ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಯ ಮರಣೋತ್ತರ ಪರೀಕ್ಷೆ ವರದಿ 'ತಿರುಚಿದ್ದು' ಮಹಾರಾಷ್ಟ್ರದ ಬಿಜೆಪಿ ಸಚಿವರ ಸಂಬಂಧಿ ವೈದ್ಯ!

Last Updated 2 ಏಪ್ರಿಲ್ 2018, 16:38 IST
ಅಕ್ಷರ ಗಾತ್ರ

ನಾಗ್ಪುರ್: ಸಿಬಿಐ ವಿಶೇಷ ನ್ಯಾಯಾಧೀಶ ಬಿ.ಎಚ್‌.ಲೋಯ ಅವರ ಮರಣೋತ್ತರ ಪರೀಕ್ಷೆಯಲ್ಲಿಯೂ ಪ್ರಭಾವಿಗಳ 'ಕೈವಾಡ' ನಡೆದಿದೆ ಎಂದು ಕ್ಯಾರವಾನ್ ಮ್ಯಾಗಜಿನ್ ತನಿಖಾ ವರದಿಯಲ್ಲಿ ಹೇಳಿದೆ. ಲೋಯ ಸಾವಿನ ಬಗ್ಗೆ ಅವರ ಕುಟುಂಬ ವ್ಯಕ್ತಪಡಿಸಿದ ಶಂಕೆ ಆಧರಿಸಿ ‘ಕ್ಯಾರವಾನ್’ ಸೆ.11ರಂದು ವಿಸ್ತೃತ ವರದಿ ಪ್ರಕಟಿಸಿತ್ತು. ಇದಾದ ನಂತರ ತನಿಖೆ ಮುಂದುವರಿಸಿದ ಕ್ಯಾರವನ್, ಪೋಸ್ಟ್ ಮಾರ್ಟಂ ಟೇಬಲ್‍ನಲ್ಲಿ ನಡೆದ 'ಕೈವಾಡ'ದ ಬಗ್ಗೆ ವರದಿ ಪ್ರಕಟಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಆರೋಪಿಯಾಗಿರುವ ಸೊಹ್ರಾಬುದ್ದೀನ್‌ ಶೇಖ್‌ ಎನ್‌ಕೌಂಟರ್‌ ಪ್ರಕರಣವನ್ನು ಲೋಯ ವಿಚಾರಣೆ ನಡೆಸುತ್ತಿದ್ದರು.

ಹೃದಯಾಘಾತದಿಂದಾಗಿ ಲೋಯ ಸಾವಿಗೀಡಾಗಿದ್ದಾರೆ ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ಹೇಳಲಾಗಿದೆ. ಮರಣೋತ್ತರ ಪರೀಕ್ಷೆ ನಡೆದ ನಾಗ್ಪುರ್ ಮೆಡಿಕಲ್ ಕಾಲೇಜಿವಲ್ಲಿ ಫಾರೆನ್ಸಿಕ್ ವಿಭಾಗದ ಮಾಹಿತಿ ಆಧರಿಸಿ ಕ್ಯಾರವನ್ ಈ ತನಿಖಾ ವರದಿ ಪ್ರಕಟಿಸಿದೆ. ವೈದ್ಯರೊಬ್ಬರು (ಹೆಸರು ಬಹಿರಂಗಪಡಿಸಿಲ್ಲ) ಮರಣೋತ್ತರ ವರದಿಯಲ್ಲಿ ಏನಿರಬೇಕು, ಏನು ಬೇಡ ಎಂದು ಹೇಳಿದ್ದಾರೆ ಎಂದು ಪತ್ರಿಕೆ ತಮ್ಮ ವರದಿಯಲ್ಲಿ ಹೇಳಿದೆ. ಇದೇ ವೈದ್ಯರು ನಡೆಸಿದ ಬೇರೆ ಮರಣೋತ್ತರ ಪರೀಕ್ಷೆಯಲ್ಲಿಯೂ ಇದೇ ರೀತಿ ಮೋಸ ನಡೆಸಿದ್ದಾರೆ ಎಂದು ಮೆಡಿಕಲ್ ಕಾಲೇಜಿನ ವೈದ್ಯರು ದೂರು ನೀಡಿದ್ದು, ಈ ಬಗ್ಗೆ ತನಿಖೆಯೂ ನಡೆದಿತ್ತು.

ಅಧಿಕೃತ ದಾಖಲೆಗಳ ಪ್ರಕಾರ ಲೋಯ ಅವರ ಮರಣೋತ್ತರ ಪರೀಕ್ಷೆ ಮಾಡಿದ್ದು ನಾಗ್ಪುರ್ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ. ಅಂದು ಫಾರೆನ್ಸಿಕ್ ಮೆಡಿಸಿನ್ ವಿಭಾಗದಲ್ಲಿ ಉಪನ್ಯಾಸಕರಾಗಿದ್ದವರು ಡಾ. ಎನ್.ಕೆ. ತುಂರಾಮ್. ಆಗ ಇದೇ ವಿಭಾಗದಲ್ಲಿನ ಫ್ರೊಫೆಸರ್ ಹಾಗೂ ಇಂದು ನಾಗ್ಪುರ ಇಂದಿರಾ ಗಾಂಧಿ ಸರ್ಕಾರಿ ಮೆಡಿಕಲ್ ಕಾಲೇಜಿನ ಫಾರೆನ್ಸಿಕ್ ವಿಭಾಗದ ಮುಖ್ಯಸ್ಥರೂ ಆದ ಡಾ.ಮಕರಂದ್  ವ್ಯವಹಾರೆ ಅವರು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ ಎಂಬ ಮಾಹಿತಿ ಇದೀಗ ಬೆಳಕಿಗೆ ಬಂದಿದೆ.

ಹಲವಾರು ಮರಣೋತ್ತರ ಪರೀಕ್ಷೆ ನಡೆಸಿರುವ ವ್ಯವಹಾರೆ, ಕೆಲವೊಂದು ಪ್ರಕರಣಗಳಲ್ಲಿ ತಮ್ಮ ಹೆಸರು ತಳುಕು ಹಾಕದಂತೆ ನೋಡಿಕೊಂಡಿದ್ದರು. ಮಹಾರಾಷ್ಟ್ರ ಬಿಜೆಪಿ ನೇತಾರ ವಿತ್ತ ಸಚಿವ ಸುಧೀರ್ ಮುಂಗಂತಿವಾರ್ ಅವರ ಸಹೋದರಿಯ ಪತಿಯೂ ಆಗಿರುವ ವ್ಯವಹಾರೆ ಮಹಾರಾಷ್ಟ್ರ ಮೆಡಿಕಲ್ ಕೌನ್ಸಿಲ್ ಸದಸ್ಯರಾಗಿದ್ದಾರೆ. ಇವರು ರಾಜಕಾರಣಿಗಳೊಂದಿಗೂ ಹೆಚ್ಚು ಆಪ್ತರಾಗಿದ್ದಾರೆ ಎಂದು ಕೆಲವು ಮೂಲಗಳಿಂದ ತಿಳಿದುಬಂದಿದೆ.

ಲೋಯ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತೆಗೆದುಕೊಂಡು ಬಂದಾಗ ವ್ಯವಹಾರೆ ಅವರು ಪೋಸ್ಟ್ ಮಾರ್ಟಂ ರೂಮಿಗೆ ಮೊದಲೇ ಹಾಜರಾಗಿದ್ದರು. ಸಾಮಾನ್ಯವಾಗಿ ನಿಗದಿತ ಸಮಯಕ್ಕಿಂತಲೂ ವಿಳಂಬವಾಗಿ ಬರುತ್ತಿದ್ದ ವ್ಯವಹಾರೆ ಅಂದು ಬೇಗನೆ ಹಾಜರಾಗಿದ್ದನ್ನು ಅಲ್ಲಿರುವವರೂ ಗಮನಿಸಿದ್ದರು. ಲೋಯ ಅವರ ತಲೆಯ ಹಿಂದಿರುವ ಗಾಯವನ್ನು ಮರಣೋತ್ತರ ಪರೀಕ್ಷೆಯಲ್ಲಿ ಉಲ್ಲೇಖಿಸದೇ ಇರುವುದನ್ನು ಪ್ರಶ್ನಿಸಿದ್ದ ಜೂನಿಯರ್ ವೈದ್ಯರನ್ನು ವ್ಯವಹಾರೆ ಬೈದಿದ್ದರು ಎಂದು ಕ್ಯಾರವಾನ್  ವರದಿಯಲ್ಲಿ ಹೇಳಿದೆ. ಮರಣೋತ್ತರ ವರದಿಯಲ್ಲಿ ಆ ವಿಷಯವನ್ನು ಉಲ್ಲೇಖಿಸುವುದು ಬೇಡ ಎಂದು ವ್ಯವಹಾರೆ ಹೇಳಿದ್ದರು.

ಲೋಯ ಸಾವಿಗೆ ಹೃದಯಾಘಾತವೇ ಕಾರಣ ಎಂದು ದಾಖಲೆಗಳಲ್ಲಿ ಹೇಳಲಾಗಿದೆ. ಅಂದರೆ ಕೊಲೆಯೊಂದನ್ನು ಹೃದಯಾಘಾತದಿಂದಾದ ಸಾವು ಎಂದು ಬಿಂಬಿಸಲು ಇಲ್ಲಿ ಕಾರ್ಯ ರೂಪಿಸಲಾಗಿದೆ ಎಂಬ ಸಂಶಯ ಇಲ್ಲಿ ಹುಟ್ಟುತ್ತದೆ ಎಂದು ಕ್ಯಾರವಾನ್ ಹೇಳಿದೆ. ಲೋಯ ಸಾವಿಗೆ ಹೃದಯಾಘಾತವೇ ಕಾರಣ ಎಂಬುದನ್ನು ತೋರಿಸಲು ವ್ಯವಹಾರೆ ವಿಶೇಷ ಮುತುವರ್ಜಿ ವಹಿಸಿದ್ದರು,  ಮರಣೋತ್ತರ ಪರೀಕ್ಷೆ ನಡೆಸಿದ್ದರೂ, ಪರೀಕ್ಷೆ ನಡೆಸಿದ ವೈದ್ಯರ  ಹೆಸರಿನ ಪಟ್ಟಿಯಲ್ಲಿ ತಮ್ಮ ಹೆಸರು ಇರದಂತೆಯೂ ಇವರು ನೋಡಿಕೊಂಡಿದ್ದರು.

ಮರಣೋತ್ತರ ಪರೀಕ್ಷಾ ವರದಿಯಲ್ಲಿಯೂ ಇದೆ ಸಂದೇಹ
ಯಾವುದೇ ದಾಖಲೆಗಳಲ್ಲಿ ತಮ್ಮ ಹೆಸರು ಉಲ್ಲೇಖವಾಗದಂತೆ ನೋಡಿಕೊಂಡು, ಮರಣೋತ್ತರ ಪರೀಕ್ಷೆ ನಡೆಸಿದ  ವೈದ್ಯರ ನಡೆ ಮತ್ತಷ್ಟು ಸಂಶಯಗಳನ್ನು ಹುಟ್ಟು ಹಾಕಿದೆ.  ಲೋಯ ಸಾವಿನ ಬಗ್ಗೆ ಅವರ ಕುಟುಂಬದವರಿಗೆ ಇರುವ ಶಂಕೆಗಳನ್ನು ಉಲ್ಲೇಖಿಸಿ 2017 ನವಂಬರ್‌ನಲ್ಲಿ ಕ್ಯಾರವಾನ್ ವರದಿ ಪ್ರಕಟವಾದ ಬೆನ್ನಲ್ಲೇ ಇಸಿಜಿ ರಿಪೋರ್ಟ್  ಬೆಳಕಿಗೆ ಬಂದಿತ್ತು. ಲೋಯ ಸಾವಿನ ನಂತರದ ಕೆಲವೇ ಕ್ಷಣಗಳಲ್ಲಿ ತೆಗೆದ ಇಸಿಜಿ ರಿಪೋರ್ಟ್ ಅದು ಎಂದು ಸುದ್ದಿಯಾಗಿತ್ತು. ಅಂದರೆ ಹೃದಯಾಘಾತವೇ ಲೋಯ ಸಾವಿಗೆ ಕಾರಣ ಎಂಬುದಕ್ಕೆ ಈ ಇಸಿಜಿ ವರದಿ ಸಾಕ್ಷ್ಯದಂತಿತ್ತು. ಆದರೆ ಈ ವರದಿಯಲ್ಲಿಯೂ ಏನೋ ಸಮಸ್ಯೆಗಳಿವೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗಿತ್ತು.

ಅದೇ ವೇಳೆ ಲೋಯ ಸಾವಿನ ಬಗ್ಗೆ  ಸ್ವತಂತ್ರ ತನಿಖೆ ಬೇಕು ಎಂಬ ಮನವಿಯನ್ನು ವಿರೋಧಿಸಿದ ಮಹಾರಾಷ್ಟ್ರ ಸರ್ಕಾರ ಈ ಇಸಿಜಿ ವರದಿಯನ್ನು ಸುಪ್ರೀಂಕೋರ್ಟ್ ಗೆ ಹಾಜರುಪಡಿಸಿಲ್ಲ. ನಾಗ್ಪುರ್  ಮೆಡಿಕಲ್ ಕಾಲೇಜಿನಲ್ಲಿ ತಯಾರಿಸಿದ ಮರಣೋತ್ತರ ಪರೀಕ್ಷಾ ವರದಿಯನ್ನು ಮಾತ್ರ ಮಹಾರಾಷ್ಟ್ರ ಸುಪ್ರೀಂಕೋರ್ಟ್ ಗೆ ಸಲ್ಲಿಸಿದೆ.

14 ಜನರಿಂದ ಮಾಹಿತಿ ಸಂಗ್ರಹಿಸಲಾಗಿತ್ತು
ನಾಗ್ಪುರ್ ಮೆಡಿಕಲ್ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮತ್ತು ನಿವೃತ್ತರಾಗಿರುವ 14 ನೌಕರರಿಂದ ಮಾಹಿತಿಗಳನ್ನು ಸಂಗ್ರಹಿಸಿ ಕ್ಯಾರವಾನ್ ತನಿಖಾ ವರದಿ ಮಾಡಿದೆ. ಇವರ ಭದ್ರತೆ ದೃಷ್ಟಿಯಿಂದ ಯಾರ ಹೆಸರನ್ನೂ ಬಹಿರಂಗ ಪಡಿಸಿಲ್ಲ. ವ್ಯವಹಾರೆ, ಪೊಲೀಸ್, ಆಡಳಿತಾಧಿಕಾರಿಗಳು, ಗುಪ್ತ ತನಿಖೆ ಮೊದಲಾದುವುಗಳ ಭಯದಿಂದಲೇ ಈ ವ್ಯಕ್ತಿಗಳು ಕ್ಯಾರವಾನ್ ಜತೆಗೆ ಮಾತನಾಡಿ ಮಾಹಿತಿ ನೀಡಿದ್ದರು ಎಂದು ಪತ್ರಿಕೆ ತಮ್ಮ ವರದಿಯಲ್ಲಿ ಹೇಳಿದೆ. 2014 ಡಿಸೆಂಬರ್ 1ರಂದು ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮರಣೋತ್ತರ ಪರೀಕ್ಷೆಯ ಎಲ್ಲ ಪ್ರಕ್ರಿಯೆಗಳನ್ನು ವಿವರಿಸಿ ಕ್ಯಾರವಾನ್ ಈ ವರದಿ ಸಿದ್ದಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT