕೊಪ್ಪ, ಸಿಂದುವಾಡಿ ಮುಂತಾದ ಭಾಗದಲ್ಲಿ ಕಾಣಿಸಿಕೊಂಡಿದ್ದು ಸಾರ್ವಜನಿಕರಲ್ಲಿ ಭೀತಿ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT