ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗನ ಕಾಯಿಲೆ ಮರಣ ಮೃದಂಗ: ಗ್ರಾಮಸ್ಥರ ಪ್ರತಿಭಟನೆ

Last Updated 15 ಮಾರ್ಚ್ 2020, 13:49 IST
ಅಕ್ಷರ ಗಾತ್ರ

ಕಾರ್ಗಲ್‌:ಸಮೀಪದ ಅರಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಬ್ಬರು ಮಾರಕ ಮಂಗನ ಕಾಯಿಲೆಯಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ನಿರ್ಲಕ್ಷ್ಯ ಖಂಡಿಸಿಗ್ರಾಮಸ್ಥರು ಭಾನುವಾರ ಪ್ರತಿಭಟನೆ ನಡೆಸಿದರು.

ಶನಿವಾರ ಮೃತಪಟ್ಟಕೋಮರಾಜ್ ಶವ ಇಟ್ಟು ಪ್ರತಿಭಟನೆ ಮಾಡಿದರು. ಆರೋಗ್ಯ ಇಲಾಖೆಯ ನಿರ್ಲಕ್ಷ್ಯವೇ ಕೋಮರಾಜ್ ಸಾವಿಗೆ ಕಾರಣವಾಗಿದ್ದು, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಅಭಯಾರಣ್ಯ ನಿವಾಸಿಗಳ ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಬಂದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮೃತನ ಕುಟುಂಬದವರಿಗೆ ಸಾಂತ್ವನ ತಿಳಿಸಿದರು. ಆರೋಗ್ಯ ಇಲಾಖೆ, ಅರಣ್ಯ ಇಲಾಖೆ ಮತ್ತು ಪಶು ವೈದ್ಯಕೀಯ ಇಲಾಖೆಗಳು ಕೂಡಲೇ ಎಲ್ಲಾ ರೀತಿಯಿಂದಲೂ ಈ ಭಾಗದ ಜನರೊಂದಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ಹಿಂದಿನ ಸರ್ಕಾರದ ಅವಧಿಯಲ್ಲಿದ್ದಂತೆ ಮಣಿಪಾಲ ಆಸ್ಪತ್ರೆಯಲ್ಲಿ ಕೆಎಫ್‌ಡಿ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಬೇಕು. ಅಗತ್ಯ ಆಂಬುಲೆನ್ಸ್ ಸೌಲಭ್ಯ ಮತ್ತು ದಿನದ 24ಗಂಟೆಯೂ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ನಡೆಸಲು ರಾಜ್ಯ ಸರ್ಕಾರ ಮುಂದಾಗಬೇಕು. ಸರ್ಕಾರ ಮೃತರ ಅವಲಂಬಿತರಿಗೆ ₹ 5 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಮೆಗ್ಗಾನ್ ಆಸ್ಪತ್ರೆ ಸಾವಿನ ಕೂಪ:

ಪ್ರತಿಭಟನಾ ಸ್ಥಳಕ್ಕೆ ಬಂದ ಶಾಸಕ ಹರತಾಳು ಹಾಲಪ್ಪ, ‘ಜಿಲ್ಲಾ ಕೇಂದ್ರದಲ್ಲಿರುವ ಮೆಗ್ಗಾನ್ ಆಸ್ಪತ್ರೆ ಜನ ಸಾಮಾನ್ಯರ ಪಾಲಿಗೆ ಆಸ್ಪತ್ರೆಯಾಗಿ ಉಳಿದಿಲ್ಲ. ಬಡವರ ಪಾಲಿಗೆ ಅದು ಸಾವಿನ ಕೂಪವಾಗಿದೆ. ಮಂಗನ ಕಾಯಿಲೆ ಪೀಡಿತ ವ್ಯಕ್ತಿಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ಸಾಯಲು ಮೆಗ್ಗಾನ್ ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ. ಇಲ್ಲಿನ ಸಿಬ್ಬಂದಿ ಮಾನವೀಯತೆಯನ್ನು ಮರೆತಿದ್ದಾರೆ. ಶನಿವಾರ ಸಾವು ಕಂಡ ಕೋಮರಾಜ್ ಮೃತದೇಹವನ್ನು ಕೇವಲ ಬೆಡ್‌ಶೀಟ್‌ನಲ್ಲಿ ಸುತ್ತಿ ಬೇಜವಾಬ್ದಾರಿಯಿಂದ ರಾತ್ರಿ ವೇಳೆಯಲ್ಲಿ ಕಳುಹಿಸಿರುವುದು ಅಮಾನವೀಯ. ಇದಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ಮೆಗ್ಗಾನ್ ಆಡಳಿತ ಮಂಡಳಿ ನೇರ ಹೊಣೆಯನ್ನು ಹೊರಬೇಕು ಎಂದರು.

‘ಅರಳಗೋಡು ಆಸ್ಪತ್ರೆಯಲ್ಲಿ ಅಗತ್ಯ ಸಿಬ್ಬಂದಿ ನೇಮಿಸಲು ಸೂಚಿಸಿದರೆ ಜಿಲ್ಲಾ ಆರೋಗ್ಯಾಧಿಕಾರಿ ಮುಖ್ಯಮಂತ್ರಿಗೆ ತಪ್ಪು ಮಾಹಿತಿ ನೀಡಿ ಈವರೆಗೂ ಅಗತ್ಯ ಸಿಬ್ಬಂದಿ ಮತ್ತು ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಿಲ್ಲ. ಈ ವಿಷಯವನ್ನು ಸದನದಲ್ಲಿ ಚರ್ಚೆ ಮಾಡುತ್ತೇನೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಮಣಿಪಾಲ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಸೌಲಭ್ಯ ದೊರಕಲು ಅಗತ್ಯ ಕ್ರಮ ಕೈಗೊಳ್ಳಲು ಆದೇಶಿಸಿದರು. ಮುಂದೆ ಇಂಥ ಘಟನೆಗಳು ನಡೆಯದಂತೆ ನೋಡಿಕೊಳ್ಳುವ ಶಾಸಕರ ಭರವಸೆಯ ಮೇರೆಗೆ ಪ್ರತಿಭಟನಕಾರರು ಅಂತ್ಯಕ್ರಿಯೆಗೆ ಮುಂದಾದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಸದಸ್ಯೆ ಪ್ರಭಾವತಿ ಚಂದ್ರಕಾಂತ, ಜಿಲ್ಲಾ ಪಂಚಾಯಿತಿ ಸದಸ್ಯ ರಾಜಶೇಖರ ಗಾಳೀಪುರ, ಜಿಲ್ಲಾ ಆರೋಗ್ಯಾಧಿಕಾರಿ ರಾಜೇಶ್ ಸುರಗಿಹಳ್ಳಿ, ತಾಲ್ಲೂಕು ಆರೋಗ್ಯಾಧಿಕಾರಿ ಮೋಹನ್ ಇದ್ದರು.

ಅರಣ್ಯಾಧಿಕಾರಿಗಳ ಮೇಲೆ ತಿರುಗಿದ ಆಕ್ರೋಶ:

ಕೋಮರಾಜ್ ಮನೆಗೆ ರಸ್ತೆಯನ್ನು ನಿರ್ಮಾಣ ಮಾಡುವ ಸಂಧರ್ಭದಲ್ಲಿ ಶರಾವತಿ ಸಿಂಗಳಿಕ ಅಭಯಾರಣ್ಯ ವ್ಯಾಪ್ತಿಯ ಅಧಿಕಾರಿಗಳು ಅಡ್ಡಿಪಡಿಸಿದ್ದರು. ಆದರೆ ಇಂದು ಶವವನ್ನು ಹೊತ್ತೊಯ್ಯಲು ಅಗತ್ಯವಾದ ರಸ್ತೆಯೇ ಇಲ್ಲದ ಕಾರಣ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿಯೇ ಶವವನ್ನು ಹೊತ್ತೊಯ್ಯಬೇಕು. ಇಲ್ಲವಾದಲ್ಲಿ ಇಲಾಖೆಯ ಜೀಪಿನಲ್ಲಿ ಶವವನ್ನಿರಿಸುವುದಾಗಿ ಗ್ರಾಮಸ್ಥರು ಅರಣ್ಯಾಧಿಕಾರಿ ಪ್ರೀತಿ ರಾಮದಾಸ ನಾಯ್ಕ ಅವರನ್ನು ಸುತ್ತುವರಿದು ಆಕ್ರೋಶವನ್ನು ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT