ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಟಗಾರಿಕಾ ಮೇಳದಲ್ಲಿ ರೈತರಿಗೆ ಭರಪೂರ ಮಾಹಿತಿ

ತೋಟಗಾರಿಕೆ ಸಂಶೋಧನಾ ಸಂಸ್ಥೆ ಆಯೋಜನೆ
Last Updated 15 ಮಾರ್ಚ್ 2018, 20:45 IST
ಅಕ್ಷರ ಗಾತ್ರ

ಬೆಂಗಳೂರು: ಹೊಸ ತಳಿಗಳ ಬಗ್ಗೆ ಮಾಹಿತಿ ನೀಡಲು ಸಿದ್ಧವಾಗಿದ್ದ ಮಳಿಗೆಗಳು, ನೂತನ ಕೃಷಿ ಯಂತ್ರೋಪಕರಣಗಳು ಇಲ್ಲಿಗೆ ಬಂದಿದ್ದ ರೈತರನ್ನು ಕೈ ಬೀಸಿ ಕರೆಯುತ್ತಿದ್ದವು. ಜಾತ್ರೆಯಂತಹ ವಾತಾವರಣ ಇಲ್ಲಿತ್ತು.

ಇದು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಹೆಸರಘಟ್ಟದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ತೋಟಗಾರಿಕಾ ಮೇಳದಲ್ಲಿ ಕಂಡ ದೃಶ್ಯಗಳು. ಮೊದಲ ದಿನದ ಮೇಳದಲ್ಲಿ ರಾಜ್ಯದ ಕೃಷಿಕರಿಗಿಂತ ತಮಿಳುನಾಡು, ಆಂಧ್ರಪ್ರದೇಶದ ರೈತರೇ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು.

ರೈತರ ಅಗತ್ಯಕ್ಕೆ ತಕ್ಕಂತೆ ಸಿದ್ಧಪಡಿಸಲಾದ ಹತ್ತಾರು ಉಪಯುಕ್ತ ಯಂತ್ರೋಪಕರಣಗಳು ಮೇಳದಲ್ಲಿ ಕಾಣಸಿಗುತ್ತಿವೆ. ಮೈದಾನದಲ್ಲಿ ವಿವಿಧ ಬಗೆಯ ಉಪಕರಣಗಳನ್ನು ಪ್ರದರ್ಶನಕ್ಕೆ ಇಟ್ಟಿರುವ ಹಲವು ಕಂಪನಿಗಳು, ರೈತರಿಗೆ ಪ್ರಾತ್ಯಕ್ಷಿಕೆ ನೀಡುತ್ತಿದ್ದವು. ಒಟ್ಟು 100 ಮಳಿಗೆಗಳು ಇಲ್ಲಿ ಇದ್ದವು. ವಿವಿಧ ತಳಿಗಳ ಮತ್ತು ಹೊಸ ಸಂಶೋಧನೆಗಳ ಕುರಿತ ಮಾಹಿತಿ ದೊರೆಯುತ್ತಿದ್ದವು.

ಕೋಲ್ಕತ್ತಾ, ಒಡಿಶಾ ಹಾಗೂ ತಮಿಳುನಾಡಿನ ರೈತರ ಮಳಿಗೆಗಳು ಇಲ್ಲಿದ್ದವು. 300 ಗ್ರಾಂ ತೂಗುತ್ತಿದ್ದ ಟೊಮೆಟೊ ಈ ಮೇಳದ ಆಕರ್ಷಣೆ
ಗಳಲ್ಲಿ ಒಂದಾಗಿತ್ತು. ವೊಲ್ಲೂರು ಟೊಮೆಟೊ ಎಂದು ಕರೆಯುವ ಇದನ್ನು ಪಿಜ್ಜಾ, ಬರ್ಗರ್‌ಗಳಲ್ಲಿ ಬಳಸಲಾಗುತ್ತದೆ. ರಿಜಿಕ್‌ ಜ್ವಾನ್‌ ಇಂಡಿಯಾ ಸೀಡ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಈ ತಳಿಯನ್ನು ಅನ್ವೇಷಿಸಿದೆ. ಮದ್ದೂರು, ಮಂಡ್ಯ, ಮೈಸೂರು ಭಾಗಗಳಲ್ಲಿ ಇದನ್ನು ಹೆಚ್ಚಾಗಿ ಬೆಳೆಯುತ್ತಿದ್ದಾರೆ.

ಸಾವಯವ ಕ್ಷೇತ್ರದ ಕಡೆಗೂ ರೈತರನ್ನು ಆಕರ್ಷಿಸಲಾಗುತ್ತಿದೆ. ಮಿತವ್ಯಯದ ನೀರು ಬಳಕೆಗಾಗಿ ಹನಿ ನೀರಾವರಿ, ತುಂತುರು ನೀರಾವರಿಯಲ್ಲಿನ ಈಚಿನ ಆವಿಷ್ಕಾರಗಳ ಮಾಹಿತಿಯೂ ಇಲ್ಲಿ ದೊರೆಯುತ್ತಿತ್ತು.

‘ಸಂಶೋಧನೆಗಳು ರೈತರನ್ನು ತಲುಪಲಿ’: ಮೇಳ ಉದ್ಘಾಟಿಸಿ ಮಾತನಾಡಿದ ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ಮಹೇಶ್ವರ ರಾವ್, ‘ತೋಟಗಾರಿಕೆ ಕ್ಷೇತ್ರದಲ್ಲಿ ಆಗುತ್ತಿರುವ ಸಂಶೋಧನೆಗಳು ರೈತರಿಗೆ ತಲುಪಬೇಕು. ಕಂಪನಿಗಳು, ಸರ್ಕಾರ ಹಾಗೂ ರೈತರು ಒಂದೆಡೆ ಸೇರಿ, ಕೃಷಿ ಅದಾಯ ಹೆಚ್ಚಿಸುವ ಬಗ್ಗೆ ಚರ್ಚಿಸಬೇಕಿದೆ’ ಎಂದು ಅಭಿಪ್ರಾಯಪಟ್ಟರು.

‘ಬೆಳೆಯುತ್ತಿರುವ ತಂತ್ರಜ್ಞಾನದ ಮಾಹಿತಿಯು ರೈತರಿಗೆ ತಲುಪುತ್ತಿಲ್ಲ. ತಂತ್ರಜ್ಞಾನದ ಬಳಕೆಯಿಂದ ಬೆಳೆ ಬೆಳೆದರೆ ಉತ್ಪಾದನೆ ಪ್ರಮಾಣ ಶೇಕಡ 35ರಷ್ಟು ಹೆಚ್ಚುತ್ತದೆ. ಆದರೆ, ಆ ಕೆಲಸವೇ ಆಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಭಾರತೀಯ ತೋಟಗಾರಿಕೆ ಸಂಸ್ಥೆ ನಿರ್ದೇಶಕರಾದ ದಿನೇಶ್, ‘ಕಳೆದ ವರ್ಷ ಪ್ರಾದೇಶಿಕ ಮೇಳ ಆಯೋಜಿಸಿದ್ದೆವು. ಇದೇ ಮೊದಲ ಸಲ ರಾಷ್ಟ್ರೀಯ ಮೇಳ ಆಯೋಜಿಸಿದ್ದೇವೆ. ಮೂರು ದಿನಗಳ ಕಾಲ ರೈತನೋತ್ಸವ ಮಾಡುವ ಸಂಕಲ್ಪ ನಮ್ಮದು. ದೇಶದ ಬೇರೆ ಬೇರೆ ಭಾಗಗಳ ಕೃಷಿ ಕ್ಷೇತ್ರದಲ್ಲಿ ಆಗಿರುವ ಸಂಶೋಧನೆಗಳು ಒಂದೇ ಸೂರಿನಡಿ ಸಿಗುತ್ತಿವೆ’ ಎಂದರು.
***
ಊಟವೇ ಇಲ್ಲ!
‘ಸರಿಯಾದ ಊಟದ ವ್ಯವಸ್ಥೆ ಇಲ್ಲದ ಮೇಲೆ ನಮ್ಮನ್ನು ಏಕೆ ಕರೆಸಿದಿರಿ’ ಎಂದು ಆಂಧ್ರಪ್ರದೇಶದಿಂದ ಬಂದಿದ್ದ ರೈತರು ಆಕ್ರೋಶ ವ್ಯಕ್ತಪಡಿಸಿದರು.

‘ನಮಗೆ ಇಲ್ಲಿ ಊಟ ಇಲ್ಲದಂತಾಗಿದೆ. ಸರಿಯಾದ ವ್ಯವಸ್ಥೆ ಮಾಡಿಲ್ಲ. ಸಾವಿರಾರು ಜನರು ಬರುವ ಮೇಳವನ್ನು ಜವಾಬ್ದಾರಿಯಿಂದ ಆಯೋಜಿಸಬೇಕು. ಇಲ್ಲಿ ಎಲ್ಲವೂ ಅವ್ಯವಸ್ಥೆಯಿಂದ ಕೂಡಿದೆ’ ಎಂದು ತಮಿಳುನಾಡಿನ ರೈತ ಮಾದಸ್ವಾಮಿ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT